ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾನ್ಯ ಸಂಗ್ರಹ ಕಂಟೇನರ್‌ ಸದ್ದು

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ
Last Updated 29 ಆಗಸ್ಟ್ 2019, 14:27 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಕ್ಷರ ದಾಸೋಹದ ಧಾನ್ಯಗಳನ್ನು ಸಂಗ್ರಹಿಸಲು ಖರೀದಿಸಿದ ಕಂಟೇನರ್‌ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ಬಿರುಸಿನ ಚರ್ಚೆ ನಡೆಯಿತು. ಅವ್ಯವಹಾರದ ತನಿಖೆ ನಡೆಸುತ್ತಿರುವ ಸಮಿತಿ ಹಾಗೂ ಸದಸ್ಯರ ನಡುವೆ ವಾಗ್ವಾದಕ್ಕೆ ಇದು ಎಡೆ ಮಾಡಿಕೊಟ್ಟಿತು.

ಬಿಆರ್‌ಎಫ್‌ ಯೋಜನೆಯಡಿ ಗ್ರಾಮ ಪಂಚಾಯಿತಿ ಹಂತದಲ್ಲಿ ಅಕ್ಷರ ದಾಸೋಹ ಕೇಂದ್ರಗಳಿಗೆ ಧಾನ್ಯ ಸಂಗ್ರಹಿಸುವ ಕಂಟೇನರ್‌ ಖರೀದಿಗೆ ಜಿಲ್ಲಾ ಪಂಚಾಯಿತಿ ₹ 1.48 ಕೋಟಿ ಅನುದಾನ ನೀಡಿದೆ. ಸ್ಟೀಲ್‌ ಕಂಟೇನರ್‌ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಗೆ ಡಿ.ಕೆ.ಶಿವಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ವರ್ಷ ಕಳೆದರು ವರದಿ ನೀಡದ ಸಮಿತಿಯ ಬಗ್ಗೆ ಸದಸ್ಯೆ ಸೌಭಾಗ್ಯ ಬಸವರಾಜನ್‌ ಸಾಮಾನ್ಯ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದು ಗದ್ದಲಕ್ಕೆ ಕಾರಣವಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಟಿ.ಗುರುಮೂರ್ತಿ ಇದೇ ವಿಷಯನ್ನು ಜೂನ್‌ ತಿಂಗಳ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಇದರ ಅನುಪಾಲನಾ ವರದಿಯ ಚರ್ಚೆಯ ವೇಳೆ ಕಂಟೇನರ್‌ಗಳನ್ನು ಸಭೆಗೆ ತರಿಸಿದ ಸೌಭಾಗ್ಯ ಅವರ ನಡೆಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದರು.

‘ದೊಡ್ಡಸಿದ್ದವ್ವನಹಳ್ಳಿ ಗ್ರಾಮ ಪಂಚಾಯಿತಿ ₹ 93 ಸಾವಿರಕ್ಕೆ 9 ಕಂಟೇನರ್‌ ಖರೀದಿಸಿದೆ. ಇದೇ ಅನುದಾನದಲ್ಲಿ ಜೇನುಕೋಟೆಯಲ್ಲಿ ಉತ್ತಮ ಗುಣಮಟ್ಟದ 36 ಕಂಟೇನರ್‌ ಖರೀದಿಸಲಾಗಿದೆ. ತನಿಖೆಗೆ ನೇಮಿಸಿದ ಸಮಿತಿ ವರ್ಷ ಕಳೆದರೂ ವರದಿ ನೀಡಿಲ್ಲ. ಇನ್ನೂ ಎಷ್ಟು ದಿನ ಈ ತನಿಖೆಗೆ ಅವಕಾಶವಿದೆ’ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದರು.

ಇದರಿಂದ ಅಸಮಾಧಾನಗೊಂಡ ಸಮಿತಿ ಮುಖ್ಯಸ್ಥ ಶಿವಮೂರ್ತಿ, ‘189 ಗ್ರಾಮ ಪಂಚಾಯಿತಿಗಳ ಪೈಕಿ ನೂರಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳಿಗೆ ಸಮಿತಿ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕಳಪೆ ಗುಣಮಟ್ಟದ ಕಂಟೇನರ್‌ ಖರೀದಿಸಿರುವುದು ಗಮನಕ್ಕೆ ಬಂದಿದೆ. ಎಲ್ಲ ಶಾಲೆಗಳಲ್ಲಿ ಪರಿಶೀಲಿಸಲು ಕಾಲಾವಕಾಶ ಹಿಡಿಯುತ್ತದೆ. ಬಹಿರಂಗ ಚರ್ಚೆಗೆ ಆಹ್ವಾನಿಸಿ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ದೂರಿದರು.

ಸದಸ್ಯರಾದ ಕೃಷ್ಣಮೂರ್ತಿ, ಮುಂಡರಗಿ ನಾಗರಾಜ ಸೇರಿ ಅನೇಕರು ಧ್ವನಿಗೂಡಿಸಿದರು. ಈ ವೇಳೆ ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.

‘ನನ್ನ ಕ್ಷೇತ್ರದ ಐದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂಟೇನರ್‌ ಪೂರೈಕೆ ಮಾಡಿಲ್ಲ. ಆದರೆ, ಇದರ ಹಣ ಮಾತ್ರ ಪಾವತಿ ಆಗಿದೆ. ಇದು ಅವ್ಯವಹಾರ ಅಲ್ಲವೇ’ ಎಂದು ಒಬಳೇಶ್‌ ಕೆಣಕಿದರು.

ಮಧ್ಯಪ್ರವೇಶಿಸಿದ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್‌, ‘ತನಿಖೆಯ ವಿಚಾರವನ್ನು ಸಭೆಗೆ ಎಳೆದು ತಂದಿರುವುದು ಸರಿಯಲ್ಲ. ಕಂಟೇನರ್‌ ಗುಣಮಟ್ಟ ಪರಿಶೀಲನೆಗೆ ನೇಮಿಸಿದ ಸಮಿತಿ ವರದಿ ನೀಡಲಿ. ಅದರ ಆಧಾರದ ಮೇಲೆ ಚರ್ಚೆ ಮಾಡೋಣ’ ಎಂದರು.

ತನಿಖಾ ಸಮಿತಿಗೆ ಕಾಲಮಿತಿ ನಿಗದಿಪಡಿಸುವಂತೆ ಗುರುಮೂರ್ತಿ ಆಗ್ರಹಿಸಿದರು. ‘ಒಂದು ತಿಂಗಳಲ್ಲಿ ವರದಿ ನೀಡುತ್ತೇನೆ’ ಎಂದು ಸಮಿತಿ ಅಧ್ಯಕ್ಷರು ಪ್ರಕಟಿಸಿ ಚರ್ಚೆ ನಿಲ್ಲಿಸಿದರು.

ಭಗೀರಥ ಅಧಿಕಾರಿಗಳು

ಕ್ರಿಯಾ ಯೋಜನೆ ಹೊರತುಪಡಿಸಿ 1,062 ಕೊಳವೆ ಬಾವಿ ಕೊರೆಸಿದ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರುಗಳ ವಿರುದ್ಧ ಜರುಗಿಸುತ್ತಿರುವ ಕಾನೂನು ಕ್ರಮಕ್ಕೆ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

‘ಬೇಸಿಗೆಯಲ್ಲಿ ಭೀಕರ ಬರ ಪರಿಸ್ಥಿತಿ ಇತ್ತು. ಅಧಿಕಾರಿಗಳು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಜಿಲ್ಲೆಯ ನೀರಿನ ಬವಣೆಯನ್ನು ನೀಗಿಸುವ ಪ್ರಯತ್ನದಲ್ಲಿ ನಿಯಮಗಳು ಉಲ್ಲಂಘನೆ ಆಗಿರಬಹುದು. ಆದರೆ, ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಆಧುನಿಕ ಭಗೀರಥರಂತೆ ಗೋಚರಿಸುತ್ತಿದ್ದಾರೆ. ಅವರನ್ನು ಅಭಿನಂದಿಸುವ ಬದಲಿಗೆ ಶಿಕ್ಷೆ ನೀಡುವುದು ಎಷ್ಟು ಸಮಂಜಸ’ ಎಂದು ಸದಸ್ಯ ಕೃಷ್ಣಮೂರ್ತಿ ಪ್ರಶ್ನಿಸಿದರು.

ನಿಯಮ ಬಾಹಿರವಾಗಿ ಕೊಳವೆ ಬಾವಿಗಳನ್ನು ಕೊರೆಸಲು ಶಿಫಾರಸು ಮಾಡಿದ ಜನಪ್ರತಿನಿಧಿಗಳ ಹೆಸರು ಬಹಿರಂಗಪಡಿಸುವಂತೆ ಸದಸ್ಯರು ಪಟ್ಟುಹಿಡಿದರು. ಕ್ರಿಯಾ ಯೋಜನೆ ಸಿದ್ಧಪಡಿಸುವಾಗ ಹಿರಿಯೂರು ತಾಲ್ಲೂಕಿನ ಜಿಲ್ಲಾ ಪಂಚಾಯಿತಿ ಸದಸ್ಯರ ಸಲಹೆ ಪಡೆಯುತ್ತಿಲ್ಲ ಎಂದು ನಾಗೇಂದ್ರ ನಾಯ್ಕ್‌ ಸೇರಿ ಅನೇಕರು ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ್‌ ವಿರುದ್ಧ ಹರಿಹಾಯ್ದರು.

‘ಪ್ರಜ್ಞೆ ಇಟ್ಟುಕೊಂಡು ಸಭೆಗೆ ಉತ್ತರಿಸಿ’ ಎಂಬ ಗೀತಾ ಅವರ ಮಾತಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ಸದಸ್ಯರೊಬ್ಬರು ಹೀಗೆ ಮಾತನಾಡುವುದು ಸರಿಯಲ್ಲ’ ಎಂದು ತಿರುಗೇಟು ನೀಡಿದರು.

ಉಪಾಧ್ಯಕ್ಷೆ ಡಮ್ಮಿಯೇ?

‘ಜಿಲ್ಲಾ ಪಂಚಾಯಿತಿಯಲ್ಲಿ ನಾನೊಬ್ಬ ಡಮ್ಮಿ ಉಪಾಧ್ಯಕ್ಷೆಯೇ, ನಿಜವಾದರೆ ಈಗಲೇ ಹೊರ ನಡೆಯುವೆ’ ಎಂದು ಸುಶೀಲಮ್ಮ ಪ್ರಶ್ನಿಸಿದ ರೀತಿಗೆ ಅನೇಕರು ಮುಸಿ ನಕ್ಕರು.

ಸದಸ್ಯರ ಮಾತಿನ ಚಕಮಕಿಯ ನಡುವೆ ಮಾತನಾಡುವ ಅವಕಾಶ ಪಡೆದ ಉಪಾಧ್ಯಕ್ಷೆ ಸುಶೀಲಮ್ಮ, ಎದ್ದು ನಿಲ್ಲುವಂತೆ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸದಸ್ಯರು ಹಾಗೂ ಅಧಿಕಾರಿಗಳ ಬಗ್ಗೆ ಇರುವ ಅಸಮಾಧಾನವನ್ನು ದುಃಖ ಮಿಶ್ರಿತ ಧ್ವನಿಯಲ್ಲೇ ತೋಡಿಕೊಂಡರು.

‘ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜತೆ ಮಾತ್ರ ಚರ್ಚೆ ನಡೆಯುತ್ತಿದೆ. ‘ಮಾನ್ಯ ಉಪಾಧ್ಯಕ್ಷರೆ’ ಎಂದು ಯಾವೊಬ್ಬ ಸದಸ್ಯರು ಮಾತು ಆರಂಭಿಸಲಿಲ್ಲ. ನಾನೇನು ಡಮ್ಮಿಯೇ’ ಎಂದು ಪ್ರಶ್ನಿಸಿದರು.

‘ಅಧಿಕಾರಿಗಳು ಕೂಡ ಗೌರವ ಕೊಡುವುದಿಲ್ಲ. ಕಚೇರಿಗೆ ಬರುವಂತೆ ಸೂಚಿನೆ ನೀಡಿದರೂ ಪಾಲಿಸುತ್ತಿಲ್ಲ...’ ಎಂಬ ಅಸಮಾಧಾನ ವ್ಯಕ್ತಪಡಿಸುತ್ತಲೇ ಕುರ್ಚಿಯಿಂದ ಮೇಲೆದ್ದ ಉಪಾಧ್ಯಕ್ಷರನ್ನು ಸದಸ್ಯರು ಮನವೊಲಿಸಿದರು.

ತಿರುಪತಿ ಪ್ರಸಾದ ಹಂಚಿಕೆ

ಜಿಲ್ಲಾ ಪಂಚಾಯಿತಿ ಸದಸ್ಯರ ಕಾರ್ಯವ್ಯಾಪ್ತಿ ಹಾಗೂ ಅಧಿಕಾರಕ್ಕೆ ಸಂಬಂಧಿಸಿದಂತೆ ಗಂಭೀರ ಚರ್ಚೆ ನಡೆಯುತ್ತಿತ್ತು. ಸಿಇಒ ಜೊತೆ ಅನೇಕರು ವಾಗ್ವಾದಕ್ಕೆ ಇಳಿದಿದ್ದರು. ಈ ವೇಳೆ ಜಿಲ್ಲಾ ಪಂಚಾಯಿತಿ ಸಿಬ್ಬಂದಿ ಸಭೆಯಲ್ಲಿ ತಿರುಪತಿ ಪ್ರಸಾದ ವಿತರಣೆ ಮಾಡುತ್ತಿದ್ದರು.

‘ಮೇಡಂ (ಅಧ್ಯಕ್ಷೆ ವಿಶಾಲಾಕ್ಷಿ) ತಿರುಪತಿಗೆ ಹೋಗಿ ಬಂದಿದ್ದಾರೆ’ ಎಂದು ಸದಸ್ಯರ ಪ್ರಶ್ನೆಗೆ ಪ್ರಸಾದ ವಿತರಿಸುತ್ತಿದ್ದ ಸಿಬ್ಬಂದಿ ಉತ್ತರಿಸುತ್ತಿದ್ದರು. ಎರಡು ಕೈ ಮುಂದೆ ಹಿಡಿದು ಲಡ್ಡು ಪಡೆದ ಕೆಲವರು ಕಣ್ಣಿಗೆ ಒತ್ತಿಕೊಳ್ಳುವಂತೆ ಭಕ್ತಿ–ಭಾವದಿಂದ ಪ್ರಸಾದ ಸ್ವೀಕರಿಸಿದರು.

ಪತಿ ಹೆಸರಿಗೆ ಕರಗಿದ ಕೋಪ

ಪತಿಯ ಹೆಸರು ಪ್ರಸ್ತಾಪಿಸಿ ಸದಸ್ಯೆಯೊಬ್ಬರ ಕೋಪವನ್ನು ಕರಗಿಸಿದ ಅಧಿಕಾರಿಯ ಚಾಕಚಕ್ಯತೆ ಗಮನ ಸೆಳೆಯಿತು.

ಕೊಳವೆ ಬಾವಿ ಕೊರೆಸಲು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಜಿಲ್ಲಾ ಪಂಚಾಯಿತಿ ಸದಸ್ಯರ ಅಭಿಪ್ರಾಯ, ಸಲಹೆ ಸ್ವೀಕರಿಸುತ್ತಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿತ್ತು. ಇದನ್ನು ತಿರಸ್ಕರಿಸಿದ ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ್‌, ‘ಕ್ರಿಯಾ ಯೋಜನೆ ಸಿದ್ಧಪಡಿಸುವುದಕ್ಕೂ ಮೊದಲು ಸದಸ್ಯರ ಅಭಿಪ್ರಾಯ ಪಡೆಯಲಾಗಿದೆ’ ಎಂಬ ಸಬೂಬು ನೀಡಿದರು.

ಇದರಿಂದ ಕೆರಳಿದ ಸದಸ್ಯೆ ತ್ರಿವೇಣಿ, ‘ಯಾವಾಗ ಸಭೆ ಮಾಡಿದ್ದೀರಿ ಹೇಳಿ. ಸುಳ್ಳು ಹೇಳಿ ಸಭೆಯ ದಿಕ್ಕು ತಪ್ಪಿಸುತ್ತಿದ್ದೀರಾ’ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು. ‘ಸಭೆಗೆ ನಿಮ್ಮ ಮನೆಯವರು (ಪತಿ) ಬಂದಿದ್ದರು’ ಎಂದು ಅಧಿಕಾರಿ ಉತ್ತರಿಸುತ್ತಿದ್ದಂತೆ ತ್ರಿವೇಣಿ ತಬ್ಬಿಬ್ಬಾದರು.

ಅಧಿವೇಶನದ ಪ್ರಭಾವ

ಸಮ್ಮಿಶ್ರ ಸರ್ಕಾರ ಅವಿಶ್ವಾಸ ಕಳೆದುಕೊಳ್ಳುವ ಸಂದರ್ಭದಲ್ಲಿ ವಿಧಾನಮಂಡಲ ಅಧಿವೇಶನದಲ್ಲಿ ನಡೆದ ಚರ್ಚೆಯ ಪ್ರಭಾವ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯ ಮೇಲೆ ಬೀರಿರುವುದು ಗುರುವಾರ ಗೋಚರಿಸಿತು.

ಜಿಲ್ಲಾ ಪಂಚಾಯಿತಿ ಸದಸ್ಯರ ಕಾರ್ಯವ್ಯಾಪ್ತಿ, ಅಧ್ಯಕ್ಷರ ಹಕ್ಕು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಅಧಿಕಾರಕ್ಕೆ ಸಂಬಂಧಿಸಿದಂತೆ ಕೃಷ್ಣಮೂರ್ತಿ ನಡೆಸಿದ ಚರ್ಚೆ ವಿಧಾನಮಂಡಲದ ಅಧಿವೇಶನವನ್ನು ನೆನಪಿಸಿತು.

ಪಂಚಾಯತ್‌ ರಾಜ್‌ ಕಾನೂನಿನ ಅಧಿನಿಯಮಗಳನ್ನು ಓದುತ್ತಲೇ ಕೃಷ್ಣಮೂರ್ತಿ ಚರ್ಚೆಗೆ ಮುಂದಾದರು. ಸದಸ್ಯರು ಇದನ್ನು ಆಸಕ್ತಿಯಿಂದ ಕೇಳುತ್ತಿದ್ದರು. ‘ಇದನ್ನು ಇನ್ನೊಮ್ಮೆ ಓದಲೆ’ ಎಂದು ಪ್ರಶ್ನಿಸುತ್ತ ಅಂಬೇಡ್ಕರ್‌ ಹೆಸರನ್ನು ಆಗಾಗ ಉಲ್ಲೇಖಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT