ಶನಿವಾರ, ಜನವರಿ 29, 2022
19 °C
ಕೋಟೆನಾಡಿನೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಹಿರಿಯ ನಟ ಶಿವರಾಂ

ಶಿವರಾಂ: ‘ನಾಗರಹಾವು’ ವರದಣ್ಣ ಬಿಟ್ಟುಹೋದ ನೆನಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಇಲ್ಲಿಯ ಕೋಟೆನಾಡಿನಲ್ಲಿ ಚಿತ್ರೀಕರಣಗೊಂಡು ನಾಡಿನ ಮನೆಮಾತಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಸಿನಿಮಾದಲ್ಲಿ ವರದಣ್ಣನ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ ಶಿವರಾಂ ಅವರು ಬಿಟ್ಟುಹೋದ ನೆನಪುಗಳು ಜೀವಂತವಾಗಿವೆ.

ವರದನ ಪಾತ್ರದಲ್ಲಿ ಲಕ್ಷಾಂತರ ಸಿನಿರಸಿಕರಿಗೆ ರಂಜಿಸಿರುವ ಅವರು ಕಾದಂಬರಿಕಾರ ಬಿ.ಎಲ್. ವೇಣು ಚಿತ್ರಕಥೆಯ ಬಿಚ್ಚುಗತ್ತಿ ಸಿನಿಮಾದಲ್ಲಿ ಮುರುಘಾಮಠದ ಮುರುಗಿ ಶಾಂತವೀರ ಸ್ವಾಮೀಜಿ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕೊಟ್ಟ ಪಾತ್ರಕ್ಕೆ ಜೀವ ತುಂಬುತ್ತಿದ್ದ ಅವರ ಅಭಿನಯಕ್ಕೆ ಕೋಟೆನಗರಿಯ ಜನರು ಮನಸೋತಿದ್ದರು.

ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಛಲವಾದಿ ಬಸವನಾಗಿದೇವ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ ಸಿನಿಮಾ ವೀಕ್ಷಿಸಿ ಶಿವರಾಂ ಅವರ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಎರಡು–ಮೂರು ವಾರ ಪ್ರದರ್ಶನ ಕಂಡ ನಂತರ ಕೋವಿಡ್ ಪ್ರಕರಣ ಹೆಚ್ಚಾದ ಕಾರಣಕ್ಕೆ ಸಿನಿಮಾ ಪ್ರದರ್ಶನ ರದ್ದುಪಡಿಸಲಾಯಿತು.

‘ಯಜಮಾನ’ ಸಿನಿಮಾ 100 ದಿನ ಯಶಸ್ವಿ ಪ್ರದರ್ಶನ ಕಂಡು ರಾಜ್ಯದಾದ್ಯಂತ ಸಂಭ್ರಮಾಚರಣೆಯ ಯಾತ್ರೆ ವೇಳೆ ವಿಷ್ಣುವರ್ಧನ್ ಅವರ ಜತೆಗೆ ಚಿತ್ರದುರ್ಗಕ್ಕೂ ಬಂದಿದ್ದರು. ಇಲ್ಲಿ ಆ ವೇಳೆ ನಡೆದ ಅದ್ದೂರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಉತ್ತಮ ವ್ಯಕ್ತಿ; ಬಿ.ಎಲ್.ವೇಣು ನೆನಪು: ‘ಇಡೀ ಸಿನಿಮಾ ಕ್ಷೇತ್ರದಲ್ಲಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಶಿವರಾಂ ಅವರು ಉತ್ತಮ ವ್ಯಕ್ತಿ. ನಾಗರಹಾವು ಸಿನಿಮಾ ಸಂಬಂಧ ರಂಗಯ್ಯನ ಬಾಗಿಲು, ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ ನಾನು ಕೂಡ ಹೋಗುತ್ತಿದ್ದೆ. ಚಿಕ್ಕ ಹುಡುಗನಾಗಿದ್ದ ನನಗೆ ಚಿತ್ರೀಕರಣ ನೋಡುವ ತವಕವೂ ಹೆಚ್ಚಿತ್ತು. ಮುಂದೆ ವಿಷ್ಣುವರ್ಧನ್ ಅವರ ಅನೇಕ ಸಿನಿಮಾಗಳಿಗೆ ಸಂಭಾಷಣೆ ಬರೆದೆ. ಆ ಎಲ್ಲಾ ಚಿತ್ರಗಳಲ್ಲೂ ಶಿವರಾಂ ಅಭಿನಯಿಸಿದ್ದಾರೆ ಎಂಬುದೇ ನನಗೆ ಖುಚಿ ಕೊಡುವ ವಿಚಾರ’ ಎಂದು ಕಾದಂಬರಿಕಾರ ಬಿ.ಎಲ್. ವೇಣು ಸ್ಮರಿಸಿಕೊಂಡಿದ್ದಾರೆ.

‘ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಸೇರಿ ಅನೇಕ ಕಲಾವಿದರ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡು ಚಿತ್ರ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಾನು ಬರೆದ ಅಚ್ಚುಮೆಚ್ಚಿನ ಕಥೆಯಾದ ಬಿಚ್ಚುಗತ್ತಿಯಲ್ಲಿ ಅಭಿನಯಿಸಿದ್ದು, ಒಂದೆಡೆ ಸಂತೋಷ ತಂದಿದೆ. ಮತ್ತೊಂದೆಡೆ ಅವರ ನಿಧನದ ಸುದ್ದಿ ಕಹಿ ನೆನಪಾಗಿ ಉಳಿದಿದೆ’ ಎಂದು ನೆನಪು ಮಾಡಿಕೊಂಡಿದ್ದಾರೆ.

ಗುರುಸ್ವಾಮಿ ಮರೆಯಲು ಸಾಧ್ಯವಿಲ್ಲ: ‘ಶಿವರಾಂ ಅವರನ್ನು ಚಿತ್ರದುರ್ಗದ ಅಯ್ಯಪ್ಪಸ್ವಾಮಿಯ ಸಾವಿರಾರು ಭಕ್ತರು ಗುರುಸ್ವಾಮಿ ಎಂದೇ ಕರೆಯುತ್ತಾರೆ. ಮೆದೇಹಳ್ಳಿ ರಸ್ತೆಯಲ್ಲಿ ಇರುವ ಅಯ್ಯಪ್ಪಸ್ವಾಮಿ ದೇಗುಲಕ್ಕೂ ಅವರಿಗೂ ಅವಿನಾಭಾವ ಸಂಬಂಧವಿದೆ. ಅನೇಕ ಭಾರಿ ದೇಗುಲಕ್ಕೆ ಭೇಟಿ ನೀಡಿ ಸ್ವಾಮಿಯ ಆಶೀರ್ವಾದ ಪಡೆದಿದ್ದಾರೆ’ ಎಂದು ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶರಣ್‌ಕುಮಾರ್ ಸ್ಮರಿಸಿದ್ದಾರೆ.

‘2019ರಲ್ಲಿ ಇಲ್ಲಿಯ ಬುರುಜನಹಟ್ಟಿಯಲ್ಲಿ ನಡೆದ ಅಯ್ಯಪ್ಪಸ್ವಾಮಿಯ ಪಡಿಪೂಜಾ ಮಹೋತ್ಸವಕ್ಕೂ ಬಂದಿದ್ದರು. ಆ ವೇಳೆ ನನ್ನನ್ನು ಆತ್ಮೀಯವಾಗಿ ಸನ್ಮಾನಿಸಿದ ಕ್ಷಣ ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದು ನೆನಪು ಮೆಲುಕು ಹಾಕಿದ್ದಾರೆ.

 ಶರಣರಿಂದ ಸಂತಾಪ

ಕನ್ನಡ ಚಿತ್ರರಂಗದಲ್ಲಿ ಸುಮಾರು 6 ದಶಕ ಪೋಷಕ ಮತ್ತು ಹಾಸ್ಯ ಪಾತ್ರಗಳ ಮೂಲಕ ನಾಡಿನ ಜನರನ್ನು ಶಿವರಾಂ ಅವರು ರಂಜಿಸಿದ್ದಾರೆ. ನಿರ್ದೇಶಕರಾಗಿ, ನಿರ್ಮಾಪಕರಾಗಿ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆಯಿಂದ ಚಿತ್ರರಂಗಕ್ಕೆ ನಷ್ಟವಾಗಿದೆ. ಕುಟುಂಬ ಮತ್ತು ಅಭಿಮಾನಿಗಳಿಗೆ ನೋವು ಸಹಿಸಿಕೊಳ್ಳುವ ಶಕ್ತಿ ಬಸವಾದಿ ಪ್ರಮಥರು ಕರುಣಿಸಲಿ ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು