ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನಿಗೆ ಖುಷಿ ತಂದ ಕಾಳುಮೆಣಸು ಕೃಷಿ

200 ಬಳ್ಳಿಗಳಿಂದ 8 ಕ್ವಿಂಟಲ್‌ ಇಳುವರಿ ಗಳಿಸಿದ ಭೋಜರಾಜ
Last Updated 25 ಆಗಸ್ಟ್ 2021, 10:02 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಸಂಬಾರ ಪದಾರ್ಥಗಳಲ್ಲಿ ಒಂದಾದ ಕಾಳು ಮೆಣಸು ಅಥವಾ ಕರಿ ಮೆಣಸು ಈಗ ಬಯಲು ಸೀಮೆಗೂ ಕಾಲಿಟ್ಟಿದ್ದು ರೈತನ ಬದುಕನ್ನು ಹಸನು ಮಾಡುತ್ತಿದೆ.

ಸಮೀಪದ ಬಿ. ದುರ್ಗ ಗ್ರಾಮದ ಪ್ರಗತಿಪರ ರೈತ ಭೋಜರಾಜ ಅವರು ಐದು ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಗಾಜನೂರಿನಿಂದ ಸಸಿಯೊಂದಕ್ಕೆ ₹ 12ರಂತೆ ಖರೀದಿ ಮಾಡಿ, 900 ಕರಿಮೆಣಸಿನ ಸಸಿಗಳನ್ನು ತಮ್ಮ ಅಡಿಕೆ ತೋಟದಲ್ಲಿ ನಾಟಿ ಮಾಡಿದ್ದರು. ಆಗಸ್ಟ್‌ನಿಂದ ಸೆಪ್ಟೆಂಬರ್‌ ತಿಂಗಳಲ್ಲಿ ನಾಟಿ ಮಾಡುವುದು ಸೂಕ್ತ ಸಮಯ. ನಾಟಿ ಮಾಡಿದ ವರ್ಷ ಅಧಿಕ ಮಳೆಯಿಂದಾಗಿ ಸುಮಾರು 500ಕ್ಕೂ ಹೆಚ್ಚು ಸಸಿಗಳು ಸತ್ತು ಹೋದವು. ತೋಟದಲ್ಲಿ 200 ಬಳ್ಳಿಗಳು
ಉಳಿದಿವೆ.

ಮೊದಲನೇ ವರ್ಷ ಯಾವುದೇ ಬೆಳೆ ಬರುವುದಿಲ್ಲ. ಎರಡನೇ ವರ್ಷದಲ್ಲಿ ಗಿಡ ಒಂದಕ್ಕೆ ಕಾಲು ಕೆ.ಜಿ.ಯಷ್ಟು ಇಳುವರಿ ಬಂದಿತು. ಮೂರನೇ ವರ್ಷದಿಂದ ಪ್ರತಿ ಗಿಡದಲ್ಲಿ ಒಂದು ಕೆ.ಜಿ.ಯಷ್ಟು ಇಳುವರಿ ಹೆಚ್ಚುತ್ತಿದೆ. ಐದನೇ ವರ್ಷದಲ್ಲಿ 200 ಬಳ್ಳಿಗಳಿಂದ 8 ಕ್ವಿಂಟಲ್‌ಗಳಷ್ಟು ಬೆಳೆ ಬಂದಿದೆ. ಈಗ ಬಳ್ಳಿಯಲ್ಲಿ ಕಳೆದ ಸಾಲಿಗಿಂತ ಉತ್ತಮವಾಗಿ ಗೊನೆಗಳು ಬಿಟ್ಟಿದ್ದು, ಕನಿಷ್ಠವೆಂದರೂ 10 ಕ್ವಿಂಟಲ್‌ ಬರುವ ನಿರೀಕ್ಷೆ ಇದೆ.

ಬೆಳೆಯುವುದು ಹೇಗೆ: ‘ಕರಿಮೆಣಸು ಬಳ್ಳಿಗಳಿಗೆ ಅಡಿಕೆ ಮರಕ್ಕೆ ಬಿಡುವಷ್ಟು ನೀರನ್ನು ಹಾಯಿಸಿದರೆ ಸಾಕು. ಹೆಚ್ಚು ನೀರು ನಿಂತರೆ ಗಿಡಗಳು ಕೊಳೆತು ಹೋಗುತ್ತವೆ. ವರ್ಷದಲ್ಲಿ ಎರಡು ಬಾರಿ ಕೊಟ್ಟಿಗೆ ಗೊಬ್ಬರವನ್ನು ಗಿಡವೊಂದಕ್ಕೆ ಎರಡು ಬುಟ್ಟಿಗಳಷ್ಟು ಹಾಕುತ್ತಿರುವೆ. ಶೂನ್ಯ ಬೇಸಾಯ ಪದ್ಧತಿಯನ್ನು ಅನುಸರಿಸಿದರೆ ಬಳ್ಳಿಗಳು ಸಮೃದ್ಧವಾಗಿ ಬೆಳೆಯಲು ಅನುಕೂಲವಾಗುತ್ತದೆ. ಕಳೆ ಬೆಳೆದಿದೆ ಎಂದು ಕಳೆ ನಾಶಕ ಔಷಧವನ್ನು ಸಿಂಪರಣೆ ಮಾಡಬಾರದು, ಇದರಿಂದ ಬಳ್ಳಿಗಳಿಗೆ ಹಾನಿಯಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

ಸೊರಗು ರೋಗ: ‘ಬಳ್ಳಿಗಳಿಗೆ ಸೊರಗು ರೋಗ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಅಂದರೆ, ಗುಣಿ ಮಾಡುವಾಗ ಬೇರುಗಳು ಹರಿಯದಂತೆ ಗುಣಿ ಮಾಡಿಸಬೇಕು. ಇಲ್ಲದಿದ್ದರೆ ಶಿಲೀಂಧ್ರ ಹರಡಿ ಇಡೀ ಬಳ್ಳಿ ಹಾಳಾಗುತ್ತವೆ. ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಜೆಡ್‌ ಆಕಾರದಲ್ಲಿ ಸಸಿಗಳನ್ನು ನಾಟಿ ಮಾಡುವುದರಿಂದ ಬಳ್ಳಿಗೆ ಗಾಳಿ, ಬೆಳಕು ಸಾಕಷ್ಟು ಸಿಗುತ್ತದೆ. ಸೊರಗು ರೋಗಕ್ಕೆ ಔಷಧ ಸಿಂಪರಣೆ ಮಾಡಬಹುದು. ಆದರೆ, ನಾನು ಇದುವರೆಗೂ ಯಾವುದೇ ಔಷಧ ಸಿಂಪರಣೆ ಮಾಡಿಲ್ಲ. ಗೊಬ್ಬರವನ್ನು ಹಾಕುವ ಮೊದಲು ಕೊಟ್ಟಿಗೆ ಗೊಬ್ಬರಕ್ಕೆ ಗಿಡವೊಂದಕ್ಕೆ 100 ಗ್ರಾಂನಷ್ಟು ಎಂದು ಅಂದಾಜು ಮಾಡಿ, ಟೈಕೊಡರ್ಮಾ ಮಿಶ್ರಣ ಮಾಡಿ, 10 ದಿನಗಳ ಕಾಲ ಗೊಬ್ಬರವನ್ನು ತಾಡಪಾಲುಗಳಿಂದ ಮುಚ್ಚಿಡುವೆ. ನಂತರ, ಅದನ್ನು ಗಿಡಗಳಿಗೆ ಹಾಕಿಸುತ್ತಿದ್ದೇನೆ. ಕೊಟ್ಟಿಗೆ ಗೊಬ್ಬರದ ಜೊತೆ ಬೇವಿನ ಹಿಂಡಿ, ರಂಜಕ, ಝಿಂಕ್‌, ಪೊಟ್ಯಾಷ್‌ಗಳನ್ನೂ ಸಹ ನೀಡಬಹುದು’ ಎನ್ನುವುದು ಅವರ ಅನುಭವದ ಮಾತು.

ವರ್ಷದ ಆರಂಭದಿಂದ ಕೊಯ್ಲಿನವರೆಗೆ ಗಿಡವೊಂದಕ್ಕೆ ₹ 100 ಖರ್ಚಾಗಿದೆ. ಹಣ್ಣಿಗೆ ಬಂದ ಕರಿಮೆಣಸನ್ನು ಜನವರಿ ತಿಂಗಳಿಂದ ಮಾರ್ಚ್‌ ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ಕೊಯ್ಲು ಮಾಡಿದ್ದಾರೆ. ಸಾಗರದ ಖರೀದಿದಾರರು ಇಲ್ಲಿಗೆ ಬಂದು ತೂಕ ಮಾಡಿಕೊಂಡು ನಗದು ಹಣವನ್ನು ನೀಡಿ ಖರೀದಿಸುತ್ತಿದ್ದಾರೆ. ಈ ವರ್ಷ ಕ್ವಿಂಟಲ್‌ಗೆ ₹ 40,000 ರಂತೆ ಮಾರಾಟ ಮಾಡಿದ್ದಾರೆ. ಆರಂಭದಲ್ಲಿ ಕೊಯ್ಲು ಮಾಡಿದ ಮೆಣಸನ್ನು ಕೈಯಿಂದಲೇ ಬಿಡಿಸುತ್ತಿದ್ದರು. ಈಗ ಹೆಚ್ಚು ಇಳುವರಿ ಬರುತ್ತಿರುವುದರಿಂದ ಕಾಳನ್ನು ಬಿಡಿಸಲು ₹ 30,000 ಕೊಟ್ಟು ಯಂತ್ರವೊಂದನ್ನು ಸಹ ಖರೀದಿ ಮಾಡಿದ್ದಾರೆ.

ಕರಿಮೆಣಸು ಕೃಷಿ ಹೆಚ್ಚಳ

ಅಡಿಕೆ ಮರಗಳಿಗೆ ಬಳ್ಳಿ ಹಬ್ಬುವುದರಿಂದ ಅಡಿಕೆ ಇಳುವರಿ ಕಡಿಮೆ ಆಗುವುದಿಲ್ಲ. ಅರ್ಧ ಕೆ.ಜಿ.ಯಷ್ಟು ಕಡಿಮೆ ಆದರೂ, ಬಳ್ಳಿಯಲ್ಲಿ 4 ಕೆ.ಜಿ. ಮೆಣಸು ಬಂದರೆ ಲಾಭ ಪಡೆಯಬಹುದು ಎಂದು ಭೋಜರಾಜ ವಿವರಿಸಿದರು.

ಹೊಳಲ್ಕೆರೆಯಲ್ಲಿರುವ ತೋಟಗಾರಿಕಾ ಇಲಾಖೆಯಲ್ಲಿ ಯಾವುದೇ ನೆರವು ಸಿಗುತ್ತಿಲ್ಲ. ಗೊಬ್ಬರವಾಗಲಿ, ಔಷಧವನ್ನಾಗಲಿ ಕೇಳಿದರೆ, ನಮ್ಮಲ್ಲಿ ಸ್ಟಾಕ್‌ ಇಲ್ಲ ಎಂದು ಹೇಳಿ ಕಳುಹಿಸುತ್ತಾರೆ. ಆದ್ದರಿಂದ, ದೂರದ ಚನ್ನಗಿರಿಯ ತೋಟಗಾರಿಕಾ ಇಲಾಖೆಗೆ ಹೋಗಿ ತರುವ ಸ್ಥಿತಿ ಇದೆ. ಇಲಾಖೆಯ ಅಧಿಕಾರಿಗಳು ರೈತರಿಗೆ ಬೇಕಾಗುವ ಔಷಧ ಹಾಗೂ ಗೊಬ್ಬರವನ್ನು ಸರಬರಾಜು ಮಾಡಿದರೆ ಅನುಕೂಲ ಆಗುತ್ತದೆ ಎನ್ನುತ್ತಾರೆ ಕರಿಮೆಣಸು ಬೆಳೆಗಾರರು.

ಬಿ. ದುರ್ಗ ಒಂದರಲ್ಲೇ ಕೆ.ಎಸ್‌. ಬಸವರಾಜ್‌, ಬಿ.ಕೆ.ಸಿ. ಹರೀಶ್‌, ಬಿ.ಎಸ್‌. ರವಿಕುಮಾರ್‌, ಕೆ.ಎಸ್‌. ಗಿರೀಶ್‌, ಸಿ. ಮಹೇಂದ್ರಪ್ಪ ಮೊದಲಾದವರು ಹಲವು ವರ್ಷಗಳಿಂದ ಕರಿಮೆಣಸಿನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವರ್ಷ ಸುಮಾರು ಏಳೆಂಟು ರೈತರು ಹೊಸದಾಗಿ ಕರಿಮೆಣಸಿನ ಸಸಿಗಳನ್ನು ನಾಟಿ ಮಾಡಲು ಸಿದ್ಧತೆ ನಡೆಸಿದ್ದಾರೆ.

(ಮಾಹಿತಿಗೆ 9008554847 ಸಂಪರ್ಕಿಸಬಹುದು.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT