ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾಶ್ರೀ ಪೀಠತ್ಯಾಗಕ್ಕೆ ಹೆಚ್ಚಿದ ಒತ್ತಡ

ವೀರಶೈವ ಲಿಂಗಾಯತ ಸಮಾಜದ ಮುಖಂಡರ ಸಮಾಲೋಚನಾ ಸಭೆ
Last Updated 29 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಜೈಲು ಸೇರಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಪೀಠತ್ಯಾಗ ಮಾಡುವಂತೆ ಭಕ್ತರು ಹೇರುತ್ತಿರುವ ಒತ್ತಡ ದಿನಕಳೆದಂತೆ ತೀವ್ರಗೊಳ್ಳುತ್ತಿದೆ.

ಚಿತ್ರದುರ್ಗ ತಾಲ್ಲೂಕಿನ ಸೀಬಾರದಲ್ಲಿರುವ ಎಸ್‌.ನಿಜಲಿಂಗಪ್ಪ ಸ್ಮಾರಕದಲ್ಲಿ ಗುರುವಾರ ನಡೆದ ವೀರಶೈವ ಲಿಂಗಾಯತ ಸಮಾಜದ ಮುಖಂಡರ ಸಮಾಲೋಚನಾ ಸಭೆಯಲ್ಲಿ ಈ ಬಗ್ಗೆ ಒಕ್ಕೊರಲ ಆಗ್ರಹ ಕೇಳಿಬಂತು.

ಸಮುದಾಯದ ಮುಖಂಡರು ಮೂರು ದಿನಗಳ ಹಿಂದೆ ಪ್ರಮುಖರಿಗೆ ಪತ್ರ ರವಾನಿಸಿ ಸಭೆಗೆ ಆಹ್ವಾನಿಸಿದ್ದರು. ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಸೇರಿ ರಾಜ್ಯದ ಹಲವೆಡೆಗಳಿಂದ ಭಕ್ತರು ಆಗಮಿಸಿದ್ದರು. ಪ್ರತಿಯೊಬ್ಬರ ಹೆಸರು ನೋಂದಾಯಿಸಿಕೊಂಡು ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಯಿತು. ಮಠದ ಪ್ರಸ್ತುತ ಸ್ಥಿತಿ, ಮುಂದಿನ ನಡೆಯ ಬಗ್ಗೆ ಅನೇಕರು ಅಭಿಪ್ರಾಯ ಹಂಚಿಕೊಂಡರು.

ತಲೆ ತಗ್ಗಿಸುವ ಸ್ಥಿತಿ: ‘ಸಮಾಜದಲ್ಲಿ ತಲೆ ಎತ್ತಿ ನಡೆಯುತ್ತಿದ್ದ ಸಮುದಾಯವು ತಲೆ ತಗ್ಗಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಂಡು, ಕೇಳರಿಯದ ಆರೋಪವೊಂದು ಎದೆಯಲ್ಲಿ ಅಳುಕು ಮೂಡಿಸಿದೆ. ಧಾರ್ಮಿಕ ಸಂಸ್ಥೆಯ ಮುಖ್ಯಸ್ಥರ ಮೇಲೆ ಬಂದಿರುವ ಗುರುತರ ಆರೋಪದಿಂದ ಮಠಕ್ಕೆ ಕಳಂಕ ಅಂಟಿದೆ’ ಎಂದು ಮಾಜಿ ಶಾಸಕ ಪಿ.ರಮೇಶ್‌ ಬೇಸರ ವ್ಯಕ್ತಪಡಿಸಿದರು.

‘ಆರೋಪ, ತಪ್ಪಿನ ಬಗ್ಗೆ ತೀರ್ಮಾನ ಹೊರಬೀಳುವುದಕ್ಕೆ ಇನ್ನೂ ಕಾಲಾವಕಾಶ ಹಿಡಿಯುತ್ತದೆ. ಅಲ್ಲಿಯವರೆಗೆ ಮಠ ಮುನ್ನಡೆಯಬೇಕಿದೆ. ವ್ಯಕ್ತಿಗತವಾಗಿ ಸಮಾಜದ ಪ್ರತಿಯೊಬ್ಬರಿಗೂ ನೋವಾಗಿದೆ. ಇಂತಹ ಸಂದರ್ಭದಲ್ಲಿ ಒಗ್ಗೂಡಿ ನಡೆಯುವ ಅಗತ್ಯವಿದೆ. ಮಠ ಶಾಶ್ವತವೇ ಹೊರತು ಸ್ವಾಮೀಜಿ ಅಲ್ಲ. ಸಮುದಾಯ ಮತ್ತೆ ತಲೆ ಎತ್ತಿ ನಡೆಯುವಂತೆ ಆಗಬೇಕು’ ಎಂದು ಅಭಿಪ್ರಾಯಪಟ್ಟರು.

ಉನ್ನತ ಸಮಿತಿ ನೇಮಿಸಿ: ‘ಮಠದ ಧಾರ್ಮಿಕ ಕೈಂಕರ್ಯ, ಎಸ್‌ಜೆಎಂ ವಿದ್ಯಾಪೀಠದ ಶಿಕ್ಷಣ ಸಂಸ್ಥೆಗಳ ದೈನಂದಿನ ಕಾರ್ಯಚಟುವಟಿಕೆಗೆ ಅನುಕೂಲವಾಗುವಂತೆ ಉನ್ನತ ಸಮಿತಿ ನೇಮಿಸಬೇಕು. ಎಂಜಿನಿಯರಿಂಗ್‌, ವೈದ್ಯಕೀಯ ಹಾಗೂ ಇತರ ಶಿಕ್ಷಣ ಸಂಸ್ಥೆಗಳಿಗೆ ಪ್ರತ್ಯೇಕ ಆಡಳಿತಾಧಿಕಾರಿ ನೇಮಕ ಆಗುವುದು ಸೂಕ್ತ’ ಎಂದು ಮಾಜಿ ಶಾಸಕ ಎಂ.ಬಿ.ತಿಪ್ಪೇರುದ್ರಪ್ಪ ಸಭೆಯಲ್ಲಿ ತಮ್ಮ ಅಭಿಪ್ರಾಯ ತಿಳಿಸಿದರು.

‘ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣದ ವಿರುದ್ಧ ಗಂಭೀರ ಸ್ವರೂಪದ ಆರೋಪ ಕೇಳಿಬಂದಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಅವರು ಪೀಠತ್ಯಾಗ ಮಾಡಬೇಕಿತ್ತು. ಪೀಠತ್ಯಾಗದ ವಿಚಾರಕ್ಕೆ ಸೀಮಿತಗೊಳಿಸಿ ಸಭೆಯ ಚರ್ಚೆ ನಡೆಸಬೇಕು. ಅವರ ಹೆಸರು ಉಲ್ಲೇಖಿಸಿ ಚರ್ಚೆ ನಡೆಸಿದರೆ ತಪ್ಪಾಗದು’ ಎಂದು ಹೇಳಿದರು.

ಗುರುಪೀಠ ಉಳಿಯಬೇಕು: ‘ಸಭೆಗೆ ಸೇರಿರುವ ಎಲ್ಲರೂ ಮುರುಘಾ ಮಠದ ಭಕ್ತರು. ಮುರುಘಾ ಪರಂಪರೆ, ಗುರುಪೀಠ ಉಳಿಯಬೇಕು ಎಂಬ ಕಾಳಜಿ ಇರುವವರು. ಶೂನ್ಯಪೀಠದ ಪರಂಪರೆ ಮುಂದುವರಿಯಲು ಬಸವತತ್ವ ಪಾಲನೆಯಾಗಬೇಕು. ಗಂಭೀರ ಆರೋಪ ಎದುರಿಸುತ್ತಿರುವ ಶಿವಮೂರ್ತಿ ಮುರುಘಾ ಶರಣರು ಪೀಠತ್ಯಾಗ ಮಾಡಬೇಕು’ ಎಂದು ಉದ್ಯಮಿ ಸುರೇಶ್‌ ಬಾಬು ಆಗ್ರಹಿಸಿದರು.

‘ತೇಜೋವಧೆ ನಿಲ್ಲಿಸೋಣ’

‘ನಾವು ಸಂಕಷ್ಟದ ‍ಸ್ಥಿತಿಗೆ ಸಿಲುಕಿದ್ದೇವೆ. ಇಂತಹ ಸಂದರ್ಭದಲ್ಲಿ ತೇಜೋವಧೆ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಆಡುವ ಮಾತಿನ ಮೇಲೆ ನಿಯಂತ್ರಣ ಇರಬೇಕು. ಮುಂದೆ ಆಗಬಹುದಾದ ಅನಾಹುತಗಳನ್ನು ಗಮನದಲ್ಲಿ ಇಟ್ಟುಕೊಂಡು ಮಾತನಾಡಬೇಕು’ ಎಂದು ವಿಧಾನಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ಸಲಹೆ ನೀಡಿದರು.

‘ಅಕ್ಷರ, ಅನ್ನ ದಾಸೋಹ ಮಾಡಿದ ಪರಂಪರೆ ಮುರುಘಾ ಮಠಕ್ಕೆ ಇದೆ. ಹಿರಿಯ ಗುರುಗಳು ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮಠದ ಸಂಕಷ್ಟದ ಸಂದರ್ಭವನ್ನು ದುರುಪಯೋಗ ಮಾಡಿಕೊಳ್ಳಲು ಪ್ರಯತ್ನಿಸಿದರೆ ಸುಟ್ಟು ಬೂದಿಯಾಗುವುದು ನಿಶ್ಚಿತ’ ಎಂದರು.

‘ಮಠದ ಆಡಳಿತಾತ್ಮಕ ವಿಚಾರದಲ್ಲಿ ಕೆಲ ತಪ್ಪುಗಳು ಆಗಿರುವುದು ನಿಜ. ಇಂತಹ ತಪ್ಪುಗಳು ಮುಂದುವರಿಯಬಾರದು. ಮಠಕ್ಕೆ ನೇಮಕಗೊಂಡ ಕಾರ್ಯದರ್ಶಿಗಳು ಭಕ್ತರ ಸಲಹೆ ಪಡೆಯಬೇಕು. ಭಕ್ತರ ಅಭಿಪ್ರಾಯಕ್ಕೆ ಸದಾ ಬಾಗಿಲು ಮುಚ್ಚಿಕೊಳ್ಳುವುದು ಸರಿಯಲ್ಲ’ ಎಂದು ಅಸಮಾಧಾನ ಹೊರಹಾಕಿದರು.

ಶರಣರನ್ನು ಭೇಟಿಯಾದ ಮಠಾಧೀಶರು

ಜಿಲ್ಲಾ ಕಾರಾಗೃಹದಲ್ಲಿರುವ ಶಿವಮೂರ್ತಿ ಮುರುಘಾ ಶರಣರನ್ನು ಮಠಾಧೀಶರು ಗುರುವಾರ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಮುರುಘಾ ಮಠದ ಪ್ರಭಾರ ಪೀಠಾಧ್ಯಕ್ಷ ಮಹಾಂತ ರುದ್ರೇಶ್ವರ ಸ್ವಾಮೀಜಿ ಹಾಗೂ ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಶರಣರನ್ನು ಭೇಟಿ ಮಾಡಿದ್ದಾರೆ. ಸೀಬಾರದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮುಖಂಡರ ಸಭೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಈ ಭೇಟಿ ನಡೆದಿದ್ದು ಕುತೂಹಲ ಕೆರಳಿಸಿದೆ.

ಗದ್ದುಗೆ ದರ್ಶನಕ್ಕೆ ಮಠಕ್ಕೆ ತೆರಳಿದಾಗ ಕಣ್ಣೀರು ಹಾಕಿದ್ದೇ ಹೆಚ್ಚು. ಮಠದ ನೈಜ ಭಕ್ತರನ್ನು ಪೀಠಾಧ್ಯಕ್ಷರು ದೂರ ಮಾಡಿದ್ದರು. ಪೀಠಾಧ್ಯಕ್ಷರನ್ನು ದಾರಿ ತಪ್ಪಿಸಿದವರು ಮಠದಿಂದ ದೂರವಾಗಬೇಕು.

- ಪದ್ಮಾವತಿ, ಎಸ್‌ಜೆಎಂ ಕಾಲೇಜು ಉದ್ಯೋಗಿ

ನೂತನ ಪೀಠಾಧ್ಯಕ್ಷರ ನೇಮಕಕ್ಕೆ ಕಾನೂನಾತ್ಮಕ ತೊಡಕುಗಳಿವೆ. ಪೀಠಾಧ್ಯಕ್ಷರ ಬದಲಾವಣೆ ಮಾಡುವ ಅಧಿಕಾರ ಜಿಲ್ಲಾ ನ್ಯಾಯಾಧೀಶರಿಗೆ ಮಾತ್ರ ಇದೆ. ಕಾನೂನು ತಜ್ಞರ ತಂಡ ಶ್ರಮಿಸಬೇಕು.

- ಚಂದ್ರಶೇಖರ್‌, ವಕೀಲ

ಮುರುಘಾ ಮಠದ ಉಳಿವಿಗೆ ಸಮುದಾಯ ಬೆಂಬಲವಾಗಿ ನಿಲ್ಲಬೇಕಿದೆ. ಮಠದ ಪರಂಪರೆಯನ್ನು ಉಳಿಸಿಕೊಳ್ಳಲು ನಡೆಯುವ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಯಾಗಬೇಕಿದೆ.

- ಮಹಡಿ ಶಿವಮೂರ್ತಿ, ಜಿಲ್ಲಾ ಘಟಕದ ಅಧ್ಯಕ್ಷ ವೀರಶೈವ ಲಿಂಗಾಯತ ಮಹಾಸಭಾ

ಅಶಕ್ತರಿಗೆ ಆಶ್ರಯ ನೀಡಿ ವಿದ್ಯಾದಾನ ಮಾಡಿದ ಪರಂಪರೆ ಮಠಕ್ಕಿದೆ. ರಾಜ್ಯದ ವಿವಿಧೆಡೆಯ 400ಕ್ಕೂ ಅಧಿಕ ಶಾಖಾ ಮಠಗಳು ಇದ್ದವು. ಇದರಲ್ಲಿ ಕೆಲವು ಮಾತ್ರ ಉಳಿದಿವೆ. ಮಠ ಸಂಕಷ್ಟ ಎದುರಿಸಿ ಬೆಳೆಯಲಿದೆ.

- ಪ್ರೊ.ಬಿ.ರಾಜಶೇಖರಪ್ಪ, ಇತಿಹಾಸ ಸಂಶೋಧಕ

ಮಠದ ಪರಂಪರೆ ಪ್ರಶ್ನಾತೀತ. ಮಠದ ಪೀಠಾಧ್ಯಕ್ಷರಿಂದ ಕೆಲ ತಪ್ಪು, ದೋಷಗಳು ಸಂಭವಿಸಿರಬಹುದು. ಅವುಗಳ ನಿವಾರಣೆಯ ಕೆಲಸ ಮಾತ್ರ ಆಗಬೇಕು. ಪೀಠಾಧ್ಯಕ್ಷರು ಬದಲಾಗಬೇಕು.

- ಕೆ.ಎಸ್‌.ಕಲ್ಮಠ, ಕಾರ್ಯದರ್ಶಿ ಹೊಸದುರ್ಗ ಶಾಖಾ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT