ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಿಕಾರ್ಜುನ ಶ್ರೀಗಳಿಂದ ಶೈಕ್ಷಣಿಕ ಕ್ರಾಂತಿ

ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಶಿವಮೂರ್ತಿ ಮುರುಘಾ ಶರಣರ ಬಣ್ಣನೆ
Last Updated 29 ಅಕ್ಟೋಬರ್ 2020, 4:41 IST
ಅಕ್ಷರ ಗಾತ್ರ

ಹೊಳಲ್ಕೆರೆ: ಲಿಂಗೈಕ್ಯ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ನಡೆಸಿದರು ಎಂದು ಶಿವಮೂರ್ತಿ ಮುರುಘಾ ಶರಣರು ಬಣ್ಣಿಸಿದರು.

ಪಟ್ಟಣದ ಹೊರವಲಯದಲ್ಲಿರುವ ಒಂಟಿಕಂಬದ ಮಠದಲ್ಲಿ ಬುಧವಾರ ನಡೆದ ಮಲ್ಲಿಕಾರ್ಜುನ ಸ್ವಾಮೀಜಿ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಲ್ಲಿಕಾರ್ಜುನ ಶ್ರೀಗಳು ಮಹಾ ಮೇಧಾವಿಯಾಗಿದ್ದರು. ಅಪಾರ ವಿದ್ವತ್ತು, ಪಾಂಡಿತ್ಯ ಅವರಲ್ಲಿತ್ತು. ಅವರ ಕಾಲದಲ್ಲಿ ಮುರುಘಾ ಮಠ ಭೌತಿಕವಾಗಿ ಬಡವಾಗಿದ್ದರೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿತ್ತು. ಅವರು ಶೂನ್ಯದಿಂದ ಬಂದು ಮಠವನ್ನು ಎತ್ತರಕ್ಕೆ ಕೊಂಡೊಯ್ದರು. 1966ರಲ್ಲಿ ಎಸ್‌ಜೆಎಂ ವಿದ್ಯಾಪೀಠ ಆರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅಡಿಯಿಟ್ಟರು. ಅಲ್ಲಿಂದ ನೂರಾರು ಶಾಲೆಗಳು, ಪದವಿ, ಎಂಜಿನಿಯರಿಂಗ್, ಫಾರ್ಮಸಿ ಕಾಲೇಜುಗಳನ್ನು ಆರಂಭಿಸುವ ಮೂಲಕ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದರು. ಅವರಿಗೆ ಕೃಷಿಯಲ್ಲಿಯೂ ಹೆಚ್ಚು ಆಸಕ್ತಿ ಇತ್ತು’ ಎಂದರು.

‘ಪ್ರತಿವರ್ಷ ಒಂಟಿಕಂಬದ ಮಠದಲ್ಲಿ ಮಲ್ಲಿಕಾರ್ಜುನ ಶ್ರೀಗಳ ಸ್ಮರಣೋತ್ಸವ ಆಚರಿಸಲಾಗುತ್ತದೆ. ಇದು ಸ್ಮರಣೆಗೆ ಮಾತ್ರ ಸೀಮಿತ ಆಗದೆ ಜನರಿಗೆ ಪ್ರೇರಣೋತ್ಸವ ಆಗಬೇಕು. ಮುಂದೆ ಸಾಧನೋತ್ಸವ ಆಗಬೇಕು. ನನಗೆ ಶ್ರೀಗಳೊಂದಿಗೆ ಭಾವನಾತ್ಮಕ ಸಂಬಂಧ ಇತ್ತು. ಅವರು ಧರ್ಮಪೀಠಗಳ ನಡುವೆ ಸಾಮರಸ್ಯ ಬೆಸೆಯುವ ಕಾರ್ಯ ಮಾಡುತ್ತಿದ್ದರು. ಎಲ್ಲ ಮಠಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು’ ಎಂದು ಹೇಳಿದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ‘ಶಿವಮೂರ್ತಿ ಶರಣರು ಮಲ್ಲಿಕಾರ್ಜುನ ಸ್ವಾಮೀಜಿ ಅವರ ಆಶಯಗಳನ್ನು ಈಡೇರಿಸುವ ಕಾರ್ಯ ಮಾಡುತ್ತಿದ್ದಾರೆ. ಕೆಲವು ಸ್ವಾಮೀಜಿಗಳು ಮಠಕ್ಕಷ್ಟೇ ಸೀಮಿತವಾಗಿದ್ದಾರೆ. ಆದರೆ, ಶಿವಮೂರ್ತಿ ಶ್ರೀಗಳು ಜನರ ವಿರೋಧದ ನಡುವೆಯೂ ವ್ಯವಸ್ಥೆಯ ವಿರುದ್ಧವೇ ತಿರುಗಿ ಬಿದ್ದು ಸಮಸಮಾಜ ನಿರ್ಮಿಸಲು ಮುಂದಾಗಿದ್ದಾರೆ. ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯಗಳಿಗೆ ಮಠಗಳನ್ನು ಸ್ಥಾಪಿಸಿ ಸ್ವಾಮೀಜಿಗಳನ್ನು ನೇಮಕ ಮಾಡುವ ಮೂಲಕ ದಮನಿತರನ್ನು ಮೇಲೆತ್ತುವ ಕಾರ್ಯ ಮಾಡುತ್ತಿದ್ದಾರೆ. ನಾನು ಸಚಿವನಾಗಿದ್ದಾಗ ಇಲ್ಲಿ ₹4 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಬಸವ ಭವನ ನಿರ್ಮಿಸಿದ್ದು, ಶುಭ ಕಾರ್ಯಗಳನ್ನು ನಡೆಸಲು ಅನುಕೂಲ ಆಗಿದೆ’ ಎಂದರು.

ಕಬೀರಾನಂದ ಮಠದ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ‘ಮಲ್ಲಿಕಾರ್ಜುನ ಸ್ವಾಮೀಜಿ ಅವರು ಬಹುಭಾಷಾ ಪಂಡಿತರಾಗಿದ್ದರು. ಅವರ ಶಿಷ್ಯ ಶಿವಮೂರ್ತಿ ಶರಣರು ಮಧ್ಯಕರ್ನಾಟಕದಲ್ಲಿ ಶರಣ ಸಂಸ್ಕೃತಿ ಉತ್ಸವ ಆಚರಿಸುವ ಮೂಲಕ ಚಿತ್ರದುರ್ಗದ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಪಸರಿಸಿದ್ದಾರೆ’ ಎಂದು ಹೇಳಿದರು.

ಮಧುರೆಯ ಪುರುಷೋತ್ತಮಾನಂದ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಾಜಿ ಶಾಸಕರಾದ ಪಿ.ರಮೇಶ್, ಎ.ವಿ.ಉಮಾಪತಿ, ಎಲ್.ಬಿ.ರಾಜಶೇಖರ್, ಪಿ.ಆರ್.ಶಿವಕುಮಾರ್, ಶರಣ ಸಂಸ್ಕೃತಿ ಉತ್ಸವದ ಕಾರ್ಯಾಧ್ಯಕ್ಷ ಜಯಣ್ಣ, ಪಟ್ಟಣ ಪಂಚಾಯಿತಿ ಸದಸ್ಯ ಮುರುಗೇಶ್, ಡಿ.ಸಿ.ಮೋಹನ್ ಇದ್ದರು.

***

ಶ್ರೀಗಳಿಗೆ ಹೆಸರುಕಾಳೆಂದರೆ ಇಷ್ಟ!

ಲಿಂಗೈಕ್ಯ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೆಸರುಕಾಳನ್ನು ತುಂಬಾ ಇಷ್ಟಪಡುತ್ತಿದ್ದರು ಎಂದು ಶಿವಮೂರ್ತಿ ಮುರುಘಾ ಶರಣರು ಹೇಳಿದರು.

‘ಉತ್ತರ ಕರ್ನಾಟಕದ ಪ್ರಸಿದ್ಧ ತಿನಿಸಾದ ನೆನೆಸಿದ ಹೆಸರು ಕಾಳಿನ ಕೋಸಂಬರಿಯನ್ನು ಶ್ರೀಗಳು ಇಷ್ಟಪಟ್ಟು ತಿನ್ನುತ್ತಿದ್ದರು. ಹಾವೇರಿ ಮಠದಲ್ಲಿದ್ದ ಶ್ರೀಗಳು ಚಿತ್ರದುರ್ಗದ ಮಠಕ್ಕೆ ಬಂದಾಗಲೆಲ್ಲ ಇದೇ ಪದಾರ್ಥ ಮಾಡಿಸಿಕೊಂಡು ತಿನ್ನುತ್ತಿದ್ದರು. ಕಾಶಿಯಲ್ಲಿ ಅಧ್ಯಯನ ಮಾಡುವಾಗ ಜಯವಿಭವ ಸ್ವಾಮೀಜಿ ಮತ್ತು ಮಲ್ಲಿಕಾರ್ಜುನ ಸ್ವಾಮೀಜಿ ಒಂದೇ ಕೊಠಡಿಯಲ್ಲಿ ನೆಲೆಸಿದ್ದರು. ಆಗ ಜಯವಿಭವ ಸ್ವಾಮೀಜಿ ವಿವಿಧ ಬಗೆಯ ಚಟ್ನಿಗಳನ್ನು ಮಾಡುತ್ತಿದ್ದರು. ‘ಜಯವಿಭವ ಸ್ವಾಮೀಜಿ ಮಾಡಿದ ಚಟ್ನಿಗಳು ಒರಳಕಲ್ಲು ನೆಕ್ಕುವಂತಿರುತ್ತವೆ’ ಎಂದು ಮಲ್ಲಿಕಾರ್ಜುನ ಸ್ವಾಮೀಜಿ ಹೊಗಳುತ್ತಿದ್ದರು’ ಎಂದು ಹೇಳಿದರು.

***

ಪ್ರಸಿದ್ಧ ವ್ಯಕ್ತಿಗಳ ಮಕ್ಕಳು ಹುಟ್ಟುತ್ತಲೇ ದೊಡ್ಡವ ರಾಗುತ್ತಾರೆ. ಆದರೆ ಶೂನ್ಯದಿಂದ ಬಂದು ದೊಡ್ಡ ಸಾಧನೆ ಮಾಡುವವರು ಮಾತ್ರ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ.

ಶಿವಮೂರ್ತಿ ಮುರುಘಾ ಶರಣರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT