ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗತ್ಯವಸ್ತು ರವಾನೆಗೆ ಸಿಕ್ಕಿತು ಅವಕಾಶ

ಬೆಂಗಳೂರಿಗೆ ಸಾಗುತ್ತಿದೆ ರೈತರ ತರಕಾರಿ, ಹಣ್ಣು
Last Updated 31 ಮಾರ್ಚ್ 2020, 12:35 IST
ಅಕ್ಷರ ಗಾತ್ರ

ಚಿತ್ರದುರ್ಗ: ಫಸಲಿಗೆ ಬಂದ ಬೆಳೆಯನ್ನು ಕಟಾವು ಮಾಡದೇ ಕಂಗೆಟ್ಟಿದ್ದ ರೈತರ ನೆರವಿಗೆ ಜಿಲ್ಲಾಡಳಿತ ಕೊನೆಗೂ ಧಾವಿಸಿದೆ. ಆಹಾರ ಧಾನ್ಯಗಳ‌ನ್ನು ಬೇರೆ ಜಿಲ್ಲೆಗಳಿಗೆ ರವಾನೆ ಮಾಡಲು ಅವಕಾಶ ನೀಡಿದೆ.

ಕೊರೊನಾ ವೈರಸ್ ಸಂಬಂಧ ದೇಶ ಮತ್ತು ರಾಜ್ಯದಲ್ಲಿ ಲಾಕ್ ಡೌನ್ ಇರುವ ತರಕಾರಿ ಮತ್ತು ಹಣ್ಣು ಬೆಳೆಗಾರರು ಕಂಗಾಲಾಗಿದ್ದರು. ಏಪ್ರಿಲ್ ತಿಂಗಳಲ್ಲಿ ಮಳೆ ಸುರಿದರೆ ಬೆಳೆ ಹಾಳಾಗುವ ಆತಂಕವೂ ಅವರಲ್ಲಿ ಮನೆ ಮಾಡಿತ್ತು. ಜಿಲ್ಲಾಡಳಿತದ‌ ತೀರ್ಮಾನದಿಂದ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ತೋಟಗಾರಿಕೆ ಬೆಳೆಗಳಾದ ಈರುಳ್ಳಿ, ಕಲ್ಲಂಗಡಿ ಹಾಗೂ ಸಪೋಟವನ್ನು ಚಿತ್ರದುರ್ಗ ಹಾಗೂ ವಿವಿಧ ಭಾಗದ ಅನೇಕ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದಾರೆ. ಜಿಲ್ಲೆಯ ನಗರ ವ್ಯಾಪ್ತಿಗಳಲ್ಲಿ ಬೇಡಿಕೆ ಕಡಿಮೆಯಾಗಿದ್ದು, ಸೂಕ್ತ ಬೆಲೆ ಇಲ್ಲದಂತಾಗಿದೆ. ಇದನ್ನು ಅರಿತ ತೋಟಗಾರಿಕೆ ಅಧಿಕಾರಿಗಳು ಅನುಮತಿ ಕೊಡಿಸುವಲ್ಲಿ ಸಫಲರಾಗಿದ್ದಾರೆ.

ಹತ್ತಕ್ಕಿಂತ ಹೆಚ್ಚು ಎಕರೆಗಳಲ್ಲಿ ಹಣ್ಣು, ತರಕಾರಿ ಹಾಗೂ ಸೊಪ್ಪು ಬೆಳೆದ ರೈತರು ತೋಟಗಾರಿಕೆ‌ ಇಲಾಖೆಯಲ್ಲಿ ಧೃಢೀಕರಣ ಪತ್ರ ಪಡೆಯಬೇಕು. ಆಗ ಮಾತ್ರ ಬೇರೆ ಜಿಲ್ಲೆಗಳಿಗೆ ಕೊಂಡೊಯ್ದು ಮಾರಾಟ ಮಾಡಲು ಅನುಮತಿ‌ ಸಿಗುತ್ತದೆ.

ಪತ್ರದಲ್ಲಿ ರೈತರ ಹೆಸರು, ಬೆಳೆದಿರುವ ಬೆಳೆ, ವಾಹನ ಸಂಖ್ಯೆ, ಯಾವ ಜಿಲ್ಲೆಯ ಮಾರುಕಟ್ಟೆಗೆ ಕೊಂಡೊಯ್ಯುತ್ತಿದ್ದಾರೆ ಎಂಬ ಮಾಹಿತಿ ನಮೂದಿಸಬೇಕು. ಜತೆಗೆ ಮೂರು ದಿನದೊಳಗೆ ಮಾರಾಟ ಮಾಡಬೇಕು ಎಂಬ ಷರತ್ತು ಪಾಲನೆ ಮಾಡಬೇಕು. ಇಲ್ಲದಿದ್ದರೆ, ಅನುಮತಿ ರದ್ದಾಗಲಿದೆ.

ಈಗಾಗಲೇ ಕೆಲ ರೈತರು ಬೆಳೆದ ಬೆಳೆಗಳನ್ನು ಬೆಂಗಳೂರಿನ ಯಶವಂತಪುರ ಹಾಗೂ ಹೊಸೂರು ಮಾರುಕಟ್ಟೆಗೆ ವಾಹನಗಳ‌ ಮೂಲಕ ಸಾಗಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ, ಮಂಗಳವಾರ ಹಾಗೂ ಶುಕ್ರವಾರ ಮಾತ್ರ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ದಾಳಿಂಬೆ, ಕಲ್ಲಂಗಡಿ, ಕರ್ಬೂಜ, ಈರುಳ್ಳಿಯನ್ನು ಮಾರಾಟ ಮಾಡಿ ಬಂದಿದ್ದಾರೆ. ಜಿಲ್ಲೆಯ ಟೊಮಟೊಗೆ ಅಧಿಕ ಬೇಡಿಕೆ ಇದ್ದ ಕೋಲಾರದ ಮಾರುಕಟ್ಟೆಯಲ್ಲೂ ಬೆಲೆ ಕುಸಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT