ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ಬದಿ ವ್ಯಾಪಾರ; ನೆಮ್ಮದಿಗೆ ತತ್ವಾರ

Last Updated 19 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬೀದಿ ಬದಿ ವ್ಯಾಪಾರಿಗಳಿಗೆ ಅಂಗಡಿ ಕಟ್ಟಡ ಬೇಕಿಲ್ಲ. ಕರೆಂಟ್‌ ಬಿಲ್‌, ಜಿಎಸ್‌ಟಿ ಯಾವ ಕಾಟವೂ ಇಲ್ಲ’ ಎಂದುಕೊಳ್ಳುವವರೇ ಹೆಚ್ಚು. ಆದರೆ, ಜೀವನೋಪಾಯಕ್ಕಾಗಿ ಬೀದಿ ಬದಿಯಲ್ಲಿ ಸೊಪ್ಪು, ತರಕಾರಿ, ಹಣ್ಣು, ತಿಂಡಿ ಮಾರಿ ಬದುಕುವವರ ಬದುಕು ಮೂರಕ್ಕೆ ಇಳಿದಿಲ್ಲ, ಆರಕ್ಕೆ ಏರಿಲ್ಲ ಎಂಬಂತಾಗಿದೆ. ತಲೆಮಾರುಗಳಿಂದಲೂ ಇದೇ ವೃತ್ತಿ ಮಾಡಿಕೊಂಡಿದ್ದರೂ ಸ್ವಂತ ಸೂರಿಲ್ಲ. ಸಾಲ ಮುಗಿದಿಲ್ಲ, ಮಕ್ಕಳಿಗೆ ಶಿಕ್ಷಣ ಸಿಕ್ಕಿಲ್ಲ, ಬದುಕಿನ ಬಂಡಿ ನಿಂತಲ್ಲೇ ಇದೆ. ಇನ್ನು ದಿನನಿತ್ಯ ವ್ಯಾಪಾರ ಮಾಡುವ ಜಾಗದಲ್ಲಿ ಎದುರಿಸುವ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಸಾಗಿದೆ.

‘ಸಂಜೆಯಾದರೆ ಪೊಲೀಸರಿಗೆ ಮಾಮೂಲಿ ನೀಡಬೇಕು. ಬೇರೆ ಅಂಗಡಿಗಳ ಮುಂದೆ ಕೂತರೆ ಅವರು ಕಿರಿಕಿರಿ ಮಾಡುತ್ತಾರೆ. ರಸ್ತೆ ಬದಿ ಗಾಡಿ ನಿಲ್ಲಿಸಿದರೆ ಪೊಲೀಸರು ಬಂದು ತೆರವುಗೊಳಿಸುತ್ತಾರೆ. ಕೆಲವು ಅಂಗಡಿಯವರು ಫುಟ್‌ಪಾತ್‌ವರೆಗೂ ಸಾಮಾನುಗಳನ್ನು ತಂದಿಡುತ್ತಾರೆ, ಅವರಿಗೆ ಏನೂ ಹೇಳದ ಪೊಲೀಸರು ನಮಗೆ ಮಾತ್ರ ತೊಂದರೆ ಕೊಡುತ್ತಾರೆ. ಅಂಗಡಿ ಮುಂದೆ ನಿಂತರೆ ಬಾಡಿಗೆ ಕೇಳುತ್ತಾರೆ. ಹೀಗಾದರೆ ನಾವು ಎಲ್ಲಿಗೆ ಹೋಗಬೇಕು’ ಎಂಬುದು ಬಹುತೇಕರ ಪ್ರಶ್ನೆ.

ಪ್ರತಿ ವಾರ್ಡ್‌ನಲ್ಲಿ ನಮಗೆಂದೇ ಜಾಗ ನಿಗದಿ ಮಾಡಿ, ಕೆಲವು ರಸ್ತೆಗಳಲ್ಲಿ ಒನ್‌ವೇ ಮಾಡಿ ಒಂದು ಬದಿಯಲ್ಲಿ ವಾಹನ ನಿಲ್ಲಿಸಲು, ಮತ್ತೊಂದು ಬದಿಯಲ್ಲಿ ತಳ್ಳುಗಾಡಿಗಳಿಗೆ ಜಾಗ ಮಾಡಿಕೊಡಿ, ಗುರುತಿನಚೀಟಿ ನೀಡಿ, ಸರ್ಕಾರದ ಸೌಲಭ್ಯಗಳಾದ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆ, ಇಎಸ್‌ಐ, ಪ್ರತಿ ವಾರ್ಡ್‌ನಲ್ಲಿ ಪ್ರತ್ಯೇಕ ಜಾಗ ಕೊಡಿ ಎಂದು ಹಲವು ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದಾರೆ.

ಬೀದಿ ಬದಿ ವ್ಯಾಪಾರಿಗಳು ಯಾವ ಲೆಕ್ಕಕ್ಕೂ ಸಿಗುತ್ತಿಲ್ಲ. ಅವರಿಗೆ ಸ್ವಂತದ್ದೊಂದು ಗುರುತೇ ಇಲ್ಲ. ಇದರಿಂದಾಗಿ ಸರ್ಕಾರದ ಯಾವ ಯೋಜನೆಗಳ ಪ್ರಯೋಜನವೂ ಸಿಗುತ್ತಿಲ್ಲ. ಕೇಂದ್ರ ಸರ್ಕಾರದಿಂದ ‘ಜೀವನೋಪಾಯ ರಕ್ಷಣೆ ಹಾಗೂ ನಿಯಂತ್ರಣ ಕಾಯ್ದೆ 2014’ ಜಾರಿಯಾಗಿದೆಯಷ್ಟೆ. ಸುಪ್ರೀಂ ಕೋರ್ಟ್‌ ಆದೇಶಕ್ಕೂ ಬೆಲೆ ಸಿಕ್ಕಿಲ್ಲ. ಬೀದಿ ಬದಿ ವ್ಯಾಪಾರಿಗಳ ಬಹುದಿನದ ಬೇಡಿಕೆಯ ನಂತರ ಗುರುತಿನ ಚೀಟಿ ನೀಡುವ ಯೋಜನೆಗೆ ಮುಂದಾಗಿರುವ  ಬಿಬಿಎಂಪಿ, ಪ್ರತಿ ವಾರ್ಡ್‌ನಲ್ಲೂ ಸಮೀಕ್ಷೆ ನಡೆಸಲು ಮುಂದಾಗಿದೆ. ಈಗಾಗಲೇ 198 ವಾರ್ಡ್‌ಗಳಲ್ಲಿ ಸಮೀಕ್ಷೆ ಮುಗಿದಿದೆ. ಮಲ್ಲೇಶ್ವರದ 7 ವಾರ್ಡ್‌ಗಳ ಸಮೀಕ್ಷೆ ಬಾಕಿ ಇದೆ. ಸುಮಾರು 25 ಸಾವಿರ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲು ನಿರ್ಧರಿಸಲಾಗಿದೆ. ಆದರೆ, ಚುನಾವಣೆ ಘೋಷಣೆಯಾದ ಕಾರಣ ಈ ಕಾರ್ಯವನ್ನು ಮುಂದೂಡಲಾಗಿದೆ.

ಗೋಳು ಕೇಳುವವರಿಲ್ಲ: ‘ಬೀದಿಬದಿ ವ್ಯಾಪಾರಿಗಳ ಗೋಳು ಕೇಳುವ ಮನಸ್ಸು ಯಾರಿಗೂ ಇಲ್ಲ. ಪೊಲೀಸರು ಹಣ ವಸೂಲಿ ಮಾಡುತ್ತಾರೆ. ಬಿಬಿಎಂಪಿ ಅಧಿಕಾರಿಗಳು ಎತ್ತಂಗಡಿ ಮಾಡುತ್ತಾರೆ. ವ್ಯಾಪಾರ ಮಳಿಗೆ ಇಟ್ಟುಕೊಂಡವರು ಅಡ್ಡಿಪಡಿಸುತ್ತಾರೆ. ಬೆಳಿಗ್ಗೆ ಬಡ್ಡಿಗೆ ಹಣ ತಂದು ಖರೀದಿ ಮಾಡಿ ವ್ಯಾಪಾರ ಮುಗಿಸಿ ರಾತ್ರಿ ಬಡ್ಡಿ ನೀಡಬೇಕು. ಇದರ ನಡುವೆ ಪೊಲೀಸರು, ಅಧಿಕಾರಿಗಳಿಗೆ ಲಂಚ ನೀಡಬೇಕು. ಇದರಿಂದ ಮುಕ್ತಿ ಸಿಗಬೇಕಾದರೆ ನಮಗೊಂದು ಪ್ರತ್ಯೇಕ ಜಾಗ ನೀಡಬೇಕು. ಪ್ರತಿ ವಲಯಕ್ಕೊಂದು ವಲಯ ಕಚೇರಿ ಸ್ಥಾಪಿಸಿ, ನಮ್ಮ ಸಮಸ್ಯೆ, ಅಹವಾಲುಗಳನ್ನು ಹೇಳಿಕೊಳ್ಳಲು ಅನುಕೂಲ ಮಾಡಿಕೊಡುವಂತೆ ಬಿಬಿಎಂಪಿಯವರಿಗೆ ಬೇಡಿಕೆ ಇಡುತ್ತಲೇ ಬಂದಿದ್ದೇವೆ’ ಎಂದು ಪೀಣ್ಯದ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ದೊಡ್ಡಣ್ಣ ಹೇಳುತ್ತಾರೆ.

ಪೀಣ್ಯ 2ನೇ ಕೈಗಾರಿಕಾ ಪ್ರದೇಶ. ಅಲ್ಲಿ ಕಾರ್ಮಿಕ ವರ್ಗದವರೇ ಹೆಚ್ಚಾಗಿ ವಾಸವಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಮನೆ ಬಿಟ್ಟರೆ ರಾತ್ರಿ ಹತ್ತಕ್ಕೆ ಮನೆ ಸೇರುವುದು. ಅವರೆಲ್ಲ ಬರುವ ವೇಳೆಗೆ ಅಂಗಡಿಗಳೆಲ್ಲ ಬಾಗಿಲು ಮುಚ್ಚಿರುತ್ತವೆ. ಅವರಿಗೆ ನಮ್ಮ ಗಾಡಿಗಳೇ ಅನಿವಾರ್ಯ. ಪ್ರತಿದಿನ ಸೊಪ್ಪು, ತರಕಾರಿ ಕೊಳ್ಳಲು ನಮ್ಮ ಬಳಿಯೇ ಬರಬೇಕು. ಇನ್ನು ರಾತ್ರಿ ಆಹಾರ ಪದಾರ್ಥ ಮಾರುವ ಗಾಡಿಗಳನ್ನು ಸಾವಿರಾರು ಕಾರ್ಮಿಕರು ಅವಲಂಬಿಸಿದ್ದಾರೆ. ಸುಮಾರು 100ರಿಂದ 250 ಗಾಡಿಗಳಿವೆ. ಜನಕ್ಕೆ ತೊಂದರೆಯಾಗದ ರೀತಿಯಲ್ಲಿ ಫುಟ್‌ಪಾತ್‌ನಲ್ಲಿ ನಾಲ್ಕು ಅಡಿ ಬಿಟ್ಟು ಉಳಿದ ಜಾಗದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅನುವು ಮಾಡಿಕೊಟ್ಟರೆ ಸಾಕು ಎನ್ನುತ್ತಾರೆ ಅವರು.

ಬೀದಿ ಬದಿ ವ್ಯಾಪಾರಿಗಳಿಗೆ ನಿಗಮ ಮಂಡಳಿ ಸ್ಥಾಪಿಸಬೇಕು. ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆ, ಇಎಸ್‌ಐ, ಪಿಂಚಣಿ ನೀಡಬೇಕು. ಗೋದಾಮು, ಟಾರ್ಪಲ್‌, ತಳ್ಳುಗಾಡಿಗಳ ಸೌಲಭ್ಯ ನೀಡಬೇಕು ಎಂದು ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ರಂಗಸ್ವಾಮಿ ಒತ್ತಾಯಿಸಿದರು.

ಸ್ಥಳೀಯ ನಿವಾಸಿಗಳಿಂದ ಕಿರುಕುಳ: ಪ್ರತಿಷ್ಠಿತ ಬಡಾವಣೆ ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸ್ಥಳೀಯ ನಿವಾಸಿಗಳ ಸಂಘದವರು ಕುರುಕುಳ ನೀಡುತ್ತಿದ್ದಾರೆ ಎಂದು ಬೆಂಗಳೂರು ಜಿಲ್ಲಾ ವ್ಯಾಪಾರಿಗಳ ಒಕ್ಕೂಟದ ವಿನಯ್‌ ಶ್ರೀನಿವಾಸ ಹೇಳುತ್ತಾರೆ. ಜನಪ್ರತಿನಿಧಿಗಳೂ ಶ್ರೀಮಂತರ ಮಾತನ್ನೇ ಕೇಳುತ್ತಾರೆ. ರಸ್ತೆ ಬದಿ ಯಾರಿಗೂ ತೊಂದರೆಯಾಗದ ಜಾಗದಲ್ಲಿದ್ದರೂ ವಿನಾಕಾರಣ ಎತ್ತಂಗಡಿ ಮಾಡಿಸುತ್ತಾರೆ ಎನ್ನುತ್ತಾರೆ ಅವರು.

ಮೆಟ್ರೊ ಸೇತುವೆ, ಫ್ಲೈ ಓವರ್‌, ಬೃಹತ್‌ ರಸ್ತೆ ನಿರ್ಮಾಣದಿಂದಾಗಿ ಬೀದಿ ಬದಿ ವ್ಯಾಪಾರಿಗಳಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ಈ ತರಹದ ಅಭಿವೃದ್ಧಿಯಿಂದಾಗಿ ಮರಗಳ ನಾಶವಾಗಿದೆ. ವ್ಯಾಪಾರಿಗಳಿಗೆ ನೆರಳಿಲ್ಲದಂತಾಗಿದೆ. ಹೊಸೂರಲ್ಲಿ ಮೆಟ್ರೊ– 2ನೇ ಹಂತದ ಸೇತುವೆ ನಿರ್ಮಾಣಕ್ಕಾಗಿ ಬೀದಿ ಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಲಾಗಿದೆ. ಅಭಿವೃದ್ಧಿಯಿಂದಾಗಿ ಸಹಜವಾಗಿಯೇ ವ್ಯಾಪಾರಿಗಳಿಗೆ ಜಾಗ ಕಡಿಮೆಯಾಗುತ್ತಾ ಸಾಗಿದೆ. ಕಾರು, ಬೈಕುಗಳಿಗೆ ಪಾರ್ಕಿಂಗ್‌ ಜಾಗ ಮಾಡಿಕೊಡುತ್ತಿದ್ದಾರೆ. ಆದರೆ, ವ್ಯಾಪಾರಿಗಳಿಗೆ ಮಾತ್ರ ಜಾಗ ನೀಡುತ್ತಿಲ್ಲ. ಜನಪ್ರತಿನಿಧಿಗಳು, ನೀತಿ ನಿರೂಪಕರು ನಗರದ ರಸ್ತೆಗಳನ್ನು ನೋಡುವ ಪರಿಕಲ್ಪನೆಯೇ ಸರಿಯಿಲ್ಲ. ನಗರದಲ್ಲಿ ಅಂದಾಜು 1.5 ಲಕ್ಷ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಆದರೆ, ಬಿಬಿಎಂಪಿ ಸಮೀಕ್ಷೆಯು 25 ಸಾವಿರ ವ್ಯಾಪಾರಿಗಳನ್ನು ಮಾತ್ರ ಗುರುತಿಸಿದೆ. ಹಾಗಿದ್ದರೆ ಉಳಿದವರ ಪಾಡೇನು? ಆತುರದ ಸಮೀಕ್ಷೆ, ಸಾಕಷ್ಟು ಸಿಬ್ಬಂದಿ ಇಲ್ಲದಿರುವ ಕಾರಣ ಸಮೀಕ್ಷೆ ಅಪೂರ್ಣವಾಗಿದೆ ಎಂದು ವಿನಯ್‌ ಹೇಳುತ್ತಾರೆ.

ಎ.ಸಿ ಮಾರುಕಟ್ಟೆ ಬೇಕೇ?: ವಿಜಯನಗರದಲ್ಲಿ ವಸತಿ ಸಚಿವ ಎಂ.ಕೃಷ್ಣಪ್ಪ ಅವರ ಮುತುವರ್ಜಿಯಿಂದ ಹವಾನಿಯಂತ್ರಿತ ಮಾರುಕಟ್ಟೆ ನಿರ್ಮಾಣವಾಗುತ್ತಿದೆ. ದೆಹಲಿಯ ಮಾರುಕಟ್ಟೆ ಮಾದರಿಯ ಈ ಯೋಜನೆಗೆ ₹18 ಕೋಟಿ ವೆಚ್ಚ ಮಾಡಲಾಗುತ್ತಿದೆ. ಅದು ಅಂಡರ್‌ಗ್ರೌಂಡ್‌ನಲ್ಲಿದೆ. ಆದರೆ, ಅಲ್ಲಿಗೆ ತರಕಾರಿ ಖರೀದಿಸಲು ಯಾರು ಬರುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ.

ದುಡಿದ ಹಣ ಶೌಚಾಲಯಕ್ಕೆ!
ಬೆಳಿಗ್ಗೆಯಿಂದ ಸಂಜೆವರೆಗೂ ವ್ಯಾಪಾರ ಮಾಡುವ ಮಹಿಳೆಯರ ಸ್ಥಿತಿ ಹೇಳತೀರದು. ನಾವು ಸಾರ್ವಜನಿಕ ಶೌಚಾಲಯ ಬಳಸುವುದು ಅನಿವಾರ್ಯ. ದಿನದಲ್ಲಿ ಐದಾರು ಸಲವಾದರೂ ಹೋಗಬೇಕಾಗುತ್ತದೆ. ಪ್ರತಿಸಲವೂ ಐದು ರೂಪಾಯಿ ಪಾವತಿಸಬೇಕು. ದುಡಿದ ನಾಲ್ಕು ಕಾಸಿನಲ್ಲಿ ಮನೆ ಬಾಡಿಗೆ, ಮಕ್ಕಳ ಖರ್ಚು, ಸ್ಕೂಲು ಫೀಸು, ಔಷಧಿ, ಕರೆಂಟು ಬಿಲ್ಲು ಕಟ್ಟುವುದೇ ಕಷ್ಟ. ಅದರ ನಡುವೆ ಶೌಚಾಲಯಕ್ಕೆ ಪ್ರತಿದಿನ ₹20ರಿಂದ 30 ಖರ್ಚು ಮಾಡಬೇಕಾಗಿದೆ.

‘ಇಲ್ಲೇ ದಿನಾ ಬರ್ತೀವಿ ಕಡಿಮೆ ತೆಗೊಳ್ರಿ’ ಅಂದ್ರೂ ಕೇಳಲ್ಲ. ವಯಸ್ಸಾದ ಮಹಿಳೆಯರಿಗೆ ಶುಗರ್‌ ಇದೆ. ಅವರು ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾಗುತ್ತದೆ. ಅವರ ಕಷ್ಟ ಹೇಳತೀರದು. ಈ ಕಾರಣಕ್ಕೆ ಹೆಚ್ಚು ನೀರನ್ನೇ ಕುಡಿಯುವುದಿಲ್ಲ. ನಮ್ಮಂಥ ವ್ಯಾಪಾರಸ್ಥ ಮಹಿಳೆಯರಿಗೆ ಶೌಚಾಲಯಗಳನ್ನು ಉಚಿತವಾಗಿ ಬಳಸುವ ವ್ಯವಸ್ಥೆ ಮಾಡಬೇಕು.

–ಪ್ರೇಮಾ, ತರಕಾರಿ ವ್ಯಾಪಾರಿ, ಕುರುಬರಹಳ್ಳಿ (ಬೀದಿ ಬದಿ ವ್ಯಾಪಾರಿಗಳ ಸಂಘದ ಮಹಿಳಾ ಘಟಕದ ಅಧ್ಯಕ್ಷೆ)

**

ಸಾವಿರ ಶೌಚಾಲಯ ನಿರ್ಮಾಣ
ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಗುರುತಿನ ಚೀಟಿ ನೀಡುವ ಯೋಜನೆ ಈಗಾಗಲೇ ಪೂರ್ಣಗೊಂಡಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಕಾರಣ ಗುರುತಿನ ಚೀಟಿ ವಿತರಿಸಿಲ್ಲ. ವಿಜಯನಗರದಲ್ಲಿ ಪಾಲಿಕಾ ಬಜಾರ್‌ ನಿರ್ಮಾಣ ಹಂತದಲ್ಲಿದೆ. ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 1 ಸಾವಿರ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಮುಂದೆ ಗುರುತಿನ ಚೀಟಿ ಇರುವ ವ್ಯಾಪಾರಿಗಳು ಉಚಿತವಾಗಿ ಶೌಚಾಲಯ ಬಳಸುವಂತೆ ಮಾಡುತ್ತೇವೆ. ಗುರುತಿನ ಚೀಟಿ ದುರುಪಯೋಗವಾಗಬಾರದು ಎಂಬ ಉದ್ದೇಶದಿಂದ ಮೈಕ್ರೋ ಚಿಪ್‌ ಇರುವ ಗುರುತಿನ ಚೀಟಿ ನೀಡುತ್ತಿದ್ದೇವೆ. ಅದನ್ನು ನಕಲು ಮಾಡಲು ಸಾಧ್ಯವಿಲ್ಲ. ಅವರ ಬಹುದಿನದ ಬೇಡಿಕೆಯಂತೆ ಪ್ರತಿ ವಾರ್ಡ್‌ನಲ್ಲಿ ಸ್ಥಳ ಗುರುತಿಸುವ ಕಾರ್ಯ ಮಾಡುತ್ತೇವೆ.

–ಆರ್‌. ಸಂಪತ್‌ರಾಜ್‌, ಮೇಯರ್‌ (ಕಾಂಗ್ರೆಸ್‌)

**

ಒಂದು ಕುಟುಂಬಕ್ಕೆ ಎರಡು ಅಂಗಡಿ
ಹೊಸ ವಾರ್ಡ್‌ಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಜಾಗದ ಕೊರತೆಯಿಲ್ಲ. ಹಳೆಯ ವಾರ್ಡ್‌ಗಳಲ್ಲಿ ಸಮಸ್ಯೆ ಇದೆ. ಫುಟ್‌ಪಾತ್‌ಗಳಲ್ಲಿ ವ್ಯಾಪಾರ ಮಾಡುವುದರಿಂದ ಅವರಿಗಷ್ಟೇ ಅಲ್ಲ, ಹಾದಿಹೋಕರಿಗೂ ತೊಂದರೆಯಾಗುತ್ತಿದೆ. ಸರ್ಕಲ್‌ಗಳಲ್ಲಿ, ದಿನಕ್ಕೊಂದು ಸಂದಿಗಳಲ್ಲಿ ಅಂಗಡಿ ಹಾಕುತ್ತಾರೆ. ಒಂದು ದಿನ ತರಕಾರಿ ಅಂಗಡಿ ಇದ್ದರೆ ಮತ್ತೊಂದು ದಿನ ಬಟ್ಟೆ ಅಂಗಡಿ ಇರುತ್ತದೆ. ಇದರಿಂದಾಗಿ ಪೊಲೀಸರಿಗೂ ತಲೆನೋವಾಗಿದೆ. ಗುರುತಿನಚೀಟಿ ನೀಡಿದ ನಂತರ ಬೇರೆ ವಾರ್ಡ್‌ನವರು ಬಂದು ವ್ಯಾಪಾರ ಮಾಡುವುದನ್ನು ತಪ್ಪಿಸಬಹುದು. ಒಂದೇ ಕುಟುಂಬದವರು ನಾಲ್ಕಾರು ಅಂಗಡಿ ಹಾಕಿಕೊಂಡಿರುತ್ತಾರೆ. ಕುಟುಂಬಕ್ಕೆ ಎರಡೇ ಅಂಗಡಿ ಎಂದು ನಿಗದಿಪಡಿಸುವುದು, ಸೂಕ್ತ ಜಾಗ ಗುರುತಿಸುವುದು, ಮೂಲ ಸೌಕರ್ಯ ಕಲ್ಪಿಸುವುದು, ಗುರುತಿನ ಚೀಟಿ ಇದ್ದವರಿಗೆ ಉಚಿತ ಶೌಚಾಲಯ ಬಳಕೆಗೆ ಅವಕಾಶ ಕಲ್ಪಿಸುವುದು ನಮ್ಮ ಗುರಿ.

–ನೇತ್ರಾ ನಾರಾಯಣ್‌, ಪಾಲಿಕೆ ಸದಸ್ಯೆ (ಜೆಡಿಎಸ್‌)

ಕೇಸು ಮುಗಿದಿಲ್ಲ, ಶಾಸಕರು ಸಹಾಯ ಮಾಡುತ್ತಿಲ್ಲ
ಶಿವಾಜಿನಗರದ ಬೌರಿಂಗ್‌ ಆಸ್ಪತ್ರೆ ರಸ್ತೆಗಳಲ್ಲಿ ದಶಕಗಳಿಂದ ನೆಲೆಯೂರಿದ್ದ ವ್ಯಾಪಾರಿಗಳನ್ನು 2 ವರ್ಷಗಳ ಹಿಂದೆ ತೆರವುಗೊಳಿಸಿದ್ದಾರೆ. ವ್ಯಾಪಾರಿಗಳು ಕೋರ್ಟ್‌ ಮೆಟ್ಟಿಲೇರಿದ್ದಾರೆ. ಆದರೆ ಅದರ ವಿಚಾರಣೆಯೇ ನಡೆಯುತ್ತಿಲ್ಲ. ಅನೇಕರು ಈಗಲೂ ಅಲ್ಲಿಯೇ ಬಂದು ವ್ಯಾಪಾರ ಮಾಡುತ್ತಿದ್ದಾರೆ. ಅವರಿಗೆ ಪೊಲೀಸರ ಕಿರುಕುಳ ಹೆಚ್ಚಾಗಿದೆ.

‘ಎರಡು ವರ್ಷಗಳಿಂದ ಆಸ್ಪತ್ರೆಯ ಆವರಣದ ಮೂಲೆಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದೇನೆ. ಆದರೆ ದಿನಾ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ಇಲ್ಲಿ ವ್ಯಾಪಾರ ಮಾಡಬೇಡಿ. ಕೇಸು ಇನ್ನೂ ಕೋರ್ಟ್‌ನಲ್ಲಿದೆ ಅಂತಾರೆ.  ಹೈಕೋರ್ಟ್‌ಗೆ ನಾನೇ ಹೋಗಿ ವಿಚಾರಿಸಿ ಬಂದಿದ್ದೇನೆ. ಆ ಕೇಸನ್ನು ನಡೆಸುತ್ತಲೇ ಇಲ್ಲ. ಹೀಗಾದರೆ ನಾವು ಎಲ್ಲಿಗೆ ಹೋಗಬೇಕು? ಕೇಸು  ಇಥ್ಯರ್ಥವಾಗದೇ ಇದ್ದರೂ ರಸೆಲ್‌ ಮಾರ್ಕೆಟ್‌, ಕಾಮತ್‌ ಹೋಟೆಲ್‌ ರಸ್ತೆ, ಇಬ್ರಾಹಿಂ ಸ್ಟ್ರೀಟ್‌, ಮೀನಾಕ್ಷಿ ದೇವಸ್ಥಾನದ ರಸ್ತೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಿದ್ದಾರೆ. ಬೌರಿಂಗ್‌ ಆಸ್ಪತ್ರೆಯ ಮುಂದೆ ಮಾತ್ರ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡವರು ಬೌರಿಂಗ್‌ ಶವಾಗಾರದ ಮುಂದೆ ಗಾಡಿಯಲ್ಲಿ ಬಟ್ಟೆ ವ್ಯಾಪಾರ ಮಾಡುವ ಶಹನಾಜ್‌.

‘ನಮ್ಮ ಗೋಳನ್ನು ಕೇಳಲು ಯಾರೂ ಇಲ್ಲ. ಇಲ್ಲಿನ ಶಾಸಕ ರೋಷನ್‌ ಬೇಗ್‌  ಅವರ ಬಳಿ ಹೋದರೆ, ನಿಮ್ಮ ವೋಟು ಎಲ್ಲಿದೆ ಚೀಟಿ ತೋರಿಸಿ ಎಂದು ಕೇಳುತ್ತಾರೆ. ನನ್ನ ವೋಟಿರುವುದು ಟ್ಯಾನಿ ರಸ್ತೆಯಲ್ಲಿ. ಹದಿನೈದು ವರ್ಷಗಳಿಂದ ಇಲ್ಲಿಯೇ ವ್ಯಾಪಾರ ಮಾಡುತ್ತಿದ್ದೇನೆ. ಪೊಲೀಸರು ಬಂದಾಗ ಜಾಗ ಖಾಲಿ ಮಾಡಬೇಕು’ ಎನ್ನುತ್ತಾರೆ ಚಪ್ಪಲಿ ವ್ಯಾಪಾರಿ ವಾಜಿದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT