ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ SSLC Results: ಕೋಟೆ ನಾಡಲ್ಲಿ ಬಾಲಕರ ಮೇಲುಗೈ

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶೇ 94 ಸಾಧನೆ
Last Updated 19 ಮೇ 2022, 15:40 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾದಿಂದಾಗಿ ಎರಡು ವರ್ಷದ ಬಳಿಕ ಪೂರ್ಣ ಪ್ರಮಾಣದಲ್ಲಿ ನಡೆದ 2021–22ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಕೋಟೆನಾಡಿನಲ್ಲಿ ಬಾಲಕರು ಮೇಲುಗೈ ಸಾಧಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 23,095 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 11,810 ಬಾಲಕರಲ್ಲಿ 10,920 ಹಾಗೂ 11,285 ಬಾಲಕಿಯರಲ್ಲಿ 10,860 ಸೇರಿ ಒಟ್ಟು 21,780 ಮಕ್ಕಳು ಉತ್ತೀರ್ಣರಾಗಿದ್ದು, ಶೇ 94.31 ಫಲಿತಾಂಶ ದಾಖಲಿಸಿದೆ.

ಕೋವಿಡ್‌ ಮೊದಲ ಅಲೆಯ 2019–2020ರಲ್ಲಿ ಶೇ 88.66, ಎರಡನೇ ಅಲೆಯ 2020–2021ರಲ್ಲಿ ಶೇ 100 ಫಲಿತಾಂಶವನ್ನು ಜಿಲ್ಲೆ ಗಳಿಸಿತ್ತು. ಈ ವರ್ಷದ ಫಲಿತಾಂಶದಲ್ಲಿ ಶೇ 5.65 ರಷ್ಟು ಸುಧಾರಣೆ ಕಂಡಿದೆ.

ಕೊರೊನಾ ಸೋಂಕಿನ ಕಾರಣಕ್ಕೆ ತರಗತಿಗಳು ತಡವಾಗಿ ಪ್ರಾರಂಭವಾದ ಕಾರಣ ಪ್ರಶ್ನೆಪತ್ರಿಕೆಯನ್ನು ಸರಳೀಕರಣಗೊಳಿಸಿ ಮೌಲ್ಯಮಾಪನದಲ್ಲಿ ಶೇ 10 ರಷ್ಟು ಕೃಪಾಂಕ ನೀಡಿದರು ಸಹ ಜಿಲ್ಲೆಯಲ್ಲಿ 1,315 ವಿದ್ಯಾರ್ಥಿಗಳು ಅನುರ್ತೀಣರಾಗಿದ್ದಾರೆ. ಇದರಲ್ಲಿ 890 ಬಾಲಕರು, 425 ಬಾಲಕಿಯರಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 4,612 ಎ+, 7,131 ಎ, 5,336 ಬಿ+, 3,062 ಬಿ, 1,248 ಸಿ+, 391 ವಿದ್ಯಾರ್ಥಿಗಳು ‘ಸಿ’ ಶ್ರೇಣಿ ಗಳಿಸಿದ್ದಾರೆ. ಚಳ್ಳಕೆರೆ ಶೇ 96.99 ಫಲಿತಾಂಶ ದಾಖಲಿಸುವ ಮೂಲಕ ಜಿಲ್ಲೆಯಲ್ಲಿ ಮೊದಲ ಸ್ಥಾನಗಳಿಸಿದೆ. ಉಳಿದಂತೆ ಮೊಳಕಾಲ್ಮುರು ಶೇ 95.53, ಹಿರಿಯೂರು ಶೇ 94.62, ಹೊಸದುರ್ಗ ಶೇ 93.26, ಹೊಳಲ್ಕೆರೆ ಶೇ 93.05 ಹಾಗೂ ಚಿತ್ರದುರ್ಗ ಶೇ 92.55 ಫಲಿತಾಂಶಗಳಿಸಿವೆ.

ಬಾಲಕರ ಮೇಲುಗೈ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಬಾಲಕರು ಮೆಲುಗೈ ಸಾಧಿಸಿದ್ದಾರೆ. ಚಳ್ಳಕೆರೆಯಲ್ಲಿ 2,484, ಚಿತ್ರದುರ್ಗ 2,885, ಹಿರಿಯೂರು 1,728, ಹೊಳಲ್ಕೆರೆ 1,277, ಹೊಸದುರ್ಗ 1,426 ಹಾಗೂ ಮೊಳಕಾಲ್ಮುರಿನಲ್ಲಿ 1,120 ವಿದ್ಯಾರ್ಥಿಗಳು ವಿವಿಧ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಬಾಲಕಿಯರಲ್ಲಿ ಚಳ್ಳಕೆರೆ 2,454, ಚಿತ್ರದುರ್ಗ 2,840, ಹಿರಿಯೂರು 1,754, ಹೊಳಲ್ಕೆರೆ 1,292, ಹೊಸದುರ್ಗ 1,480 ಹಾಗೂ ಮೊಳಕಾಲ್ಮುರಿನಲ್ಲಿ 1,040 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ.

‘ಏಳನೇ ತರಗತಿ ಪರೀಕ್ಷೆ ಬರೆದು ಪ್ರೌಢಶಾಲೆಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಕೋವಿಡ್‌ ಕಾರಣಕ್ಕೆ ಬಹುತೇಕ ಆನ್‌ಲೈನ್‌ ತರಗತಿಗಳನ್ನು ಕೇಳಿದ್ದೆ ಹೆಚ್ಚು. ಶೈಕ್ಷಣಿಕ ಕಲಿಕಾ ಸಮಸ್ಯೆ ನಡುವೆಯೂ ಎರಡು ವರ್ಷದ ಬಳಿಕ ಹತ್ತನೇ ತರಗತಿಗೆ ಬಂದ ವಿದ್ಯಾರ್ಥಿಗಳನ್ನು ಕಡಿಮೆ ಅವಧಿಯಲ್ಲೆ ಪರಿಣಾಮಾತ್ಮಕ ಸರಳ ಕಲಿಕಾ ಸೂತ್ರ ಆಳವಡಿಸಿಕೊಂಡು ಪಠ್ಯ ಬೋಧಿಸಿದ ಕಾರಣ ಫಲಿತಾಂಶದಲ್ಲಿ ಪ್ರಗತಿ ಕಂಡಿದೆ’ ಎನ್ನುತ್ತಾರೆ ಶಿಕ್ಷಣ ಇಲಾಖೆಯ ವಿಷಯ ತಜ್ಞರು.

ಕಳೆದ ಹತ್ತು ವರ್ಷಗಳಿಂದ ಜಿಲ್ಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗಣನೀಯ ಸಾಧನೆ ಮಾಡುತ್ತಿದೆ. ಅದರಲ್ಲೂ ಗಡಿ ತಾಲೂಕುಗಳಲ್ಲಿ ಶೈಕ್ಷಣಿಕ ಪ್ರಗತಿ ಏರಿಕೆ ಹಾದಿಯಲ್ಲಿರುವುದನ್ನು ಫಲಿತಾಂಶ ಸಾಕ್ಷೀಕರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT