ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ನಾಲ್ಕಂಕಿಗೆ ಏರಿದ ಕೋವಿಡ್‌ ಪ್ರಕರಣ

ಜಿಲ್ಲೆಯಲ್ಲಿ ಹೆಚ್ಚಿದ ಸೋಂಕಿನ ಪ್ರಮಾಣ: ಮತ್ತೆ ನಾಲ್ಕು ಕಂಟೈನ್‌ಮೆಂಟ್ ವಲಯ
Last Updated 30 ಏಪ್ರಿಲ್ 2021, 4:15 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯಲ್ಲಿ ಗುರುವಾರ 1,175 ಮಂದಿಗೆ ಕೋವಿಡ್–19 ದೃಢವಾಗಿದ್ದು, ಎರಡು ವರ್ಷಗಳಲ್ಲಿ ಗರಿಷ್ಠ ಪ್ರಮಾಣದ ಪ್ರಕರಣಗಳು ಪತ್ತೆಯಾಗಿವೆ. ಮೃತಪಟ್ಟ ವ್ಯಕ್ತಿಯೊಬ್ಬರಿಗೆ ಗುರುವಾರ ಕೋವಿಡ್‌ ಇರುವುದು ದೃಢವಾಗಿದೆ. ಈ ಮಧ್ಯೆ 206 ಮಂದಿ ಗುಣಮುಖರಾಗಿದ್ದಾರೆ.

ಸದ್ಯ ಜಿಲ್ಲೆಯಲ್ಲಿ 5,662 ಸಕ್ರಿಯ ಪ್ರಕರಣಗಳಿವೆ. ಗುರುವಾರ ನಾಲ್ಕು ಕಂಟೈನ್‌ಮೆಂಟ್ ವಲಯ ಘೋಷಣೆ ಮಾಡಲಾಗಿದೆ. ನಗರದ ಮಿಲಾಗ್ರಿಸ್ ಅಪಾರ್ಟ್‌ಮೆಂಟ್ ಒಂದರಲ್ಲಿ 6 ಮಂದಿಗೆ ಮತ್ತು ಬಲ್ಲಾಳ್‌ಬಾಗ್ ಬಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ 5 ಮಂದಿಗೆ ಕೋವಿಡ್‌–19 ದೃಢಪಟ್ಟಿದೆ.

ಮೇರಿಹಿಲ್ ಬಳಿಯ ಮನೆಯೊಂದರಲ್ಲಿ 7 ಮಂದಿಗೆ ಮತ್ತು ಬಂಟ್ವಾಳ ಬಳಿಯ ಮನೆಯೊಂದರಲ್ಲಿ 6 ಮಂದಿಗೆ ಸೋಂಕು ತಗುಲಿದೆ. ಈ ನಾಲ್ಕು ಪ್ರದೇಶವನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಣೆ ಮಾಡಲಾಗಿದೆ. ಇದರೊಂದಿಗೆ ಕಂಟೈನ್‌ಮೆಂಟ್ ವಲಯದ ಸಂಖ್ಯೆ 43 ಕ್ಕೇರಿದೆ.

2,295 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಗುರುವಾರ 2,995 ಮಂದಿ ಕೋವಿಡ್ ನಿರೋಧಕ ಲಸಿಕೆಯನ್ನು ಪಡೆದಿದ್ದಾರೆ.

ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಉಪಕೇಂದ್ರಗಳಲ್ಲಿ ಗುರುವಾರ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮವಿದ್ದ ಕಾರಣ ಲಸಿಕೆಯ ವಿತರಣೆ ನಡೆದಿಲ್ಲ. ಬದಲಾಗಿ ಜಿಲ್ಲಾಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಲಸಿಕೆ ಅಭಿಯಾನ ನಡೆದಿದೆ. ಜಿಲ್ಲೆಗೆ ಗುರುವಾರ ಮಧ್ಯಾಹ್ನ ವೇಳೆ 12 ಸಾವಿರ ಡೋಸ್ ಕೋವಿಶೀಲ್ಡ್ ಲಸಿಕೆ ಬಂದಿದೆ ಎಂದು ಲಸಿಕೆ ನೋಡಲ್‌ ಅಧಿಕಾರಿ ಡಾ.ರಾಜೇಶ್‌ ತಿಳಿಸಿದ್ದಾರೆ.

50 ವೆಂಟಿಲೇಟರ್‌ ಸಾಮರ್ಥ್ಯದ ಐಸಿಯು: ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಮೊದಲನೇ ಮಹಡಿಯಲ್ಲಿರುವ ಡಯಾಲಿಸಿಸ್‌ಗೆ ಬಳಸಲಾದ ಕೊಠಡಿ, ಸಸ್ಪೆಕ್ಟ್ ವಾರ್ಡ್‌ಗಳನ್ನು ಹಳೆಯ ವೈದ್ಯಕೀಯ ಬ್ಲಾಕ್‌ಗೆ ಸ್ಥಳಾಂತರಿಸಬೇಕು. 15 ವೆಂಟಿಲೇಟರ್ ಸಾಮರ್ಥ್ಯದ ಐಸಿಯು ಅನ್ನು 50 ವೆಂಟಿಲೇಟರ್ ಸಾಮರ್ಥ್ಯದ ಐಸಿಯು ಆಗಿ ಪರಿವರ್ತಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಶಸ್ತ್ರಚಿಕಿತ್ಸಕ ಡಾ.ಸದಾಶಿವ ಶ್ಯಾನುಭೋಗ್‌ ಅವರಿಗೆ ಸೂಚಿಸಿದರು.

ಗುರುವಾರ ವೆನ್ಲಾಕ್‌ ಆಸ್ಪತ್ರೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವೈದ್ಯರೊಂದಿಗೆ ಚರ್ಚಿಸಿ ಅವಶ್ಯಕತೆಯಿರುವ 50 ಸಾಫ್ಟ್ ನರ್ಸ್‌ಗಳನ್ನು ನೇಮಕಾತಿ ಮಾಡಲು ನಿರ್ಣಯಿಸಲಾಗಿದೆ ಎಂದರು.

ತೀವ್ರತರವಲ್ಲದ ರೋಗ ಲಕ್ಷಣಗಳು ಇರುವವರನ್ನು (ಕೆಟಗರಿ-ಎ, ಅಕ್ಸಿಜನ್ ಅಗತ್ಯವಿಲ್ಲದಿರುವ ಕೆಟಗರಿ-ಬಿ) ಹಾಗೂ ರೋಗ ಲಕ್ಷಣಗಳಿಂದ ಗುಣಮುಖರಾಗಿದ್ದು, 10 ದಿನಗಳನ್ನು ಪೂರ್ಣಗೊಳಿಸದ ಕೋವಿಡ್ ರೋಗಿಗಳನ್ನು ಇಎಸ್ಐ. ಆಸ್ಪತ್ರೆಗೆ ಸ್ಥಳಾಂತರಿಸಲು ಸೂಚಿಸಲಾಯಿತು.
ಆಸ್ಪತ್ರೆಯಲ್ಲಿ ಆಹಾರ ಮತ್ತು ಸ್ವಚ್ಛತೆಯ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿ, ರೋಗಿಗಳ ಆರೋಗ್ಯದ ಬಗ್ಗೆ ವಿಚಾರಿಸಿ, ರೋಗಿಗಳಿಗೆ ಒಳ್ಳೆಯ ಆಹಾರ ನೀಡುತ್ತಿರುವುದರ ಬಗ್ಗೆ ಮಾಹಿತಿ ಪಡೆದರು.

ಆಸ್ಪತ್ರೆಯವರೊಂದಿಗೆ ಚರ್ಚಿಸಿ ಹೆಚ್ಚಿನ ವೈದ್ಯರು ಮತ್ತು ಸಾಫ್ಟ್ ನರ್ಸ್‌ಗಳನ್ನು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಲು ನಿಯೋಜಿಸುವಂತೆ ಕೆ.ಎಂ.ಸಿ. ಆಸ್ಪತ್ರೆಯ ಆಡಳಿತಾಧಿಕಾರಿಗೆ ತಿಳಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸದಾಶಿವ ಶ್ಯಾನುಭೋಗ್, ತಜ್ಞ ವೈದ್ಯ ಡಾ.ಶರತ್, ಕೆಎಂಸಿಯ ಡಾ.ದಾಮೋದರ್ ಶೆಣೈ ಮತ್ತು ಡಾ.ಜೋನ್ ಉಪಸ್ಥಿತರಿದ್ದರು.

ಕೋವಿಡ್ ವಾರ್ಡ್‌ಗೆ ಡಿಸಿ ಭೇಟಿ

ವೆನ್ಲಾಕ್ ಆಸ್ಪತ್ರೆಯ ಕೋವಿಡ್ ವಾರ್ಡ್‌ಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಭೇಟಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಹಲವು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಆಸ್ಪತ್ರೆಗೆ ಭೇಟಿ ನೀಡಿ, ಕೋವಿಡ್ ಸೋಂಕಿತರೊಂದಿಗೆ ಜಿಲ್ಲಾಧಿಕಾರಿ ಮಾತನಾಡಿದರು. ವೆನ್ಲಾಕ್ ಆಸ್ಪತ್ರೆಯಲ್ಲಿ ಸಿಗುವ ಚಿಕಿತ್ಸೆ ಹಾಗೂ ಮೂಲಸೌಕರ್ಯಗಳ ಬಗ್ಗೆ ಮಾಹಿತಿ ಪಡೆದ್ದಾರೆ. ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರ ಯೋಗಕ್ಷೇಮ ವಿಚಾರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT