ಭಾನುವಾರ, ಸೆಪ್ಟೆಂಬರ್ 19, 2021
29 °C
* ತಡವಾಗಿ ಬಂದ ಜಿಲ್ಲಾ ಉಸ್ತುವಾರಿ ಸಚಿವರು * ಕಾದು ಸುಸ್ತಾಗಿ ಹೊರ ನಡೆದ ನೂರಾರು ವಿದ್ಯಾರ್ಥಿಗಳು

ಚಿತ್ರದುರ್ಗ: ನಾಮಕಾವಸ್ಥೆಯ ವಿವೇಕಾನಂದರ ಷಿಕಾಗೊ ಉಪನ್ಯಾಸದ ವರ್ಷಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಿತ್ರದುರ್ಗ: ಕಾರ್ಯಕ್ರಮ ಪ್ರಾರಂಭಕ್ಕೂ 1 ಗಂಟೆ ಮುನ್ನವೇ ವಿದ್ಯಾರ್ಥಿಗಳನ್ನು ಕರೆತರಲಾಗಿತ್ತು. ನಿಗದಿತ ಸಮಯಕ್ಕಿಂತಲೂ ಮತ್ತೊಂದು ಗಂಟೆ ಕಾಯುತ್ತಲೇ ಕೂತಿದ್ದರು. ಕಾದು, ಕಾದು ಸುಸ್ತಾದ ಅಲ್ಲಿದ್ದ ಬಹುತೇಕರ ತಾಳ್ಮೆಯ ಕಟ್ಟೆ ಹೊಡೆದು ಹೊರ ನಡೆಯುತ್ತಿದ್ದರು. ಆಯೋಜಕರು ಬಲವಂತವಾಗಿ ತಡೆಹಿಡಿಯಲು ಪ್ರಯತ್ನಿಸುತ್ತಿದ್ದರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ಮಂಗಳವಾರ ಸ್ವಾಮಿ ವಿವೇಕಾನಂದರ ಷಿಕಾಗೊ ಉಪನ್ಯಾಸದ 125 ನೇ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭ ಉದ್ಘಾಟಿಸಲು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ 1 ಗಂಟೆ, 10 ನಿಮಿಷ ತಡವಾಗಿ ಬಂದ ಕಾರಣ ನಾಮಕಾವಸ್ಥೆಯ ಕಾರ್ಯಕ್ರಮವಾಯಿತು.

ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳನ್ನು ಇಡಿದಿಡುವಲ್ಲಿ ಆಯೋಜನೆಯ ನೇತೃತ್ವ ವಹಿಸಿದ್ದವರು ಹರಸಾಹಸ ಪಟ್ಟರು. ಹಾಡು, ಏಕಪಾತ್ರಭಿನಯ ಮೂಲಕ ಸೆಳೆಯುವ ಪ್ರಯತ್ನ ಮಾಡಿದರು. ಕೆಲ ವಿದ್ಯಾರ್ಥಿಗಳು ಉಪನ್ಯಾಸಕರು, ಶಿಕ್ಷಕರ ಮಾತಿಗೂ ಬೆಲೆ ಕೊಡದೆ ಹೊರ ನಡೆದರು. ಇನ್ನೂ ಅನೇಕರು ಕುಳಿತರಾದರೂ ಉಪನ್ಯಾಸ ಕೇಳುವ ವ್ಯವದಾನ ಬಹುತೇಕರಲ್ಲಿ ಇರಲಿಲ್ಲ.

ಸಚಿವ ವೆಂಕಟರಮಣಪ್ಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರ ತತ್ವಾದರ್ಶ ಅಳವಡಿಸಿಕೊಂಡು ಉತ್ತಮ ವ್ಯಕ್ತಿಗಳಾಗಿ ಎಂದು ವಿದ್ಯಾರ್ಥಿ ಸಮೂಹಕ್ಕೆ ಸಲಹೆ ನೀಡಿದರು.

ಉಪನ್ಯಾಸಕ ಕೃಷ್ಣಮೂರ್ತಿ ಮಾತನಾಡಿ, ಶ್ರೀಮಂತ ಕುಟುಂಬದಲ್ಲಿ ಜನಿಸಿದರು ಕೂಡ ತಂದೆಯ ನಿಧನದ ನಂತರ ಸ್ವಾಮಿ ವಿವೇಕಾನಂದರು ಸಾಕಷ್ಟು ಕಷ್ಟಪಟ್ಟರು. ಅಮೆರಿಕಾದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಅವರ ಬಳಿ ಹಣವಿರಲಿಲ್ಲ. ಕೊನೆಗೆ ಶಿಷ್ಯರು ಭಿಕ್ಷೆ ಬೇಡಿ ಹಣ ಸಂಗ್ರಹಿಸಿದರು. ಅಲ್ಲಿಗೆ ಹೋದ ನಂತರವೂ ಅವಕಾಶ ದೊರೆಯದೇ ತಿರಸ್ಕೃತರಾದರು ಎಂದರು.

ಅವಕಾಶ ಸಿಗದ ಅವರು ಷಿಕಾಗೊ ನಗರದ ಹೋಟೆಲ್‌ವೊಂದರಲ್ಲಿ ಉಳಿದರು. ಅಲ್ಲಿನ ದುಬಾರಿ ವೆಚ್ಚ ಜೇಬನ್ನು ಖಾಲಿಯಾಗಿಸಿತ್ತು. ಕೊನೆಗೆ ರೈಲಿನಲ್ಲಿ ಪ್ರಯಾಣಿಸುವಾಗ ಮಿಸ್ ಕ್ಯಾಥರೀನ್ ಪರಿಚಯವಾಯಿತು. ಅವರ ಮೂಲಕ ಪ್ರೊ.ಜೆ.ಎಚ್.ರೈಟ್ ಅವರೊಂದಿಗೆ ಸಂಪರ್ಕ ಬೆಳೆಯಿತು. ರೈಟ್ ಸಹಾಯದಿಂದಲೇ ಜಾಗತಿಕ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡರು. 1893 ರ ಅಂದು ಸಾಮಾನ್ಯ ವ್ಯಕ್ತಿಯಾಗಿದ್ದ ವಿವೇಕಾನಂದರು ಷಿಕಾಗೊದ ಸಮ್ಮೇಳನದಲ್ಲಿ ಮಾತನಾಡಿದ ನಂತರ ವಿಶ್ವವಿಖ್ಯಾತರಾದದ್ದು ಇತಿಹಾಸ ಎಂದು ಬಣ್ಣಿಸಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಬ್ರಹ್ಮನಿಷ್ಠಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ಬಿ.ಎನ್.ಚಂದ್ರಪ್ಪ, ಶಾಸಕರಾದ ಚಂದ್ರಪ್ಪ, ಗೂಳಿಹಟ್ಟಿ ಡಿ.ಶೇಖರ್, ಟಿ.ರಘುಮೂರ್ತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಸದಸ್ಯರಾದ ಆನಂದ್, ಶಿವಮೂರ್ತಿ, ನರಸಿಂಹರಾಜು, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಜಿಲ್ಲಾ ಪಂಚಾಯಿತಿ ಸಿಇಒ ಪಿ.ಎನ್.ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಎಂ.ಜೋಶಿ, ಉಪವಿಭಾಗಾಧಿಕಾರಿ ವಿಜಯಕುಮಾರ್, ತಹಶೀಲ್ದಾರ್ ಮಲ್ಲಿಕಾರ್ಜುನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು