ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಪೇರಿಗಾಗಿ ಅಂಗಡಿಗೆ ತಪ್ಪದ ಮಕ್ಕಳ ಅಲೆದಾಟ

Last Updated 15 ಆಗಸ್ಟ್ 2012, 6:30 IST
ಅಕ್ಷರ ಗಾತ್ರ

ಚಳ್ಳಕೆರೆ: ರಾಜ್ಯ ಸರ್ಕಾರ ಮಕ್ಕಳ ಶೈಕ್ಷಣಿಕ ಸಾಧನೆಗೆ ಪ್ರೋತ್ಸಾಹಕವಾಗಿ ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ, ಬೈಸಿಕಲ್ ವಿತರಣೆ ಮಾಡುತ್ತಿದೆ. ಆದರೆ, ಸರ್ಕಾರವು ಮಕ್ಕಳಿಗೆ ಉಚಿತವಾಗಿ ನೀಡುವ ಬೈಸಿಕಲ್‌ಗಳಲ್ಲಿ ಗುಣಮಟ್ಟದ ಕೊರತೆ ಎದ್ದು ಕಾಣುತ್ತಿದೆ ಎಂದು ತಾಲ್ಲೂಕಿನ ವಿವಿಧೆಡೆಗಳಿಂದ ದೂರು ಕೇಳಿಬಂದಿದೆ.  ಗ್ರಾಮೀಣ ಮತ್ತು ಪಟ್ಟಣದ ಪ್ರದೇಶದ ಮಕ್ಕಳು ಶಾಲೆಗೆ ಬಂದು ಶಿಕ್ಷಣ ಪಡೆಯಲು ಅನುಕೂಲವಾಗುವಲ್ಲಿ ಬೈಸಿಕಲ್ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಆದರೆ, ಇದೀಗ ಇಂತಹ ಬೈಸಿಕಲ್‌ಗಳನ್ನು ಪಡೆದ ಶಾಲಾ ಮಕ್ಕಳು ಮಾತ್ರ ವಿತರಣೆಯಾದ ಮೊದಲ ದಿನದಿಂದಲೂ ರಿಪೇರಿಗಾಗಿ ಬೈಸಿಕಲ್ ಶಾಪ್‌ಗಳಿಗೆ ಅಲೆದಾಡಬೇಕಾಗಿದೆ.   

ಇದರಿಂದ ಶಾಲಾ ಮಕ್ಕಳಿಗೆ ಉಪಯೋಗಕ್ಕಿಂತ ಖರ್ಚು ಹೆಚ್ಚು ಎಂಬ ಆರೋಪಗಳು ಕೇಳಿಬರುತ್ತಿವೆ.   ಸರ್ಕಾರ ನೀಡುವ ಬೈಸಿಕಲ್ ಉಚಿತವಾದರೂ ಅದರ ರಿಪೇರಿಗೆ ಮಾಡುವ ಖರ್ಚಿನಲ್ಲಿ ಇನ್ನೊಂದು ಹೊಸ ಸೈಕಲ್ ತೆಗೆದುಕೊಳ್ಳಬಹುದು. ಪಟ್ಟಣ, ಗ್ರಾಮೀಣ ಭಾಗದಲ್ಲಿ ಈಗಾಗಲೇ ವಿತರಣೆಯಾಗಿರುವ ಬೈಸಿಕಲ್‌ಗಳು ಮಕ್ಕಳು ಉಪಯೋಗಿಸದೇ ಮನೆಯ ಮೂಲೆ ಸೇರಿ ಕೆಲಸಕ್ಕೆ ಬಾರದಂತಾಗಿವೆ. ಬೈಸಿಕಲ್‌ಗಳ ಗುಣಮಟ್ಟ  ಕಳಪೆಯಾಗಿರುವುದರಿಂದ ಮಕ್ಕಳ ಪಾಲಿಗೆ ದಿನಬೆಳಗಾದರೆ ಬೈಸಿಕಲ್ ರಿಪೇರಿಗೆ ಪೋಷಕರ ಹತ್ತಿರ ಹಣ ಪಡೆದು ಶಾಪ್‌ಗಳಲ್ಲಿ ಸರಿಮಾಡಿಸುವುದೇ ಒಂದು ಕೆಲಸವಾಗಿದೆ ಎನ್ನುತ್ತಾರೆ ಪೋಷಕರು.      

ಒಂದೆಡೆ ಮಕ್ಕಳಿಗೆ ನೀಡುವ ಬೈಸಿಕಲ್‌ಗಳು ಗ್ರಾಮೀಣ ಭಾಗದಲ್ಲಿ ಮನೆಯವರು ಕುಡಿಯುವ ನೀರು, ದನ ಕರುಗಳಿಗೆ ಮೇವು ತರಲು, ಜಮೀನುಗಳಿಗೆ ವಸ್ತುಗಳನ್ನು ಸಾಗಿಸಲು ಬಳಕೆ ಮಾಡುವುದು ಕೆಲವು ಕಡೆಗಳಲ್ಲಿ ಕಂಡು ಬರುತ್ತಿರುವುದರಿಂದ ಪೋಷಕರಿಂದಲೂ ಶಾಲಾ ಮಕ್ಕಳ ಬೈಸಿಕಲ್‌ಗಳು ದುರುಪಯೋಗ ಆಗುತ್ತಿದೆ ಎಂಬ ಆರೋಪವೂ ಇದೆ.

ಸರ್ಕಾರ ಕೋಟಿಗಟ್ಟಲೆ ವೆಚ್ಚ ಮಾಡಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದರೆ, ಬೈಸಿಕಲ್ ತಯಾರು ಮಾಡಲು ಟೆಂಡರ್‌ನಲ್ಲಿ ಆಯ್ಕೆಯಾದ ಕಂಪೆನಿಯವರು ಸರಿಯಾಗಿ ತಯಾರಿಸಿಕೊಡದೇ ಕಳಪೆ ಬೈಸಿಕಲ್ ಮಾಡಿಕೊಟ್ಟು ಮಕ್ಕಳನ್ನು ಮನೆಗೂ ಸೈಕಲ್ ಶಾಪ್‌ಗಳಿಗೂ ಅಲೆದಾಡಿಸುತ್ತಿರುವುದು ಸರಿಯಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಒಟ್ಟಿನಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗುಣಮಟ್ಟದ ಬೈಸಿಕಲ್ ವಿತರಿಸಿ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಾಯ ನೀಡಬೇಕು ಎಂಬುದು ಪೋಷಕರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT