ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲು, ಬಿಸಿಗಾಳಿಗೆ ತತ್ತರಿಸಿದ ರೈತ!

ಜಿ.ಬಿ.ನಾಗರಾಜ್‌
Published 6 ಮೇ 2024, 6:53 IST
Last Updated 6 ಮೇ 2024, 6:53 IST
ಅಕ್ಷರ ಗಾತ್ರ

ಚಿತ್ರದುರ್ಗ: ಬೇಸಿಗೆ ಬಿಸಿಲು ಹೆಚ್ಚುತ್ತಿದ್ದಂತೆಯೇ ಗಾಳಿಯೂ ಬಿಸಿಯಾಗತೊಡಗಿದೆ. ಹಿತಕರ ವಾತಾವರಣ ಮಾಯವಾಗಿ ಧಗೆ ಹೆಚ್ಚಾಗಿದೆ. ತೋಟ, ಕೃಷಿ ಬೆಳೆ ಉಳಿಸಿಕೊಳ್ಳಲು ಹನಿ ನೀರಿಗೂ ಪರದಾಡುತ್ತಿರುವ ರೈತರಿಗೆ ಹೊಸ ಸವಾಲೊಂದು ಎದುರಾಗಿದೆ. ಬಿಸಿಲಿನ ಝಳ ಮತ್ತು ಬಿಸಿಗಾಳಿ ಕೃಷಿಕರಿಗೆ ಹೊಸ ರೀತಿಯ ಸಂಕಷ್ಟಗಳನ್ನು ತಂದೊಡ್ಡಿದೆ.

ಸಾಲು ಸಾಲು ಬರಗಳನ್ನು ಕಂಡಿರುವ ಜಿಲ್ಲೆಯ ರೈತರಿಗೆ ಪ್ರಸಕ್ತ ವರ್ಷದ ಬೇಸಿಗೆ ಹೊಸ ಸವಾಲಾಗಿದೆ. ಬರದಲ್ಲಿ ಬದುಕುವ ಬಗೆಯನ್ನು ಕರಗತ ಮಾಡಿಕೊಂಡಿದ್ದ ಜನರು ಬಿಸಿಗಾಳಿಗೆ ತತ್ತರಿಸಿ ಹೋಗಿದ್ದಾರೆ. ಒಂದೆಡೆ ಕೊಳವೆಬಾವಿಯ ನೀರು ಬತ್ತುತ್ತಿದ್ದರೆ, ಮತ್ತೊಂದೆಡೆ ಸುಡು ಬಿಸಿಲಿನಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ತೋಟಗಾರಿಕೆ ಬೆಳೆ, ಹೈನುಗಾರಿಕೆ ಹಾಗೂ ಮೀನು ಸಾಕಾಣಿಕೆಯ ಮೇಲೂ ಇದು ಪರಿಣಾಮ ಬೀರಿದೆ.

ಮಳೆಯ ಕೊರತೆಯ ಕಾರಣಕ್ಕೆ ಜಿಲ್ಲೆಯಲ್ಲಿ ಬೇಸಿಗೆ ಹಂಗಾಮಿನ ಕೃಷಿ ಬೆಳೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ. ಮುಂಗಾರಿನಂತೆ ಹಿಂಗಾರು ಮಳೆ ಕೂಡ ಕೈಕೊಟ್ಟಿದ್ದರಿಂದ ರೈತರು ಬೇಸಿಗೆ ಬೆಳೆ ಬೆಳೆಯಲು ಉತ್ಸುಕತೆ ತೋರಿದ್ದು ಕಡಿಮೆ. ಆದರೆ, ತೋಟಗಾರಿಕೆ ಬೆಳೆ ಉಳಿಸಿಕೊಳ್ಳಲು ಬೆಳೆಗಾರರು ಪರದಾಡುತ್ತಿದ್ದಾರೆ. ಅಡಿಕೆ, ತೆಂಗು, ಬಾಳೆ, ಪಪ್ಪಾಯ ಸಂರಕ್ಷಣೆ ಸವಾಲಾಗಿದೆ. ಪುಷ್ಪ ಕೃಷಿಯನ್ನೇ ಅವಲಂಬಿಸಿದ್ದ ರೈತರು ಹೂ, ಗಿಡ ಸಂರಕ್ಷಣೆಯ ದಾರಿ ಕಾಣದೇ ಕಂಗಾಲಾಗಿದ್ದಾರೆ. ತರಕಾರಿ ಬೆಳೆಯ ವಿಸ್ತೀರ್ಣ ಕಡಿಮೆಯಾಗಿದ್ದು, ಮುಂಬರುವ ದಿನಗಳಲ್ಲಿ ತರಕಾರಿ ಕೊರತೆ ಉಂಟಾಗುವ ಆತಂಕ ಮೂಡಿಸಿದೆ.

ತೆಂಗು ಜಿಲ್ಲೆಯ ಪ್ರಮುಖ ತೋಟಗಾರಿಕೆ ಬೆಳೆ. 65,000 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ತೆಂಗು ಬೆಳೆ ಇದೆ. ಹೊಸದುರ್ಗ, ಹಿರಿಯೂರು, ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ಇದು ಹೆಚ್ಚಾಗಿದೆ. ಪ್ರಸಕ್ತ ವರ್ಷದಿಂದ ಅಡಿಕೆ ಬೆಳೆ ತೆಂಗಿಗಿಂತಲೂ ಹೆಚ್ಚಾಗಿದೆ. ಜಿಲ್ಲೆಯ 70,000 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ವಿಸ್ತರಣೆ ಕಂಡಿದೆ. ಬರದಲ್ಲಿ ತೆಂಗು ಬಾಡಿದರೂ ಬೆಳೆ ಉಳಿಯುತ್ತದೆ. ಆದರೆ, ಅಡಿಕೆ ಸಂಪೂರ್ಣ ಒಣಗುತ್ತದೆ. ಕಷ್ಟಪಟ್ಟು ನೀರು ಒದಗಿಸಿದರೂ ಏರಿದ ತಾಪಮಾನ ಅಡಿಕೆಯನ್ನು ಹಾಳು ಮಾಡುತ್ತಿದೆ.

ಉದುರುತ್ತಿವೆ ಅಡಿಕೆ ಹರಳು:

ತಾಪಮಾನ ಹೆಚ್ಚುತ್ತಿದ್ದಂತೆಯೇ ಅಡಿಕೆ ಹರಳುಗಳು ಉದುರಲಾರಂಭಿಸಿವೆ. ಸಾಮಾನ್ಯವಾಗಿ 35 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ಅಡಿಕೆಗೆ ಒಳ್ಳೆಯದಲ್ಲ. ಕಳೆದ ಒಂದೂವರೆ ತಿಂಗಳಿಂದ ತಾಪಮಾನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ದಾಟಿರುವುದರ ಪರಿಣಾಮ ಅಡಿಕೆಯ ಹರಳು ನಿಲ್ಲುತ್ತಿಲ್ಲ. ಗಿಡದ ಬುಡಕ್ಕೆ ಎಷ್ಟೇ ನೀರು ಒದಗಿಸಿದರೂ ಹರಳು ಉದುರುವುದನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಹರಳಿನ ಗಾತ್ರ ದೊಡ್ಡದಾಗಿದ್ದರೂ ಉದುರುವ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

‘ಅಡಿಕೆ ಹರಳು ಉದುರುವ ಸಮಸ್ಯೆ ಕಾಣಿಸಿಕೊಂಡಿದೆ. ತಾಪಮಾನದ ಏರಿಕೆಯಿಂದಾಗಿ ಈ ತೊಂದರೆ ಬೆಳೆಗಾರರನ್ನು ಬಾಧಿಸತೊಡಗಿದೆ. ಸಾಕಷ್ಟು ನೀರು ಒದಗಿಸಿದ ತೋಟಗಳಲ್ಲಿ ಕೂಡ ಅಡಿಕೆಯ ಹರಳು ನಿಲ್ಲುತ್ತಿಲ್ಲ. ನಿರೀಕ್ಷೆಗೂ ಮೀರಿ ಹೆಚ್ಚಾದ ಬಿಸಿಲಿನ ಪರಿಣಾಮ ಇದು’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಸವಿತಾ ವಿವರಿಸಿದರು.

ಬಾಳೆ, ‍ಪಪ್ಪಾಯ ತೋಟಗಳು ಕೂಡ ಬಿಸಿಗಾಳಿಗೆ ತುತ್ತಾಗುತ್ತಿವೆ. ತರಕಾರಿ ಬೆಳೆ ಬೆಳೆಯಲು ರೈತರು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಪಾತಿ ಮಾಡಿದ ಸಸಿಗಳು ಉಳಿಯುತ್ತಿಲ್ಲ. ನರ್ಸರಿಗಳಲ್ಲಿಯೇ ಸಸಿಗಳು ಒಣಗುತ್ತಿವೆ. ಬಿಸಿಲಿನ ತಾಪಮಾನ ಇಳಿಕೆಯಾಗಿ ವಾತಾವರಣ ಹಿತಕರವಾಗಲಿ ಎಂದು ರೈತರು ಬೇಡಿಕೊಳ್ಳುವಂತಾಗಿದೆ.

ಹೊಳಲ್ಕೆರೆ ತಾಲ್ಲೂಕಿನ ದಗ್ಗೆ ಗ್ರಾಮದಲ್ಲಿ ಒಣಗುತ್ತಿರುವ ಅಡಿಕೆ ತೋಟ. 
ಹೊಳಲ್ಕೆರೆ ತಾಲ್ಲೂಕಿನ ದಗ್ಗೆ ಗ್ರಾಮದಲ್ಲಿ ಒಣಗುತ್ತಿರುವ ಅಡಿಕೆ ತೋಟ. 
ದಗ್ಗೆ ಗ್ರಾಮದಲ್ಲಿ ಅಡಿಕೆ ತೋಟದಲ್ಲಿ ಉದುರಿರುವ ಹರಳು
ದಗ್ಗೆ ಗ್ರಾಮದಲ್ಲಿ ಅಡಿಕೆ ತೋಟದಲ್ಲಿ ಉದುರಿರುವ ಹರಳು

ತೋಟವನ್ನು ತಂಪಾಗಿಡಲು ಮಲ್ಚಿಂಗ್‌ ಪದ್ಧತಿ ಅಳವಡಿಸಿಕೊಳ್ಳುವುದು ಒಳಿತು. ಬೇವು ಹೊಂಗೆ ಮರದ ಎಲೆಗಳನ್ನು ಗಿಡದ ಬುಡಕ್ಕೆ ಹಾಕಿದರೆ ತೋಟದ ವಾತಾವರಣದಲ್ಲಿ ಉಷ್ಣಾಂಷ ಕಡಿಮಯಾಗುತ್ತದೆ. -ಸವಿತಾ ಉಪನಿರ್ದೇಶಕಿ ತೋಟಗಾರಿಕೆ ಇಲಾಖೆ

ಬರ ಪರಿಸ್ಥಿತಿ ತಲೆದೋರಿದ್ದರಿಂದ ಬೇಸಿಗೆ ಹಂಗಾಮು ಬೆಳೆಯ ವಿಸ್ತೀರ್ಣ ಕಡಿಮೆಯಾಗಿದೆ. ಶೇಂಗಾ ಮೆಕ್ಕೆಜೋಳ ಬೆಳೆಯುವ ಜಮೀನನ್ನು ಉಳಿಮೆ ಮಾಡಿ ಭೂಮಿ ಹದಗೊಳಿಸಿಕೊಳ್ಳುವುದು ಒಳಿತು.

-ಮಂಜುನಾಥ್‌ ಜಂಟಿ ನಿರ್ದೇಶಕ ಕೃಷಿ ಇಲಾಖೆ

ತೊಟ್ಟಿ ಹೊಂಡದಲ್ಲಿ ಮೀನು ಸಾಕಾಣಿಕೆ ಮಾಡುವವರು ಹೊಸ ನೀರು ಸೇರಿಸುತ್ತಿರಬೇಕು. ಹೊಸದಾಗಿ ಸೇರುವ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಾಗಿರುತ್ತದೆ. ಇದರಿಂದ ಮೀನಿಗೆ ತೊಂದರೆ ಆಗದು.

-ಕುಮಾರಸ್ವಾಮಿ ಉಪನಿರ್ದೇಶಕ ಮೀನುಗಾರಿಕೆ ಇಲಾಖೆ

‘ಸುಸ್ಥಿರ ಕೃಷಿಗೆ ಮಾಗಿ ಉಳುಮೆ’ ಬೇಸಿಗೆಯಲ್ಲಿ ಭೂಮಿಯನ್ನು ಉಳಿಮೆ ಮಾಡಿದರೆ ಮುಂಗಾರು ಹಂಗಾಮು ಬೆಳೆಗೆ ಅನುಕೂಲವಾಗುತ್ತದೆ. ಮಾಗಿ ಉಳುಮೆ ಮಾಡಿದಷ್ಟು ಸುಸ್ಥಿರ ಕೃಷಿ ಸಾಧ್ಯವಾಗಲಿದೆ ಎಂಬುದು ಕೃಷಿ ಇಲಾಖೆಯ ಸಲಹೆ. ‘ಮೇ ಅಂತ್ಯದಿಂದ ಕೃಷಿ ಚಟುವಟಿಕೆ ಗರಿಗೆದರುತ್ತದೆ. ಮುಂಗಾರು ಹಂಗಾಮಿಗೆ ಅಗತ್ಯವಿರುವ ರಸಗೊಬ್ಬರ ಬೀಜ ಸಂಗ್ರಹ ಮಾಡಿಕೊಳ್ಳುವ ತಯಾರಿ ಆರಂಭವಾಗಿದೆ. ರೈತರು ಬೇಸಿಗೆಯಲ್ಲಿ ಭೂಮಿಯನ್ನು ಹೆಚ್ಚು ಉಳಿಮೆ ಮಾಡಬೇಕು. ಬಿಸಿಲಿಗೆ ಭೂಮಿ ಕಾದಷ್ಟು ಬೆಳೆಗೆ ಅನುಕೂಲವಾಗುತ್ತದೆ. ಮಣ್ಣಿನಲ್ಲಿ ತೇವಾಂಶ ಹಿಡಿದಿಡುವ ಗುಣ ಬೆಳೆಯುತ್ತದೆ. ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ’ ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ್‌.

ಮೀನಿಗೆ ಆಮ್ಲಜನಕದ ಕೊರತೆ ಮೀನು ಸಾಕಾಣಿಕೆ ಮಾಡುತ್ತಿರುವ ಕೃಷಿಕರಿಕಗೆ ಏರುತ್ತಿರುವ ತಾಪಮಾನ ಹೊಸ ಬಿಕ್ಕಟ್ಟು ಸೃಷ್ಟಿಸಿದೆ. ನೀರಿನಲ್ಲಿರುವ ಮೀನು ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಬಿಸಿಲು ಹೆಚ್ಚಾಗಿದ್ದರಿಂದ ನೀರಿನಲ್ಲಿರುವ ಕರಗಿದ ಆಮ್ಲಜಕದ ಪ್ರಮಾಣ ಕಡಿಮೆಯಾಗಿ ಮೀನುಗಳೂ ಜೀವ ಉಳಿಸಿಕೊಳ್ಳಲು ಕಷ್ಟಪಡುತ್ತಿವೆ. ‘ಸಾಮಾನ್ಯವಾಗಿ 28 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನ ಇದ್ದರೆ ನೀರಿನಲ್ಲಿರುವ ಮೀನುಗಳಿಗೆ ಹಿತಕರ ವಾತಾವರಣ ಇರುತ್ತದೆ. ನೀರಿನ ಜೈವಿಕ ಪ್ರಕ್ರಿಯೆಗೂ ಇದು ಅನುಕೂಲಕರ. ಈ ಹಂತದಲ್ಲಿ ನೀರಿನಲ್ಲಿ ಕರಗಿದ ಆಮ್ಲಜನಕ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುತ್ತದೆ. ಪ್ರಸಕ್ತ ಬೇಸಿಗೆಯ ತಾಪಮಾನ ನಿರೀಕ್ಷೆ ಮೀರಿ ಏರಿಕೆಯಾಗಿದ್ದರಿಂದ ಮೀನು ಕೃಷಿಗೂ ತೊಂದರೆ ಉಂಟಾಗಿದೆ’ ಎನ್ನುತ್ತಾರೆ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಕುಮಾರಸ್ವಾಮಿ.

ದಾಳಿಂಬೆ ಗಿಡಗಳಿಗೆ ‘ಶೇಟ್‌ ನೆಟ್‌ʼ ನೆರಳು ಕೊಂಡ್ಲಹಳ್ಳಿ ಜಯಪ್ರಕಾಶ ಮೊಳಕಾಲ್ಮುರು: ಬಿಸಿಲಿನ ಪ್ರಖರತೆ ದಾಳಿಂಬೆ ಬೆಳೆಯ ಮೇಲೂ ದುಷ್ಪರಿಣಾಮ ಬೀರಲು ಆರಂಭಿಸಿದ್ದು ತಾಲ್ಲೂಕಿನ ಸಾಕಷ್ಟು ಬೆಳೆಗಾರರು ಹಾನಿಯನ್ನು ತಪ್ಪಿಸಿಕೊಳ್ಳಲು ‘ಶೇಡ್‌ ನೆಟ್‌’ ಮೊರೆ ಹೋಗಿದ್ದಾರೆ. ಮೊಳಕಾಲ್ಮುರು ಹಾಗೂ ಚಳ್ಳಕೆರೆ ತಾಲ್ಲೂಕಿನಲ್ಲಿ ಈಚಿನ ವರ್ಷಗಳಲ್ಲಿ ದಾಳಿಂಬೆ ಪ್ರಮುಖ ವಾಣಿಜ್ಯ ತೋಟಗಾರಿಕೆ ಬೆಳೆಯಾಗಿ ಹೊರಹೊಮ್ಮಿದೆ. ದುಂಡಾಣು ರೋಗ ವೈರಸ್‌ ಹಾವಳಿಯಿಂದಾಗಿ ನಷ್ಟಕ್ಕೀಡಾಗಿದ್ದ ಬೆಳೆಗಾರರು ಈ ವರ್ಷ ವಿಪರೀತ ತಾಪಮಾಣಕ್ಕೆ ಇರುವ ಗಿಡ ಮತ್ತು ಕಚ್ಚಿರುವ ಕಾಯಿ ಕಾಪಾಡಲು ಹೆಣಗಾಡುತ್ತಿದ್ದಾರೆ. ಒಂದು ಎಕರೆ ‘ಶೇಡ್‌ ನೆಟ್‌’ ಹಾಕಲು ₹ 15000-50000 ಖರ್ಚು ಬರುತ್ತದೆ. ಗುಣಮಟ್ಟದ ಶೇಡ್‌ ನೆಟ್‌ ಹಾಕಿದರೆ 2 ವರ್ಷ ಬಳಸಬಹುದು. ಇಲ್ಲವಾದಲ್ಲಿ ಪ್ರತಿ ಬೆಳೆಗೆ ಬದಲಾವಣೆ ಮಾಡಬೇಕಾಗುತ್ತದೆ. ‘ದಾಳಿಂಬೆ ಕೃಷಿಗೆ ಬೇಸಿಗೆಯಲ್ಲಿ ಗರಿಷ್ಠ 36 ಡಿಗ್ರಿ ಸೆಲ್ಸಿಯಸ್‌  ಉಶ್ಣಾಂಶ ಇದ್ದಲ್ಲಿ ಕಾಪಾಡಬಹುದು. ತಾಪಮಾನ ಹೆಚ್ಚಿದರೆ ಕಷ್ಟ. ಈ ವರ್ಷ 40 ಡಿಗ್ರಿ ಸೆಲ್ಸಿಯಸ್‌ ದಾಟಿರುವ ಕಾರಣ ಕಾಯಿಗಳ ಮೇಲೆ ಪರಿಣಾಮ ಬೀರಿದೆ’ ಎಂದು ಬೆಳೆಗಾರ ಮೊಗಲಹಳ್ಳಿಯ ಆರ್.ರಾಮರೆಡ್ಡಿ ಹೇಳಿದರು. ‘ಬಿಸಿಲು ಬಿದ್ದ ಭಾಗದ ಹಣ್ಣು ಕಪ್ಪಾಗುವ ಜತೆಗೆ ಒಳಗಡೆ ಬೀಜಗಳು ಬಿಳಿಯಾಗುತ್ತವೆ. ಮಾರುಕಟ್ಟೆಯಲ್ಲಿ ದರ ಶೇ 50ರಷ್ಟು ಕುಸಿತವಾಗುತ್ತದೆ. ರಪ್ತು ಗುಣಮಟ್ಟ ಕಳೆದುಕೊಳ್ಳುತ್ತವೆ. ‘ಶೇಡ್‌ ನೆಟ್‌’ ಹಾಕುವುದರಿಂದ ಬಿಸಿಲಿನ ಪ್ರಖರತೆ ತಡೆಯುವ ಜತೆಗೆ ಕೀಟಬಾಧೆ ಪಕ್ಷಿಗಳ ಉಪಟಳ ಕಡಿಮೆಯಾಗಲಿದೆ’ ಎಂದರು. ಬಿಸಿಲು ಹೆಚ್ಚಿರುವ ಹಿನ್ನೆಲೆಯಲ್ಲಿ ಗಿಡಗಳು ದುಪ್ಪಟ್ಟು ನೀರು ಕೇಳುತ್ತಿವೆ. ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿದ್ದು ಪರಿಸ್ಥಿತಿ ಮುಂದುವರಿದಲ್ಲಿ ಗಿಡಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಲಿದೆ ಎಂದು ಬೆಳೆಗಾರರು ಹೇಳುತ್ತಾರೆ. ‘4-5 ವರ್ಷದಿಂದಲೂ ಶೇಡ್‌ ನೆಟ್‌ ಹಾಕುವ ಪ್ರಕ್ರಿಯೆ ಈ ಭಾಗದಲ್ಲಿದೆ. ಹಣ್ಣಿನ ಗುಣಮಟ್ಟ ಸುಧಾರಣೆಗೆ ಇದು ಸಹಕಾರಿಯಾಗಿದೆ. ನೆಟ್‌ಗೆ ಹಾಕಿದ ಬಂಡವಾಳವು ಹಣ್ಣಿನ ಗುಣಮಟ್ಟ ಹೆಚ್ಚಳದಿಂದ ವಾಪಾಸ್‌ ಆಗಲಿದೆ’ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಆರ್.‌ ವಿರೂಪಾಕ್ಷಪ್ಪ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT