ಜಿಲ್ಲೆಯಲ್ಲಿ 1.17 ಲಕ್ಷ ಮತದಾರರು

7
ಮೂರು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ

ಜಿಲ್ಲೆಯಲ್ಲಿ 1.17 ಲಕ್ಷ ಮತದಾರರು

Published:
Updated:

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಮತ್ತು ಪುತ್ತೂರು ನಗರಸಭೆ ಹಾಗೂ ಬಂಟ್ವಾಳ ಪುರಸಭೆಗೆ ಚುನಾವಣಾ ಪ್ರಕ್ರಿಯೆ ಆರಂಭವಾಗಿದ್ದು, ಮೂರೂ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 1.17 ಲಕ್ಷ ಮತದಾರರು ಮತ ಚಲಾವಣೆಯ ಅರ್ಹತೆ ಪಡೆದಿದ್ದಾರೆ.

ಚುನಾವಣಾ ಸಿದ್ಧತೆ ಕುರಿತು ಶುಕ್ರವಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ‘ಉಳ್ಳಾಲ ಮತ್ತು ಪುತ್ತೂರು ನಗರಸಭೆಯ ತಲಾ 31 ವಾರ್ಡ್ ಹಾಗೂ ಬಂಟ್ವಾಳ ಪುರಸಭೆಯ 27 ವಾರ್ಡ್‌ಗಳಿಗೆ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಉಳ್ಳಾಲ ನಗರಸಭೆಯಲ್ಲಿ 44,273, ಪುತ್ತೂರು ನಗರಸಭೆಯಲ್ಲಿ 39,532 ಮತ್ತು ಬಂಟ್ವಾಳ ಪುರಸಭೆಯಲ್ಲಿ 33,640 ಮತದಾರರು ಇದ್ದಾರೆ’ ಎಂದರು.

ಮೊದಲ ಹಂತದ ಅಂತಿಮ ಮತದಾರರ ಪಟ್ಟಿ ‍ಪ್ರಕಟಿಸಲಾಗಿದೆ. ಆಗಸ್ಟ್‌ 10ರವರೆಗೂ ಹೆಸರು ಸೇರಿಸಲು ಅವಕಾಶವಿದೆ. ಜಿಲ್ಲೆಯಲ್ಲಿ ಈ ಚುನಾವಣೆಯಲ್ಲೂ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 57,847 ಪುರುಷರು ಮತ್ತು 59,420 ಮಹಿಳೆಯರು ಮತದಾನಕ್ಕೆ ಅರ್ಹರಿದ್ದಾರೆ ಎಂದು ತಿಳಿಸಿದರು.

ಆಯಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡವರು ಮಾತ್ರವೇ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿದೆ. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಒಬ್ಬರು ಮತ್ತು ಪಕ್ಷೇತರ ಅಭ್ಯರ್ಥಿಗಳಿಗೆ ಐವರು ಸೂಚಕರು ಸಹಿ ಮಾಡಬೇಕು ಎಂದು ಹೇಳಿದರು.

ಇವಿಎಂ ಬಳಕೆ:  ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಕೆ ಮಾಡಲಾಗುತ್ತಿದೆ. 145 ಕಂಟ್ರೋಲ್‌ ಯೂನಿಟ್‌ ಮತ್ತು 145 ಬ್ಯಾಲೆಟ್‌ ಯೂನಿಟ್‌ಗಳನ್ನು ಚುನಾವಣೆಗೆ ಬಳಸಲಾಗುತ್ತಿದೆ. ಶೇಕಡ 5ರಷ್ಟು ಮತಯಂತ್ರಗಳನ್ನು ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮಗಳಿಗಾಗಿ ಬಳಸಲಾಗುತ್ತಿದೆ ಎಂದರು.

ಮತಯಂತ್ರಗಳಲ್ಲಿ ಅಭ್ಯರ್ಥಿಯ ಭಾವಚಿತ್ರ ಪ್ರಕಟಿಸಲಾಗುವುದು. ‘ನೋಟಾ’ ಚಲಾವಣೆಗೂ ಅವಕಾಶವಿದೆ. ಮೊದಲ ಹಂತದಲ್ಲಿ ತಂತ್ರಾಂಶದ ನೆರವಿನಲ್ಲಿ ಮತಯಂತ್ರಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ. ಎರಡನೇ ಹಂತದಲ್ಲಿ ಮತಗಟ್ಟೆವಾರು ಹಂಚಿಕೆ ನಡೆಯಲಿದೆ ಎಂದು ಹೇಳಿದರು.

ಶೇ 50 ಮಹಿಳಾ ಮೀಸಲು:  ಹಿಂದಿನ ಚುನಾವಣೆಗಳಲ್ಲಿ ಶೇ 33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿತ್ತು. ಈ ಚುನಾವಣೆಯಲ್ಲಿ ಶೇ 50ರಷ್ಟು ಸ್ಥಾನಗಳನ್ನು ಮೀಸಲಿಡಲಾಗಿದೆ. ಈಗಾಗಲೇ ಮೀಸಲಾತಿ ಪ್ರಕಟಿಸಿದ್ದು, ಅದರಂತೆಯೇ ಚುನಾವಣೆ ನಡೆಯಲಿದೆ ಎಂದರು.

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಆ ಸಮುದಾಯದ ಅಭ್ಯರ್ಥಿಗಳು ಇಲ್ಲದಿದ್ದರೆ ಪರಿಶಿಷ್ಟ ಪಂಗಡದ ಮತ್ತು ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರದಲ್ಲಿ ಆ ಸಮುದಾಯದ ಅಭ್ಯರ್ಥಿಗಳು ಇಲ್ಲದಿದ್ದರೆ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಸ್ಪರ್ಧಿಸಲು ಅವಕಾಶವಿದೆ. ಹಿಂದುಳಿದ ವರ್ಗಗಳ ‘ಎ‘ ಮತ್ತು ‘ಬಿ’ ಮೀಸಲು ಕ್ಷೇತ್ರಗಳಲ್ಲೂ ಈ ರೀತಿಯ ಪರಸ್ಪರ ಬದಲಾವಣೆಗೆ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ನೀತಿಸಂಹಿತೆ ಜಾರಿ:  ಚುನಾವಣಾ ವೇಳಾಪಟ್ಟಿ ಪ್ರಕಟವಾದ ತಕ್ಷಣದಿಂದಲೇ (ಗುರುವಾರ) ಮಾದರಿ ನೀತಿಸಂಹಿತೆಯೂ ಜಾರಿಯಲ್ಲಿದೆ. ನೀತಿಸಂಹಿತೆ ಉಲ್ಲಂಘನೆ ತಡೆಯಲು ಮತ್ತು ಉಲ್ಲಂಘನೆ ಆಗಿರುವ ಪ್ರಕರಣಗಳ ಪತ್ತೆಗೆ ಮೂರೂ ಸ್ಥಳೀಯ ಸಂಸ್ಥೆಗಳಲ್ಲಿ ತಲಾ ಮೂವರು ಅಧಿಕಾರಿಗಳ ತಂಡ ರಚಿಸಲಾಗಿದೆ ಎಂದರು.

ಉಳ್ಳಾಲ ನಗರಸಭೆಗೆ ತಲಾ ನಾಲ್ವರು ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಪುತ್ತೂರು ನಗರಸಭೆಗೆ ತಲಾ ಐವರು ಮತ್ತು ಬಂಟ್ವಾಳ ಪುರಸಭೆಗೆ ತಲಾ ಮೂವರು ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !