ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಪ್ರಮಾಣದ ಮೆಕ್ಕೆಜೋಳ ಬಿತ್ತನೆ!

Last Updated 10 ಜುಲೈ 2013, 10:33 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನಲ್ಲಿ ಈಗಾಗಲೇ ಶೇ 75 ರಷ್ಟು ಬಿತ್ತನೆ ಕಾರ್ಯ ಮುಗಿದಿದೆ. 54,900 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 38,670 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ. 37,000 ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆಯ ಗುರಿಯಲ್ಲಿ 29,750 ಹೆಕ್ಟೇರ್‌ನಲ್ಲಿ ಬಿತ್ತನೆ ಮುಗಿದಿದ್ದು, ಉಳಿದ ಪ್ರದೇಶಗಳಲ್ಲೂ ಬಿತ್ತನೆ ಭರದಿಂದ ಸಾಗಿದೆ.

  ಕೆಲವೆಡೆ ತೇವಾಂಶ ಕೊರತೆಯಿಂದ ಬಿತ್ತನೆ ವಿಳಂಬವಾಗಿತ್ತಾದರೂ, ಈಗ ಮಳೆಯಾಗಿರು ವುದರಿಂದ ಇನ್ನೊಂದು ವಾರದಲ್ಲಿ ಮೆಕ್ಕೆಜೋಳದ ಬಿತ್ತನೆ ಶೇ 100 ತಲುಪಲಿದೆ. ಮುಂದಿನ ವಾರದಿಂದ ರಾಗಿ ಬಿತ್ತನೆಯೂ ಆರಂಭವಾಗಲಿದ್ದು, ಬಹುತೇಕ ಈ ವರ್ಷ 54,900 ಹೆಕ್ಟೇರ್ ಪ್ರದೇಶದಲ್ಲಿ ಪರಿಪೂರ್ಣ ಬಿತ್ತನೆ ಆಗಲಿದೆ.

ವಾಡಿಕೆಗಿಂತ ಹೆಚ್ಚುಮಳೆ: ತಾಲ್ಲೂಕಿನಲ್ಲಿ ವಾರ್ಷಿಕ 602.8 ಮಿ.ಮೀ. ವಾಡಿಕೆ ಮಳೆ ಇದೆ. ಜೂನ್ ಅಂತ್ಯಕ್ಕೆ 176 ಮಿ.ಮೀ. ವಾಡಿಕೆ ಮಳೆ ಇದ್ದರೂ, ಈಗಾಗಲೇ 255 ಮಿ.ಮೀ. ಮಳೆ ಸುರಿದಿದೆ. ಈಗಾಗಲೇ ಹಲವು ಕಡೆ ಸುಮಾರು 20ರಿಂದ 25 ದಿನಗಳ ಬೆಳೆ ಇದ್ದು ಮೆಕ್ಕೆಜೋಳ ನಳನಳಿಸುತ್ತಿದೆ. ದಿನಕ್ಕೊಮ್ಮೆಯಾದರೂ ಹನಿಯುವ ಸೋನೆ ಮಳೆಗೆ ಹೊಲಗಳು ಹಚ್ಚಹಸುರಿನಿಂದ ಕಂಗೊಳಿಸುತ್ತಿವೆ. ಬೀಜ ಹುಟ್ಟಿದ ನಂತರ ಸುರಿದ ಆರಿದ್ರಾ ಮಳೆಗೆ ನೋಡ ನೋಡುತ್ತಿದ್ದಂತೆ ಜೋಳ ಮೊಣಕಾಲು ಉದ್ದದಷ್ಟು ಬೆಳೆದಿದೆ. ರೈತರು ಬೆಳೆಗೆ ಯೂರಿಯಾ ಕೊಟ್ಟಿರುವುದರಿಂದ ಜೋಳ ಮತ್ತಷ್ಟು ಉತ್ತಮವಾಗಿ ಬೆಳೆದಿದೆ. 

ರೋಗತಡೆಗೆ ಮುಂಜಾಗ್ರತೆ: ಮೆಕ್ಕೆಜೋಳ ಸಸಿ ಹಂತದಲ್ಲಿದ್ದಾಗ ಕಾಂಡಕೊರಕ ಕೀಟಬಾಧೆ ಕಾಣಿಸಿಕೊಳ್ಳಲಿದ್ದು, ಹುಳುಗಳು ಕಾಂಡವನ್ನು ತಿನ್ನುವುದರಿಂದ ರಂದ್ರಗಳು ಕಾಣಿಸಿಕೊಳ್ಳುತ್ತವೆ. ಕೀಟಗಳು ಎಲೆಗಳಿಂದ ಕಾಂಡವನ್ನು ಹೊಕ್ಕು ತಿನ್ನುವುದರಿಂದ ಸುಳಿ ಒಣಗಿ ಸರಳವಾಗಿ ಕೀಳಲು ಬರುತ್ತದೆ. ಚುಕ್ಕೆ ಕಾಂಡಕೊರಕ ಹುಳವು ಬೆಳವಣಿಗೆಯ ಹಂತದಲ್ಲಿ ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುವುದರಿಂದ ಎಲೆಗಳಲ್ಲಿ ತೂತುಗಳಾಗುತ್ತವೆ. ಈ ರೋಗಲಕ್ಷಣಗಳು ಕಂಡುಬಂದಲ್ಲಿ, ಲಿಂಡೇನ್ ಶೇ 1 ಹರಳು ಅಥವಾ ಶೇ 4 ಕಾರ್ಬಾರಿಲ್ ಅನ್ನು ಪ್ರತೀ ಎಕರೆಗೆ 3 ಕೆಜಿಯಂತೆ ಸುಳಿಯ ಒಳಗೆ ಉದುರಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ವೈ.ಶ್ರೀಧರ್ ಸಲಹೆ ನೀಡಿದ್ದಾರೆ.

ಹಸಿರುಮಿಶ್ರಿತ ನೀಲಿ ಸಸ್ಯ ಹೇನುಗಳು ಜೋಳದ ಎಲೆಗಳಲ್ಲಿ ಗುಂಪಾಗಿ ವಾಸಿಸುತ್ತವೆ. ಇವು ರಸ ಹೀರುವುದರಿಂದ ಗಿಡಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ನಂತರದ ಹಂತದಲ್ಲಿ ಕೆಂಪುಬಣ್ಣಕ್ಕೆ ತಿರುಗಿ ಬೆಳೆವಣಿಗೆ ಕುಂಟಿತಗೊಳ್ಳುತ್ತದೆ. ಹೇನುಗಳು ಸ್ರವಿಸುವ ಅಂಟು ದ್ರವದಿಂದ ಶಿಲೀಂದ್ರ ಬೆಳೆದು ಗರಿಗಳು ಕಪ್ಪಾಗುತ್ತವೆ. ಸುಳಿ ತಿಗಣೆ ಹುಳುಗಳು ರಸ ಹೀರುವುದರಿಂದ ಬೆಳೆ ತುದಿಯಿಂದ ಒಣಗಿ ಹಾಳಾಗುತ್ತದೆ. ಈ ಕೀಟಗಳ ನಿಯಂತ್ರಣಕ್ಕಾಗಿ 2 ಎಂಎಲ್ ಕ್ವಿನಾಲ್‌ಫಾಸ್ 25 ಇಸಿಯನ್ನು ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಹೆಚ್ಚು ತೇವಾಂಶ ಇರುವ ಪ್ರದೇಶದಲ್ಲಿ ಕೇದಿಗೆ ರೋಗ ತಗಲುವ ಸಾಧ್ಯತೆ ಇದೆ. ಗರಿಗಳ ತಳಭಾಗದಲ್ಲಿ ಬಿಳಿಯ ಶಿಲೀಂದ್ರ ಬೆಳವಣಿಗೆ ಕಂಡುಬರುತ್ತದೆ. `ಗರಿ ಅಂಗಮಾರಿ' ರೋಗದಿಂದ ಎಲೆಗಳ ಕೆಳಭಾಗದಲ್ಲಿ ಬೂದುಮಿಶ್ರಿತ ಕಂದುಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಕೆಂಪು ಬಣ್ಣದ ಚುಕ್ಕೆಗಳು ಉಂಟಾಗುವ ತುಕ್ಕು ರೋಗವೂ ಬೆಳೆಗೆ ತಗುಲುವ ಸಂಭವ ಇದ್ದು, ಈ ರೋಗ ಲಕ್ಷಣಗಳು ಕಂಡು ಬಂದಲ್ಲಿ 2 ಗ್ರಾಂ ಮ್ಯಾಂಕೋಜೆಬ್ (75 ಡಬ್ಲ್ಯೂಪಿ) ಅನ್ನು ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಅವರು ರೈತರಿಗೆ ತಿಳಿಸಿದ್ದಾರೆ.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT