ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಆನ್‌ಲೈನ್‌ ವಂಚನೆಗೂ ಸಿಗಲಿದೆ ಪರಿಹಾರ

ರಾಷ್ಟ್ರೀಯ ಗ್ರಾಹಕರ ದಿನಾಚರಣೆಯಲ್ಲಿ ಜಿ. ಶ್ರೀಪತಿ
Last Updated 24 ಡಿಸೆಂಬರ್ 2021, 13:06 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಖರೀದಿಸಿದ ವಸ್ತುಗಳಲ್ಲಿ ನ್ಯೂನತೆ ಕಂಡುಬಂದಲ್ಲಿ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿ. ಸೂಕ್ತ ಪರಿಹಾರ ಪಡೆಯಲು ಮುಂದಾಗಿ’ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸದಸ್ಯ ಜಿ. ಶ್ರೀಪತಿ ಸಲಹೆ ನೀಡಿದರು.

ಚಿತ್ರದುರ್ಗ ತಾಲ್ಲೂಕಿನ ಬಳ್ಳೇಕಟ್ಟೆ ಸಮೀಪದ ಕುಂಬಾರ ಗುಂಡಯ್ಯ ಮಹಾಸಂಸ್ಥಾನ ಮಠದಲ್ಲಿ ಜಿಲ್ಲಾಡಳಿತ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಸ್ಲೈಟ್ಸ್ ಸ್ವಯಂ ಸೇವಾ ಸಂಸ್ಥೆ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ, ಕುಂಬಾರ ಮಹಿಳಾ ಮಹಾಸಭಾ ವತಿಯಿಂದ ಶುಕ್ರವಾರ ಆಯೋಜಿಸಿದ್ದ ‘ರಾಷ್ಟ್ರೀಯ ಗ್ರಾಹಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘₹ 5 ಲಕ್ಷದೊಳಗಿನ ಗ್ರಾಹಕರ ವ್ಯಾಜ್ಯಗಳ ಪರಿಹಾರಕ್ಕೆ ಶುಲ್ಕದ ವಿನಾಯಿತಿ ಇದೆ. ವಕೀಲರನ್ನು ಸಂಪರ್ಕಿಸುವ ಅಗತ್ಯ ಇರುವುದಿಲ್ಲ. ಗ್ರಾಹಕರ ಆಯೋಗಕ್ಕೆ ನೇರವಾಗಿ ಸಂಪರ್ಕಿಸಿದರೆ ಪ್ರಕರಣ ದಾಖಲಿಸುವ ಕುರಿತು ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಾಗುವುದು’ ಎಂದು ಹೇಳಿದರು.

‘ಖರೀದಿಸುವ ವೇಳೆ ಅನೇಕರು ಸಮಸ್ಯೆ ಎದುರಿಸುತ್ತಿದ್ದಾರೆ. ಯಾವುದೇ ವಸ್ತು ಖರೀದಿ ಮಾಡಿದಾಗ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಅದಕ್ಕೆ ರಸೀದಿ ಪಡೆಯಬೇಕು. ಬೆಲೆಯಲ್ಲಿ ವ್ಯತ್ಯಾಸ ಉಂಟಾದರೆ ಗ್ರಾಹಕರ ಆಯೋಗಕ್ಕೆ ದೂರು ದಾಖಲು ಮಾಡಬಹುದು. ಮೂರು ತಿಂಗಳೊಳಗೆ ಪರಿಹಾರಕ್ಕೆ ಆದೇಶ ನೀಡಲಾಗುವುದು’ ಎಂದು ತಿಳಿಸಿದರು.

ಕುಂಬಾರ ಗುಂಡಯ್ಯ ಮಹಾಸಂಸ್ಥಾನದ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಕೆ.ಎನ್. ಮಹಂತೇಶ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿನಿರ್ದೇಶಕ ಪಿ.ಶಿವಣ್ಣ, ಜಿಲ್ಲಾ ವಾರ್ತಾಧಿಕಾರಿ ಬಿ.ಧನಂಜಯ, ಕಾನೂನು ಮಾಪಾನಶಾಸ್ತ್ರ ಸಹಾಯಕ ನಿಯಂತ್ರಕ ಎಂ.ಗುರುಪ್ರಸಾದ್, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಜಿಲ್ಲಾ ಸಂಯೋಜಕಿ ಎಸ್.ಬೈಲಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT