ಗುರುವಾರ , ಡಿಸೆಂಬರ್ 2, 2021
19 °C
ನೀರಿನಲ್ಲಿ ಸಿಲುಕುವ ವಾಹನಗಳು; ಸಂಚಾರ ಸಂಕಟ, ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

ಚಿಕ್ಕಜಾಜೂರು: ರೈಲ್ವೆ ಕೆಳ ಸೇತುವೆ; ಇಲ್ಲಿ ಎಲ್ಲವೂ ಅವೈಜ್ಞಾನಿಕ

ಜೆ. ತಿಮ್ಮಪ್ಪ ಚಿಕ್ಕಜಾಜೂರು Updated:

ಅಕ್ಷರ ಗಾತ್ರ : | |

Prajavani

ಚಿಕ್ಕಜಾಜೂರು: ಚಿಕ್ಕಜಾಜೂರಿನಿಂದ ಎಲ್ಲಾ ಕಡೆಗೆ ಹೋಗುವ ರೈಲ್ವೆ ಮಾರ್ಗದಲ್ಲಿ ಬರುವ ಕೆಳ ಸೇತುವೆಗಳು ಅವೈಜ್ಞಾನಿಕವಾಗಿವೆ. ಇದರಿಂದ ಸಾರ್ವಜನಿಕರು ತೊಂದರೆ ಎದುರಿಸುವಂತಾಗಿದೆ.

ಚಿಕ್ಕಜಾಜೂರು ಚಿತ್ರದುರ್ಗ ಜಿಲ್ಲೆಯ ಏಕೈಕ ರೈಲ್ವೆ ಜಂಕ್ಷನ್‌. ಇಲ್ಲಿಂದ ದಾವಣಗೆರೆ, ಬೆಂಗಳೂರು, ಚಿತ್ರದುರ್ಗ ರೈಲು ಮಾರ್ಗಗಳಲ್ಲಿ ಬರುವ ಚಿಕ್ಕಜಾಜೂರು, ಕಾವಲುಹಟ್ಟಿ, ಚಿಕ್ಕಂದವಾಡಿ, ಹನುಮನಕಟ್ಟೆ, ಅಮೃತಾಪುರ ಕೋಟೆಹಾಳ್‌ ಗೇಟ್‌, ಹೊನ್ನಕಾಲುವೆ ಗ್ರಾಮಗಳ ಬಳಿ ನಿರ್ಮಿಸಿರುವ ಎಲ್ಲಾ ಕೆಳ ಸೇತುವೆಗಳು ಅವೈಜ್ಞಾನಿಕವಾಗಿವೆ. ಸಾರ್ವಜನಿಕರು ಸುಗಮವಾಗಿ ಸಂಚರಿಸದಷ್ಟು ಕೆಟ್ಟ ರೀತಿಯಲ್ಲಿ ಕೆಳಹಂತದಲ್ಲೇ ಸೇತುವೆ ನಿರ್ಮಾಣ ಮಾಡಲಾಗಿದೆ. ಇದರಿಂದ ಮಳೆ ನೀರು ನಿಲ್ಲುತ್ತಿದ್ದು, ಈ ಭಾಗದ ಜನರ ಆಕ್ರೋಶಕ್ಕೆ ಗುರಿಯಾಗಿದೆ.

ಇಲ್ಲಿನ ಹೊಸನಗರ ಬಡಾವಣೆಗೆ ಹೋಗುವ ಮಾರ್ಗದಲ್ಲಿ ನಿರ್ಮಿಸಿರುವ ಕೆಳ ಸೇತುವೆಯಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುತ್ತದೆ. ನೀರು ಹರಿಯಲು ಕೊಳವೆಗಳನ್ನು ಜೋಡಿಸಲಾಗಿದ್ದರೂ, ನೀರು ಹಳ್ಳವನ್ನು ಸೇರದೆ, ಕೆಳ ಸೇತುವೆಯಲ್ಲಿ ನಿಲ್ಲುತ್ತದೆ. ಇದರಿಂದಾಗಿ ಹೊಸನಗರ ಬಡಾವಣೆಗೆ ಹೋಗುವ ಸಾರ್ವಜನಿಕರಿಗೆ ಹಾಗೂ ತೋಟ, ಜಮೀನುಗಳಿಗೆ ಹೋಗುವ ರೈತರು, ಜಾನುವಾರು, ಎತ್ತಿನಗಾಡಿಗಳನ್ನು ಓಡಿಸಲು ಆಗುವುದಿಲ್ಲ. ಕೆಲ ದಿನಗಳವರೆಗೆ ನೀರು ನಿಲ್ಲುವುದರಿಂದ ಜನರು ನಿತ್ಯ ಪರದಾಡುವ ಸ್ಥಿತಿ ಇದೆ.

ಚಿಕ್ಕಜಾಜೂರಿನಿಂದ ಚಿತ್ರದುರ್ಗಕ್ಕೆ ಹೋಗುವ ಮಾರ್ಗದಲ್ಲಿ ಕಾವಲುಹಟ್ಟಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ನಿರ್ಮಿಸಿರುವ ರೈಲ್ವೆ ಕೆಳ ಸೇತುವೆಯಲ್ಲಿ ಜೋರು ಮಳೆ ಬಂದಾಗ ನಾಲ್ಕೈದು ಅಡಿಗಳಷ್ಟು ನೀರು ನಿಲ್ಲುತ್ತದೆ. ಇದರಿಂದಾಗಿ, ಕಾವಲುಹಟ್ಟಿ ಗ್ರಾಮಕ್ಕೂ ಚಿಕ್ಕಜಾಜೂರಿಗೂ ಸಂಪರ್ಕ ಕಡಿತಗೊಳ್ಳುತ್ತದೆ.

‘ಕಳೆದ ವರ್ಷ ಭಾರಿ ಮಳೆಯಿಂದಾಗಿ ಕೆಳ ಸೇತುವೆಯಲ್ಲಿ ಸುಮಾರು 5 ಅಡಿಯಷ್ಟು ನೀರು ನಿಂತಾಗ, ರೈಲ್ವೆ ಇಲಾಖೆಯವರು ಟ್ರ್ಯಾಕ್ಟರ್ ಎಂಜಿನ್‌ ಮೂಲಕ ನೀರನ್ನು ಹೊರ ಹಾಕುವ ಪ್ರಯತ್ನ ನಡೆಸಿದರು. ಪ್ರತಿ ಸಾರಿ ಮಳೆ ಬಂದಾಗ ಇದೇ ರೀತಿ ನೀರು ನಿಂತರೆ, ಮಕ್ಕಳು ಶಾಲಾ ಕಾಲೇಜುಗಳಿಗೆ ಹೋಗುವುದಾದರೂ ಹೇಗೆ? ಅಲ್ಲದೆ, ಗ್ರಾಮಸ್ಥರು 5–6 ಅಡಿ ಆಳದ ನೀರಿನಲ್ಲಿ ಹೋಗಲು ಆಗುವುದಿಲ್ಲ. ಈ ಸಮಸ್ಯೆ ಯಾರಿಗೆ ಹೇಳಬೇಕು’ ಎಂದು ಕಾವಲುಹಟ್ಟಿ ಗ್ರಾಮಸ್ಥರಾದ ಹೇಮಣ್ಣ, ರಘು, ತಿಮ್ಮಪ್ಪ, ರಾಮಕೃಷ್ಣ, ವೆಂಕಟಪ್ಪ, ಅಣ್ಣಪ್ಪ ಪ್ರಶ್ನಿಸುತ್ತಾರೆ.

‘ಚಿತ್ರದುರ್ಗ ಮಾರ್ಗದಲ್ಲಿನ ಚಿಕ್ಕಂದವಾಡಿ ಗ್ರಾಮದ ಬಳಿ ನಿರ್ಮಿಸಿ
ರುವ ಎರಡು ಕೆಳ ಸೇತುವೆಗಳ ಸ್ಥಿತಿಯೂ ಇದೇ ಆಗಿದೆ. ಮಳೆಗಾಲದಲ್ಲಿ ನೀರು ನಿಲ್ಲುತ್ತದೆ. ರೈಲ್ವೆ ಕೆಳ ಸೇತುವೆಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ನೀರು ನಿಂತು, ಗ್ರಾಮಸ್ಥರು ಓಡಾಡುವುದೇ ದುಸ್ತರವಾಗಿದೆ’ ಎಂದು ವೆಂಕಟೇಶ್, ಪುನೀತ, ಶೇಖರಪ್ಪ ಹೇಳಿದರು.

ಸಮೀಪದ ಹನುಮನಕಟ್ಟೆ ಗ್ರಾಮದ ಬಳಿ ಇರುವ ರೈಲ್ವೆ ಅಂಡರ್‌ ಪಾಸ್‌ ರಸ್ತೆ ಕಳಪೆಯಾಗಿದ್ದು, ರಸ್ತೆಗೆ ಹಾಕಿದ್ದ ಕಾಂಕ್ರೀಟ್‌  ಹಾಳಾಗಿದೆ. ರಾತ್ರಿ ವೇಳೆಯಲ್ಲಿ ದ್ವಿಚಕ್ರ ವಾಹನ ಚಾಲಕರು ರಸ್ತೆಯಲ್ಲಿನ ಗುಂಡಿಗಳು ಕಾಣದೆ ಬಿದ್ದು ಗಾಯಗೊಂಡಿದ್ದಾರೆ. ಸುಗ್ಗಿ ಕಾಲದಲ್ಲಿ ರೈತರು ಜಮೀನುಗಳಿಂದ ಕಣಗಳಿಗೆ ಎತ್ತಿನ ಗಾಡಿಗಳಲ್ಲಿ ಹೊಯ್ಯುವ ಹುಲ್ಲು, ತೆನೆಗಳು ರಸ್ತೆಯ ಗುಂಡಿಗಳಿಂದಾಗಿ ರಸ್ತೆ ಮೇಲೆಲ್ಲಾ ಬಿದ್ದ ನಿದರ್ಶನಗಳಿವೆ ಎಂದು ಹನುಮನಕಟ್ಟೆ, ಕೇಶವಾಪುರ, ಬಸವಾಪುರ, ಅಮೃತಾಪುರ ಗ್ರಾಮಸ್ಥರು ಆರೋಪಿಸಿದ್ದಾರೆ.

ಸಮೀಪದ ಅಮೃತಾಪುರ ರೈಲ್ವೆ ನಿಲ್ದಾಣದ ಸಮೀಪದಲ್ಲಿ ನಿರ್ಮಿಸಿರುವ ಕೆಳ ಸೇತುವೆಯಲ್ಲಿ ಮಳೆ ಬಂದಾಗ ಸುಮಾರು ಎರಡು ಅಡಿಗಳಷ್ಟು ನೀರು ನಿಲ್ಲುತ್ತದೆ. ನೀರಿನಲ್ಲಿ ಸಿಲುಕಿಕೊಂಡ ಕಾರುಗಳನ್ನು ಟ್ರ್ಯಾಕ್ಟರ್‌ಗೆ ಹಗ್ಗ ಕಟ್ಟಿ ಹಿಮ್ಮುಖವಾಗಿ ಎಳೆಯುತ್ತಿದ್ದ ದೃಶ್ಯಗಳನ್ನು ಗ್ರಾಮಸ್ಥರು ಈಚೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದರು. ಆದರೂ ಇಲಾಖೆ ಯಾವುದೇ ಕ್ರಮ ಜರುಗಿಸಲಿಲ್ಲ. ಇಲ್ಲಿನ ರೈಲ್ವೆ ಸ್ಟೇಷನ್‌ ಮಾಸ್ಟರ್‌ಗಳಿಗೆ ಸೇತುವೆ ನಿರ್ಮಾಣದ ಬಗ್ಗೆ ದೂರು ಹೇಳಿದರೆ, ‘ನಮಗೂ, ಸೇತುವೆ ಕಾಮಗಾರಿಗೂ ಸಂಬಂಧವಿಲ್ಲ’ ಎನ್ನುತ್ತಾರೆ ಎಂದು ಅಮೃತಾಪುರದ ಗ್ರಾಮ ಪಂಚಾಯಿತಿ ಸದಸ್ಯ ಧನಂಜಯ ಆರೋಪಿಸಿದ್ದಾರೆ.

ಚಿಕ್ಕಜಾಜೂರು ಸಮೀಪದ ಕೋಟೆಹಾಳ್‌ ಗೇಟ್‌ ಬಳಿ ಇರುವ ರೈಲ್ವೆ ಅಂಡರ್‌ ಪಾಸ್‌ನಲ್ಲಿ ಮಳೆ ನೀರು ಸರಾಗವಾಗಿ ಹರಿಯದಂತೆ ಗುತ್ತಿಗೆದಾರರು ನಿರ್ಮಿಸದೆ ಇರುವುದರಿಂದ ಎರಡು ಮೂರು ಅಡಿಗಳಷ್ಟು ಆಳ ನೀರು ನಿಲ್ಲುತ್ತದೆ. ಇದರಿಂದಾಗಿ ಎಮ್ಮಿಗನೂರು, ಕೊಡಗವಳ್ಳಿ, ಕೊಡಗವಳ್ಳಿಹಟ್ಟಿ, ಹೊಸಹಳ್ಳಿ, ಹುಲೇಮಳಲಿ, ಕೋಟೆಹಾಳ್‌ ಮೊದಲಾದ ಗ್ರಾಮಗಳಿಂದ ಚಿಕ್ಕಜಾಜೂರಿಗೆ ನಿತ್ಯ ಬರುವ ಜನರು ಆಟೊ, ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವುದೇ ಅಸಾಧ್ಯವಾಗಿದೆ ಎಂಬುದು ಗ್ರಾಮಸ್ಥರ ದೂರು.

***

ಮಳೆ ಬಂದಾಗ ರೈಲ್ವೆ ಕೆಳಸೇತುವೆಯಲ್ಲಿ ಸಾಕಷ್ಟು ನೀರು ನಿಲ್ಲುತ್ತದೆ. ರಾತ್ರಿ ವೇಳೆಯಲ್ಲಿ ಯಾರಿಗಾದರೂ ಆರೋಗ್ಯದಲ್ಲಿ ಏರುಪೇರು ಆದಲ್ಲಿ ಅವರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲೂ ಆಗುವುದಿಲ್ಲ.

ರವಿಚಂದ್ರ, ಕಾವಲುಹಟ್ಟಿ ಗ್ರಾಮಸ್ಥ

ರೈಲ್ವೆ ಅಂಡರ್‌ ಪಾಸ್‌ ಕಾಮಗಾರಿ ಅವೈಜ್ಞಾನಿಕವಾಗಿದೆ. ಮಳೆ ನೀರು ಹೊರ ಹೋಗಲು ವ್ಯವಸ್ಥೆ ಮಾಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಎಂಜಿನಿಯರ್‌ಗಳು ಇದಕ್ಕೆ ಹೊಣೆ. ಇನ್ನಾದರೂ ಇದನ್ನು ಸರಿಪಡಿಸಬೇಕು.

ಎನ್‌. ಮೂರ್ತಿ, ಚಿಕ್ಕಂದವಾಡಿ ಗ್ರಾಮಸ್ಥ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು