ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶ, ಬೋಧನೆಯಲ್ಲಿ ಅತ್ಯುತ್ತಮ

Last Updated 9 ಜೂನ್ 2014, 6:25 IST
ಅಕ್ಷರ ಗಾತ್ರ

ಪದವಿ ಕಲಾ, ವಾಣಿಜ್ಯ ಹಾಗೂ ಮ್ಯಾನೇಜ್‌ಮೆಂಟ್‌ (ಬಿಬಿಎಂ) ವಿಭಾಗದಲ್ಲಿ ಪ್ರತಿವರ್ಷ ಶೇ 80ರಷ್ಟು ಫಲಿತಾಂಶ ಕೊಡುತ್ತಿರುವ ನಗರದ ಸರ್ಕಾರಿ ಕಲಾ ಕಾಲೇಜು ಎಲ್ಲ ರೀತಿಯಲ್ಲೂ ಗುಣಮಟ್ಟದ ಶೈಕ್ಷಣಿಕ ವಾತಾವರಣ ಹೊಂದಿದೆ.

‘ನಮ್ಮ ಕಾಲೇಜಿನ ಕಲಾ ವಿಭಾಗದಲ್ಲಿ ಈ ಬಾರಿ 77 ಅತ್ಯುತ್ತಮ, 62 ಉತ್ತಮ, ವಾಣಿಜ್ಯ ವಿಭಾಗದಲ್ಲಿ 34 ಅತ್ಯುತ್ತಮ, 12 ಉತ್ತಮ, ಹಾಗೂ ಮ್ಯಾನೆಂಜ್‌ಮೆಂಟ್‌ ವಿಭಾಗದಲ್ಲಿ 36 ಅತ್ಯುತ್ತಮ, 20 ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಪ್ರತಿವರ್ಷ ವಿದ್ಯಾರ್ಥಿಗಳು ಅತ್ಯುತ್ತಮ ರ್‌್ಯಾಂಕ್‌ಗಳನ್ನು ಸಹ ಪಡೆಯುತ್ತಿದ್ದಾರೆ. ಉತ್ತಮ ಫಲಿತಾಂಶ ನೀಡುವಲ್ಲಿ ಕಾಲೇಜು ಮುಂಚೂಣಿಯಲ್ಲಿದೆ..’

ನಗರದ ಸರ್ಕಾರಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ಒಂದಾದ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಿಂಗಪ್ಪ ಅವರು, ತಮ್ಮ ಕಾಲೇಜಿನ ಶಿಕ್ಷಣದ ಗುಣಮಟ್ಟದ ಬಗ್ಗೆ ವಿವರಿಸುವ ಪರಿ ಇದು. 

ಪದವಿ ಕಲಾ ಕೋರ್ಸ್‌ಗೆ ಸಂಬಂಧಿಸಿದಂತೆ ಎಚ್‌ಇಪಿ, ಎಚ್‌ಪಿಎಸ್‌, ಎಚ್‌ಇಎಸ್‌, ಎಸ್‌ಕೆಎಚ್‌, ಇಎಸ್‌ಎಚ್‌ ಹಾಗೂ ಸಿಪಿಎಸ್‌  ಕೋರ್ಸ್‌ಗಳಿದ್ದು, ಕಲಾ ವಿಭಾಗದಲ್ಲಿ ಒಟ್ಟು 490 ವಿದ್ಯಾರ್ಥಿಗಳಿಗೆ, ವಾಣಿಜ್ಯ 120, ಮ್ಯಾನೆಜ್‌ಮೆಂಟ್‌ಗೆ 120 ಹಾಗೂ ಸ್ನಾತಕೋತ್ತರ ವಿಭಾಗ ಎಚ್‌ಕೆಪಿ ಕೋರ್ಸ್‌ಗಳಿದ್ದು, 120 ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಅವಕಾಶ ಕಲ್ಪಿಸಲಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದ  ಪದವಿಗೆ ಜೂನ್‌ 4ರಿಂದ ಪ್ರವೇಶಾವಕಾಶ ಪ್ರಕ್ರಿಯೆ ಆರಂಭವಾಗಲಿದೆ. ದಂಡ ಶುಲ್ಕವಿಲ್ಲದೆ, ಜೂನ್‌ 30 ರೊಳಗೆ ಪ್ರವೇಶಾತಿ ಪಡೆಯಬಹುದು. ಪ್ರಥಮ ವರ್ಷ ಬಿ.ಎ. ಪದವಿ ಸೇರಲು ಸಾಮಾನ್ಯ ವರ್ಗ ₨ 2,509, 2ಎ, 2ಬಿ ವರ್ಗಕ್ಕೆ ₨ 1652, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ₨ 1,342 ನಿಗದಿಪಡಿಸಲಾಗಿದೆ.

ಬಿಕಾಂ ಪದವಿಗೆ ಅಂದಾಜು ಸಾಮಾನ್ಯ ವರ್ಗ ₨ 3,719, 2ಎ, 2ಬಿ  ವರ್ಗಕ್ಕೆ ₨ 1,862, ಪರಿಶಿಷ್ಟ  ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ₨ 1,552 ನಿಗದಿಪಡಿಸಲಾಗಿದೆ. ಬಿಬಿಎಂ ಪದವಿಗೆ ಅಂದಾಜು ಸಾಮಾ ನ್ಯ ವರ್ಗ ₨ 5,176, 2ಎ, 2ಬಿ ವರ್ಗಕ್ಕೆ ₨ 4,319, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ₨ 4,009 ನಿಗದಿಪಡಿಸಬಹುದು. ಅಲ್ಲದೆ, ₨ 20 ದಂಡ ಶುಲ್ಕ ಸಹಿತ ಪ್ರವೇಶಕ್ಕಾಗಿ ಜುಲೈ 25 ಕೊನೆಯ ದಿನವಾಗಿದ್ದು, ಪ್ರವೇಶಾತಿ ಮುಕ್ತಾಯವಾಗಲಿದೆ ಎಂದು ತಿಳಿಸಿದ್ದಾರೆ.

ಬಿಕಾಂ, ಬಿಬಿಎಂ, ಬಿಎ ವಿಷಯದಲ್ಲಿ ವಿಪುಲ ಅವಕಾಶಗಳಿದ್ದು, ನಮ್ಮ ಕಾಲೇಜಿನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಮುಂದಾಗುತ್ತಾರೆ. ಈ ಕ್ಷೇತ್ರಕ್ಕೆ ಬೇಡಿಕೆ ಕೂಡ ಅಧಿಕವಾಗಿದ್ದು, ಭವಿಷ್ಯ ಹಾಗೂ ಉದ್ಯೋಗ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಸುಮಾರು 34 ಕಾಯಂ ಸರ್ಕಾರಿ ಪ್ರಾಧ್ಯಾಪಕರು, 42 ಮಂದಿ ಅರೆಕಾಲಿಕ ಪ್ರಾಧ್ಯಾಪಕರು ಹಾಗೂ ಆರು ಖಾಸಗಿ ಕಾಲೇಜಿನಿಂದ ನಿಯೋಜನೆಗೊಂಡ ಪ್ರಾಧ್ಯಾಪಕರನ್ನು ಒಳಗೊಂಡು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಫಲರಾಗಿದ್ದೇವೆ ಎನ್ನುತ್ತಾರೆ ಲಿಂಗಪ್ಪ.

‘ಸರ್ಕಾರಿ ಕಾಲೇಜು ಆಗಿದ್ದರೂ ಕೂಡ ಬಡ ವಿದ್ಯಾರ್ಥಿಗಳನ್ನು  ಮೆರಿಟ್‌ ಆಧಾರದ ಮೇಲೆ ಮೀಸಲಾತಿಗೆ ಅನುಗುಣವಾಗಿ ಪ್ರವೇಶಾವಕಾಶ ಕಲ್ಪಿಸಲಾಗುವುದು. ನಮ್ಮಲ್ಲಿ ಕೇವಲ 12 ಕೊಠಡಿಗಳಿದ್ದು, ಪಾಳಿ ಪದ್ದತಿಯಲ್ಲಿ ತರಗತಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಏಳು ಹೊಸ ಕೊಠಡಿಗಳ ನಿರ್ಮಾಣ ಕಾರ್ಯ ಮುಕ್ತಾಯದ ಹಂತದಲ್ಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹಿಂದಿನಿಂದಲೂ ಹಾಸ್ಟೆಲ್ ಸೌಲಭ್ಯವಿದೆ. ವಿದ್ಯಾರ್ಥಿನಿಯರಿಗಾಗಿ ₨ 20 ಲಕ್ಷ ವೆಚ್ಚದಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ, ಅವರಿಗೆ ಬೋಧನಾ ಶುಲ್ಕದಲ್ಲಿ ವಿನಾಯ್ತಿ ಇದೆ’ ಎಂದು ಅವರು ಉಲ್ಲೇಖಿಸಿದ್ದಾರೆ.

ಸ್ನಾತಕೋತ್ತರ ಪದವಿಯನ್ನು ಪ್ರತ್ಯೇಕ ವಿಭಾಗವಾಗಿ ವಿಂಗಡಿಸಿ ನೂತನ ಕಟ್ಟಡ ನಿರ್ಮಾಣ ಮಾಡಲು ಕೆಎಚ್‌ಬಿ ವತಿಯಿಂದ ₨ 70 ಲಕ್ಷ ಮಂಜೂರಾಗಿದ್ದು, ಅದಕ್ಕಾಗಿ ಓಡಾಟ ನಡೆಸುತ್ತಿದ್ದೇವೆ. ನಗರ ಸೇರಿದಂತೆ ಜಿಲ್ಲೆಯ ಆರು ತಾಲ್ಲೂಕುಗಳ ವಿದ್ಯಾರ್ಥಿಗಳಿಗೆ ಮೊದಲಿನಿಂದಲೂ ಈ ಕಾಲೇಜು ಅನುಕೂಲವಾಗಿದೆ.

ಸಿಪಿಎಸ್‌ ವಿಭಾಗದಲ್ಲಿ ಅಪರಾಧ ಶಾಸ್ತ್ರ, ರಾಜ್ಯಶಾಸ್ತ್ರ ಹಾಗೂ ಸಮಾಜಶಾಸ್ತ್ರ ವಿಷಯಗಳಿದ್ದು, ಇದರಲ್ಲೂ ಸಹ ಸಾಕಷ್ಟು ಉದ್ಯೋಗ ಅವಕಾಶಗಳಿವೆ ಎನ್ನುತ್ತಾರೆ ಈ ಭಾಗದ ಮುಖ್ಯಸ್ಥರಾದ ಪ್ರೊ. ನಟರಾಜ್‌. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT