ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: ಅಭಿವೃದ್ಧಿ ಬೇಡುತ್ತಿದೆ ಪಟ್ಟಣದ ಸ್ಮಶಾನ

ಹೆಸರಿಗಷ್ಟೇ ಇದೆ ರುದ್ರಭೂಮಿ
Last Updated 27 ನವೆಂಬರ್ 2022, 2:14 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕು ಕೇಂದ್ರದಲ್ಲಿ ಹೆಸರಿಗಷ್ಟೇ ರುದ್ರಭೂಮಿಯಿದ್ದು, ಅಗತ್ಯ ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ರುದ್ರಭೂಮಿಯ ಸುತ್ತಲೂ ಜಾಲಿ ಗಿಡಗಳು ದಟ್ಟವಾಗಿ ಬೆಳೆದಿದ್ದು, ಅಂತ್ಯಸಂಸ್ಕಾರ ನೆರವೇರಿಸಲು ಬರುವ ಜನರಿಗೆ ನಿಲ್ಲಲೂ ಸ್ಥಳವಕಾಶವಿಲ್ಲ.

ಪಟ್ಟಣದಲ್ಲಿ ಸುಮಾರು 33 ಸಾವಿರ ಜನಸಂಖ್ಯೆ ಇದ್ದು, ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದವರಿಗೆ ಪ್ರತ್ಯೇಕ ಸ್ಮಶಾನಗಳಿವೆ. ಹಿಂದೂ ಸಮುದಾಯದವರು ಇಲ್ಲೇ ಅಂತ್ಯಕ್ರಿಯೆ ನೆರವೇರಿಸುತ್ತಾರೆ. 4 ಎಕರೆ ವಿಸ್ತೀರ್ಣ ಹೊಂದಿರುವ ಸ್ಮಶಾನಕ್ಕೆ ಸುಸಜ್ಜಿತ ಕಾಂಪೌಂಡ್ ಇಲ್ಲ. ಪರಿಣಾಮವಾಗಿ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ. ನೀರಿನ ಸೌಲಭ್ಯ ಇಲ್ಲ. ರುದ್ರಭೂಮಿಯು ಉಬ್ಬು–ತಗ್ಗಿನಿಂದ ಕೂಡಿದ್ದು, ಶವವನ್ನು ಹೊತ್ತು ಸಾಗುವುದು ದುಸ್ತರವಾಗಿದೆ. ಕಸದ ತೊಟ್ಟಿಯ ವ್ಯವಸ್ಥೆ ಇಲ್ಲ. ಪಟ್ಟಣ ಅಲ್ಲದೇ ತಾಲ್ಲೂಕಿನ ಎಲ್ಲಾ ಹಳ್ಳಿಗಳಲ್ಲಿನ ಸ್ಮಶಾನಗಳಿಗೂ ಈ ಸೌಲಭ್ಯಗಳ ಅಗತ್ಯವಿದೆ.

‘ಹಿಂದೂ ರುದ್ರಭೂಮಿ ಅಭಿವೃದ್ಧಿಗಾಗಿ ಸುಮಾರು ₹ 20 ಲಕ್ಷ ಮೀಸಲಿಡಲಾಗಿದೆ. ನೀರಿಗಾಗಿ ಕೊಳವೆಬಾವಿ ಕೊರೆಯಿಸಲಾಗಿದೆ. ಇಲ್ಲಿನ ವಾಚ್ ಮ್ಯಾನ್ ಶೆಡ್ ರಿಪೇರಿ ಮಾಡಿ, ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ರುದ್ರಭೂಮಿಯಲ್ಲಿ ಶವಗಳನ್ನು ಹೂಳಲು ಜಾಗವಿಲ್ಲದ ಕಾರಣ ಪ್ರತ್ಯೇಕ ಸ್ಥಳಕ್ಕೆ ಮನವಿ ಮಾಡಲಾಗಿತ್ತು. ಇದೀಗ 2 ಎಕರೆ ಭೂಮಿ ಗುರುತಿಸಲಾಗಿದೆ. ಇನ್ನೂ ಹೆಚ್ಚಿನ ಸ್ಥಳಾವಕಾಶ ಲಭ್ಯವಾದರೆ ಹೈಟೆಕ್‌ ಸ್ಮಶಾನ ನಿರ್ಮಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಎಸ್.ಡಿ. ನರಸಿಂಹಮೂರ್ತಿ ತಿಳಿಸಿದರು.

ತಾಲ್ಲೂಕಿನ ಬಾಗೂರಿನಲ್ಲಿ ಎಲ್ಲಾ ಸಮುದಾಯದ 2 ಸಾವಿರ ಜನರಿದ್ದಾರೆ. ಬಹುತೇಕರು ತಮ್ಮ ಜಮೀನುಗಳಲ್ಲೇ ಅಂತ್ಯಕ್ರಿಯೆ ನೇರವೇರಿಸುತ್ತಾರೆ. ಜಮೀನು ಕಡಿಮೆ ಇದ್ದವರು ಅಥವಾ ಜಮೀನು ಇಲ್ಲದ ಹಲವರು ಬಾಗೂರು ಕೆರೆ ದಿಬ್ಬದಲ್ಲಿಯೇ ಅಂತ್ಯಕ್ರಿಯೆ ನೇರವೇರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

‘ಸ್ಮಶಾನಕ್ಕಾಗಿ ತಹಶೀಲ್ದಾರ್ ಅವರು 2 ಎಕರೆ ಜಾಗ ಗುರುತಿಸಿ ಪಹಣಿ ನೀಡಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಆರಂಭಿಸಿ, ಭೂಮಿ ಸಮತಟ್ಟು ಮಾಡಿಸಿ, ಅಗತ್ಯ ಸೌಲಭ್ಯ ಕಲ್ಪಿಸಿ, ಅಂತ್ಯಕ್ರಿಯೆಗೆ ಅವಕಾಶ ಕಲ್ಪಿಸಲಾಗುವುದು’ ಎಂದು ಬಾಗೂರು ಗ್ರಾಮ ಪಂಚಾಯಿತಿ ಸದಸ್ಯ ಸಂಜು ವಿ. ತಿಳಿಸಿದರು.

*

ಪ್ರಸ್ತುತ ಬಾಗೂರಿನ ಎರಡೂ ಕಡೆ ಕೆರೆ ತುಂಬಿದ್ದು, ಅಂತ್ಯಕ್ರಿಯೆ ನೇರವೇರಿಸಲು ಪರದಾಡುವಂತಾಗಿದೆ. ರುದ್ರಭೂಮಿಗಾಗಿ ಬಾಗೂರಿನಲ್ಲಿ ಜಾಗ ಗುರುತಿಸಿದ್ದು, ಅಗತ್ಯ ಮೂಲಸೌಲಭ್ಯ ಕಲ್ಪಿಸಿ, ಅಂತ್ಯಕ್ರಿಯೆ ಮಾಡಲು ಅನುಕೂಲ ಮಾಡಿಕೊಡಬೇಕು.
-ರಾಜು ಹೊವಳೇ, ಬಾಗೂರು

*

ಮಾಡದಕೆರೆಯಲ್ಲಿ ಹಿಂದೂ ರುದ್ರಭೂಮಿ ಹೆಸರಿಗೆ ಮಾತ್ರ ಇದೆ. ಜಾಲಿಗಿಡಗಳು ಬೆಳೆದಿದ್ದು, ಒಳ ಹೋಗಲು ಸಾಧ್ಯವಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಗಿಡಗಳನ್ನು ಕಡಿಸಿ, ಸುಸಜ್ಜಿತ ಕಾಂಪೌಂಡ್ ನಿರ್ಮಿಸಿರೆ ಜನರಿಗೆ ಅನುಕೂಲವಾಗುತ್ತದೆ.
-ಸಣ್ಣಕರಿಯಪ್ಪ ಕೆ. ಮಾಡದಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT