ಭದ್ರಾ ಮೇಲ್ದಂಡೆಗೆ ಡಿಸೆಂಬರ್‌ ಗಡುವು

7
ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಪುನರುಚ್ಚಾರ

ಭದ್ರಾ ಮೇಲ್ದಂಡೆಗೆ ಡಿಸೆಂಬರ್‌ ಗಡುವು

Published:
Updated:
Deccan Herald

ಚಿತ್ರದುರ್ಗ: ‘ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಡಿಸೆಂಬರ್‌ಗೆ ಗಡುವು ನೀಡಿದ್ದೇನೆ. ಕಾಮಗಾರಿ ತ್ವರಿತಗತಿ ಪಡೆಯಲಿ ಎಂಬ ಉದ್ದೇಶದಿಂದ ವರ್ಷಾಂತ್ಯಕ್ಕೆ ಭದ್ರಾ ನೀರು ವಿ.ವಿ.ಸಾಗರಕ್ಕೆ ಬರಲಿದೆ ಎಂಬ ಹೇಳಿಕೆ ನೀಡಿದ್ದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಬುಧವಾರ ಸ್ಪಷ್ಟನೆ ನೀಡಿದರು.

ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಚಿತ್ರದುರ್ಗಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಡಿಸೆಂಬರ್‌ಗೆ ಭದ್ರಾ ನೀರು ಜಿಲ್ಲೆಗೆ ಬರದಿದ್ದರೆ ರಾಜೀನಾಮೆ ನೀಡುತ್ತೀರಾ’ ಎಂಬ ಬಿಜೆಪಿಯ ಪ್ರಶ್ನೆಗೆ ತುಸು ಮುನಿಸಿನಿಂದಲೇ ಪ್ರತಿಕ್ರಿಯಿಸಿದರು.

‘ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ಪರಿಪೂರ್ಣವಾಗಿ ಅರಿಯುವ ಉದ್ದೇಶದಿಂದ ತರೀಕೆರೆ, ಅಜ್ಜಂಪುರಕ್ಕೆ ಭೇಟಿ ನೀಡಿದ್ದೆ. ಚುನಾವಣಾ ನೀತಿ ಸಂಹಿತೆ ಇರುವ ಕಾರಣಕ್ಕೆ ಯಾವ ಜನಪ್ರತಿನಿಧಿಗಳಿಗೂ ಆಹ್ವಾನ ನೀಡಿರಲಿಲ್ಲ. ನಾಲೆಗಾಗಿ ನಿರ್ಮಿಸುತ್ತಿರುವ ಸುರಂಗ ಮಾರ್ಗದಲ್ಲಿ ಸಾಗಿ ವೀಕ್ಷಿಸಿದ್ದೇನೆ. ಸುರಂಗದಲ್ಲಿ 80 ಮೀಟರ್‌ ಕೆಲಸ ಮಾತ್ರ ಬಾಕಿ ಇದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ’ ಎಂದರು.

‘ನನೆಗುದಿಗೆ ಬಿದ್ದಿರುವ ಭೂಸ್ವಾದೀನಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು. ಬಹುನಿರೀಕ್ಷಿತ ಯೋಜನೆ ಪೂರ್ಣಗೊಳ್ಳುವವರೆಗೆ ಅಧಿಕಾರಿಗಳು ನಿದ್ರಿಸಲು ಬಿಡುವುದಿಲ್ಲ. ಭದ್ರಾ ನದಿ ನೀರಿನ ಕುರಿತು ಕಾಂಗ್ರೆಸ್‌ ಹೇಳುವುದು ಸುಳ್ಳೊ, ನಿಜವೊ ಎಂಬುದು ವರ್ಷಾಂತ್ಯಕ್ಕೆ ಗೊತ್ತಾಗಲಿದೆ. ಈ ಬಗ್ಗೆ ಅಸಮಾಧಾನಗಳಿದ್ದರೆ ಬಿಜೆಪಿ ನೇರವಾಗಿ ನನ್ನನ್ನು ಪ್ರಶ್ನಿಸಲಿ’ ಎಂದು ಹೇಳಿದರು.

‘ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಅಭಿವೃದ್ಧಿಯ ವಿಚಾರದಲ್ಲಿ ಪಕ್ಷಭೇದ ಮಾಡುವುದಿಲ್ಲ. ಬಿಜೆಪಿ–ಕಾಂಗ್ರೆಸ್‌ ಪಕ್ಷದ ಜನಪ್ರತಿನಿಧಿಗಳು ಸ್ನೇಹಿತರಂತೆ ಇದ್ದೇವೆ. ಒಗ್ಗೂಡಿ ಕೆಲಸ ಮಾಡುತ್ತೇವೆ’ ಎಂದು ಪಕ್ಕದಲ್ಲೇ ಕುಳಿತಿದ್ದ ಬಿಜೆಪಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರನ್ನು ನೋಡಿದರು.

‘ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿದ ಬಳಿಕ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಸಭೆ ನಡೆಸಲಾಗುವುದು. ಈ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ನಿಷ್ಕ್ರಿಯಗೊಂಡಿರುವ ಜಿಲ್ಲಾಡಳಿತಕ್ಕೆ ಚುರುಕು ಮುಟ್ಟಿಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಸಂಸದ ಬಿ.ಎನ್‌.ಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸೌಭಾಗ್ಯ ಬಸವರಾಜನ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !