ಲೋಕಸಭೆ: ಬಿಜೆಪಿ ಸೋಲಿಸುವುದೇ ಕಾಂಗ್ರೆಸ್ ಗುರಿ

7

ಲೋಕಸಭೆ: ಬಿಜೆಪಿ ಸೋಲಿಸುವುದೇ ಕಾಂಗ್ರೆಸ್ ಗುರಿ

Published:
Updated:

ಶಿವಮೊಗ್ಗ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್–ಜೆಡಿಎಸ್ ಒಟ್ಟಾಗಿ ಬಿಜೆಪಿ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿರುವ ಬಿ.ವೈ. ರಾಘವೇಂದ್ರ ಅವರನ್ನು ಮಣಿಸುವುದು ಖಚಿತ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ತೀ.ನಾ. ಶ್ರೀನಿವಾಸ್ ವಿಶ್ವಾಸ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ನಾಯಕರಾಗಿ ಯಡಿಯೂರಪ್ಪ ಅವರು ರಾಜ್ಯದ ಅಭಿವೃದ್ಧಿಗೆ ರಚನಾತ್ಮಕವಾಗಿ ಕೆಲಸ ಮಾಡದೇ ಲೋಕಸಭಾ ಚುನಾವಣೆಯಲ್ಲಿ ಮಗನನ್ನು ಕಣಕ್ಕೆ ಇಳಿಸಲು ಕಸರತ್ತು ನಡೆಸಿದ್ದಾರೆ. ಮಗನನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಹಿಂದೊಮ್ಮೆ ದೇವರಾಣೆ ಮಾಡಿದ್ದರು. ಇಂಥವರ ವಿರುದ್ಧ ಹಣ, ಜಾತಿಯ ಬಲವಿಲ್ಲದ ತಮಗೆ ಟಿಕೆಟ್‌ ನೀಡಿದರೂ ಗೆಲುವು ನಿಶ್ಚಿತ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.

ಅಪ್ಪ ಮಕ್ಕಳು ಎರಡು ಅವಧಿ ಸಂಸತ್‌ಗೆ ಆಯ್ಕೆಯಾದರೂ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿಲ್ಲ. ಚುನಾವಣೆ ಸಮಯದಲ್ಲಿ ಕೇಂದ್ರ ಸಚಿವ ಗಡ್ಕರಿ ಅವರನ್ನು ಕರೆಸಿ, ಶಂಕುಸ್ಥಾಪನೆ ಮಾಡಿದ ತುಮರಿ ಸೇತುವೆ ಕಾಮಗಾರಿಗೆ ಟೆಂಡರ್ ಕರೆಯಬೇಕು.
ಸೇತುವೆ ಕಾಮಗಾರಿಗೆ ಇದುವರೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿಲ್ಲ. ನೀಲನಕ್ಷೆ ಸಿದ್ಧವಾಗಿಲ್ಲ. ಅಂದಾಜು ವೆಚ್ಚವೂ ಇಲ್ಲ. ನಿರ್ಮಾಣ ವೆಚ್ಚ ಕಡಿತ ಮಾಡಲಾಗಿದೆ ಎಂದು ರಾಘವೇಂದ್ರ ಸುಳ್ಳು ಹೇಳುತ್ತಿದ್ದಾರೆ. ಕಡಿತ ಮಾಡಿರುವುದು ಬಹುಶಃ ಬೆಂಗಳೂರಿನ ಇವರ ಕಚೇರಿಯಲ್ಲಿ ಇರಬೇಕು ಎಂದು ಲೇವಡಿ ಮಾಡಿದರು.

ಯಡಿಯೂರಪ್ಪ, ರಾಘವೇಂದ್ರ ಅಥವಾ ಆ ಪಕ್ಷದ ಕೇಂದ್ರ ನಾಯಕರಿಗೆ ತಾಕತ್ತಿದ್ದರೆ ತಕ್ಷಣವೇ ತುಮರಿ ಸೇತುವೆ ಕಾಮಗಾರಿಗೆ ಟೆಂಡರ್ ಕರೆಯಬೇಕು ಎಂದು ಸವಾಲು ಹಾಕಿದರು.

ಜಿಲ್ಲೆಯ ರೈಲು ಕಾಮಗಾರಿಗಳ ವಿಚಾರವಾಗಿ ಅವರು ರೈಲು ಬಿಟ್ಟಿದ್ದು ನಿಜ. ಅಡಿಕೆ ಹಾನಿಕರ ಎಂದು ಬಿಜೆಪಿ ಸಚಿವರು ಸಂಸತ್‌ನಲ್ಲಿ ಬಹಿರಂಗ ಹೇಳಿಕೆ ನೀಡಿದಾಗಲೂ ಯಡಿಯೂರಪ್ಪ ತುಟಿ ಬಿಚ್ಚಲಿಲ್ಲ. ಈಗಲೂ ವಿದೇಶದಿಂದ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಆಮದು ತಡೆಯಲು ಕೇಂದ್ರ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ವಿಧಾನಸಭಾ ಚುನಾವಣೆಯ ಸೋಲಿನಿಂದ ಕಾಂಗ್ರೆಸ್ ಮುಖಂಡರು ಭ್ರಮನಿರಸನಗೊಂಡಿದ್ದಾರೆ ಎಂದು ಟೀಕಿಸುವ ರಾಘವೇಂದ್ರ ಅವರಿಗೆ ಕಳೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕೆಜೆಪಿ–ಬಿಜೆಪಿ ನೆಲಕಚ್ಚಿದ್ದು ನೆನಪಿಲ್ಲವೇ? ಎರಡನೇ ದಿನ ಮುಖ್ಯಮಂತ್ರಿಯಾಗಿ ಕುರ್ಚಿ ಕಳೆದುಕೊಂಡ ನಂತರ ಕುರ್ಚಿಗಾಗಿ ಏನೆಲ್ಲ ಮಾಡುತ್ತಿದ್ದಾರೆ ಎಂದು ಜನರು ಗಮನಿಸುತ್ತಿಲ್ಲವೇ ಎಂದು ತಿರುಗೇಟು ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ‘ಸೂಡಾ’ ಮಾಜಿ ಅಧ್ಯಕ್ಷ ಎನ್‌. ರಮೇಶ್, ಪಾಲಿಕೆ ಮಾಜಿ ಸದಸ್ಯ ಪಿ.ವಿ. ವಿಶ್ವನಾಥ್ (ಕಾಶಿ) ಮುಖಂಡರಾದ ಸಿ.ಎಸ್. ಚಂದ್ರಭೂಪಾಲ್, ಎಸ್. ಚಿನ್ನಪ್ಪ, ಎಚ್.ಎಂ. ಮಧು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !