ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯಾನಂತರ ದುರ್ಬಲರ ತುಳಿತ: ಪುರುಷೋತ್ತಮಾನಂದಪುರಿ ಸ್ವಾಮೀಜಿ

ಪ್ರವರ್ಗ–1 ಒಕ್ಕೂಟದ ರಾಜ್ಯಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಪುರುಷೋತ್ತಮಾನಂದಪುರಿ ಸ್ವಾಮೀಜಿ
Last Updated 11 ಜುಲೈ 2022, 2:05 IST
ಅಕ್ಷರ ಗಾತ್ರ

ಹಿರಿಯೂರು: ‘ಸ್ವಾತಂತ್ರ್ಯಾನಂತರದಲ್ಲಿ ಬಲಾಢ್ಯರು ಬೆಳೆದಿದ್ದಾರೆ. ದುರ್ಬಲರು ತುಳಿತಕ್ಕೆ ಒಳಗಾಗಿದ್ದಾರೆ’ ಎಂದು ಹೊಸದುರ್ಗದ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಆರೋಪಿಸಿದರು.

ತಾಲ್ಲೂಕಿನ ವಾಣಿವಿಲಾಸ ಅಣೆಕಟ್ಟೆ ಮೇಲ್ಭಾಗದ ಪ್ರವಾಸಿ ಮಂದಿರದ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರವರ್ಗ–1ರ ಒಕ್ಕೂಟದ ರಾಜ್ಯ ಮತ್ತು ಜಿಲ್ಲಾಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

‘ನ್ಯಾಯಯುತ ಹಕ್ಕುಗಳಿಂದ ಹಿಂದುಳಿದವರು ವಂಚಿತರಾಗುತ್ತಿದ್ದಾರೆ. ಸಂವಿಧಾನದಲ್ಲಿ ಹೇಳಿರುವಂತೆ ಎಲ್ಲರಿಗೂ ಸಮಬಾಳು, ಸಮಪಾಲು ಸಿಗುತ್ತಿಲ್ಲ. ದುರ್ಬಲ ವರ್ಗಗಳ ಮೇಲಿನ ಶೋಷಣೆ ಇನ್ನೂ ನಿಂತಿಲ್ಲ. ರಾಜಕೀಯ ಶಕ್ತಿ ಬಳಸಿಕೊಂಡು ನ್ಯಾಯಯುತ ಹಕ್ಕು ಪಡೆಯಬೇಕು’ ಎಂದು ಕರೆ ನೀಡಿದರು.

‘ಒಕ್ಕೂಟವು ಅಲೆಮಾರಿ, ಅರೆ ಅಲೆಮಾರಿ ಜಾತಿಗಳನ್ನು ಒಳಗೊಂಡಂತೆ 95 ಜಾತಿ ಮತ್ತು 376 ಉಪಜಾತಿಗಳ ಸಂಘಟನೆಯಾಗಿದೆ. ಈ ವರ್ಗಕ್ಕೆ ಪ್ರಸ್ತುತ ಇರುವ ಮೀಸಲಾತಿಯನ್ನು ಶೇ 4ರಿಂದ 8ಕ್ಕೆ ಏರಿಸಬೇಕು ಎಂಬುದು ಮುಖ್ಯ ಬೇಡಿಕೆಯಾಗಿದೆ. ಕಳೆದುಕೊಂಡಿರುವುದನ್ನು ಮರಳಿ ಪಡೆಯಲು ಪಕ್ಷಾತೀತವಾಗಿ ಹೋರಾಟ ನಡೆಸುವ ಅಗತ್ಯವಿದೆ’ ಎಂದು ಒಕ್ಕೂಟದ ರಾಜ್ಯ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್ ಹೇಳಿದರು.

‘ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಸಿಗುತ್ತಿರುವ ಎಲ್ಲಾ ಸೌಲಭ್ಯಗಳು ಪ್ರವರ್ಗ–1ಕ್ಕೆ ಸಿಗಬೇಕು. ವಿಧಾನಸಭೆ ಮತ್ತು ಸಂಸತ್ತಿನಲ್ಲಿ ರಾಜಕೀಯ ಮೀಸಲಾತಿ ನೀಡಬೇಕು. ನಿಗಮ, ಮಂಡಳಿಗಳಿಗೆ ಬಿಡುಗಡೆಯಾಗುವ ಅನುದಾನ, ಆ ಜನಾಂಗದ ಅಭಿವೃದ್ಧಿಗೆ ವಿನಿಯೋಗವಾಗಬೇಕು’ ಎಂದು ವಿಧಾನಪರಿಷತ್ ಸದಸ್ಯ ನಾಗರಾಜ ಯಾದವ್ ಒತ್ತಾಯಿಸಿದರು.

ಶಾಸಕ ಲಾಲಾಜಿ ಮೆಂಡನ್, ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿದರು. ಚಿತ್ರದುರ್ಗದ ಕೃಷ್ಣ ಯಾದವಾನಂದ ಸ್ವಾಮೀಜಿ, ಕರುಣಾಕರ ಸ್ವಾಮೀಜಿ ಸಮಾರಂಭದ ನೇತೃತ್ವ ವಹಿಸಿದ್ದರು. ಕೆ.ಎನ್. ಲಿಂಗಪ್ಪ ಹಿಂದುಳಿದವರಿಗೆ ಮೀಸಲಾತಿಯಲ್ಲಿ ಆಗಿರುವ ಅನ್ಯಾಯದ ಕುರಿತು ಉಪನ್ಯಾಸ ನೀಡಿದರು. ವಿಧಾನಪರಿಷತ್ ಸದಸ್ಯ ಡಾ.ಸಾಬಣ್ಣ ತಳವಾರ್, ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಗಿರೀಶ್ ಉಪ್ಪಾರ್ ಮಾತನಾಡಿದರು. ಡಾ.ಹೊನ್ನಪ್ಪ ಬಂಡಿ, ಡಾ.ಪೂರ್ಣಿಮಾ ಜೋಗಿ, ಲೋಕೇಶಪ್ಪ, ಯಾದವ ಸಂಘದ ಹಿರಿಯ ಉಪಾಧ್ಯಕ್ಷ ಸಿದ್ದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT