ಗುರುವಾರ , ಮಾರ್ಚ್ 23, 2023
23 °C
ರಾಜ್ಯ ರೈತ ಸಂಘದ ತಾಲ್ಲೂಕು ಶಾಖೆ ನೇತೃತ್ವದಲ್ಲಿ ಪ್ರತಿಭಟನೆ

ಹಗಲಿನಲ್ಲಿ ವಿದ್ಯುತ್‌ ಪೂರೈಕೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ರೈತರ ಪಂಪ್ ಸೆಟ್‌ಗಳಿಗೆ ಹಗಲು ವೇಳೆ ನಿರಂತರವಾಗಿ 7 ಗಂಟೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು, ಅಕ್ರಮ ಸಕ್ರಮ ಯೋಜನೆಯಡಿ ಹಣ ಪಾವತಿಸಿರುವ ರೈತರಿಗೆ ತಕ್ಷಣ ಪರಿವರ್ತಕ ಅಳವಡಿಸಬೇಕು ಎಂದು ಒತ್ತಾಯಿಸಿ ಸೋಮವಾರ ರಾಜ್ಯ ರೈತ ಸಂಘದ ತಾಲ್ಲೂಕು ಶಾಖೆ ನೇತೃತ್ವದಲ್ಲಿ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ರೈತರ ಪಂಪ್‌ಸೆಟ್‌ಗಳಿಗೆ ನಿತ್ಯ 7 ಗಂಟೆ ಮೂರು ಫೇಸ್ ವಿದ್ಯುತ್ ಸರಬರಾಜು ಮಾಡುವಂತೆ ಸರ್ಕಾರದ ಆದೇಶವಿದೆ. ಕಾಡು ಪ್ರಾಣಿಗಳು ಮತ್ತು ವಿಷ ಜಂತುಗಳ ಹಾವಳಿ ಹೆಚ್ಚಿರುವ ಕಾರಣ ಹಗಲಿನ ವೇಳೆ ವಿದ್ಯುತ್ ನೀಡಬೇಕು. ವಿದ್ಯುತ್ ಬಿಡುಗಡೆಯಲ್ಲೂ ಬೈಸ್ಕಾಂ ಸಿಬ್ಬಂದಿ ತಾರತಮ್ಯ ನೀತಿ ಅನುಸರಿಸುತ್ತಿದ್ದು, ರೈತರು ಬೆಸ್ಕಾಂ ಸಿಬ್ಬಂದಿಗೆ ಅಥವಾ ಲೈನ್‌ಮ್ಯಾನ್‌ಗಳಿಗೆ ದೂರವಾಣಿ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಅಕಸ್ಮಾತ್ ವಿದ್ಯುತ್ ಅವಘಡಗಳು ಸಂಭವಿಸಿದರೆ ರೈತರು ಯಾರಿಗೆ ಹೇಳಬೇಕು ಎಂದು ಪ್ರತಿಭಟನಕಾರರು ಪ್ರಶ್ನಿಸಿದರು.

ಪ್ರತಿಭಟನೆ ಅಂತ್ಯ: ಬೆಸ್ಕಾಂ ಇಲಾಖೆಯ ಕಾರ್ಯ ಪಾಲಕ ಎಂಜಿನಿಯರ್ ನಿಂಗರಾಜ್ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪೀರ್ ಸಾಬ್ ಪ್ರತಿಭಟನಾ ನಿರತ ರೈತರೊಂದಿಗೆ ಮಾತನಾಡಿ, ಎಂಟು ದಿನಗಳ ಒಳಗೆ ಪಂಪ್‌ಸೆಟ್‌ಗಳಿಗೆ 7 ಗಂಟೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವ, ಸಿಬ್ಬಂದಿ ಮತ್ತು ಲೈನ್‌ಮನ್‌ಗಳು ರೈತರ ದೂರವಾಣಿ ಕರೆ ಸ್ವೀಕರಿಸುವಂತೆ ವ್ಯವಸ್ಥೆ, ಅಕ್ರಮ ಸಕ್ರಮ ಯೋಜನೆಯಡಿ ಹಣ ಪಾವತಿಸಿರುವ ಎಲ್ಲ ರೈತರಿಗೂ ವಿದ್ಯುತ್ ಕಲ್ಪಿಸುವ ಕಾಮಗಾರಿಗೆ ಟೆಂಡರ್ ಕರೆಯುವಂತೆ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸುವ ಭರವಸೆ ನೀಡಿದ್ದರಿಂದ ರೈತರು ಪ್ರತಿಭಟನೆಯನ್ನು ಹಿಂಪಡೆದರು.

ಸಂಘದ ಜಿಲ್ಲಾ ಕಾರ್ಯಾರ್ಧ್ಯಕ್ಷ ಕೆ.ಸಿ. ಹೊರಕೇರಪ್ಪ, ತಾಲ್ಲೂಕು ಅಧ್ಯಕ್ಷ ಬಿ.ಒ. ಶಿವಕುಮಾರ್, ಎಂ.ಆರ್. ಪುಟ್ಟಸ್ವಾಮಿ, ಎಂ. ಲಕ್ಷ್ಮಿಕಾಂತ್, ಮೇಟಿಕುರ್ಕೆ ತಿಪ್ಪೇಸ್ವಾಮಿ, ಬಿ.ಡಿ. ಶ್ರೀನಿವಾಸ್, ಮುಕುಂದಪ್ಪ, ಕೂಡ್ಲಹಳ್ಳಿ ತಿಪ್ಪೇಸ್ವಾಮಿ, ಎಂ.ಪಿ. ನಾಗರಾಜ್, ಒಟಿಪಿ ಸ್ವಾಮಿ, ಈಶ್ವರಗೆರೆ ನಾಗರಾಜ್, ಮಸ್ಕಲ್ ನಾಗಭೂಷಣ, ಶಿವಸ್ವಾಮಿ, ಕಾರ್ಯಾಧ್ಯಕ್ಷರಾದ ಶಶಿಕಲಾ, ಎಸ್. ನಿತ್ಯಶ್ರೀ, ಜರೀನಾ, ಮೆಹಬೂಬಿ, ಮದೀನಾ, ರಹಮತ್ ಬಿ ಅವರೂ ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.