ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯದುವೀರರಿಂದ ವಿವಿ ಸಾಗರಕ್ಕೆ ಬಾಗಿನ ಅರ್ಪಣೆ

Last Updated 6 ಜನವರಿ 2023, 6:17 IST
ಅಕ್ಷರ ಗಾತ್ರ

ಹಿರಿಯೂರು: ಮಧ್ಯ ಕರ್ನಾಟಕದ ಜಲಪಾತ್ರೆ ಎಂದೇ ಖ್ಯಾತಿ ಪಡೆದಿರುವ ತಾಲ್ಲೂಕಿನ ವಾಣಿ ವಿಲಾಸ ಜಲಾಶಯ 89 ವರ್ಷಗಳ ನಂತರ ಭರ್ತಿಯಾಗಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಗುರುವಾರ ವಾಣಿವಿಲಾಸ ಜಲಾಶಯಕ್ಕೆ ಶಾಸ್ತ್ರೋಕ್ತವಾಗಿ ಗಂಗಾ ಪೂಜೆ ನೇರವೇರಿಸಿ, ಬಾಗಿನ ಅರ್ಪಿಸಿದರು.

ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ವಿವಿಧ ಪಕ್ಷಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬಾಗಿನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯದುವೀರರು ಹಿರಿಯೂರು ನಗರದಲ್ಲಿರುವ ತೇರುಮಲ್ಲೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ, ಅಲ್ಲಿಂದ ನೇರವಾಗಿ ವಾಣಿವಿಲಾಸಪುರಕ್ಕೆ ತೆರಳಿ, ‘ಅಣೆಕಟ್ಟೆಯ ರಕ್ಷಕಿ’ ಎಂದೇ ಖ್ಯಾತಿ ಪಡೆದಿರುವ ಕಣಿವೆ ಮಾರಮ್ಮ ದೇವಿಗೆ ಪೂಜೆ ಸಲ್ಲಿಸಿದರು.

ಜಲಾಶಯದ ಬಲಭಾಗದ ಮಂಟಪದ ಕೆಳಗಿನ ಮೆಟ್ಟಿಲುಗಳನ್ನು ಇಳಿದ ಒಡೆಯರ್ ಅವರು ಗಂಗಾಪೂಜೆ ಸಲ್ಲಿಸಿದರು. ಮಾಜಿ ಸಚಿವ ಡಿ.ಸುಧಾಕರ್, ರಾಜ್ಯ ಗೊಲ್ಲರ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ನಗರಸಭಾಧ್ಯಕ್ಷೆ ಗೀತಾ ಗಂಗಾಧರ್, ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ನಾಗೇಂದ್ರ ನಾಯ್ಕ್, ಅಜ್ಜಣ್ಣ, ಎಂ.ಡಿ. ಸಣ್ಣಪ್ಪ, ಶಿವರಂಜನಿ, ಖಾದಿ ರಮೇಶ್, ಡಾ.ಸುಜಾತಾ, ಚಂದ್ರಪ್ಪ, ಹರೀಶ್, ಡಾ.ಕೆ.ಟಿ. ಪ್ರಕಾಶ್, ಸಿ.ಎನ್. ಸುಂದರ್, ಆಲೂರು ಸಿದ್ದರಾಮಣ್ಣ ಮೊದಲಾದವರು ಸಾಥ್ ನೀಡಿದರು.

ಬಾಗಿನ ಸಮರ್ಪಣೆ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸ್ವಲ್ಪ ಹೊತ್ತು ಹಾಜರಿದ್ದ ಯದುವೀರರು ಭಾಷಣ ಮಾಡದೆ ನಿರ್ಗಮಿಸಿದರು. ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮೈಸೂರು ಒಡೆಯರ ಕೊಡುಗೆಯನ್ನು
ಸ್ಮರಿಸಿದರು.

ಪುತ್ಥಳಿ ಅನಾವರಣ; ಸಮಯ ನಿಗದಿಗೆ ಮನವಿ: ವಾಣಿ ವಿಲಾಸ ಜಲಾಶಯ ನಿರ್ಮಾಣಕ್ಕೆ ಕಾರಣಕರ್ತರಾಗಿರುವ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ರಾಜಮಾತೆ ಕೆಂಪ ನಂಜಮ್ಮಣ್ಣಿ ಅವರ ಪ್ರತಿಮೆ ಅನಾವರಣಕ್ಕೆ ದಿನಾಂಕ ನಿಗದಿ ಪಡಿಸುವಂತೆ ತೇರು ಮಲ್ಲೇಶ್ವರ ದೇವಾಲಯದಲ್ಲಿ ಯದುವೀರರನ್ನು ಭೇಟಿ ಮಾಡಿದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮನವಿ ಮಾಡಿದರು.

ನೀರಸ ಕಾರ್ಯಕ್ರಮ; ಹಿರಿಯೂರಿನ ಇತಿಹಾಸಕ್ಕೆ ಕಪ್ಪು ಚುಕ್ಕೆ: ‘ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಆಹ್ವಾನಿಸಿ ನಡೆಸಿದ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮ ಅತ್ಯಂತ ನೀರಸವಾಗಿದ್ದು, ಹಿರಿಯೂರಿನ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿಯಲಿದೆ’ ಎಂದು ನಗರಸಭಾ ಸದಸ್ಯ ಕೇಶವಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.

‘ಮೈಸೂರು ಒಡೆಯರ ತ್ಯಾಗ, ಪರಿಶ್ರಮ, ಮುಂದಾಲೋಚನೆ, ಜನಪರ ಕಾಳಜಿಯ ದ್ಯೋತಕವಾಗಿ ನಿರ್ಮಾಣಗೊಂಡಿರುವ ವಾಣಿವಿಲಾಸ ಜಲಾಶಯಕ್ಕೆ ಯದುವೀರರನ್ನು ಆಹ್ವಾನಿಸಿದ್ದು ಸಂತಸದ ಸಂಗತಿ. ಆದರೆ, ಆಯೋಜಕರು ಅದ್ಧೂರಿ ಸಮಾರಂಭಕ್ಕೆ ಯಾವುದೇ ಸಿದ್ಧತೆ ಮಾಡಿಕೊಳ್ಳದ ಕಾರಣ ನೀರಸವಾಗಿ ಮುಕ್ತಾಯವಾಯಿತು. ಭದ್ರಾ ನೀರಿಗಾಗಿ ಹೋರಾಟ ಮಾಡಿದವರ, ಸಾಮಾಜಿಕ ಕಳಕಳಿ ಇರುವವರ, ಸರ್ವಪಕ್ಷ ಮುಖಂಡರ, ರೈತ ಸಂಘಟನೆಗಳ ವಿವಿಧ ಬಣಗಳ ಸಭೆ ಕರೆದು ಚರ್ಚಿಸಿದ್ದರೆ ಸಮಾರಂಭ ಖಂಡಿತ ಯಶಸ್ವಿಯಾಗುತ್ತಿತ್ತು’ ಎಂದು ಅವರು ತಿಳಿಸಿದ್ದಾರೆ.

‘ಆಯೋಜಕರು ಇಂತಹ ಕಾರ್ಯಕ್ರಮ ನಡೆಸಿದ್ದಕ್ಕೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮೈಸೂರಿನ ರಾಜವಂಶಸ್ಥರಿಂದ ಗಂಗಾಪೂಜೆ ಮಾಡಿಸಿದ್ದನ್ನು ಮುಂಬರುವ ವಿಧಾನಸಭಾ ಚುನಾವಣೆಗೆ ಯಾರೂ ಬಳಸಿಕೊಳ್ಳ ಬಾರದು’ ಎಂದು ಕೇಶವಮೂರ್ತಿ ತಾಕೀತು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT