ಬುಧವಾರ, ನವೆಂಬರ್ 13, 2019
22 °C

ಮಠಾಧೀಶರೊಂದಿಗೆ ಸಚಿವರ ನಿಯೋಗದ ಸಭೆ

Published:
Updated:

ಚಿತ್ರದುರ್ಗ: ದಲಿತ ಮತ್ತು ಹಿಂದುಳಿದ ವರ್ಗಗಳ ಮಠಾಧೀಶರೊಂದಿಗೆ ಉಪ ಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ನೇತೃತ್ವದ ಐವರು ಸಚಿವರ ನಿಯೋಗದ ಸಭೆ ಇಲ್ಲಿನ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಬುಧವಾರ ನಡೆಯಲಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್ಯ ಸಚಿವ ಕೆ.ಎಸ್‌.ಈಶ್ವರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ನಿಯೋಗದಲ್ಲಿ ಇರಲಿದ್ದಾರೆ. ಮಧ್ಯಾಹ್ನ 12ರಿಂದ 2 ಗಂಟೆಯವರೆಗೆ ಸಭೆ ನಿಗದಿಯಾಗಿದ್ದು, ರಾಜ್ಯದ ವಿವಿಧೆಡೆಯ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ.

‘ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮಠಾಧೀಶರ ನಿಯೋಗ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿತ್ತು. ಅವರ ಸೂಚನೆಯ ಮೇರೆಗೆ ಸಚಿವರ ನಿಯೋಗವೇ ಮಠಾಧೀಶರ ಭೇಟಿಗೆ ಚಿತ್ರದುರ್ಗಕ್ಕೆ ಬರುತ್ತಿದೆ. ಮಠಗಳ ಅಭಿವೃದ್ಧಿ, ದಲಿತ ಮತ್ತು ಹಿಂದುಳಿದ ಸಮುದಾಯಗಳ ಕಾಳಜಿಯ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ನವೀನ್‌ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘2009ರಲ್ಲಿ ಬಿಜೆಪಿ ಸರ್ಕಾರ ಹಿಂದುಳಿದ ಮತ್ತು ದಲಿತ ಸಮುದಾಯದ ಮಠಗಳನ್ನು ಗುರುತಿಸಿತ್ತು. ಮಠಗಳ ಏಳಿಗೆಗೆ ಅಪಾರ ಅನುದಾನವನ್ನೂ ನೀಡಿತ್ತು. ಮಠಾಧೀಶರ ಅಹವಾಲುಗಳನ್ನು ಸಚಿವರು ಆಲಿಸಲಿದ್ದಾರೆ. ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ವಿವರಿಸಿದರು.

ಪ್ರತಿಕ್ರಿಯಿಸಿ (+)