ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ವಿಯಾಗಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ

ಕೋವಿಡ್‌ ದೃಢ ಪಟ್ಟವರು, ಅನಾರೋಗ್ಯ ಕಾಣಿಸಿಕೊಂಡವರಿಗೆ ಪ್ರತ್ಯೇಕ ವ್ಯವಸ್ಥೆ
Last Updated 22 ಜುಲೈ 2021, 14:42 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಸೋಂಕಿನ ಆತಂಕದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಜಿಲ್ಲೆಯಲ್ಲಿ ಸುಗಮವಾಗಿ ನಡೆಯಿತು. ಮೂರು ಭಾಷಾ ವಿಷಯಗಳಿಗೆ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಮಕ್ಕಳು, ಪೋಷಕರು ಹಾಗೂ ಶಿಕ್ಷಕರಲ್ಲಿ ಸಂತಸ ಮೂಡಿಸಿತು.

ಬದಲಾದ ಪರೀಕ್ಷಾ ಪದ್ಧತಿಯ ಬಗ್ಗೆ ಅಳುಕಿನಿಂದಲೇ ಇದ್ದ ವಿದ್ಯಾರ್ಥಿಗಳಲ್ಲಿ ಹೊಸದೊಂದು ಭರವಸೆ ಮೂಡಿತು. ಆಗಸ್ಟ್‌ ತಿಂಗಳಲ್ಲಿ ಫಲಿತಾಂಶ ಬರುವ ಸಾಧ್ಯತೆ ಇದೆ. ಮುಂದಿನ ಶಿಕ್ಷಣದ ಮಾರ್ಗವನ್ನು ನಿರ್ಧರಿಸಲು ಎಸ್ಸೆಸ್ಸೆಲ್ಸಿ ಪ್ರಮುಖ ಘಟ್ಟವಾಗಿದ್ದು, ಫಲಿತಾಂಶದತ್ತ ಎಲ್ಲರ ಚಿತ್ತ ಹರಿದಿದೆ.

ಜಿಲ್ಲೆಯಲ್ಲಿ 21,159 ವಿದ್ಯಾರ್ಥಿಗಳು ಭಾಷಾ ವಿಷಯಗಳ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. 610 ಪುನಾರಾವರ್ತಿತರು ಹಾಗೂ 413 ಖಾಸಗಿ ವಿದ್ಯಾರ್ಥಿಗಳು ಇದ್ದರು. ಜಿಲ್ಲೆಯ 133 ಕೇಂದ್ರದಲ್ಲಿ ನಡೆದ ಪರೀಕ್ಷೆಗೆ 112 ವಿದ್ಯಾರ್ಥಿಗಳು ಗೈರಾಗಿದ್ದರು. ಹೊರ ಜಿಲ್ಲೆಯ 183 ಮಕ್ಕಳು ಚಿತ್ರದುರ್ಗದಲ್ಲಿ ಪರೀಕ್ಷೆ ಬರೆದರು. ಆಂಧ್ರಪ್ರದೇಶದ ನಾಲ್ವರು ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಪರೀಕ್ಷೆಗೆ ಹಾಜರಾಗಿದ್ದರು.

ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಿಗದಿಯಾಗಿತ್ತು. ಬೆಳಿಗ್ಗೆ 9ಕ್ಕೆ ಪರೀಕ್ಷಾ ಕೊಠಡಿಗೆ ಪ್ರವೇಶ ಕಲ್ಪಿಸುವುದಾಗಿ ಶಿಕ್ಷಣ ಇಲಾಖೆ ತಿಳಿಸಿತ್ತು. ಆದರೆ, ಮಕ್ಕಳು ಬಹುಬೇಗ ಕೇಂದ್ರಕ್ಕೆ ಬಂದಿದ್ದರು. ತುಂತುರು ಮಳೆ ಆರಂಭವಾಗಿದ್ದರಿಂದ ಕೇಂದ್ರದ ಹೊರಗೆ ಕಾಯುವುದ ಕಷ್ಟವಾಗಿತ್ತು. ಹೀಗಾಗಿ, ನಿಗದಿತ ಅವಧಿಗೂ ಮೊದಲೇ ಪರೀಕ್ಷಾ ಕೊಠಡಿಗೆ ಪ್ರವೇಶ ಕಲ್ಪಿಸಲಾಯಿತು. ಪೋಷಕರು ದ್ವಿಚಕ್ರ ವಾಹನದಲ್ಲಿ ಮಕ್ಕಳನ್ನು ಕೇಂದ್ರಕ್ಕೆ ಕರೆತಂದು ಬಿಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅನೇಕರು ಮಳೆಯಲ್ಲಿಯೇ ಪ್ರಯಾಣ ಮಾಡಿಕೊಂಡು ಬಂದಿದ್ದರು.

ಪರೀಕ್ಷಾ ಕೇಂದ್ರದ ಹೊರಗೆ ಅಂತರ ಕಾಯ್ದುಕೊಳ್ಳಲು ಬಾಕ್ಸ್ ಆಕಾರದ ಗೆರೆಗಳನ್ನು ಹಾಕಲಾಗಿತ್ತು. ಸರತಿ ಸಾಲಿನಲ್ಲಿ ನಿಂತ ವಿದ್ಯಾರ್ಥಿಗಳನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಪರಿಶೀಲಿಸಿದರು. ಥರ್ಮಾಮೀಟರ್‌ ಇಟ್ಟು ದೇಹದ ಉಷ್ಣಾಂಶ ಪರೀಕ್ಷಿಸಿದರು. ಶೀತ, ಕೆಮ್ಮು, ಜ್ವರದ ಬಗ್ಗೆ ತಪಾಸಣೆ ನಡೆಸಿದರು. ಕೈಗಳಿಗೆ ಸ್ಯಾನಿಟೈಸರ್‌ ಹಾಕಿ ಶುಚಿಗೊಳಿಸಿಕೊಳ್ಳುವಂತೆ ಸೂಚಿಸಿದರು. ಬಳಿಕ ಕೊಠಡಿಗೆ ತೆರಳಲು ಅನುಮತಿ ನೀಡಿದರು.

ಪರೀಕ್ಷಾ ಕರ್ತವ್ಯಕ್ಕೆ ನಿಯೋಜನಗೊಂಡ ಶಿಕ್ಷಕರು ಬೆಳಿಗ್ಗೆ 8ಕ್ಕೆ ಕೇಂದ್ರಕ್ಕೆ ಧಾವಿಸಿದ್ದರು. ಪರೀಕ್ಷೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು. ಪ್ರತಿ ಡೆಸ್ಕ್‌ಗೆ ಒಬ್ಬರು ಮಾತ್ರ ಕುಳಿತಿದ್ದರು. ಸಮಾನ್ಯವಾಗಿ ಒಂದು ಕೊಠಡಿಗೆ 12 ವಿದ್ಯಾರ್ಥಿಗಳು ಕುಳಿತು ಪರೀಕ್ಷೆ ಬರೆಯಲು ಅವಕಾಶವಿತ್ತು. ಬಹುತೇಕ ವಿದ್ಯಾರ್ಥಿಗಳು ಮನೆಯಂದಲೇ ಕುಡಿಯುವ ನೀರು ತಂದಿದ್ದರು. ಹೊರಗೆ ಸುರಿಯುತ್ತಿದ್ದ ಮಳೆಯ ನಡುವೆ ಪರೀಕ್ಷೆ ಸುಗಮನವಾಗಿ ನಡೆಯಿತು.

ಮೂರು ಪ್ರಶ್ನೆಪತ್ರಿಗಳನ್ನು ಒಟ್ಟಿಗೆ ನೀಡಲಾಯಿತು. ಮೂರು ಗಂಟೆಯ ಅವಧಿಯಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಬರೆಯುವಂತೆ ಸೂಚಿಸಲಾಗಿತ್ತು. ಬಹು ಆಯ್ಕೆಯ ಪ್ರಶ್ನೆಗಳಿಗೆ ಉತ್ತರಿಸುವುದು ಮಕ್ಕಳಿಗೆ ಕಷ್ಟವೇನೂ ಆಗಲಿಲ್ಲ ಎಂಬುದು ಕೊಠಡಿಯಿಂದ ಹೊರಬಂದ ವಿದ್ಯಾರ್ಥಿಗಳ ಮೊಗದಲ್ಲಿ ಕಾಣುತ್ತಿತ್ತು. ಪರೀಕ್ಷೆ ಮುಗಿಸಿ ನಿರುಮ್ಮಳರಾದ ಮಕ್ಕಳು ಸಂತಸಗೊಂಡಿದ್ದರು. ಕೋರ್‌ ವಿಷಯಗಳಿಗೆ ಜುಲೈ 19ರಂದು ಪರೀಕ್ಷೆ ನಡೆದಿತ್ತು.

ಆರು ಮಕ್ಕಳಿಗೆ ಕೋವಿಡ್‌

ಕೊರೊನಾ ಸೋಂಕು ಕಾಣಿಸಿಕೊಂಡಿದ್ದ ಆರು ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದರು. ಅನಾರೋಗ್ಯದಿಂದ ಬಳಲುತ್ತಿದ್ದ 9 ವಿದ್ಯಾರ್ಥಿಗಳಿಗೂ ಪರೀಕ್ಷೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕೋವಿಡ್‌ ದೃಢಪಟ್ಟಿದ್ದ ವಿದ್ಯಾರ್ಥಿಗಳು ಲಘು ರೋಗಲಕ್ಷಣ ಹೊಂದಿದ್ದರಿಂದ ಮನೆಯಲ್ಲೇ ಪ್ರತ್ಯೇಕ ಚಿಕಿತ್ಸೆ ಪಡೆಯುತ್ತಿದ್ದರು. ಆಂಬುಲೆನ್ಸ್‌ ಮೂಲಕ ಅವರನ್ನು ಪರೀಕ್ಷಾ ಕೇಂದ್ರಕ್ಕೆ ಕರೆತರಲಾಯಿತು. ಸಿಬ್ಬಂದಿ ಪಿಪಿಇ ಕಿಟ್‌ ಧರಿಸಿ ಕರ್ತವ್ಯ ನಿರ್ವಹಿಸಿದರು.

***

ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮನವಾಗಿ ನಡೆದಿದೆ. ಪರೀಕ್ಷೆಗೆ ತಿಂಗಳಿಂದ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮಕ್ಕಳ ಆರೋಗ್ಯದ ಸುರಕ್ಷತೆಗೂ ಒತ್ತು ನೀಡಲಾಗಿತ್ತು.

ಕೆ.ರವಿಶಂಕರ್‌ ರೆಡ್ಡಿ

ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT