ಶನಿವಾರ, ಸೆಪ್ಟೆಂಬರ್ 19, 2020
26 °C
ಬೊಮ್ಮನಕಟ್ಟೆ: ₹ 1.5 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಎಂ. ಚಂದ್ರಪ್ಪ ಚಾಲನೆ

ರಾಜ್ಯ ಹೆದ್ದಾರಿ–47: ಅಭಿವೃದ್ಧಿಗೆ ₹ 10 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹೊಳಲ್ಕೆರೆ: ಹೊಸದುರ್ಗ–ಹೊಳಲ್ಕೆರೆ ರಾಜ್ಯ ಹೆದ್ದಾರಿ–47ರ ಅಭಿವೃದ್ಧಿಗಾಗಿ ₹ 10 ಕೋಟಿ ವೆಚ್ಚ ಮಾಡಲಾಗುವುದು ಎಂದು ಶಾಸಕ ಎಂ. ಚಂದ್ರಪ್ಪ ತಿಳಿಸಿದರು.

ತಾಲ್ಲೂಕಿನ ಬೊಮ್ಮನಕಟ್ಟೆಯಲ್ಲಿ ಭಾನುವಾರ ₹ 1.5 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘2008ರಲ್ಲಿ ನಾನು ಶಾಸಕನಾಗಿದ್ದಾಗ ₹ 43 ಕೋಟಿ ವೆಚ್ಚದಲ್ಲಿ ಹೊಳಲ್ಕೆರೆ-ಹೊಸದುರ್ಗ ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿ ಮಾಡಿದ್ದೆ. ಈ ಮಾರ್ಗದಲ್ಲಿ ಬರುವ ಬೊಮ್ಮನಕಟ್ಟೆ, ಕೆಸರುಗಟ್ಟೆ, ಹಿರೇಕೆರೆ, ಅಂದನೂರು ಕೆರೆಗಳ ಏರಿಯ ಮೇಲೆ ಎರಡು ವಾಹನಗಳು ಸಂಚರಿಸಲಾರದಷ್ಟು ಇಕ್ಕಟ್ಟಾದ ರಸ್ತೆ ಇತ್ತು. ಈ ನಾಲ್ಕೂ ಕೆರೆಗಳ ಏರಿಯ ರಸ್ತೆಯನ್ನು ವಿಸ್ತರಿಸಿ ದ್ವಿಪಥ ರಸ್ತೆಯಾಗಿ ಅಭಿವೃದ್ಧಿ ಮಾಡಿದ್ದೆ. ಆದರೆ, ಅಂದಿನಿಂದ ಇದುವರೆಗೆ ರಸ್ತೆಯ ಒಂದು ಗುಂಡಿಯನ್ನೂ ಮುಚ್ಚಲಾಗಿಲ್ಲ. ಈಗ ಈ ರಸ್ತೆ ಹಾಳಾಗಿದ್ದು, ಡಾಂಬರೀಕರಣ ಮಾಡಲಾಗುವುದು’ ಎಂದರು.

ಬೊಮ್ಮನ ಕಟ್ಟೆಯಿಂದ ರಾಜ್ಯಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ₹ 75 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುವುದು. ಗ್ರಾಮದ ಒಳಗೆ ₹ 75 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು. ಗ್ರಾಮದ ಪ್ರವೇಶ ಸ್ಥಳದ ಜಾಗದಲ್ಲೂ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು. ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗುವುದು. ಹಿಂದೆ ಶಾಸಕನಾಗಿದ್ದಾಗ ಗ್ರಾಮದೇವತೆ ಕರಿಯಮ್ಮ ದೇವಿ ದೇವಾಲಯಕ್ಕೆ ₹ 12.5 ಲಕ್ಷ ಅನುದಾನ ನೀಡಿದ್ದೆ. ಈಗ ಮತ್ತೆ ದೇವಾಲಯದ ಗೋಪುರ ನಿರ್ಮಾಣಕ್ಕೆ ₹ 3 ಲಕ್ಷ, ಆಂಜನೇಯ ಸ್ವಾಮಿ ದೇವಾಲಯಕ್ಕೆ ₹ 3 ಲಕ್ಷ ಅನುದಾನ ನೀಡಲಾಗುವುದು. ಗ್ರಾಮದ ಶಾಲೆಗೆ 2 ನೂತನ ಕೊಠಡಿಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

‘₹ 350 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆ ಮಂಜೂರಾಗಲಿದ್ದು, ತಾಲ್ಲೂಕಿನ ಪ್ರತಿ ಹಳ್ಳಿಗೂ ಸೂಳೆಕೆರೆಯ ನೀರು ಒದಗಿಸಲಾಗುವುದು. ಅಧಿಕಾರ ಶಾಶ್ವತ ಅಲ್ಲ. ಅಧಿಕಾರ ಸಿಕ್ಕಿದಾಗ ಜನರ ಮನಸ್ಸಿನಲ್ಲಿ ಉಳಿಯುವ ಕೆಲಸ ಮಾಡಬೇಕು. ಯಜಮಾನನಿಗೆ ಮನೆಯ ಜವಾಬ್ದಾರಿ ಇರುವಂತೆ, ಶಾಸಕನಿಗೆ ಇಡೀ ಕ್ಷೇತ್ರದ ಜವಾಬ್ದಾರಿ ಇರಬೇಕು. ಮುಂದಿನ 5 ವರ್ಷಗಳಲ್ಲಿ ಕ್ಷೇತ್ರವನ್ನು ಜನರ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಬಿಜೆಪಿ ಮುಖಂಡ ಎಲ್.ಬಿ. ರಾಜಶೇಖರ್, ಚಿತ್ರಹಳ್ಳಿ ದೇವರಾಜು, ಎಪಿಎಂಸಿ ಅಧ್ಯಕ್ಷ ಅಂಕಳಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್, ನಾಗಾನಾಯ್ಕ, ಟಿ. ಮೂರ್ತಿ, ಸುಮಾ ವೆಂಕಟೇಶ್, ಎಂ.ಕೆ. ಓಬಣ್ಣ ಇದ್ದರು.

* * *

ಅಂಕಿ ಅಂಶ

₹ 350 ಕೋಟಿ

ಕುಡಿಯುವ ನೀರಿಗಾಗಿ ವಿನಿಯೋಜನೆ

₹ 3 ಲಕ್ಷ ಅನುದಾನ

ಕರಿಯಮ್ಮದೇವಿ ದೇವಾಲಯಕ್ಕೆ

2 ಕೊಠಡಿ

ಬೊಮ್ಮನಕಟ್ಟೆ ಶಾಲೆಗೆ ಮಂಜೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.