ಉಪಕರಣ ತುಟ್ಟಿ, ಏರಿದ ವೈದ್ಯಕೀಯ ವೆಚ್ಚ

7
ವೈದ್ಯಕೀಯ ಕ್ಷೇತ್ರದಲ್ಲಿ ಕಾಣುತ್ತಿದೆ ಪಾರದರ್ಶಕತೆ

ಉಪಕರಣ ತುಟ್ಟಿ, ಏರಿದ ವೈದ್ಯಕೀಯ ವೆಚ್ಚ

Published:
Updated:

ಚಿತ್ರದುರ್ಗ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾದ ಬಳಿಕ ವೈದ್ಯಕೀಯ ಉಪಕರಣಗಳ ಬೆಲೆ ಏರಿಕೆ ಆಗಿದ್ದರೂ, ವೈದ್ಯಕೀಯ ಕ್ಷೇತ್ರ ಪಾರದರ್ಶಕತೆ ಕಡೆಗೆ ದಾಪುಗಾಲು ಹಾಕುತ್ತಿರುವುದು ಬಹುತೇಕ ವೈದ್ಯರು ಮತ್ತು ರೋಗಿಗಳಲ್ಲಿ ಆಶಾಭಾವನೆ ಮೂಡಿಸಿದೆ.

ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರ ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆ ಹೊಂದದಿದ್ದರೂ ನರ್ಸಿಂಗ್‌ ಹೋಂ, ಪಾಲಿಕ್ಲಿನಿಕ್‌ ಹಾಗೂ ಕ್ಲಿನಿಕ್‌ ಸಂಖ್ಯೆ ಹೆಚ್ಚಾಗಿವೆ. ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ಪಡೆದ ರೋಗಿಗಳು ಪಾವತಿಸಿದ ಶುಲ್ಕದಲ್ಲಿ ಸರ್ಕಾರಕ್ಕೆ ತೆರಿಗೆ ಪಾವತಿಯಾಗುತ್ತಿದೆ ಎಂಬ ಭರವಸೆ ಮೂಡುತ್ತಿದೆ. ವೈದ್ಯರು ಹಾಗೂ ಔಷಧ ಅಂಗಡಿಯ ಮಾಲೀಕರಲ್ಲಿಯೂ ಇದು ನಿರಾಳ ಭಾವ ಮೂಡಿಸಿದೆ.

‘ಈ ಹಿಂದೆ ತೆರಿಗೆ ಅಧಿಕಾರಿಗಳು ಆಸ್ಪತ್ರೆಗೂ ಬಂದು ಕಿರುಕುಳ ನೀಡುತ್ತಿದ್ದರು. ಇಂತಹ ತೊಂದರೆ ಒಂದು ವರ್ಷದಿಂದ ತಪ್ಪಿದೆ. ಔಷಧ ಹಾಗೂ ಪರಿಕರಗಳ ವಹಿವಾಟಿನಲ್ಲಿ ನಡೆಯುತ್ತಿದ್ದ ಅಕ್ರಮಕ್ಕೂ ಕಡಿವಾಣ ಬಿದ್ದಿದೆ. ಎಲ್ಲರೂ ಸರಿಯಾದ ಬಿಲ್‌ ನೀಡುತ್ತಿದ್ದಾರೆ. ಸಿರಿಂಜ್‌, ಗ್ಲೌಸ್‌, ಕಾಟನ್‌ ಸೇರಿ ಬಹುತೇಕ ಉಪಕರಣಗಳು ಎಲ್ಲೆಡೆ ಏಕರೂಪದ ದರಕ್ಕೆ ಸಿಗುತ್ತಿವೆ’ ಎನ್ನುತ್ತಾರೆ ದಂತವೈದ್ಯ ಡಾ. ಸಂತೋಷ್‌ಕುಮಾರ್‌.

ವೈದ್ಯಕೀಯ ಕ್ಷೇತ್ರದಲ್ಲಿ ಬಳಸುವ ಉಪಕರಣಗಳ ಮೇಲೆ 2017ರ ಜುಲೈಗೂ ಮುನ್ನ ಶೇ 5.5ರಷ್ಟು ವ್ಯಾಟ್‌ ವಿಧಿಸಲಾಗುತ್ತಿತ್ತು. ಅಬಕಾರಿ ಸುಂಕ ಸೇರಿ ಬಹುತೇಕ ಪರಿಕರಗಳ ಮೇಲಿನ ತೆರಿಗೆ ಶೇ 9.5ನ್ನು ಮೀರುತ್ತಿರಲಿಲ್ಲ. ಜಿಎಸ್‌ಟಿ ಜಾರಿಯಾದ ಬಳಿಕ ತೆರಿಗೆಯ ಪ್ರಮಾಣ ಶೇ 12ಕ್ಕೆ ಏರಿಕೆಯಾಗಿದೆ. ಪರೋಕ್ಷ ತೆರಿಗೆಯ ಹೊರೆಯನ್ನು ರೋಗಿಗಳಿಗೆ ವರ್ಗಾಯಿಸಿದ ಪರಿಣಾಮ ವೈದ್ಯಕೀಯ ವೆಚ್ಚ ಏರುತ್ತಿದೆ.

ಆಯುರ್ವೇದ ಔಷಧಗಳ ಮೇಲೆ ಈ ಹಿಂದೆ ಶೇ 4 ರಷ್ಟು ವ್ಯಾಟ್‌ ಹಾಗೂ ಶೇ 1.5ರಷ್ಟು ಅಬಕಾರಿ ಸುಂಕ ವಿಧಿಸಲಾಗುತ್ತಿತ್ತು. ಜಿಎಸ್‌ಟಿ ಜಾರಿಯಾದ ಬಳಿಕ ತೆರಿಗೆಯ ಪ್ರಮಾಣ ಶೇ 12ಕ್ಕೆ ಏರಿತು. ಇದರಿಂದ ಆಯುರ್ವೇದ ಔಷಧಗಳು ದುಬಾರಿ ಆಗಿದ್ದವು. ಬ್ರಾಂಡ್‌ ಅಲ್ಲದ ಆಯುರ್ವೇದದ ಔಷಧದ ಮೇಲಿನ ತೆರಿಗೆಯ ಪ್ರಮಾಣವನ್ನು ಅಕ್ಟೋಬರ್‌ನಲ್ಲಿ ಶೇ 5ಕ್ಕೆ ಇಳಿಕೆ ಮಾಡಲಾಗಿದೆ.

‘ಕೆಲ ಉಪಕರಣಗಳ ಬೆಲೆಯಲ್ಲಿ ಏರಿಕೆ ಉಂಟಾದ ಪರಿಣಾಮ ಆರಂಭದಲ್ಲಿ ಕೆಲ ತೊಂದರೆಗಳು ಎದುರಾದವು. ಬಳಿಕ ಜಿಎಸ್‌ಟಿ ಮಂಡಳಿ ಕೆಲ ಔಷಧಗಳ ಮೇಲಿನ ತರಿಗೆ ಕಡಿಮೆ ಮಾಡಿತು. ಆದರೆ, ಔಷಧಗಳನ್ನು ಜಿಎಸ್‌ಟಿಯಿಂದ ಹೊರಗೆ ಇಡುವುದು ಒಳಿತು’ ಎಂಬುದು ಹೆಸರು ಹೇಳಲು ಇಚ್ಛಿಸದ ವೈದ್ಯಕೀಯ ಪರಿಕರ ಪೂರೈಕೆದಾರರೊಬ್ಬರ ಅಭಿಪ್ರಾಯ.

ದಂತ ಚಿಕಿತ್ಸಾಲಯಗಳಲ್ಲಿ ಬಳಸುವ ಬಹುತೇಕ ಪರಿಕರಗಳ ಬೆಲೆ ಏರಿಕೆಯಾಗಿದೆ. ಹಲ್ಲಿಗೆ ತುಂಬುವ ಬೆಳ್ಳಿಯ ಪುಡಿ, ಹಲ್ಲಿಗೆ ಮುಚ್ಚುವ ಮಿಶ್ರಲೋಹ, ಸೆರಾಮಿಕ್‌ ಕವಚದ ಬೆಲೆ ಹೆಚ್ಚಾಗಿದೆ. ಆದರೆ, ಇದನ್ನು ರೋಗಿಗಳ ಮೇಲೆ ಹಾಕಲು ದಂತವೈದ್ಯರು ಹಿಂದೇಟು ಹಾಕುತ್ತಿದ್ದಾರೆ. ತೆರಿಗೆಯ ಹೊರೆಯನ್ನು ತಾವೇ ಭರಿಸಿ, ಹಿಂದಿನ ಬೆಲೆಗೆ ಸೇವೆ ಒದಗಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !