ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಸ್ರವಿಸುತ್ತಿರುವ ಬೇವಿನಮರ!

ಕಾವಾಡಿಗರಹಟ್ಟಿಯ ಘಟನೆಗೆ ಮರುಳಾದ ಜನ
Last Updated 1 ಆಗಸ್ಟ್ 2013, 11:11 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದ ಹೊರವಲಯದಲ್ಲಿರುವ ಕಾವಾಡಿಗರ ಹಟ್ಟಿಯ ಬೇವಿನಮರದಲ್ಲಿ ನಾಲ್ಕೈದು ದಿನಗಳಿಂದ ಹಾಲು ಸುರಿಯುತ್ತಿದ್ದು, ಈ ಅಚ್ಚರಿಯ ವೀಕ್ಷಣೆಗಾಗಿ ಬುಧವಾರ ಜನರು ತಂಡೋಪತಂಡವಾಗಿ ಆಗಮಿಸಿದ್ದರು.

ಕಾವಾಡಿಗರ ಹಟ್ಟಿಯ ಹೊರಭಾಗದಲ್ಲಿರುವ ಹೊಸ ನಿವೇಶನಗಳಾಗಿರುವ ಬೇಲಿಯಲ್ಲಿದ್ದ ಬೇವಿನಮರದಿಂದ ಹಾಲು ಸುರಿಯುತ್ತಿದೆ. ಇದೊಂದು ಅಪಶಕುನವೆಂದು ಭಾವಿಸಿದ ಜನರು, ಮರಕ್ಕೆ  ಅರಿಶಿನ ಕುಂಕುಮ ಹಚ್ಚಿ ಪೂಜೆ ಮಾಡಿದರು.

`ಬೇವಿನ ಮರದಾಗೆ ಹಾಲು ಸುರೀ ಬಾರ್ದು, ಅಳ್ಳಿ ಮರದಲ್ಲಿ ರಕ್ತ ಸುರಿಬಾರ್ದುಅಂತ ಗಾದೆ ಕೇಳಿಲ್ವಾ. ಬೇವಿನ ಮರದಾಗೆ ಹಾಲು ಸುರಿದರೆ ಊರಿಗೆ ಕೇಡಾಗ್ತದೆ...' ಎಂದು ಮರದ ಸುತ್ತಾ ಸೇರಿದ್ದ ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದರು.

ಹಾಲುಸುರಿಸುವ ಬೇವಿನಮರವನ್ನು ನೋಡಲು ಬಂದ ಮಹಿಳೆಯರೆಲ್ಲ, ಮರಕ್ಕೆ ಪೂಜೆ ಮಾಡಿ, ನಮಸ್ಕರಿಸಿ, `ನೋಡ್ರಿ, ಏನ್ ಕೇಡಗಾಲ ಬಂತೋ ಏನೋ. ನಮ್ಮೂರವ್ವ ಸಿಟ್ಟು ಮಾಡ್ಕಂಡೈತೆ. ಅದಕ್ಕೇ ಹಾಲು ಸುರಿಸಿ ಸಿಟ್ ಮಾಡ್ಕಂಡ್ವಳೆ, ಏನ್ ಕಾದೈತೋ ಏನೋ...' ಅಂತ ಬೇಸರ ವ್ಯಕ್ತಪಡಿಸುತ್ತಿದ್ದರು.

ಹೀಗೆ ಚರ್ಚೆಗಳು ಮುಂದುವರಿಯುತ್ತಿದ್ದಂತೆ ನಾಗಮ್ಮ ಎಂಬ ಮಹಿಳೆ ಇದ್ದಕ್ಕಿದ್ದಂತೆ ಸೆಟೆದು ನಿಂತರು. ಆಕೆಯನ್ನು ಇಬ್ಬರು ಹಿಡಿದುಕೊಂಡು, ಬೇವಿನಮರದ ಸಮೀಪ ಕರೆದೊಯ್ದರು. 'ಬೇವಿನಮರದಾಗೆ ಹಾಲು ಸುರಿತೈತೆ. ನಾನು ಉಚ್ಚಂಗವ್ವ. ನನಗೆ ದೇವಸ್ಥಾನ ಕಟ್ಟಿಸಬೇಕು. ಇಲ್ಲೇ ಕಟ್ಟಿಸಬೇಕು..' ಅಂತ ಆಕೆ ಅಪ್ಪಣೆ ಕೊಟ್ಟರು!

ಬೇವಿನಮರದ ವಿಶೇಷ ನೋಡಲು ಬೆಳಿಗಿನಿಂದಲೇ ಸಾಲುಗಟ್ಟಿದ್ದ ಜನರನ್ನು ನಿಯಂತ್ರಿಸಲೆಂದು ಪೊಲೀಸರು ಕೂಡ ಸಜ್ಜಾಗಿದ್ದರು. ಆದರೆ, ಅಂಥ ಅಹಿತಕರ ಘಟನೆಗಳು ಸಂಭವಿಸಲಿಲ್ಲ.

ಈ ನಡುವೆ ಕೆಲವರು ಬೇವಿನಮರದಿಂದ ಹಾಲು ಸುರಿಯುತ್ತಿರುವುದಕ್ಕೆ ವೈಜ್ಞಾನಿಕ ಕಾರಣ ನೀಡಲು ಮುಂದಾದರು. ಇದನ್ನು ಒಪ್ಪದ ಯುವಕರು, `ಈ ಸಾಲಿನಲ್ಲಿ ಬೇಕಾದಷ್ಟು ಬೇವಿನ ಮರಗಳಿವೆ. ಈ ಮರದಿಂದ ಮಾತ್ರ ಯಾಕೆ ಹಾಲು ಸುರಿಯಬೇಕು. ನಮ್ಮ ದೇವರು ಹೇಳಲಿಲ್ಲವಾ, ಇದಕ್ಕೆ ದೇವಸ್ಥಾನ ಕಟ್ಟಿಸಬೇಕು. ಇಲ್ಲೇ ಕಟ್ಟಿಸಬೇಕು' ಅಂತ ಮೌಢ್ಯ ಮರೆದರು.

`ಸಾಮಾನ್ಯ ಜೈವಿಕ ಪ್ರಕ್ರಿಯೆ'
ಒಂದೊಂದು ಪ್ರಭೇದದ ಮರಗಳಿಂದ, ಒಂದೊಂದು ಹಂತದಲ್ಲಿ ಒಂದೊಂದು ರೀತಿಯ ದ್ರವ ಹೊರ ಹೊಮ್ಮುತ್ತದೆ. ಪ್ರತಿಯೊಂದು ಮರಗಳು ಆಹಾರವನ್ನು ಜೀರ್ಣಿಸಿಕೊಂಡ ನಂತರ ಅಜೀರ್ಣ ವಸ್ತುವನ್ನು ಹೀಗೆ ದ್ರವರೂಪದ ಮೂಲಕ ಹೊರ ಹಾಕುತ್ತವೆ. ಉದಾಹರಣೆಗೆ ರಬ್ಬರ್ ಗಿಡದಲ್ಲಿ ಹಾಲು ಬರುವುದು, ಆಲ, ಅರಳಿ ಮರದಲ್ಲಿ ಅಂಟು ಸ್ರವಿಸುವುದು.. ಇತ್ಯಾದಿಗಳು.
ಎಕ್ಕದ ಗಿಡದಿಂದ `ಲೇಟೆಕ್ಸ್' ಎಂಬ ದ್ರವ ಹೊರಬರುತ್ತದೆ. ಈ ಬೇವಿನ ಮರವೂ ಅಂಥದ್ದೇ ದ್ರವವನ್ನು ಸ್ರವಿಸಬಹುದು. ಇದು ವಿಸ್ಮಯವೂ ಅಲ್ಲ, ಅಚ್ಚರಿಯೂ ಅಲ್ಲ. ಸಸ್ಯ ಸಂಕುಲದ ಜೈವಿಕ ಪ್ರಕ್ರಿಯೆಯ ಒಂದು ಭಾಗ ಅಷ್ಟೇ.
- ಜಿ.ಎಸ್.ಸಿದ್ದಲಿಂಗಪ್ಪ, ಪ್ರಾಧ್ಯಾಪಕರು,
ಸಸ್ಯಶಾಸ್ತ್ರವಿಭಾಗ, ಎಸ್‌ಜೆಎಂ ಕಾಲೇಜು, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT