ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಜೋಳ ವಿರುದ್ಧ ಪ್ರತಿಭಟನೆ, ಎಂ.ಚಂದ್ರಪ್ಪ ವಿರುದ್ಧವೂ ಆಕ್ರೋಶ

Published 29 ಮಾರ್ಚ್ 2024, 16:26 IST
Last Updated 29 ಮಾರ್ಚ್ 2024, 16:26 IST
ಅಕ್ಷರ ಗಾತ್ರ

ಚಿತ್ರದುರ್ಗ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ವಿರುದ್ಧ ಎಂ.ಸಿ.ರಘುಚಂದನ್‌ ಬೆಂಬಲಿಗರು ಶುಕ್ರವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದು ಪರಿಸ್ಥಿತಿ ತಿಳಿಗೊಳಿಸಿದರು.

ಬಿಜೆ‍ಪಿ ಟಿಕೆಟ್‌ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಕ್ಷೇತ್ರ ಪ್ರವೇಶಿಸಿದ ಗೋವಿಂದ ಕಾರಜೋಳ ಅವರಿಗೆ ‘ಗೋ ಬ್ಯಾಕ್‌’ ನಾಮಫಲಕ ಪ್ರದರ್ಶಿಸಲಾಯಿತು. ಇದಕ್ಕೆ ಪ್ರತಿಯಾಗಿ ಕಾರಜೋಳ ಬೆಂಬಲಿಗರು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಪಟ್ಟು ಹಿಡಿದರು.

ನಗರದ ಬಿಜೆಪಿ ಲೋಕಸಭಾ ಚುನಾವಣಾ ಕಾರ್ಯಾಲಯದಲ್ಲಿ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿತ್ತು. ಹಿರಿಯೂರು ಮಾರ್ಗವಾಗಿ ನಗರಕ್ಕೆ ಆಗಮಿಸುತ್ತಿದ್ದ ಕಾರಜೋಳ ಅವರನ್ನು ರಘುಚಂದನ್‌ ಬೆಂಬಲಿಗರು ಹೆದ್ದಾರಿಯಲ್ಲಿ ತಡೆಯಲು ಪ್ರಯತ್ನಿಸಿದರು. ಮಾರ್ಗ ಬದಲಿಸಿ ಕಚೇರಿಗೆ ಆಗಮಿಸಿದ ಬಿಜೆಪಿ ಮುಖಂಡರು ಸಭೆ ಆರಂಭಿಸಿದರು.

ಕಚೇರಿ ಬಳಿಗೆ ಧಾವಿಸಿದ ಪ್ರತಿಭಟನಕಾರರು ಕಾರಜೋಳ ವಿರುದ್ಧ ಘೋಷಣೆ ಕೂಗಿದರು. ಸ್ಥಳೀಯರಿಗೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದರು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದರು.

ಎಂ.ಚಂದ್ರಪ್ಪ ಉಚ್ಛಾಟನೆಗೆ ಪಟ್ಟು

ಬಿಜೆಪಿ ಅಧಿಕೃತ ಅಭ್ಯರ್ಥಿ ವಿರುದ್ಧ ಕೆಲಸ ಮಾಡುತ್ತಿರುವ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಕಾರ್ಯಕರ್ತರು ಪಟ್ಟುಹಿಡಿದರು.

ರಘುಚಂದನ್‌ ಬೆಂಬಲಿಗರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಕಾರಜೋಳ ಬೆಂಬಲಿಗರು ಶಾಸಕ ಎಂ.ಚಂದ್ರಪ್ಪ ವಿರುದ್ಧ ಘೋಷಣೆ ಕೂಗತೊಡಗಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಮುಖಂಡರ ಮನವೊಲಿಕೆಯ ಪ್ರಯತ್ನದ ನಡುವೆಯೇ ವೇದಿಕೆ ಏರಿದ ವ್ಯಕ್ತಿಯೊಬ್ಬ, ‘ಕಾರಜೋಳ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಮಾದಿಗ ಸಮುದಾಯಕ್ಕೆ ಅವಕಾಶವೊಂದು ಸಿಕ್ಕಿದೆ. ಪಕ್ಷದ ಅಭ್ಯರ್ಥಿ ವಿರುದ್ಧ ಕೆಲಸ ಮಾಡುತ್ತಿರುವ ಚಂದ್ರಪ್ಪ ಅವರನ್ನು ಕೂಡಲೇ ಉಚ್ಛಾಟಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT