ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರು ಗ್ಯಾರಂಟಿ ಕಾರ್ಡ್ ನಂಬಿದ್ದು ಸೋಲಿಗೆ ಕಾರಣ: ಶ್ರೀರಾಮುಲು

ಬಿಜೆಪಿ ಆತ್ಮಾವಲೋಕನಾ ಸಭೆಯಲ್ಲಿ ಮಾಜಿ ಸಚಿವ ಶ್ರೀರಾಮುಲು
Published 1 ಜೂನ್ 2023, 14:16 IST
Last Updated 1 ಜೂನ್ 2023, 14:16 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಹಿಂದಿನ ಎಲ್ಲಾ ಚುನಾವಣೆಗಳಿಗೆ ಹೋಲಿಕೆ ಮಾಡಿದಲ್ಲಿ ಈ ಬಾರಿ ಮಹಿಳೆಯರು ಹೆಚ್ಚು ಸಂಘಟಿತರಾಗಿ ಒಂದೇ ಪಕ್ಷಕ್ಕೆ ಮತ ಹಾಕಿರುವುದು ಮೊಳಕಾಲ್ಮುರು ಸೇರಿದಂತೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿಗೆ ಕಾರಣವಾಯಿತು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.

ತಾಲ್ಲೂಕಿನ ಬಿ.ಜಿ. ಕೆರೆಯಲ್ಲಿ ಗುರುವಾರ ನಡೆದ ಬಿಜೆಪಿ ಅಭ್ಯರ್ಥಿ ಎಸ್. ತಿಪ್ಪೇಸ್ವಾಮಿ ಅವರ ಸೋಲಿನ ಆತ್ಮಾವಲೋಕನಾ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿ ಚುನಾವಣೆಯಲ್ಲಿ ಮಹಿಳೆಯರು ಪತಿ ಅಥವಾ ಮನೆಯ ಹಿರಿಯರ ಮಾತು ಕೇಳಿ ಮತ ಹಾಕುತ್ತಿದ್ದರು. ಆದರೆ ಈ ಬಾರಿ ಕಾಂಗ್ರೆಸ್‌ನ ‘ಗ್ಯಾರಂಟಿ ಕಾರ್ಡ್’ ನಂಬಿ ಮತ ಹಾಕಿದ್ದಾರೆ. ಇದು ಸೋಲಿಗೆ ಮುಖ್ಯ ಕಾರಣ. ಮೊಳಕಾಲ್ಮುರು ಕ್ಷೇತ್ರದಲ್ಲಿ ಮತದಾನಕ್ಕೂ 2 ದಿನ ಮುಂಚೆವರೆಗೆ ಬಿಜೆಪಿ ಗೆಲ್ಲುವ ವಾತಾವರಣವಿತ್ತು. ಆದರೆ ಕೊನೆ ಗಳಿಗೆಯಲ್ಲಿ ಏನಾಯಿತು ಎಂಬ ಬಗ್ಗೆ ಪರಾಮರ್ಶೆ ನಡೆಸಬೇಕಿದೆ ಎಂದು ಹೇಳಿದರು.

‘2018ರಲ್ಲಿ ಸೋತ ನಂತರ ರಾಜಕೀಯದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದೆ. ಆದರೆ ಆಸೆ ಹುಟ್ಟಿಸಿ ಬಿಜೆಪಿಗೆ ಕರೆ ತಂದವರೇ ಚುನಾವಣೆಯಲ್ಲಿ ಕೈಕೊಟ್ಟರು. ಬದ್ಧ ವೈರಿದಂತಿದ್ದ ಶ್ರೀರಾಮುಲು ಮತ್ತು ನಾನು ಒಂದಾಗಿದನ್ನು ಸಹಿಸದ ಕೆಲವರು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದರು. ಸೋಲಿನಿಂದ ನಾನು ಎದೆಗುಂದಿಲ್ಲ. ಬರಲಿರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ವರ್ಚಸ್ಸು ತೋರಿಸುತ್ತೇನೆ’ ಎಂದು ಪರಾಜಿತ ಅಭ್ಯರ್ಥಿ ಎಸ್. ತಿಪ್ಪೇಸ್ವಾಮಿ ಹೇಳಿದರು.

‘ಗೆದ್ದಿರುವ ಕಾಂಗ್ರೆಸ್ ಅಭ್ಯರ್ಥಿ ಬೀಗುವುದನ್ನು ಬಿಟ್ಟು ಷಡ್ಯಂತರ ಮಾಡಿರುವ ವ್ಯಕ್ತಿಗಳ ಬಗ್ಗೆ ಹುಷಾರಾಗಿರಬೇಕು. ಮುಂದಿನ ಚುನಾವಣೆಗಳಲ್ಲಿ ನಿಮಗೂ ಮಂಕುಬೂದಿ ಎರಚುವ ಕೆಲಸ ಮಾಡಬಹುದು. ಈ ಬಾರಿ ಗೆದ್ದಿರುವುದು ಕಾಂಗ್ರೆಸ್ ಗೆಲುವಲ್ಲ ಷಡ್ಯಂತರಿಗಳ ಗೆಲುವು’ ಎಂದು ಆರೋಪಿಸಿದರು.

‘ರಾಜ್ಯದ ಅಂದಾಜು 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಗಳು 5 ಸಾವಿರ ಮತಗಳ ಅಂತರದಲ್ಲಿ ಸೋತಿದ್ದಾರೆ. ಇದಕ್ಕೆ ಹಲವು ಕಾರಣಗಳಿವೆ’ ಎಂದು ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಹೇಳಿದರು.

ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ. ಮುರಳಿ, ಜಲಪಾಲಯ್ಯ, ಜಿಂಕಲು ಬಸವರಾಜ್, ಪಾಪೇಶ್ ನಾಯಕ, ಡಾ. ಪಿ.ಎಂ. ಮಂಜುನಾಥ್, ರಾಮರೆಡ್ಡಿ, ಪ್ರಭಾಕರ ಮ್ಯಾಸನಾಯಕ, ಕಾಲುವೇಹಳ್ಳಿ ಶ್ರೀನಿವಾಸ್, ಟಿ. ರೇವಣ್ಣ, ಪಿ. ಶಿವಣ್ಣ, ಎಂ.ವೈ.ಟಿ. ಸ್ವಾಮಿ ಇದ್ದರು.

‘ದೊಡ್ಡ ಆಸೆ ಇಟ್ಟುಕೊಂಡು ಈ ಬಾರಿ ಕ್ಷೇತ್ರಕ್ಕೆ ಮರಳಿದ್ದ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೂ ಅವರು ಆಸೆ ಫಲಿಸಲಿಲ್ಲ ಎಂದು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ತಪ್ಪಿದಕ್ಕೆ ಪರೋಕ್ಷವಾಗಿ ಶ್ರೀರಾಮುಲು ಟೀಕಿಸಿದರು.

‘ಹಿಂದೆಯೂ ಅವರು ಯಾವ ಕೆಲಸ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT