ಬುಧವಾರ, ಆಗಸ್ಟ್ 17, 2022
30 °C
ಅರ್ಜಿ ಸಲ್ಲಿಸಿದ ಬೀದಿ ಬದಿ ವ್ಯಾಪಾರಿಗಳು 3,490 * ಸಾಲ ಪಡೆದವರು 352

ಕೊಂಚ ವೇಗ ಪಡೆದ ‘ಪಿಎಂ ಸ್ವನಿಧಿ’

ಕೆ.ಎಸ್.ಪ್ರಣವಕುಮಾರ್ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೇಂದ್ರ ಸರ್ಕಾರ ಆತ್ಮನಿರ್ಭರ ಯೋಜನೆಯಡಿ ‘ಪಿಎಂ ಸ್ವನಿಧಿ’ ಯೋಜನೆ ಜಾರಿಗೊಳಿಸಿ ಆರು ತಿಂಗಳಾಗಿವೆ. ನವೆಂಬರ್ ಎರಡನೇ ವಾರದ ವೇಳೆಗೆ ಜಿಲ್ಲೆಯ 30 ಫಲಾನುಭವಿಗಳು ಮಾತ್ರ ಇದರ ಲಾಭ ಪಡೆದಿದ್ದರು. ಇದರಿಂದಾಗಿ ಮಂದಗತಿಯಲ್ಲೇ ಸಾಗಿದ್ದ ಯೋಜನೆ ತಿಂಗಳಾಂತ್ಯಕ್ಕೆ ಸ್ವಲ್ಪ ವೇಗ ಪಡೆದಿದೆ. 352 ಜನರಿಗೆ ಸಾಲಸೌಲಭ್ಯ ದೊರೆತಿದೆ. 

ಕೋವಿಡ್-19 ವ್ಯಾಪಕವಾಗಿ ಹರಡುವುದನ್ನು ತಡೆಯಲು ಜಾರಿಗೊಳಿಸಿದ ಲಾಕ್‌ಡೌನ್‌ನಿಂದ ಜಿಲ್ಲೆಯ ಸಾವಿರಾರು ಬೀದಿಬದಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನು ಮನಗಂಡ ಸರ್ಕಾರ ಆರ್ಥಿಕವಾಗಿ ಬಂಡವಾಳ ರೂಪದಲ್ಲಿ ವಿಶೇಷ ಕಿರುಸಾಲ ನೀಡಲು ಯೋಜನೆ ಪರಿಚಯಿಸಿತು. ಇದರ ಪ್ರಯೋಜನ ಬಹುತೇಕರಿಗೆ ಲಭಿಸಿಲ್ಲ. ಆದರೆ, ಅರ್ಜಿ ಸಲ್ಲಿಸಿದವರ ನಿರೀಕ್ಷೆ ಕುಂದಿಲ್ಲ.

ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ₹ 10 ಸಾವಿರ ಸಾಲಸೌಲಭ್ಯ ಸಿಗಲಿದೆ. ಇದನ್ನು ಒಂದು ವರ್ಷದ ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕಿದೆ. ಅವಧಿಯೊಳಗೆ ಸಾಲ ಮರುಪಾವತಿಸುವವರಿಗೆ ಶೇ 7ರಷ್ಟು ಸಬ್ಸಿಡಿ ದೊರೆಯಲಿದೆ. ಜತೆಗೆ ಸಾಲದ ಅರ್ಹತೆ ಏರಿಕೆಯಾಗಲಿದೆ. ತ್ರೈಮಾಸಿಕ ಪಾವತಿಗೂ ಅವಕಾಶವಿದೆ. ಡಿಜಿಟಲ್ ವಹಿವಾಟಿನ ಮೇಲೆ ಮಾಸಿಕ ಪ್ರೋತ್ಸಾಹವಾಗಿ ಒಂದಿಷ್ಟು ಕ್ಯಾಶ್‌ಬ್ಯಾಕ್‌ ಸೌಲಭ್ಯ ಕೂಡ ಲಭ್ಯವಿದೆ.

ಜಿಲ್ಲಾ ಕೌಶಲ ಅಭಿವೃದ್ಧಿ ಕೇಂದ್ರ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಯೋಜನೆ ಅನುಷ್ಠಾನವಾಗುತ್ತಿದೆ. ಅಧಿಕಾರಿಗಳು ಜಿಲ್ಲೆಯಲ್ಲಿ 2,797 ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿದ್ದರು. ಜಿಲ್ಲೆಗೆ ಸರ್ಕಾರ ನಿಗದಿಪಡಿಸಿದ್ದ ಗುರಿ 3,328. ಆದರೆ, ಅದನ್ನು ದಾಟಿ ಅರ್ಜಿ ಸಲ್ಲಿಸಿದವರ ಸಂಖ್ಯೆ 3,490 ಆಗಿದೆ. ಗುರಿಗಿಂತಲೂ ಹೆಚ್ಚು ಅರ್ಜಿ ಸಲ್ಲಿಕೆಯಾದರೂ ಸಾಲ ಪಡೆದವರು ಶೇ 10ರಷ್ಟು ಮಾತ್ರ.

ಆನ್‌ಲೈನ್ ಮೂಲಕ ಭರ್ತಿಯಾದ ಅರ್ಜಿ ಬ್ಯಾಂಕ್‌ಗಳಿಗೆ ಸಲ್ಲಿಕೆಯಾಗಿವೆ. ಇದರಲ್ಲಿ 921 ಜನರಿಗೆ ಸಾಲ ಮಂಜೂರಾತಿ ಆಗಿದ್ದರೂ ವಿತರಣೆ ಆಗಿರುವುದು 352 ಜನರಿಗೆ ಮಾತ್ರ. ಉಳಿದ ಅರ್ಜಿಗಳು ವಿವಿಧ ಹಂತದ ಪ್ರಗತಿಯಲ್ಲಿದೆ.

ಜಿಲ್ಲಾ ಕೇಂದ್ರ ಚಿತ್ರದುರ್ಗದಲ್ಲಿ ಅತಿ ಹೆಚ್ಚು 1,459 ಮಂದಿ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಚಳ್ಳಕೆರೆ 552, ಹಿರಿಯೂರು 564, ಹೊಳಲ್ಕೆರೆ 158, ಹೊಸದುರ್ಗ 284, ಮೊಳಕಾಲ್ಮೂರು 156, ನಾಯಕನಹಟ್ಟಿ ಪಟ್ಟಣದಲ್ಲಿ 155 ಸೇರಿ ವಿವಿಧ ರೀತಿಯ ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಲಾಗಿದೆ.

***

ಯೋಜನೆಯಡಿ ಫಲಾನುಭವಿಗಳಿಗೆ ತ್ವರಿತವಾಗಿ ಸಾಲ ಸೌಲಭ್ಯ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರ ಗಮನಕ್ಕೂ ತಂದಿದ್ದೇನೆ. ಮುಂದಿನ ವಾರ ಸಾಲ ದೊರೆಯಲಿದೆ.

- ಬಿ.ಸುರೇಶ್, ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ, ಚಿತ್ರದುರ್ಗ

***

ಪತ್ರಿಕೆಯನ್ನು ಬೀದಿ ಬದಿಯಲ್ಲಿ ಮಾರಾಟ ಮಾಡುವವರೂ ಯೋಜನೆಗೆ ಸೇರಲಿದ್ದಾರೆ. ಎಲ್ಲ ಬೀದಿ ಬದಿ ವ್ಯಾಪಾರಿಗಳು ಇದರ ಪ್ರಯೋಜನ ಪಡೆಯಬಹುದು. ಜಿಲ್ಲೆಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

- ಎಸ್.ಸೌಮ್ಯಾ, ಅಭಿಯಾನ ವ್ಯವಸ್ಥಾಪಕಿ, ಕೌಶಲ ಅಭಿವೃದ್ಧಿ ಕೇಂದ್ರ

***

ಚಿತ್ರದುರ್ಗ ನಗರದಲ್ಲೇ ಹೆಚ್ಚು ಬೀದಿಬದಿ ವ್ಯಾಪಾರಿಗಳಿದ್ದಾರೆ. 1,500 ಜನ ಅರ್ಜಿ ಸಲ್ಲಿಸಿದ್ದು, 300 ಮಂದಿಗೆ ಮಂಜೂರಾತಿ ಪತ್ರ ಸಿಕ್ಕಿದೆ. ಇನ್ನಷ್ಟು ವ್ಯಾಪಾರಿಗಳು ಅರ್ಜಿ ಸಲ್ಲಿಸುವ ವಿಶ್ವಾಸವಿದೆ.

ಜೆ.ಟಿ.ಹನುಮಂತರಾಜು, ನಗರಸಭೆ ಪೌರಾಯುಕ್ತ, ಚಿತ್ರದುರ್ಗ

***

ಪತ್ರಿಕಾ ವೆಂಡರ್‌ಗಳಿಗೂ ಅವಕಾಶ

‘ಸಾಮಾನ್ಯವಾಗಿ ಹೂವು, ಹಣ್ಣು, ತರಕಾರಿ, ಬುಟ್ಟಿ, ಹಗ್ಗ, ಚಾಪೆ, ಬಟ್ಟೆ, ಅಲಂಕಾರಿಕ ಸಾಮಗ್ರಿ ಸೇರಿ ದಿನನಿತ್ಯ ಅಗತ್ಯ ವಸ್ತುಗಳನ್ನು ಬೀದಿ ಬದಿ ಮಾರುವ ಮಾರಾಟಗಾರರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ’ ಎಂದು ಕೌಶಲ ಮತ್ತು ಜೀವನೋಪಾಯ ಅಭಿಯಾನ ವ್ಯವಸ್ಥಾಪಕ ಆತಿಕ್ ರಹಮಾನ್ ತಿಳಿಸಿದ್ದಾರೆ. 

‘ತಳ್ಳುವ ಗಾಡಿಗಳಲ್ಲಿ ಪಾನಿಪೂರಿ, ಎಗ್‌ರೈಸ್, ಬಿರಿಯಾನಿ, ಕಬಾಬ್, ಮೀನ್ ಫ್ರೈ ಸೇರಿ ತರಹೇವಾರಿ ತಿನಿಸುಗಳ ಮಾರಾಟಗಾರರು ಹೀಗೆ ಬೀದಿಗಳಲ್ಲಿ ವಿಭಿನ್ನ ವ್ಯಾಪಾರ ಕೈಗೊಳ್ಳುವವರು ಈ ಯೋಜನೆ ವ್ಯಾಪ್ತಿಗೆ ಒಳಪಡುತ್ತಾರೆ. ಚಳಿ, ಗಾಳಿ, ಮಳೆ ಲೆಕ್ಕಿಸದೆ ನಿತ್ಯ ನಸುಕಿನಲ್ಲಿ ಪತ್ರಿಕೆ ವಿತರಿಸುವ ವೆಂಡರ್‌ಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು