ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ಪ್ರವಾಸಿ ತಾಣವಾಗಲಿ ಲಕ್ಕವ್ವನಹಳ್ಳಿ ಒಡ್ಡು

Published 16 ಮೇ 2023, 20:13 IST
Last Updated 16 ಮೇ 2023, 20:13 IST
ಅಕ್ಷರ ಗಾತ್ರ

ಹಿರಿಯೂರು: ಚಿತ್ರದುರ್ಗ–ಹಿರಿಯೂರು ನಗರಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ 1991ರಲ್ಲಿ ನಿರ್ಮಾಣಗೊಂಡಿರುವ ಲಕ್ಕವ್ವನಹಳ್ಳಿ ಒಡ್ಡು ಪ್ರಸ್ತುತ ನಿರುಪಯುಕ್ತವಾಗಿದ್ದು, ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳುವ ಮೂಲಕ ಪ್ರವಾಸಿಗರನ್ನು ಸೆಳೆಯಬಹುದಾಗಿದೆ.

ಆರ್. ಗುಂಡೂರಾವ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭ 1982ರಲ್ಲಿ ಹಿರಿಯೂರು ಪಟ್ಟಣಕ್ಕೆ ನೀರು ಪೂರೈಸುವ ಉದ್ದೇಶದಿಂದ ₹ 85 ಲಕ್ಷ ವೆಚ್ಚದಲ್ಲಿ ಒಡ್ಡು ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಪ್ರತಿ 15 ದಿನಗಳಿಗೆ ಒಮ್ಮೆ ವಾಣಿವಿಲಾಸ ಜಲಾಶಯದಿಂದ ವೇದಾವತಿ ನದಿ ಮೂಲಕ ಈ ಒಡ್ಡಿಗೆ ನೀರು ಹರಿಸಿ, ಶುದ್ಧೀಕರಿಸಿ ನಗರಕ್ಕೆ ನೀರು ಪೂರೈಸಲಾಗುತ್ತಿತ್ತು. ಆದರೆ, ನದಿಪಾತ್ರದ ಹಳ್ಳಿಗಳ ಜನರು ನದಿಯಲ್ಲಿ ಬಟ್ಟೆ ತೊಳೆಯುವುದು, ಜನ–ಜಾನುವಾರುಗಳ ಮೈ ತೊಳೆಯುವುದು, ನದಿಯ ದಡದಲ್ಲಿಯೇ ಶೌಚಕ್ಕೆ ತೆರಳುತ್ತಿದ್ದರಿಂದ ನೀರು ಕಲುಷಿತಗೊಂಡಿರುವ ಬಗ್ಗೆ ಕೆಲವರಿಂದ ದೂರುಗಳು ಕೇಳಿಬಂದಿದ್ದವು.

2016ರಲ್ಲಿ ಶಾಸಕರಾಗಿದ್ದ ಡಿ. ಸುಧಾಕರ್ ಅವರು ದೂರಿನ ಹಿನ್ನೆಲೆಯಲ್ಲಿ ಲಕ್ಕವ್ವನಹಳ್ಳಿ ಒಡ್ಡಿನ ಮೂಲಕ ನಗರಕ್ಕೆ ನೀರು ಪೂರೈಸುವ ಬದಲು ಜಲಾಶಯದಿಂದ ನೇರವಾಗಿ ಪೈಪ್‌ಲೈನ್‌ ಮೂಲಕ ನೀರು ತಂದರೆ ಒಳಿತು ಎಂದು ನೀರು ಸರಬರಾಜು ಹಾಗೂ ನೀರಾವರಿ ಇಲಾಖೆ ಎಂಜಿನಿಯರ್‌ಗಳ ಜತೆ ಚರ್ಚಿಸಿ ₹ 40 ಕೋಟಿ ವೆಚ್ಚದ ಯೋಜನೆಯೊಂದನ್ನು ರೂಪಿಸಿದ್ದರು. ಇದರಿಂದಾಗಿ ‌ನಾಲ್ಕು ವರ್ಷಗಳಿಂದ ನಗರದ ಜನರಿಗೆ ಪೈಪ್‌ಲೈನ್‌ ಮೂಲಕ ವಾಣಿವಿಲಾಸ ಜಲಾಶಯದಿಂದ ಶುದ್ಧ ನೀರು ಸಿಗುತ್ತಿದೆ. ಹೀಗಾಗಿ ಕುಡಿಯುವ ನೀರು ಸಂಗ್ರಹಕ್ಕೆಂದು ನಿರ್ಮಿಸಿದ್ದ ಒಡ್ಡು ನಿರುಪಯುಕ್ತವಾಗಿದೆ.

ಚಿತ್ರದುರ್ಗ– ಹಿರಿಯೂರು ನಗರದ ಜನರಿಗೆ ಕುಡಿಯುವ ನೀರು ಪೂರೈಕೆಗೆಂದು ನಿರ್ಮಿಸಿದ್ದ ಲಕ್ಕವ್ವನಹಳ್ಳಿ ಒಡ್ಡು ವರ್ಷಗಳು ಕಳೆದಂತೆ ಹೂಳುಮಯವಾಗುತ್ತಿದೆ. ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕುಗಳಿಗೆ ವಾಣಿವಿಲಾಸದ ನೀರು ಹರಿಸುವಾಗ ಇದೇ ಒಡ್ಡಿನ ಮೂಲಕ ನೀರು ಹರಿಯುತ್ತದೆ. ಹೀಗಾಗಿ ಒಡ್ಡು ಜೀವಂತವಾಗಿದ್ದರೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಪ್ರಸ್ತುತ ಈ ಒಡ್ಡು ನಗರಸಭೆ, ಒಳಚರಂಡಿ ಮತ್ತು ನೀರು ಸರಬರಾಜು ಇಲಾಖೆಗೆ ಬೇಡವಾಗಿದ್ದು, ಒಡ್ಡಿನ ಅಂಚಿನಲ್ಲಿ ಹುಲ್ಲು–ಮುಳ್ಳಿನ ಗಿಡಗಳು ಪೊದೆಯಂತೆ ಬೆಳೆದು ಇಡೀ ಪರಿಸರ ಮಲಿನಗೊಂಡಿದೆ.

ಪ್ರವಾಸಿತಾಣಕ್ಕೆ ಸೂಕ್ತ: ಒಡ್ಡಿನಲ್ಲಿ ಸುಮಾರು ಒಂದೂವರೆ ಕಿ.ಮೀ. ದೂರದವರೆಗೆ ನೀರು ನಿಲ್ಲುತ್ತದೆ. ಒಡ್ಡಿನ ಎರಡೂ ಬದಿ ಉದ್ಯಾನ ನಿರ್ಮಿಸಿ, ಒಡ್ಡಿನಲ್ಲಿ ದೋಣಿ ವಿಹಾರಕ್ಕೆ ವ್ಯವಸ್ಥೆ ಮಾಡಿದಲ್ಲಿ ನಗರದ ಜನರಿಗೆ ಕೂಗಳತೆ ದೂರದಲ್ಲಿ ಸುಂದರ ಪ್ರವಾಸಿ ತಾಣ ಸಿಕ್ಕಂತಾಗುತ್ತದೆ. ಸರ್ಕಾರದಿಂದ ಹಣಕಾಸು ನೆರವು ದೊರೆಯುವುದು ಕಷ್ಟ ಎನಿಸಿದಲ್ಲಿ ಖಾಸಗಿಯವರ ಜತೆ ಒಡಂಬಡಿಕೆ ಮಾಡಿಕೊಂಡು ಸದರಿ ಒಡ್ಡನ್ನು ಅಭಿವೃದ್ಧಿ ಪಡಿಸಬಹುದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಒಡ್ಡಿನಲ್ಲಿ ಸಂಗ್ರಹವಾಗಿರುವ ಮಣ್ಣು ತುಂಬ ಫಲವತ್ತತೆಯಿಂದ ಕೂಡಿದ್ದು ಉಚಿತವಾಗಿ ನೀಡಿದರೆ ರೈತರಿಗೆ ಅನುಕೂಲವಾಗುತ್ತದೆ. ನದಿಯಂಚಿನ ಒತ್ತುವರಿ ತೆರವುಗೊಳಿಸಿ ಕಾಂಪೌಂಡ್ ಅಥವಾ ತಂತಿ ಬೇಲಿ ಅಳವಡಿಸಬೇಕು. ಗಿಡಗಂಟಿ–ಹುಲ್ಲಿನ ಪೊದೆಯನ್ನು ಸ್ವಚ್ಛಗೊಳಿಸಿ ಅಲ್ಲೆಲ್ಲ ಅಲಂಕಾರಿಕ ಗಿಡಗಳನ್ನು ಬೆಳೆಸಬೇಕು. ವಾಯುವಿಹಾರಿಗಳಿಗೆ ಮಾರ್ಗ ನಿರ್ಮಿಸಬೇಕು. ವಿಶೇಷವಾಗಿ ಒಡ್ಡಿನ ಮೇಲ್ಭಾಗದಲ್ಲಿರುವ ಹಳ್ಳಿಗಳ ಜನ ನೀರಿಗೆ ತ್ಯಾಜ್ಯ ಬಿಡದಂತೆ ತಡೆಹಾಕಬೇಕು. ಆಗ ಇದೊಂದು ಸುಂದರ ಪ್ರವಾಸಿ ತಾಣವಾಗುತ್ತದೆ ಎಂದು ವಾಸವಿ ಸುರೇಶ್ ಮನವಿ ಮಾಡಿದ್ದಾರೆ.

ಚಿತ್ರದುರ್ಗಕ್ಕೆ ನೀರು ಪೂರೈಸಲು ನಿರ್ಮಿಸಿದ್ದ ಪಂಪ್‌ಸೆಟ್‌ ರೂಂಗಳು, ಪರಿವರ್ತಕಗಳು ಶಿಥಿಲವಾಗಿವೆ. ನಗರಸಭೆಯವರು ಕಂದಾಯ ಹಾಗೂ ನೀರಾವರಿ ಇಲಾಖೆ ನೆರವು ಪಡೆದು ಒಡ್ಡಿನ ಒತ್ತುವರಿ ತೆರವುಗೊಳಿಸಿ ಬೋಟಿಂಗ್ ವ್ಯವಸ್ಥೆ ಮಾಡುವ ಮೂಲಕ ಸುಂದರ ಪ್ರವಾಸಿ ತಾಣವಾಗಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಚಿತ್ರದುರ್ಗಕ್ಕೆ ನೀರು ಸರಬರಾಜು ಮಾಡಲು ನಿರ್ಮಿಸಿದ್ದ ಪಂಪ್‌ಹೌಸ್‌ ಅಳವಡಿಸಿದ್ದ ಪರಿವರ್ತಕ ನಿರುಪಯುಕ್ತವಾಗಿರುವುದು.
ಚಿತ್ರದುರ್ಗಕ್ಕೆ ನೀರು ಸರಬರಾಜು ಮಾಡಲು ನಿರ್ಮಿಸಿದ್ದ ಪಂಪ್‌ಹೌಸ್‌ ಅಳವಡಿಸಿದ್ದ ಪರಿವರ್ತಕ ನಿರುಪಯುಕ್ತವಾಗಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT