ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವನಾಮ ಸ್ಮರಣೆಯಲ್ಲಿ ಮಿಂದೆದ್ದ ಭಕ್ತಗಣ

ಶಿವ ದೇಗುಲಗಳ ಮುಂದೆ ಸರತಿ ಸಾಲು | ಮಹಾದೇವನಿಗೆ ವಿವಿಧ ರೂಪಗಳ ಅಲಂಕಾರ
Last Updated 21 ಫೆಬ್ರುವರಿ 2020, 20:15 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಹಾಶಿವರಾತ್ರಿ ಹಬ್ಬವು ಕೋಟೆ ನಾಡಿನಲ್ಲಿ ಶುಕ್ರವಾರ ಶ್ರದ್ಧಾ–ಭಕ್ತಿಯಿಂದ ನೆರವೇರಿತು. ಜಿಲ್ಲೆಯ ಎಲ್ಲೆಡೆ ಶಿವನಾಮ ಸ್ಮರಣೆ ಅನುರಣಿಸಿತು. ಜಾಗರಣೆ, ಉಪವಾಸ ವ್ರತದ ಮೂಲಕ ಭಕ್ತರು ಈಶ್ವರನನ್ನು ಸ್ಮರಿಸಿದರು.

ಮಹಾಶಿವರಾತ್ರಿ ಅಂಗವಾಗಿ ಶಿವ ದೇಗುಲಗಳಲ್ಲಿ ವೈವಿಧ್ಯಮಯವಾಗಿ ಅಲಂಕರಿಸಿದ್ದ ತ್ರಿನೇತ್ರನನ್ನು ಭಕ್ತರು ಸರತಿ ಸಾಲಿನಲ್ಲಿ ನಿಂತು ಕಣ್ತುಂಬಿಕೊಂಡರು. ಮುಂಜಾನೆಯಿಂದಲೇ ಅನೇಕ ದೇಗುಲಗಳಲ್ಲಿ ಮಹಾರುದ್ರಾಭಿಷೇಕ ಪೂಜೆ ನೆರವೇರಿತು. ಮಹಾಶಿವನ ಮೂರ್ತಿಗಳಿಗೆ ಪುಷ್ಪಗಳು ಸೇರಿ ಇತರೆ ಸಾಮಗ್ರಿಗಳಿಂದ ವಿಶೇಷವಾಗಿ ಅಲಂಕರಿಸುವ ಮೂಲಕ ಭಕ್ತರನ್ನು ಆಕರ್ಷಿಸಲಾಯಿತು.

ಮನೆಗಳಲ್ಲಿ ಮಹಾರುದ್ರನಿಗೆ ಶ್ರದ್ಧಾಭಕ್ತಿಯಿಂದ ಅಭಿಷೇಕ, ಪೂಜೆ ಸಲ್ಲಿಸಿದ ಬಳಿಕ ಕುಟುಂಬ ಸಮೇತರಾಗಿ ದೇಗುಲಗಳತ್ತ ತೆರಳಿದರು. ಇಲ್ಲಿನ ನೀಲಕಂಠೇಶ್ವರ ಸ್ವಾಮಿ, ಪಾತಾಳ ಲಿಂಗೇಶ್ವರಸ್ವಾಮಿ, ಮೇಲುದುರ್ಗದ ಹಿಡಂಬೇಶ್ವರ ಸ್ವಾಮಿ, ಬರಗೇರಮ್ಮ ದೇವಿ, ಕನ್ಯಕಾ ಪರಮೇಶ್ವರಿ ದೇಗುಲದಲ್ಲಿ ಶಿವಭಕ್ತರ ಸಂಖ್ಯೆ ಹೆಚ್ಚಿತ್ತು. ಭಕ್ತರಿಂದ ಹರ ಹರ ಮಹಾದೇವ ಜಯಘೋಷ ಮೊಳಗಿತು.

ಅಮರನಾಥ ಮಾದರಿ:ವಾಸವಿ ಮಹಲ್ ರಸ್ತೆಯ ಕನ್ಯಕಾ ಪರಮೇಶ್ವರಿ ದೇಗುಲದಲ್ಲಿ ನಿರ್ಮಾಣವಾಗಿದ್ದ ‘ಅಮರನಾಥ’ ಗುಹೆ ಮಾದರಿ ಅನೇಕ ಭಕ್ತರ ಗಮನ ಸೆಳೆಯಿತು. ಜಲಾಭಿಷೇಕ, ಕ್ಷೀರಾಭಿಷೇಕ ಹಾಗೂ ಬಿಲ್ವಾರ್ಚನೆ ಸೇರಿ ವಿಶೇಷ ಪೂಜಾ ಕಾರ್ಯಕ್ರಮ ಜರುಗಿತು. ಅಲ್ಲದೆ, ಇಲ್ಲಿನ ನಗರೇಶ್ವರ ಸ್ವಾಮಿಗೆ ಬಿಲ್ವಪತ್ರೆಯಿಂದ ನಾಲ್ಕು ಯಾಮಗಳಲ್ಲಿ ಮಹಾರುದ್ರಾಭಿಷೇಕ ಪೂಜೆ ನೆರವೇರಿತು. ಇಡೀ ರಾತ್ರಿ ಅಖಂಡ ಜಪ, ಭಜನೆ ನಡೆಯಿತು.

ಸಾಮೂಹಿಕ ರುದ್ರಾಭಿಷೇಕ:ನೀಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ನಡೆದ ‘ಸಾಮೂಹಿಕ ರುದ್ರಾಭಿಷೇಕ’ದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಅರ್ಚಕರು ಸ್ವಾಮಿಯ ಮೂರ್ತಿ, ಪಾರ್ವತಿ ದೇವಿ, ಗಣಪತಿ, ವೀರಭದ್ರಸ್ವಾಮಿ ಮೂರ್ತಿಗೂ ವಿಶೇಷವಾಗಿ ಪುಷ್ಪಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು. ಒಳಾಂಗಣದ ಹೂವಿನ ಅಲಂಕಾರವೂ ವಿಶೇಷವಾಗಿತ್ತು.

ದ್ವಾದಶ ಜ್ಯೋತಿರ್ಲಿಂಗ ಮಾದರಿಯ ಲಿಂಗುಗಳ ದರ್ಶನದ ನಂತರ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಶ್ರೀ ಅವರ ಮೂರ್ತಿ ಸ್ಪರ್ಶಿಸಿ, ನಮಸ್ಕರಿಸಿದ ಅನೇಕರು ಭಕ್ತಿ ಸಮರ್ಪಿಸಿದರು.

ಆನೆಬಾಗಿಲು ಸಮೀಪ ಇರುವ ಮಲ್ಲಿಕಾರ್ಜುನಸ್ವಾಮಿ ದೇಗುಲದಲ್ಲಿ ಹಾಗೂ ಮುಂಭಾಗದಲ್ಲಿ ಇರುವ ಪಾತಾಳ ಲಿಂಗೇಶ್ವರ ಸ್ವಾಮಿ ದೇಗುಲದಲ್ಲೂ ವಿಶೇಷ ಪೂಜೆ ನೆರವೇರಿತು. ಹಬ್ಬದ ಅಂಗವಾಗಿ ಸ್ವಾಮಿಗೆ ಮಹಾ ರುದ್ರಾಭಿಷೇಕ, ಬಿಲ್ವಪತ್ರೆ ಅಭಿಷೇಕ, ಪುಷ್ಪಾಭಿಷೇಕ ಪೂಜೆಗಳು ನೆರವೇರಿದವು.

ದೊಡ್ಡಪೇಟೆ ಕಂಬಳಿ ಬೀದಿಯಲ್ಲಿ ಇರುವ ಬೀರಗಲ್ಲೇಶ್ವರ ಸ್ವಾಮಿ ದೇಗುಲದಲ್ಲಿ ಸಂಜೆ ಸ್ವಾಮಿಗೆ ರುದ್ರಾಭಿಷೇಕ ಪೂಜೆ ನೆರವೇರಿತು. ರಾತ್ರಿ ಭಕ್ತರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಮೇಲುದುರ್ಗದಲ್ಲೂ ಪೂಜೆ:ಐತಿಹಾಸಿಕ ಕೋಟೆಯ ಮೇಲುದುರ್ಗದಲ್ಲಿರುವ ಹಿಂಡಂಬೇಶ್ವರ ಸ್ವಾಮಿ, ಏಕನಾಥೇಶ್ವರಿ ದೇವಿ, ಸಂಪಿಗೆ ಸಿದ್ದೇಶ್ವರ ಸ್ವಾಮಿ, ಕಾಶಿ ವಿಶ್ವೇಶ್ವರ ದೇಗುಲದಲ್ಲಿ ಶಿವರಾತ್ರಿ ಅಂಗವಾಗಿ ಮಹಾ ರುದ್ರಾಭಿಷೇಕ ಪೂಜಾ ಕಾರ್ಯಕ್ರಮ ಜರುಗಿತು.

ಕೋಟೆ ರಸ್ತೆಯ ಗಾರೆಬಾಗಿಲು ಈಶ್ವರ, ಕರ್ವತೀಶ್ವರ, ಬೇಡರ ಕಣ್ಣಪ್ಪ, ಉಜ್ಜಿನಿಮಠದ ರಸ್ತೆಯ ಉಮಾಮಹೇಶ್ವರ, ಉಚ್ಚಂಗಿಯಲ್ಲಮ್ಮ ದೇವಿ, ಗಾರೇಹಟ್ಟಿಯ ಮಹಾಬಲೇಶ್ವರ, ಜೋಗಿಮಟ್ಟಿ ರಸ್ತೆಯ ಕೂಡಲಿ ಶೃಂಗೇರಿ ಶಂಕರಾಚಾರ್ಯ ಶಾಖಾ ಮಠದಲ್ಲಿನ ಚಂದ್ರಮೌಳೇಶ್ವರ ಸ್ವಾಮಿ ಸೇರಿ ಹಲವು ಶಿವ ದೇಗುಲಗಳಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿದವು. ವಿವಿಧೆಡೆಗಳಲ್ಲಿ ದೇವರ ದರ್ಶನಕ್ಕಾಗಿ ನೆರೆದಿದ್ದ ಭಕ್ತಸಮೂಹಕ್ಕೆ ತೀರ್ಥ, ಪ್ರಸಾದ ವಿತರಿಸಲಾಯಿತು.

ಸಿಹಿ ನೀರು ಹೊಂಡದ ಹಿಂಭಾಗದಲ್ಲಿರುವ ಪಲ್ಗುಣೇಶ್ವರ ಸ್ವಾಮಿ ದೇಗುಲದ ಮೂರ್ತಿಯೂ ಅತ್ಯಂತ ವಿಶೇಷವಾಗಿದೆ. ಪುರಾತನ ಐತಿಹ್ಯವಿರುವ ಈ ದೇಗುಲದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ಪೂಜಾ ಕಾರ್ಯಕ್ರಮ ನೆರವೇರಿತು.

ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ವಿಶೇಷವಾಗಿ ಜ್ಯೋತಿರ್ಲಿಂಗಗಳ ಮಾದರಿ ಪ್ರತಿಷ್ಠಾಪಿಸಿದ್ದರು. ಸಂಜೆ 6ರ ನಂತರ ಲಿಂಗದ ಎದುರು ಧ್ಯಾನ ಇತರೆ ಕಾರ್ಯಕ್ರಮ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT