ಮಂಗಳವಾರ, ಡಿಸೆಂಬರ್ 7, 2021
21 °C
ನೀರಾವರಿ, ಸಾಮಾಜಿಕ ಹೋರಾಟ ಸಮಿತಿಯಿಂದ ಒತ್ತಾಯ

ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯಿಂದ ಗ್ರಾಮ ಪ್ರತ್ಯೇಕಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಯಕನಹಟ್ಟಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಏಳು ಗ್ರಾಮಗಳನ್ನು ಬೇರ್ಪಡಿಸಿ ಸಮೀಪದ ಗ್ರಾಮ ಪಂಚಾಯಿತಿಗಳಿಗೆ ಸೇರಿಸಬೇಕು ಎಂದು ಒತ್ತಾಯಿಸಿ ನಾಯಕನಹಟ್ಟಿ ಹೋಬಳಿ ನೀರಾವರಿ ಹಾಗೂ ಸಾಮಾಜಿಕ ಹೋರಾಟ ಸಮಿತಿಯ ಪದಾಧಿಕಾರಿಗಳು ಒತ್ತಾಯಿಸಿದರು.

ಗಂಗಯ್ಯನಹಟ್ಟಿ, ಜಾಗನೂರಹಟ್ಟಿ, ಮಾದಯ್ಯನಹಟ್ಟಿ, ಚನ್ನಬಸಯ್ಯನಹಟ್ಟಿ, ಬೋಸೆದೇವರಹಟ್ಟಿ, ಕಾವಲು ಬಸವೇಶ್ವರನಗರ, ಕೊಂಡಯ್ಯನಕಪಿಲೆ, ಗ್ರಾಮಗಳು ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿವೆ.

ಗ್ರಾಮಗಳಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, 6 ಸಾವಿರ ಎಕರೆ ಕೃಷಿ ಭೂಮಿಯ ಜತೆಗೆ 1800 ಖಾತೆದಾರರು ಇದ್ದು, ಬಹುತೇಕರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಅತೀ ಹೆಚ್ಚು ಕೃಷಿಕರೇ ಆಗಿದ್ದಾರೆ. ಈ ಗ್ರಾಮಗಳು ಪಟ್ಟಣ ಪಂಚಾಯಿತಿಗೆ ಸೇರಿರುವುದರಿಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ ಕೃಷಿ ಇಲಾಖೆಯಿಂದ ಸಿಗುವ ಹಲವು ಸರ್ಕಾರಿ ಸೌಲಭ್ಯಗಳು ಮರೀಚಿಕೆಯಾಗಿವೆ ಎಂದು ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಜಿ.ಬಿ.ಮುದಿಯಪ್ಪ ಹೇಳಿದರು.

ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಯಾದ ಬಿ.ಟಿ. ಪ್ರಕಾಶ್ ಮಾತನಾಡಿ, ‘ಹಲವು ವರ್ಷಗಳಿಂದ ನಾಯಕನಹಟ್ಟಿ ಹೋಬಳಿಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರು, ಕೂಲಿ ಕಾರ್ಮಿಕರು ನಷ್ಟ ಅನುಭವಿಸಿದ್ದಾರೆ. ಇಂತಹ ಸಮಯದಲ್ಲಿ ಪಟ್ಟಣ ಪಂಚಾಯಿತಿ ವಿಧಿಸುವ ಮನೆ ಕಂದಾಯ, ನೀರಿನ ಕಂದಾಯದ ಶುಲ್ಕಗಳನ್ನು ಭರಿಸಲು ಹೆಣಗಾಡುತ್ತಿದ್ದಾರೆ. ಹಾಗಾಗಿ ಈ ಗ್ರಾಮಗಳ ಸಾರ್ವಜನಿಕರು ಸುಗಮವಾಗಿ ಜೀವನ ನಡೆಸಲು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅವಶ್ಯಕ. ಹಾಗಾಗಿ ಈ ಎಲ್ಲ ಗ್ರಾಮಗಳನ್ನು ಪಟ್ಟಣ ಪಂಚಾಯಿತಿಯಿಂದ ಬೇರ್ಪಡಿಸಿ ಸಮೀಪದ ಗ್ರಾಮ ಪಂಚಾಯಿತಿಗಳಿಗೆ ವಿಲೀನಗೊಳಿಸಬೇಕು. ಇಲ್ಲವಾದರೆ ಮುಂಬರುವ ಪಟ್ಟಣ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲಾಗುವುದು’ ಎಂದು ಎಚ್ಚರಿಸಿದರು.

ರಾಜಸ್ವ ನಿರೀಕ್ಷಕ ಚೇತನ್‌ಕುಮಾರ್‌  ಮನವಿ ಸ್ವೀಕರಿಸಿದರು.

ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಟಿ.ಬಸಣ್ಣ, ಪದಾಧಿಕಾರಿಗಳಾದ ಎನ್.ಎಂ. ಬೋರಯ್ಯ(ಹಳ್ಳಿಮೇಷ್ಟ್ರು), ಬೋಸೆ ರಂಗಪ್ಪ, ಟಿ.ರಂಗಪ್ಪ, ಬಿ.ಕಾಟಯ್ಯ, ಕುಮಾರ, ಬೋರಯ್ಯ, ಓಬಣ್ಣ, ಮುತ್ತಯ್ಯ, ಡಿ.ಬಿ.ಬೋಸಯ್ಯ, ಪಾಲಯ್ಯ, ಓಬಯ್ಯ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.