ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಕೌದಿ ಪೂಜೆ ನೆರವೇರಿಸಿದ ಸ್ವಾಮೀಜಿ

93ನೇ ಶಿವರಾತ್ರಿ ಮಹೋತ್ಸವಕ್ಕೆ ವಿಧ್ಯುಕ್ತ ತೆರೆ
Last Updated 20 ಫೆಬ್ರುವರಿ 2023, 4:34 IST
ಅಕ್ಷರ ಗಾತ್ರ

ಚಿತ್ರದುರ್ಗ: ಆರೂಢ ಪರಂಪರೆಯ ಕಬೀರಾನಂದ ಆಶ್ರಮದಲ್ಲಿ ಶಿವನಾಮ ಸಪ್ತಾಹದ ಅಂಗವಾಗಿ ಆರು ದಿನಗಳಿಂದ ನಡೆಯುತ್ತಿದ್ದ 93ನೇ ಶಿವರಾತ್ರಿ ಮಹೋತ್ಸವಕ್ಕೆ ಪೀಠಾಧ್ಯಕ್ಷ ಶಿವಲಿಂಗಾನಂದ ಸ್ವಾಮೀಜಿ ಅವರ ಕೌದಿಪೂಜೆಯ ಮೂಲಕ ಭಾನುವಾರ ತೆರೆಬಿದ್ದಿತು.

ಪಲ್ಲಕ್ಕಿ ಉತ್ಸವದ ಮರುದಿನ ಕೌದಿ ಪೂಜೆ ನಡೆಯುವುದು ವಾಡಿಕೆ. ಆರೂಢ ಮಠಗಳಲ್ಲಿ ಇದೊಂದು ಪರಂಪರೆಯಾಗಿ ಬೆಳೆದು ಬಂದಿದೆ. ಶಿವರಾತ್ರಿ ಜಾಗರಣೆ ಮುಗಿಸಿದ ಪೀಠಾಧ್ಯಕ್ಷರು ಭಾನುವಾರ ಸಂಜೆ 5ರ ಬ್ರಾಹ್ಮಿ ಮೂಹೂರ್ತದಲ್ಲಿ ವಿಭೂತಿ ಸ್ನಾನ ಮಾಡಿದರು. ಸನ್ಯಾಸ ದೀಕ್ಷೆಯ ವಿಧಿವಿಧಾನಗಳನ್ನು ಪೂರೈಸಿ ಕೌದಿ ಪೂಜೆಗೆ ಸಜ್ಜಾದರು.

ಚಿಂದಿ ಬಟ್ಟೆಯಿಂದ ನಿರ್ಮಿಸಿದ ಕೌದಿಯನ್ನು ಧರಿಸಿದ ಶಿವಲಿಂಗಾನಂದ ಸ್ವಾಮೀಜಿ, ಪೂಜಾ ಕೈಂಕರ್ಯಕ್ಕೆ ಮುಂದಾದರು. ರುದ್ರಾಕ್ಷಿ ಮಾಲೆ, ತಂಗಟೆ ಹೂವಿನ ಹಾರ ಅವರ ಕೊರಳನ್ನು ಅಲಂಕರಿಸಿದ್ದವು. ಶಿವನಮೂರ್ತಿಗೆ ವಿಶೇಷ ಪೂಜೆ ನೆರವೇರಿಸಿ, ಕೌದಿ ಸೇವೆ ಸಲ್ಲಿಸಿದರು. ಆರತಿ ತಟ್ಟೆ ಹಿಡಿದ ಮಹಿಳೆಯರು ಸ್ವಾಮೀಜಿ ಅವರ ಪೂಜಾ ಕೈಂಕರ್ಯಕ್ಕೆ ನೆರವಾದರು. ಎಲ್ಲೆಡೆ ಶಿವನಾಮ ಸ್ತ್ಯುತಿ ಮೊಳಗಿತು. ಸ್ವಾಮೀಜಿ ಮಠವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿದರು.

ಕೈಯಲ್ಲಿ ಕಮಂಡಲ ಮತ್ತು ಮಣ್ಣಿನ ತಟ್ಟೆಯನ್ನು ಹಿಡಿದು ಬರುವಾಗ ಭಕ್ತರು ದರ್ಶನ ಪಡೆದು ಕಾಣಿಕೆ ಸಲ್ಲಿಸಿದರು. ಸ್ವಾಮೀಜಿ ಕಾಲಿಗೆ ಎರಗಿ ಆಶೀರ್ವಾದ ಪಡೆದರು. ತಮಟೆ, ಉರುಮೆ ಸೇರಿ ಕಲಾತಂಡಗಳ ನಾದ ಮಠದ ಆವರಣವನ್ನು ತುಂಬಿತ್ತು.

‘ಸನ್ಯಾಸಿ ಭೋಗದ ಜೀವನ ಮಾಡದೇ ವಿಧಿಯಂತೆ ನಡೆದುಕೊಳ್ಳಬೇಕು. ಚಿಂದಿ ಬಟ್ಟೆಯನ್ನು ತೊಟ್ಟು, ಕಮಂಡಲ ಹಿಡಿದು ಭೀಕ್ಷೆ ಬೇಡಿ ಜೀವನ ನಡೆಸಬೇಕು. ಕೌದಿ ಚಿಂದಿ ಬಟ್ಟೆಯಿಂದ ತಯಾರು ಮಾಡಿದ ವಸ್ತ್ರ. ಇದನ್ನು ಧರಿಸಿದ ಸನ್ಯಾಸಿಗೆ ಯಾವುದೇ ರೀತಿಯ ಜಾತಿ ಇಲ್ಲ. ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿಯೂ ಕೌದಿ ಪೂಜೆಯನ್ನು ಆಚರಿಸಲಾಗುತ್ತದೆ’ ಎಂದು ಸ್ವಾಮೀಜಿ ಆಶೀರ್ವಚನ ನೀಡಿದರು.

ಉತ್ಸವ ಸಮಿತಿ ಅಧ್ಯಕ್ಷ ಅನಿತ್ ಕುಮಾರ್, ಕಾರ್ಯದರ್ಶಿ ಪ್ರಶಾಂತ್, ನಾಗರಾಜ್ ಸಗಂ, ಸತೀಶ್, ತಿಪ್ಪೇಸ್ವಾಮಿ, ನಿರಂಜನಮೂರ್ತಿ, ಗಾಯತ್ರಿ ಶಿವರಾಂ, ಓಂಕಾರ್, ರುದ್ರೇಶ್, ಮಂಜುನಾಥ್ ಗುಪ್ತ, ಪ್ರಭಂಜನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT