ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆಗೆ ನಿರ್ವಹಣೆಯ ಕೊರತೆ

ಸಮರ್ಪಕ ನೀರು ಸರಬರಾಜಿಗೆ ಶಾಶ್ವತ ಪರಿಹಾರ ಒದಗಿಸುವಂತೆ ನಾಗರಿಕರ ಒತ್ತಾಯ
Last Updated 1 ಮಾರ್ಚ್ 2021, 3:50 IST
ಅಕ್ಷರ ಗಾತ್ರ

ಚಿತ್ರದುರ್ಗ: ಶಾಂತಿಸಾಗರ ಹಾಗೂ ವಾಣಿವಿಲಾಸ ಸಾಗರ ಜಲಾಶಯದಲ್ಲಿ ನೀರಿದ್ದರೂ ಪದೇ ಪದೇ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಇದಕ್ಕೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (ಕೆಯುಡಬ್ಲ್ಯುಎಸ್) ನಿರ್ವಹಣೆಯ ಕೊರತೆಯಿಂದ ಜನರು ವಾರಕ್ಕೊಮ್ಮೆ ಕುಡಿಯುವ ನೀರು ಪಡೆಯುವ ದುಃಸ್ಥಿತಿ ನಗರದ ಹಲವು ವಾರ್ಡ್‌ಗಳಲ್ಲಿ ನಿರ್ಮಾಣವಾಗಿದೆ.

ನಗರದಲ್ಲಿ ಸಾಮಾನ್ಯವಾಗಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಸಹಜ. ಆದರೆ, ಎರಡು ವರ್ಷಗಳಿಂದ ಮುಂಗಾರು, ಹಿಂಗಾರು ಮಳೆ ವಾಡಿಕೆಗಿಂತಲೂ ಅಧಿಕವಾಗಿ ಸುರಿದ ಪರಿಣಾಮ ಶಾಂತಿಸಾಗರ ಕೆರೆ ಹಾಗೂ ವಿ.ವಿ ಸಾಗರ ಜಲಾಶಯದಲ್ಲಿ ನೀರಿನ ಕೊರತೆ ಉಂಟಾಗಿಲ್ಲ. ಆದರೆ, ನಿರ್ವಹಣೆಯ ವೈಫಲ್ಯದಿಂದ ಈಗಲೂ ನೀರಿನ ಬವಣೆ ತಲೆದೋರಿದೆ.

ಸಮರ್ಪಕವಾಗಿ ನೀರು ಪೂರೈಕೆ ಆಗದಿದ್ದಾಗ ಸಾರ್ವಜನಿಕ ನಲ್ಲಿಗಳ ಬಳಿ ಹೆಚ್ಚಿನ ಕೊಡಪಾನಗಳು ಸಾಲಾಗಿ ಇಡಲಾಗಿರುತ್ತದೆ. ಸೈಕಲ್, ದ್ವಿಚಕ್ರ, ಆಟೊ, ಕಾರು, ತಳ್ಳುವ ಗಾಡಿಗಳಲ್ಲೂ ನೀರು ತುಂಬಿಸಿಕೊಂಡು ಕೆಲವರು ಹೋಗುತ್ತಾರೆ. ಹತ್ತದಿನೈದು ವರ್ಷಗಳ ಮಕ್ಕಳಿಂದ 60 ವರ್ಷ ವಯೋಮಾನದವರೂ ಹೆಗಲ ಮೇಲೆ ಹೊತ್ತು ಕೊಂಡೊಯ್ಯುತ್ತಾರೆ. ಇನ್ನೂ ಕೆಲ ಕೊಳೆಗೇರಿ ಪ್ರದೇಶಗಳ ನಿವಾಸಿಗಳು ಈಚೆಗಷ್ಟೇ ನೀರು ಪೂರೈಕೆಗಾಗಿ ನಗರಸಭೆ ಮುಂಭಾಗ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ಕೂಡ ಮಾಡಿದ್ದಾರೆ.

ನಗರಸಭಾ ಸದಸ್ಯರು ಕೂಡ ಈಚೆಗೆ ನಡೆದ ನಗರಸಭೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆಯುಡಬ್ಲ್ಯುಎಸ್ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಹರಿಹಾಯ್ದಿದ್ದರು. ಈ ರೀತಿ ಪ್ರಶ್ನಿಸಿದ ವೇಳೆ ಕೆಲ ದಿನಗಳವರೆಗೂ ನೀರು ಪೂರೈಕೆ ಸಮರ್ಪಕವಾಗಿ ಆದರೂ ಮತ್ತೆ ಸಮಸ್ಯೆ ಸೃಷ್ಟಿಯಾಗುತ್ತಲೇ ಇದೆ.

ಕರುವಿನಕಟ್ಟೆ ವೃತ್ತ, ಫಿಲ್ಟರ್‌ಹೌಸ್‌, ದೊಡ್ಡಪೇಟೆ, ಚಿಕ್ಕಪೇಟೆ, ಕೆಳಗೋಟೆ ಸೇರಿ ಕೆಲ ಬಡಾವಣೆಗಳಲ್ಲಂತೂ ಮೂರು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಕ್ರಮಬದ್ಧವಾಗಿ ನೀರು ಪೂರೈಸುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ. ಕೆಲವೆಡೆ ರಸ್ತೆ ಮೇಲೆ ಹರಿದರೂ ನಿಲ್ಲಿಸಲು ನಾಗರಿಕರು ಮುಂದಾಗುತ್ತಿಲ್ಲ. ಈ ರೀತಿ ಪೋಲಾಗುವುದನ್ನು ತಡೆಯಿರಿ ಎಂಬುದಾಗಿ ಅಧಿಕಾರಿಗಳು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಬ್ಯಾಂಕ್‌ ಕಾಲೊನಿ, ಪ್ರಶಾಂತನಗರ, ಜೋಗಿಮಟ್ಟಿ ರಸ್ತೆ, ಅಂಬೇಡ್ಕರ್ ಕಲ್ಯಾಣ ಮಂಟಪದ ಮುಖ್ಯರಸ್ತೆ, ರಾಜೇಂದ್ರ ನಗರಗಳಲ್ಲಿ ಹದಿನೈದು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಆಪರೇಟರ್‌, ನೀರಗಂಟಿಗಳನ್ನು ನಾಗರಿಕರು ವಿಚಾರಿಸಿದರೆ, ಪೈಪ್‌ಲೈನ್ ದುರಸ್ತಿ, ವಿದ್ಯುತ್ ಸ್ಥಗಿತ ಎಂಬ ರೂಢಿಗತ ಉತ್ತರವನ್ನೇ ಹೇಳಿ ಸಮಾಧಾನ ಪಡಿಸುತ್ತಾರೆ.

ಶಾಂತಿಸಾಗರದ ನೀರು ಕೊಟ್ಟಿಗೆಹಳ್ಳಿ ಮಧ್ಯಂತರ ಘಟಕದಿಂದ ಪಂಪ್‌ ಮಾಡಿ, ಶುದ್ಧೀಕರಣಗೊಂಡ ಬಳಿಕ ನಗರದ ವಿವಿಧ ವಾರ್ಡ್‌ಗಳಿಗೆ ಪೂರೈಸಲಾಗುತ್ತಿದೆ. ಆದರೂ ಮಳೆಯಾದಾಗಲೆಲ್ಲ ಕಲುಷಿತ ನೀರು ಚಿತ್ರದುರ್ಗಕ್ಕೆ ಹರಿದು ಬರುತ್ತದೆ. ಆಗಿಂದಾಗ್ಗೆ ಪಂಪ್‌ ಮಾಡುವ ಮೋಟರ್‌ಗಳು ರಿಪೇರಿಗೆ ಬರುವ ಕಾರಣ ನೀರು ಸರಬರಾಜಿನಲ್ಲಿ ವ್ಯತ್ಯಯ ಸಾಮಾನ್ಯವಾಗಿದೆ. ವರ್ಷದಲ್ಲಿ ಬಹಳಷ್ಟು ಸಾರಿ ಇಲ್ಲಿ ದುರಸ್ತಿ ಕಾರ್ಯ ನಡೆಯುತ್ತದೆ. ಇಲ್ಲಿ ಎರಡು ಮೋಟರ್‌ ಪಂಪ್‌ಗಳಿದ್ದು, ಒಂದು ಕೈಕೊಟ್ಟರೂ ನಗರಕ್ಕೆ ನೀರು ಬರುವುದಿಲ್ಲ.

ಇನ್ನು ವಿ.ವಿ. ಸಾಗರದ ನೀರು ಅಲ್ಲಿನ ಜಲಾಶಯದ ಘಟಕದಿಂದ ಪಂಪ್‌ ಮಾಡಿ ಹಿರಿಯೂರು ಹಾಗೂ ಬುರುಜನರೊಪ್ಪ ಮಾರ್ಗವಾಗಿ ನಗರಕ್ಕೆ ಹರಿಯಲಿದೆ. ಈ ಮೂರು ಮಾರ್ಗಗಳಲ್ಲೂ ವಿದ್ಯುತ್ ವ್ಯತ್ಯಯ ಉಂಟಾಗಬಾರದು. ಯಾವುದಾದರೂ ಒಂದು ಕಡೆ ವಿದ್ಯುತ್ ಸ್ಥಗಿತಗೊಂಡರೂ ನಗರಕ್ಕೆ ನೀರು ಹರಿಯುವುದು ಕನಸಿನ ಮಾತು.

ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಬಹಳಷ್ಟು ಬಾರಿ ಹೇಳಿದ್ದಾರೆ. ಆದರೆ, ವಾಸ್ತವವಾಗಿ ಏಳು ದಿನ ಕಳೆದರೂ ನೀರು ಬಿಟ್ಟಿರುವುದಿಲ್ಲ. ಒಮ್ಮೊಮ್ಮೆ ಪಂಪ್‌ ಕೆಟ್ಟಿದೆ ಎಂಬ ನೆಪ ಹೇಳುವ ಎಂಜಿನಿಯರ್‌ಗಳು, ನೀರು ಬಿಡಲು 10ಕ್ಕೂ ಹೆಚ್ಚು ದಿನ ತೆಗೆದುಕೊಳ್ಳುತ್ತಿದ್ದಾರೆ.

‘ಮಂಡಳಿ ಹಾಗೂ ನಗರಸಭೆ ಪೂರೈಸುವ ನೀರಿನ ಮೇಲೆಯೇ ಅವಲಂಬಿತರಾಗಿದ್ದೇವೆ. ಆದರೆ, ಅಧಿಕಾರಿಗಳು ನಿಯಮಿತವಾಗಿ ನೀರು ಪೂರೈಸುವುದಿಲ್ಲ. ಕೆಲಸ ಬಿಟ್ಟು ನೀರಿಗಾಗಿ ಕಾಯುತ್ತಾ ಕುಳಿತರೆ ನೀರೂ ಬರುವುದಿಲ್ಲ, ಕೆಲಸವೂ ಆಗುವುದಿಲ್ಲ. ಮೋಟರ್‌, ಪಂಪ್‌ ಕೆಟ್ಟಿದೆ, ಪೈಪ್‌ಲೈನ್‌ ಒಡೆದಿದೆ ಎಂಬ ನೆಪದಲ್ಲೇ ದಿನ ದೂಡುತ್ತಾರೆ’ ಎಂದು ಅಂಬೇಡ್ಕರ್ ಕಲ್ಯಾಣ ಮಂಟಪ ಸಮೀಪದ ನಿವಾಸಿ ಪ್ರಸನ್ನ ಆರೋಪಿಸಿದ್ದಾರೆ.

‘ಅಧಿಕಾರಿಗಳ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿರುವ ಜನರು ಸ್ವಂತ ಕೊಳವೆಬಾವಿ ಕೊರೆಸಿಕೊಳ್ಳಲು ಕೆಲವೆಡೆ ಮುಂದಾಗುತ್ತಿದ್ದಾರೆ. ಆದರೆ, ಬಡವರು, ಜಾಗ ಇಲ್ಲದವರು ಏನು ಮಾಡಬೇಕು’ ಎಂದು ಸ್ಥಳೀಯರಾದ ಮಂಜುನಾಥ್, ಸಂತೋಷ್ ಪ್ರಶ್ನಿಸಿದ್ದಾರೆ.

24X7 ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಜಾರಿಗೊಳಿಸಲಾದ ‘ಅಮೃತ್‌’ ಯೋಜನೆ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ.

ಹಲವು ಗಡುವುಗಳು ಮುಗಿದು ಹೋಗಿದ್ದರೂ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಹಲವು ಕಾರಣ ಹೇಳುತ್ತಿರುವ ಅಧಿಕಾರಿಗಳು ಕಾಮಗಾರಿ ಮುಂದೂಡುತ್ತಲೇ ಇದ್ದಾರೆ. ಹೀಗಾಗಿ24 ಗಂಟೆಯೂ ನೀರು ಪಡೆಯುವ ನಗರದ ಜನರ ಕನಸು ನನಸಾಗುವುದೇ ಎಂಬ ಪ್ರಶ್ನೆ ನಾಗರಿಕರಲ್ಲೇ ಮೂಡತೊಡಗಿದೆ. ಸಮರ್ಪಕ ನೀರು ಪೂರೈಕೆಗೆ ಶಾಶ್ವತ ಪರಿಹಾರ ಒದಗಿಸಿ ಎಂಬ ಕೂಗು ಕೇಳಿಬರುತ್ತಿದೆ. ನಗರದಲ್ಲಿ ರಸ್ತೆ ಅಭಿವೃದ್ಧಿ ಸೇರಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡ ವೇಳೆಅಲ್ಲಲ್ಲಿ ಪೈಪ್‌ಲೈನ್‌ಗಳಿಗೆ ಹಾನಿ ಆಗುವುದುಸಾಮಾನ್ಯ. ಇದರಿಂದ ವಿತರಣೆಯಲ್ಲಿ ತೊಂದರೆ ಆಗುತ್ತಿದೆ. ಅದನ್ನು ಹೊರತುಪಡಿಸಿದರೆ, ಟ್ಯಾಂಕರ್‌ನಲ್ಲಿ ನೀರು ಪೂರೈಸುವ ಸ್ಥಿತಿ ಬಂದೊದಗಿಲ್ಲ. ಅನಿವಾರ್ಯ ಎನಿಸಿದ ವಾರ್ಡ್‌ಗಳಿಗೆ ಮಾತ್ರಟ್ಯಾಂಕರ್ ನೀರು ಪೂರೈಸಲಾಗುತ್ತಿದೆ ಎಂದು ನಗರಸಭೆ ಎಂಜಿನಿಯರ್ ಕಿರಣ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT