ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗಿಗೆ ಕೆಂಪುಮೂತಿ ಹುಳುಬಾಧೆ: ನಿಯಂತ್ರಣಕ್ಕೆ ಸಲಹೆ

ತೋಟಕ್ಕೆ ಭೇಟಿ ನೀಡಿದ ವಿಜ್ಞಾನಿ ಡಾ. ಎಸ್. ಓಂಕಾರಪ್ಪ
Last Updated 19 ಮೇ 2022, 3:04 IST
ಅಕ್ಷರ ಗಾತ್ರ

ಹಿರಿಯೂರು:‘ತಾಲ್ಲೂಕಿನ ಪಿಟ್ಲಾಲಿ ಒಳಗೊಂಡಂತೆ ಕೆಲವು ಗ್ರಾಮಗಳಲ್ಲಿ ತೆಂಗಿನ ಮರಗಳಲ್ಲಿ ಕೆಂಪುಮೂತಿ ಹುಳುಗಳ ಬಾಧೆ ಹೆಚ್ಚಿದ್ದು, ನಿಯಂತ್ರಣ ಕ್ರಮ ಕೈಗೊಳ್ಳದಿದ್ದರೆ ತೋಟಗಳು ಹಾಳಾಗುವ ಸಾಧ್ಯತೆ ಇದೆ’ ಎಂದು ಬಬ್ಬೂರು ಫಾರಂ ಕೃಷಿ ವಿಜ್ಞಾನ ಕೇಂದ್ರದ ಸಸ್ಯಸಂರಕ್ಷಣೆ ವಿಜ್ಞಾನಿ ಡಾ. ಎಸ್. ಓಂಕಾರಪ್ಪ ಎಚ್ಚರಿಸಿದ್ದಾರೆ.

ಪಿಟ್ಲಾಲಿ ಗ್ರಾಮದ ಪಾಂಡುರಂಗಪ್ಪ ಎಂಬುವವರ ತೆಂಗಿನ ತೋಟದಲ್ಲಿ ಕೆಂಪುಮೂತಿ ಹುಳುಗಳ ಬಾಧೆ ಕಂಡುಬಂದ ಕಾರಣ ಬುಧವಾರ ತೋಟಕ್ಕೆ ಭೇಟಿ ನೀಡಿದ್ದ ಅವರು ರೈತರಿಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರಿಸಿದರು.

‘ಕೆಂಪುಮೂತಿ ಹುಳುಗಳಿಂದ ಹೆಚ್ಚು ಪೀಡಿತ ಮರಗಳಿದ್ದರೆ, ತಕ್ಷಣ ಅಂತಹ ಮರಗಳನ್ನು ಕತ್ತರಿಸಿ ಸುಟ್ಟುಹಾಕಬೇಕು. ಮರದ ಕಾಂಡದಲ್ಲಿ ಹುಳು ಕೊರೆದು ಕಾಂಡದ ಭಾಗ ಟೊಳ್ಳಾಗಿದ್ದರೆ, ಟೊಳ್ಳಿನ ಮೇಲ್ಭಾಗದಲ್ಲಿ ರಂಧ್ರ ಕೊರೆದು ಒಂದು ಲೀಟರ್ ನೀರಿಗೆ 5 ಎಂಎಲ್ ಬೆರೆಸಿದ ಕ್ಲೊರೊಪೈರಿಪಾಸ್ ಕೀಟನಾಶಕ ದ್ರಾವಣವನ್ನು ರಂಧ್ರದ ಮೂಲಕ ಸುರಿದು, ರಂಧ್ರವನ್ನು ಹಸಿಮಣ್ಣಿನಿಂದ ಮುಚ್ಚಿದರೆಹುಳುಗಳು ಸಾಯುತ್ತವೆ’ ಎಂದು ಸಲಹೆ ನೀಡಿದರು.

‘ತೋಟದಲ್ಲಿ ಉಳುಮೆ ಮಾಡುವಾಗ ತೆಂಗಿನ ಮರಗಳಿಗೆ ಗಾಯ ಮಾಡಿದಲ್ಲಿ, ಗಾಯವಾದ ಜಾಗದಿಂದ ಹುಳುಗಳು ಮರವನ್ನು ಸೇರುವ ಸಾಧ್ಯತೆ ಇದೆ. ಗರಿ ಕತ್ತರಿಸುವಾಗ ಮೂರು ಅಡಿ ಬಿಟ್ಟು ಕತ್ತರಿಸಬೇಕು. ಆಗ ಮರಿಗಳು ಮರದ ಒಳಗೆ ಪ್ರವೇಶಿಸುವುದಿಲ್ಲ. ಮರದಲ್ಲಿ ಗಾಯ ಆಗಿದ್ದಲ್ಲಿ ತಪ್ಪದೆ ಕೀಟನಾಶಕ ಬಳಿಯಬೇಕು. ತೋಟದಲ್ಲಿ ಪ್ರೌಢಕೀಟಗಳು ಕಂಡುಬಂದಲ್ಲಿ ಬಿಡದೆ ಸಾಯಿಸಬೇಕು. ಬಾಳೆಹಣ್ಣು, ಬೆಲ್ಲ ಹಾಗೂ ಈಸ್ಟ್ ಬೆರೆಸಿ ತೋಟದಲ್ಲಿ ಇಟ್ಟರೆ, ಹುಳುಗಳು ಆಕರ್ಷಿತವಾಗುತ್ತವೆ. ಆಗ ಸುಲಭವಾಗಿ ಹುಳುಗಳನ್ನು ಹಿಡಿದು ಸಾಯಿಸಬಹುದು’ ಎಂದರು.

‘ತೆಂಗಿನ ಮರಗಳಿಗೆ ಕೇವಲ ನೀರು, ಗೊಬ್ಬರ ಕೊಟ್ಟರೆ ಸಾಲದು. ರೈತರು ಮರಗಳ ಬೆಳವಣಿಗೆ ಕಡೆ ಸದಾ ಒಂದು ಕಣ್ಣಿಟ್ಟಿರಬೇಕು. ಗರಿ ಒಣಗುವುದು, ಕಾಂಡದಲ್ಲಿ ರಂಧ್ರ ಇತ್ಯಾದಿ ಕಂಡುಬಂದಲ್ಲಿ ಗಮನಕ್ಕೆ ತರಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT