ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮರಿ: ಬೆಂಕಿಯಿಂದ ಬಾಣಲೆಗೆ ಕುಣುಬಿ ಸಮುದಾಯ?

3,857.17 ಎಕರೆ ಭೂ ಪ್ರದೇಶ ಜೀವ ವೈವಿಧ್ಯ ವಲಯಕ್ಕೆ ಪಹಣಿ
Last Updated 12 ಫೆಬ್ರುವರಿ 2023, 5:27 IST
ಅಕ್ಷರ ಗಾತ್ರ

ತುಮರಿ: ‘ಅಂಬಾರಗುಡ್ಡ ಗಣಿಗಾರಿಕೆ ಮಾಡೋಕೆ ಸರ್ಕಾರ ಒಪ್ಪಿ ಗಣಿಗಾರಿಕೆ ಶುರು ಮಾಡಿದ್ರೂ ನಾವೆಲ್ಲ ಸೇರಿ ಹೋರಾಟ ಮಾಡಿ ನಮ್ಮೂರ ಗುಡ್ಡ ಬೆಟ್ಟ ಉಳಿಸಿ ಕೊಂಡ್ವಿ. ಆದ್ರೆ ಸರ್ಕಾರ ಈಗ ನಾವು ವಾಸವಿದ್ದ ಜಾಗವನ್ನೆ ಜೀವ ವೈವಿಧ್ಯ ತಾಣ ಎಂದು ಘೋಷಣೆ ಮಾಡಾಯ್ತು. ನಾಳೆ ನಮ್ಮನ್ನ ಒಕ್ಕಲ್ಲೆಬ್ಬಿಸಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ..?’

ಇದು ಶರಾವತಿ ಹಿನ್ನೀರಿನ ಅಂಬಾರಗುಡ್ಡದ ತಪ್ಪಲಿನಲ್ಲಿರುವ ಕುಣುಬಿ ಸಮುದಾಯದ ಪಾಯು ಅವರ ಪ್ರಶ್ನೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಕರೂರು ಹೋಬಳಿಯ ಎಸ್.ಎಸ್. ಭೋಗ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಾಠಿ, ಆಡಗಳಲೆ, ಕೊಡನವಳ್ಳಿ, ಹೊಸಕೊಪ್ಪ ಸೇರಿ ಸುಮಾರು ಒಟ್ಟು 13 ಸರ್ವೆ ನಂಬರ್‌ಗಳಲ್ಲಿನ 3,857.17 ಎಕರೆ ಭೂ ಪ್ರದೇಶವನ್ನು ಅಂಬಾರಗುಡ್ಡ ಜೀವ ವೈವಿಧ್ಯ ಪಾರಂಪರಿಕ ತಾಣ ಹೆಸರಿಗೆ ಅಧಿಕೃತ ಪಹಣಿ ನೋಂದಣಿ ಪ್ರಕ್ರಿಯೆ ಇತ್ತೀಚೆಗೆ ಮುಗಿದಿದೆ. ಸಾವಿರಕ್ಕೂ ಹೆಚ್ಚು ಕುಟುಂಬಗಳು ಇರುವ ಜನ ವಸತಿ ಪ್ರದೇಶವನ್ನು ಈ ವ್ಯಾಪ್ತಿಗೆ ಸೇರಿಸಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಮ್ಯಾಂಗನೀಸ್ ಅದಿರು ಗಣಿಗಾರಿಕೆಯ ಕಾರಣಕ್ಕೆ ಎರಡು ದಶಕಗಳ ಹಿಂದೆ ಅಂಬಾರಗುಡ್ಡ ಪ್ರದೇಶ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಸಹ್ಯಾದ್ರಿ ತಪ್ಪಲಿನಲ್ಲಿರುವ ಅಂಬಾರಗುಡ್ಡ ಕೊಡಚಾದ್ರಿ ನಂತರದ ಎರಡನೇ ಎತ್ತರದ ಭೂ ಪ್ರದೇಶವಾಗಿದ್ದು, ಮನ್ಸೂನ್ ಮಾರುತಗಳನ್ನು ತಡೆದು ಮಲೆನಾಡಿಗೆ ಮಳೆ ಬೀಳುವಂತೆ ಮಾಡುವ ಪರ್ವತ ಶ್ರೇಣಿಯಾಗಿದೆ. ಇಲ್ಲಿ ಹೇರಳವಾದ ಮ್ಯಾಂಗನೀಸ್ ಅದಿರು ಲಭ್ಯವಾಗುತ್ತದೆ ಎಂಬುದು ದೃಢಪಟ್ಟು 2005ರ ಹೊತ್ತಿಗೆ ಬೆಂಗಳೂರಿನ ಖಾಸಗಿ ಕಂಪನಿಯವರು 99 ವರ್ಷದ ಗುತ್ತಿಗೆ ಪಡೆದು ಏಕಾಏಕಿ ಗಣಿಗಾರಿಕೆ ಆರಂಭಿಸಿದ್ದರು. ಇದು ದ್ವೀಪದ ಜನರಲ್ಲಿ ಆತಂಕ ಹುಟ್ಟಿಸಿತ್ತು.

ಶರಾವತಿ ಉಪ ನದಿಯಾದ ಎಣ್ಣೆಹೊಳೆ ಸೇರುವ ಸಣ್ಣ ಸಣ್ಣ ತೊರೆಗಳ ಉಗಮ ಸ್ಥಾನವಾಗಿರುವ ಅಂಬಾರಗುಡ್ಡದಲ್ಲಿ ಗಣಿಗಾರಿಕೆಯನ್ನು ವಿರೋಧಿಸಿ 2005ರಲ್ಲಿ ದ್ವೀಪದ ಜನರು ಬೃಹತ್ ಹೋರಾಟ ಸಂಘಟಿಸಿ ಗಣಿಗಾರಿಕೆ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಇದೇ ವೇಳೆ ಅರಣ್ಯ ಇಲಾಖೆ ಈ ಭೂ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಿದೆ.

ಈಗ ಈ ಭೂ ಪ್ರದೇಶದ ಸರ್ವೆ ನಂಬರ್‌ಗಳ ಭೂಮಿ ಹಕ್ಕನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿದ್ದು, ಅಂತಿಮವಾಗಿ ಪಹಣಿ ಪತ್ರದಲ್ಲಿ ನೋಂದಣಿಯಾಗಿದೆ. ಇದರ ಜೊತೆಗೆ ಸರ್ವೆ ಪ್ರಕ್ರಿಯೆಗಳೂ ಆರಂಭಗೊಂಡಿದ್ದು, ಸಾವಿರಾರು ಕುಟುಂಬಗಳಿಗೆ ಇದರ ಬಿಸಿ ತಟ್ಟುತ್ತಿದೆ.

ಆತಂಕದಲ್ಲಿ ಕುಣುಬಿ ಸಮುದಾಯ

ಅಂಬಾರಗುಡ್ಡ ಭೂ ಪ್ರದೇಶದಲ್ಲಿ ಪಾರಂಪರಿಕವಾಗಿ ಕಾಡು ಉತ್ಪನ್ನಗಳನ್ನು ಬಳಸಿಕೊಂಡು ಬದುಕು ಕಟ್ಟಿ ಕೊಂಡಿರುವ ಕುಣುಬಿ ಸಮುದಾಯದವರು ಲಗಾಯ್ತಿನಿಂದಲೂ ವಾಸ ಮಾಡುತ್ತಿದ್ದಾರೆ.

ಈ ನಡುವೆ ಸರ್ಕಾರದ ಘೋಷಣೆಯು ಸಮುದಾಯನ್ನು ತ್ರಿಶಂಕು ಸ್ಥಿತಿಯಲ್ಲಿ ನಿಲ್ಲಿಸಿದ್ದು, ಪಾರಂಪರಿಕ ಅರಣ್ಯ ಹಕ್ಕು ವ್ಯಾಪ್ತಿಯ ಅಡಿಯಲ್ಲಿಯೂ ಭೂಮಿಯನ್ನು ಪಡೆಯಲಾಗದ ಸ್ಥಿಯಲ್ಲಿವೆ. ಅಲ್ಲದೆ ಸುಮಾರು 105ಕ್ಕೂ ಹೆಚ್ಚಿನ ಕುಟುಂಬಗಳು ಬಗರ್‌ಹುಕುಂ, 94ಸಿ ಅಡಿಯಲ್ಲಿ ಭೂಮಿ ಪಡೆಯುವ ಹಕ್ಕಿನಿಂದ ವಂಚಿತರಾಗುತ್ತಾರೆ ಎಂದು ಹೇಳಲಾಗುತ್ತಿದೆ. ಇದು ಅವರಲ್ಲಿ ಆತಂಕ ಮೂಡಿಸಿದೆ.

ಪೂರ್ವಭಾವಿ ಸಭೆ ಇಂದು

ಫೆಬ್ರುವರಿ 12ರಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಕರೂರು ಹೋಬಳಿಯ ಹೊಸಕೊಪ್ಪ ಗ್ರಾಮಕ್ಕೆ ಭೇಟಿ ನೀಡಲಿದ್ದು, ಆತಂಕ ಗೊಂಡಿರುವ ರೈತರ ಜೊತೆ ಪೂರ್ವಭಾವಿ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT