ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗದಲ್ಲಿ ‘ಶರಣ ಸಂಸ್ಕೃತಿ ಉತ್ಸವ’ ಸ್ವಚ್ಛತಾ ಅಭಿಯಾನ; ಗಮನಸೆಳೆದ ಶರಣರು

ಸ್ವಚ್ಛತಾ ಕಾರ್ಯದಲ್ಲಿ ವಿವಿಧ ಮಠಾಧೀಶರು
Last Updated 15 ಅಕ್ಟೋಬರ್ 2018, 13:16 IST
ಅಕ್ಷರ ಗಾತ್ರ

ಚಿತ್ರದುರ್ಗ: ಸ್ವಚ್ಛತಾ ಕಾರ್ಯದಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿ ಸಮೂಹ, ನಾಗರಿಕರು ತೊಡಗಿಕೊಳ್ಳುವುದು ಸಾಮಾನ್ಯ. ಆದರೆ, ಸೋಮವಾರ ಇಲ್ಲಿನ ಜಿಲ್ಲಾ ಆಸ್ಪತ್ರೆಯ ಆವರಣವನ್ನು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಸ್ವಚ್ಛಗೊಳಿಸಲು ಮುಂದಾಗಿದ್ದು, ವಿಶೇಷವಾಗಿತ್ತು.

ಶರಣ ಸಂಸ್ಕೃತಿ ಉತ್ಸವ 2018 ರ ಅಂಗವಾಗಿ ಹಮ್ಮಿಕೊಂಡಿದ್ದ ಈ ಸ್ವಚ್ಛತಾ ಅಭಿಯಾನದ ನೇತೃತ್ವ ವಹಿಸಿದ್ದ ಶರಣರ ಜತೆ ವಿವಿಧ ಮಠಾಧೀಶರು, ಆಸ್ಪತ್ರೆಯ ಅಧಿಕಾರಿಗಳು, ವೈದ್ಯರು, ಶುಶ್ರೂಷಕಿಯರು, ಎಸ್‌ಜೆಎಂ ವಿದ್ಯಾಪೀಠದ ನೌಕರರು ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛಗೊಳಿಸಲು ಮುಂದಾದರು. ಚಿಕಿತ್ಸೆಗಾಗಿ ಬಂದಿದ್ದ ಹೊರ ರೋಗಿಗಳು, ಅಲ್ಲಿ ನೆರೆದಿದ್ದ ಜನತೆ ಅಚ್ಚರಿಯಿಂದ ನೋಡತೊಡಗಿದರು.

ಆಸ್ಪತ್ರೆಯ ಮುಂಭಾಗದಲ್ಲಿ ಪ್ರಾರಂಭವಾದ ಸ್ವಚ್ಛತಾ ಕಾರ್ಯವೂ ತುರ್ತು ಚಿಕಿತ್ಸಾ ಘಟಕ, ರಕ್ತ ಪರೀಕ್ಷಾ ಕೇಂದ್ರ ಹೀಗೆ ವಿವಿಧ ವಿಭಾಗಗಳ ಹೊರಾಂಗಣವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಯಿತು.

‘ಸ್ವಚ್ಛತೆಯೇ ಆರೋಗ್ಯ ಭಾಗ್ಯ’, ‘ಕಸವನ್ನು ರಸ್ತೆ, ಚರಂಡಿ, ಎಲ್ಲೆಂದರಲ್ಲಿ ತಂದು ಸುರಿಯಬೇಡಿ’, ‘ವಾಸಿಸುವ ಮನೆ, ಕಚೇರಿ, ಆಸ್ಪತ್ರೆಗಳ ಪರಿಸರ ಸ್ವಚ್ಛವಾಗಿಡಿ’, ‘ಬಸ್, ರೈಲು ಹೀಗೆ ವಿವಿಧ ನಿಲ್ದಾಣಗಳನ್ನು ಗಲೀಜು ಮಾಡಬೇಡಿ’ ಎಂಬ ಕೂಗು ಕೇಳಿ ಬಂದಿತು.

ನಂತರ ಶರಣರು ಮಾತನಾಡಿ, ‘ಎಲ್ಲಿ ಕಸವಿರುತ್ತದೆಯೋ ಅದು ಕಾಯಿಲೆ ಬರಲು ದಾರಿ ಮಾಡಿಕೊಡುತ್ತದೆ. ಆದ್ದರಿಂದ ಸ್ವಚ್ಛತೆ ಕುರಿತು ಅರಿವು ಮೂಡಿಸುವುದರ ಜತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ವಚ್ಛತಾ ಅಭಿಯಾನವೂ ನಿರಂತರವಾಗಿ ನಡೆಯಬೇಕು’ ಎಂದು ಸಲಹೆ ನೀಡಿದರು.

‘ಸುಂದರ ಬದುಕಿಗೆ ಬಹಿರಂಗ ಶುದ್ಧಿ ಎಷ್ಟು ಮುಖ್ಯವೋ ಅಂತರಂಗ ಶುದ್ಧಿಯೂ ಅಷ್ಟೇ ಮುಖ್ಯ. ಎಲ್ಲಿ ಸ್ವಚ್ಛತೆ ಇರುತ್ತದೋ ಅಲ್ಲಿ ಆರೋಗ್ಯಪೂರ್ಣ ವಾತಾವರಣ ನಿರ್ಮಾಣವಾಗುತ್ತದೆ. ಗಾಂಧಿ ಅವರ ಸ್ವಚ್ಛ ಭಾರತದ ಕನಸು ನನಸಾಗಬೇಕಾದರೆ, ಎಲ್ಲರ ಸಹಕಾರ ಅಗತ್ಯ’ ಎಂದರು.

ಶ್ರೀಕೃಷ್ಣ ಯಾದವ ಗುರುಪೀಠದ ಬಸವ ಯಾದವಾನಂದ ಸ್ವಾಮೀಜಿ,ಹೆಬ್ಬಾಳು ರುದ್ರೇಶ್ವರ ವಿರಕ್ತಮಠದ ಮಹಾಂತರುದ್ರೇಶ್ವರ ಸ್ವಾಮೀಜಿ,ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಎನ್.ಬಿ.ವಿಶ್ವನಾಥ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪಾಲಾಕ್ಷ, ಶರಣ ಸಂಸ್ಕೃತಿ ಉತ್ಸವ ಸಮಿತಿ ಕಾರ್ಯಧ್ಯಕ್ಷ ಪಟೇಲ್ ಶಿವಕುಮಾರ್, ಕಾರ್ಯದರ್ಶಿ ಡಿ.ಎಸ್. ಮಲ್ಲಿಕಾರ್ಜುನ್, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT