ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭಿಕರ ಮೈನವಿರೇಳಿಸಿದ ‘ಮಲ್ಲಿಹಗ್ಗ’

Last Updated 16 ಫೆಬ್ರುವರಿ 2022, 6:15 IST
ಅಕ್ಷರ ಗಾತ್ರ

ಸಿರಿಗೆರೆ (ಚಿತ್ರದುರ್ಗ): ಆಗಷ್ಟೇ ಮುಸ್ಸಂಜೆಯ ಮಸುಕು ಆವರಿಸುವ ಹೊತ್ತು. ಸಿರಿಗೆರೆಯ ತರಳಬಾಳು ಮಠ ವಿದ್ಯುತ್‌ ದೀಪಾಲಂಕಾರದಲ್ಲಿ ಮಿನುಗುತ್ತಿತ್ತು. ತರಳಬಾಳು ಹುಣ್ಣಿಮೆ ಮಹೋತ್ಸವ ಕಣ್ತುಂಬಿಕೊಳ್ಳಲು ಭಕ್ತರ ದಂಡು ಹರಿದುಬರತೊಡಗಿತ್ತು. ಹಾಡು, ನೃತ್ಯದ ಮೂಲಕ ವಿದ್ಯಾರ್ಥಿಗಳು ಸೃಷ್ಟಿಸಿದ ಸಾಂಸ್ಕೃತಿಕ ಲೋಕ ಹೃನ್ಮನ ಸೆಳೆಯಿತು.

ಮಠದ ಗುರುಶಾಂತೇಶ್ವರ ದಾಸೋಹ ಭವನದ ಮುಂಭಾಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಆಕರ್ಷಕವಾಗಿತ್ತು. ಬಿಳಿ ಬಣ್ಣದ ಭವ್ಯಕಟ್ಟಡಕ್ಕೆ ಎದುರಾಗಿ ಕುಳಿತಿದ್ದ ಭಕ್ತರನ್ನು ಭವ್ಯ ವೇದಿಕೆಯ ಅಲಂಕಾರ ಹಿಡಿದಿಟ್ಟಿತ್ತು. ತೆರೆದ ವೇದಿಕೆಯನ್ನು ನಿರ್ಮಿಸಿದ ಪರಿ ವಿಶೇಷವಾಗಿತ್ತು.

ಸಿರಿಗೆರೆಯ ಶಾಲೆ–ಕಾಲೇಜು ವಿದ್ಯಾರ್ಥಿನಿಯರು ಮಲ್ಲಿಹಗ್ಗ ಪ್ರದರ್ಶನ ಮನಮೋಹಕವಾಗಿತ್ತು. ‘ಶಿವ ಶಂಭೋ ಸ್ವಯಂಭೋ..’ ಹಾಡಿಗೆ ಹಗ್ಗದೊಂದಿಗೆ ನಡೆಸಿದ ಕಸರತ್ತಿಗೆ ಸಭಿಕರ ಮೈನವಿರೇಳಿಸಿತು. ಹಗ್ಗ ಹಾಗೂ ಬೆಂಕಿಯೊಂದಿಗೆ ಪ್ರದರ್ಶಿಸಿದ ಕೌಶಲಕ್ಕೆ ಚೆಪ್ಪಾಳೆಯ ಮಳೆ ಸುರಿಯಿತು. ರಾಜರ ಆಡಳಿತದಲ್ಲಿ ಯುವರಾಣಿಯರ ಸಮರಕಲೆ ಎಂದೇ ಪರಿಗಣಿಸಲಾಗಿದ್ದ ಮಲ್ಲಿಹಗ್ಗವನ್ನು ವಿದ್ಯಾರ್ಥಿನಿಯರು ಕಲಿತು ಪ್ರದರ್ಶಿಸಿದ ಪರಿಗೆ ಎಲ್ಲರೂ ತಲೆದೂಗಿದರು.

ತರಳಬಾಳು ಸಿಬಿಎಸ್‌ಸಿ ಶಾಲೆಯ ಮಕ್ಕಳು ವಚನಗೀತೆಗೆ ನೃತ್ಯ ಪ್ರದರ್ಶಿಸಿದರು. ಭೀಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳ ಬೀಸು ಕಂಸಾಳೆ ಪ್ರೇಕ್ಷಕರನ್ನು ಹಿಡಿದಿಟ್ಟಿತ್ತು. ಶಶಿಧರ ಕೋಟೆ ಮತ್ತು ತಂಡ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ನಡೆಸಿಕೊಟ್ಟರು. ಉತ್ತರಪ್ರದೇಶದ ವಿಷ್ಣುಪ್ರಿಯ ಗೋಸ್ವಾಮಿ ಅವರು ಓಡಿಸ್ಸಿ ನೃತ್ಯ ಹಾಗೂ ತಮಿಳುನಾಡಿನ ಚಿತ್ರಾ ಚಂದ್ರಶೇಖರ್‌ ಅವರು ಭರತನಾಟ್ಯ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT