ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು: ರಂಗಯ್ಯನದುರ್ಗ ಜಲಾಶಯ, 26 ಕೆರೆಗಳಲ್ಲಿ ನೀರಿಲ್ಲ!

ಮೊಳಕಾಲ್ಮುರು: ರಂಗಯ್ಯನದುರ್ಗ ಜಲಾಶಯ, 26 ಕೆರೆಗಳಲ್ಲಿ ನೀರಿಲ್ಲ!
Last Updated 12 ಏಪ್ರಿಲ್ 2014, 5:39 IST
ಅಕ್ಷರ ಗಾತ್ರ

ಮೊಳಕಾಲ್ಮುರು: ‘ಇಲ್ಲಿನ ಚುನಾವಣೆಗಳಿಗೂ ತಾಲ್ಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದಕ್ಕೂ ನೇರ ಸಂಬಂಧವಿದೆ’. ಈ ಸಮಯದಲ್ಲಿ ನೀಡುವ ನೀರಾವರಿ ಭರವಸೆಗಳು ಮತ್ತೆ ಚುನಾವಣೆ ಬರುವವರೆಗೂ ಯಥಾ ಸ್ಥಿತಿಯಲ್ಲಿ ಇರುತ್ತವೆ ಎಂಬ ಆರೋಪ ಕೇಳಿಬರುತ್ತಿದೆ.

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿಯೂ ಪ್ರಮುಖ ರಾಜಕೀಯ ಪಕ್ಷಗಳಿಂದ ಹಿಡಿದು ಹೊಸ ಪಕ್ಷಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳೂ ಮತ ಹಾಕಿ ನೀರು ಹರಿಸುತ್ತೇವೆ ಎಂಬ ಅಂಶ ಮುಖ್ಯವಾಗಿ ಮುಂದಿಟ್ಟು ಮತಯಾಚನೆ ಮಾಡುತ್ತಿದ್ದಾರೆ.
‘ಜಿಲ್ಲೆಯ ಬೇರೆ ತಾಲ್ಲೂಕುಗಳಿಗೆ ಹೋಲಿಕೆ ಮಾಡಿದಲ್ಲಿ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಪ್ರಚಾರ ಸಮಯ ಬೇರೆಯೇ ಆಗಿದೆ.

ಬಿರುಬಿಸಿಲು, ಬಿಸಿಗಾಳಿ, ನೆರಳಿನ ಕೊರತೆ ಕಾರಣಗಳು ಬರುವ ಮುಖಂಡರ ಸಂಖ್ಯೆಯನ್ನೂ ಕಡಿಮೆ ಮಾಡುತ್ತಿವೆ. ಪ್ರಚಾರ ವೇಳೆ ಯಾವುದೇ ಗ್ರಾಮಗಳಿಗೆ ಹೋದರೂ ಹೆಚ್ಚು ಜನ ಕಾಣಸಿಗುವುದು ಬೀದಿ ನಲ್ಲಿಗಳ ಮುಂದೆ...! ಅಲ್ಲಿ ಹೋಗಿ ಮತ ಕೇಳಲು ಅನೇಕ ಮುಖಂಡರಿಗೆ ಇರಿಸುಮುರುಸು ಆದ ಘಟನೆ ಸಹ ನಡೆದಿದೆ ಎಂದು ಹೆಸರು ಹೇಳಲಿಚ್ಛಿಸದ ಕಾರ್ಯಕರ್ತರು ಹೇಳುತ್ತಾರೆ.

ತಾಲ್ಲೂಕಿನ ಜೀವನಾಡಿ ರಂಗಯ್ಯನದುರ್ಗ ಜಲಾಶಯ ಹಾಗೂ ಎಲ್ಲಾ 26 ಕೆರೆಗಳು ನೀರಿಲ್ಲದೇ ಭಣಗುಟ್ಟುತ್ತಿವೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂತಾದ ನಾಯಕರು 2012ರ ಏಪ್ರಿಲ್‌ 28ರಂದು ಬರವೀಕ್ಷಣೆಗೆ ತಾಲ್ಲೂಕಿಗೆ ಬಂದು ಹೋದರೂ ನಯಾಪೈಸೆ ಪ್ರಯೋಜನ ಆಗಿಲ್ಲ, ಭರವಸೆಗಳೇ ಕಾರ್ಯರೂಪಕ್ಕೆ ಬಾರದ ಮೇಲೆ ಇನ್ನೂ ಆಯ್ಕೆಯಾಗದ ನಾಯಕರ ಮಾತನ್ನು ಹೇಗೆ ನಂಬಬೇಕು ಎಂದು ತಿಪ್ಪೇಶಪ್ಪ, ಮಂಜುನಾಥ್, ಸಾಗರ್‌, ವಿಜಯಣ್ಣ ಪ್ರಶ್ನೆ ಮಾಡುತ್ತಾರೆ.

150–200 ಟಡಿಎಸ್‌ನಷ್ಟು ಲವಣಾಂಶ ಇದ್ದರೆ ಅದು ಕುಡಿಯಲು ಯೋಗ್ಯ ನೀರು, ಆದರೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ 2500–3000 ಟಿಡಿಎಸ್ ದಾಖಲಾಗುವ ಮೂಲಕ ಜಾನುವಾರುಗಳ ಆರೋಗ್ಯದ ಬಗ್ಗೆ ಚಿಂತೆಯಾಗಿದೆ. ಇಂತಹ ಸ್ಥಿತಿಯಲ್ಲಿ ಶಾಶ್ವತ ಹಾಗೂ ಶುದ್ಧ ಕುಡಿಯುವ ನೀರು ನೀಡಿ ಎಂದರೆ ಲೀಟರ್ ಲೆಕ್ಕದಲ್ಲಿ ಕೊಂಡುಕೊಳ್ಳುವ ಯೋಜನೆ ಬಗ್ಗೆ ಭರವಸೆ ನೀಡಲಾಗುತ್ತಿದೆ. ಹೀಗಾದರೆ ಜಾನುವಾರುಗಳ ಗತಿ ಏನು? ಎಂದು ಅವರು ಕೇಳುತ್ತಾರೆ.

ಟ್ಯಾಂಕರ್‌ ಮೂಲಕ ನೀರು...
ತಾಲ್ಲೂಕಿನಾದ್ಯಂತ ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ಮಾವು, ಹೂವಿನ ಗಿಡಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್‌ ಮೂಲಕ ನೀರು ಕೊಂಡು ಉಣಿಸಲಾಗುತ್ತಿದೆ.

ಹಸಿರು ಮಾಯ...
ಶೇ 75ಕ್ಕೂ ಹೆಚ್ಚು ಕೊಳವೆಬಾವಿ ಬತ್ತಿ ಹೋಗುವ ಮೂಲಕ ತಾಲ್ಲೂಕಿನ ತೋಟಗಳಲ್ಲಿ ಹಸಿರು ಮಾಯವಾಗಿದೆ. ಒಣಗಿದ ಅಡಿಕೆ, ರೇಷ್ಮೆ, ತೋಟಗಾರಿಕೆ ಗಿಡಗಳು, ತೆಂಗಿನ ತೋಟಗಳು ಮಾತ್ರ ಕಾಣಸಿಗುತ್ತಿದೆ. ಮಳೆ ಬಂದರೂ, ನೀರುಣಿಸಿದರೂ ಮತ್ತೆ ಗಿಡಗಳು ಬದುಕುವುದು ಅಸಾಧ್ಯ
ರಾಮಾಂಜಿನೇಯ, ರೈತ
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT