ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಮಠ: ಶಿವಮೂರ್ತಿ ಶರಣರಿಗೆ ಅಧಿಕಾರ ಹಸ್ತಾಂತರ

Published 7 ಡಿಸೆಂಬರ್ 2023, 18:42 IST
Last Updated 7 ಡಿಸೆಂಬರ್ 2023, 18:42 IST
ಅಕ್ಷರ ಗಾತ್ರ

ಚಿತ್ರದುರ್ಗ: ಹೈಕೋರ್ಟ್‌ ನಿರ್ದೇಶನದ ಮೇರೆಗೆ ಮುರುಘಾ ಮಠದ ತಾತ್ಕಾಲಿಕ ಆಡಳಿತಾಧಿಕಾರಿಯಾಗಿದ್ದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಕೆ.ಬಿ.ಗೀತಾ ಅವರು ಪೀಠಾಧಿಪತಿ ಶಿವಮೂರ್ತಿ ಶರಣರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ.

ಪೀಠಾಧಿಪತಿಗೆ ಅಧಿಕಾರ ಮರಳಿಸಿದ ಆದೇಶ ಡಿ.5ರಂದು ಹೊರಬಿದ್ದಿದ್ದು, ನ್ಯಾಯಾಧೀಶರ ಕಚೇರಿ ಗುರುವಾರ ಅಧಿಕೃತ ಪತ್ರವನ್ನು ಮಠಕ್ಕೆ ತಲುಪಿಸಿದೆ. ಬಸವಪ್ರಭು ಸ್ವಾಮೀಜಿ ನ್ಯಾಯಾಲಯದ ಆದೇಶ ಪ್ರತಿ ಸ್ವೀಕರಿಸಿ ಶಿವಮೂರ್ತಿ ಮುರುಘಾ ಶರಣರಿಗೆ ತಲುಪಿಸಿದ್ದಾರೆ. ಚಿತ್ರದುರ್ಗ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಇರುವುದರಿಂದ ಶರಣರು ಹೊರಗಿನಿಂದಲೇ ಆಡಳಿತ ನಡೆಸಲಿದ್ದಾರೆ.

‘ಮುರುಘಾ ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತವನ್ನು ನ್ಯಾಯಾಧೀಶರು ಪೀಠಾಧಿಪತಿಗೆ ಹಸ್ತಾಂತರಿಸಿದ್ದಾರೆ. ಮಠದ ಸದ್ಭಕ್ತರು ಸಹಕರಿಸಬೇಕು’ ಎಂದು ಎಸ್‌ಜೆಎಂ ವಿದ್ಯಾ‍ಪೀಠದ ಅಧ್ಯಕ್ಷರೂ ಆಗಿರುವ ಶಿವಮೂರ್ತಿ ಶರಣರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರು ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಪ್ರಕರಣದಲ್ಲಿ 2022ರ ಸೆ.1ರಂದು ಬಂಧಿತರಾಗಿದ್ದರು. ಶರಣರು ನ್ಯಾಯಾಂಗ ಬಂಧನದಲ್ಲಿದ್ದರಿಂದ ಮಠದ ಸುಗಮ ಆಡಳಿತಕ್ಕಾಗಿ ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎಸ್.ವಸ್ತ್ರದ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ರಾಜ್ಯ ಸರ್ಕಾರ 2022ರ ಡಿ.13ರಂದು ಆದೇಶಿಸಿತ್ತು.

ಮಠದ ಉಸ್ತುವಾರಿಯಾಗಿದ್ದ ಬಸವಪ್ರಭು ಸ್ವಾಮೀಜಿ ಅವರು ಸರ್ಕಾರದ ಈ ಕ್ರಮವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಸರ್ಕಾರದ ಆಡಳಿತಾಧಿಕಾರಿ ನೇಮಕ ಆದೇಶವನ್ನು ರದ್ದುಪಡಿಸಿದ ನ್ಯಾಯಾಲಯ, ತಾತ್ಕಾಲಿಕ ಆಡಳಿತಾಧಿಕಾರಿಯನ್ನಾಗಿ ಜಿಲ್ಲಾ ಪ್ರಧಾನ ನ್ಯಾಯಾಧೀಶರನ್ನು ನಿಯೋಜಿಸಿ ಜುಲೈ 3ರಂದು ಆದೇಶಿಸಿತ್ತು. ಶಿವಮೂರ್ತಿ ಶರಣರು ನ.16ರಂದು ಜಾಮೀನು ಮೇಲೆ ಕಾರಾಗೃಹದಿಂದ ಹೊರಬಂದ ಬಳಿಕ ಈ ಆದೇಶ ರದ್ದಾಗಿತ್ತು.

ಹಣ ದುರುಪಯೋಗ: ನೋಟಿಸ್‌

ಮುರುಘಾ ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ₹ 24 ಲಕ್ಷವನ್ನು ದುರುಪಯೋಗ ಮಾಡಿಕೊಂಡ ಆರೋಪ ಎದುರಿಸುತ್ತಿರುವ ಬಸವಪ್ರಭು ಸ್ವಾಮೀಜಿ ಅವರಿಗೆ ತಾತ್ಕಾಲಿಕ ಆಡಳಿತಾಧಿಕಾರಿ ನೀಡಿದ್ದ ನೋಟಿಸ್‌ ಮುನ್ನೆಲೆಗೆ ಬಂದಿದೆ. ಅಡಗೂರು ಮಠದ ₹ 6 ಲಕ್ಷ ಚಿತ್ರದುರ್ಗದ ಎಸ್‌ಜೆಎಂ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ₹ 8 ಲಕ್ಷ ಹಾಗೂ ಬೆಂಗಳೂರಿನ ಕಾನಿಷ್ಕ ಗ್ರ್ಯಾಂಡ್‌ ಹೋಟೆಲ್‌ ಮಾಲೀಕರಿಂದ ಪಡೆದ ₹ 10 ಲಕ್ಷವನ್ನು ಕಾನೂನು ಬಾಹಿರವಾಗಿ ಬಳಸಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ನೀಡಿದ ಸಮಜಾಯಿಷಿ ಸರಿಯಾಗಿಲ್ಲ. ಕೂಡಲೇ ಹಣವನ್ನು ಮಠ ಅಥವಾ ವಿದ್ಯಾಪೀಠಕ್ಕೆ ಮರಳಿಸಬೇಕು. ತಪ್ಪಿದರೆ ಹಣ ವಸೂಲಿ ಪ್ರಕ್ರಿಯೆಗೆ ದಾವೆ ಹೂಡಬೇಕಾಗುತ್ತದೆ ಎಂದು ನ.4ರಂದು ನೀಡಿದ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ‘ತಾತ್ಕಾಲಿಕ ಆಡಳಿತಾಧಿಕಾರಿಯಾಗಿದ್ದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರು ಈ ನೋಟಿಸ್‌ ನೀಡಿದ್ದರು. ಈಗ ಆಡಳಿತಾಧಿಕಾರಿ ನೇಮಕ ಆದೇಶ ರದ್ದಾಗಿದೆ. ಪೀಠಾಧಿಪತಿ ಶಿವಮೂರ್ತಿ ಶರಣರು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಮಠದ ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT