ಶನಿವಾರ, ಜನವರಿ 28, 2023
13 °C
ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ l ಪ್ರಜಾವಾಣಿ ವರದಿ ಉಲ್ಲೇಖ

ಎಸ್‌ಸಿಎಸ್‌ಪಿ– ಟಿಎಸ್‌ಪಿ ಅನುದಾನ ಶೇ 42ರಷ್ಟು ಬಳಕೆ: ಕೋಟ ಶ್ರೀನಿವಾಸ ಪೂಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ‘ರಾಜ್ಯದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯಡಿ (ಎಸ್‌ಸಿಎಸ್‌ಪಿ– ಟಿಎಸ್‌ಪಿ) 2022–23ನೇ ಸಾಲಿಗೆ ಸರ್ಕಾರ ₹ 29,165.81 ಕೋಟಿ ಹಂಚಿಕೆ ಮಾಡಿದೆ. ಅದರಲ್ಲಿ 2022ರ ನವೆಂಬರ್‌ ಅಂತ್ಯದವರೆಗೆ ₹13,702.45 ಕೋಟಿ ಬಿಡುಗಡೆಯಾಗಿದ್ದು, ₹12,227 ಕೋಟಿ ವೆಚ್ಚವಾಗಿದೆ’ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಈ ವಿವರ ನೀಡಿದ ಅವರು, ‘ಹಂಚಿಕೆ ಯಾದ ಅನುದಾನದಲ್ಲಿ ನವೆಂಬರ್‌ ಅಂತ್ಯದವರೆಗೆ ಶೇ 42ರಷ್ಟು, ಬಿಡುಗಡೆ ಯಾದ ಅನುದಾನದಲ್ಲಿ ಶೇ 89ರಷ್ಟು ಬಳಕೆಯಾಗಿದೆ. ಇದುವರೆಗೆ ಯಾವ ವರ್ಷವೂ ಇಷ್ಟೊಂದು ಅನುದಾನ ಬಳಕೆಯಾಗಿರಲಿಲ್ಲ. ಅನುದಾನ ಬಳಕೆಗೆ 2023ರ ಮಾರ್ಚ್‌ವರೆಗೂ ಕಾಲಾವಕಾಶ ಇದೆ. ಆದರೂ, 2022ರ ಡಿಸೆಂಬರ್‌ ಒಳಗೆ ಪೂರ್ತಿ ಅನುದಾನ ಬಳಸುವಂತೆ ಇಲಾಖೆಗಳಿಗೆ ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.

ಎಸ್‌ಸಿಎಸ್‌ಪಿ– ಟಿಎಸ್‌ಪಿ ಅನು ದಾನದಲ್ಲಿ ಅಕ್ಟೋಬರ್‌ ಅಂತ್ಯದವರೆಗೆ ಶೇ 14.75ರಷ್ಟು ಮಾತ್ರ ಬಳಕೆಯಾದ ಬಗ್ಗೆ ‘ಪ್ರಜಾವಾಣಿ’ಯು ಡಿ.1ರ ಸಂಚಿಕೆಯಲ್ಲಿ ‘ದಲಿತ ಕಲ್ಯಾಣ– ಖರ್ಚಾಗದ ಹಣ’ ಶೀರ್ಷಿಕೆಯಡಿ ವಿಶೇಷ ವರದಿಯನ್ನು ಪ್ರಕಟಿಸಿತ್ತು.

‘ಪ್ರಜಾವಾಣಿ’ಯ ವಿಶೇಷ ವರದಿಯನ್ನು ಉಲ್ಲೇಖಿಸಿದ ಸಚಿವರು, ‘ಅದರಲ್ಲಿ ಪ್ರಕಟವಾಗಿರುವುದಕ್ಕಿಂತ ಹೆಚ್ಚು ಅನುದಾನ ಬಳಕೆ ಆಗಿದೆ. ಅನುದಾನದಲ್ಲಿ ಕೃಷಿ ಇಲಾಖೆಯಲ್ಲಿ ಶೇ 14, ಅರಣ್ಯ ಇಲಾಖೆಯಲ್ಲಿ
ಶೇ 12, ಉನ್ನತ ಶಿಕ್ಷಣ ಇಲಾಖೆಯಲ್ಲಿ ಶೇ 6, ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ ಶೇ 18 ಹಾಗೂ ಕೌಶಲಾಭಿವೃದ್ಧಿ ಇಲಾಖೆಯಲ್ಲಿ ಶೇ 5ರಷ್ಟು ಅನುದಾನ ಮಾತ್ರ ಬಳಕೆ ಆಗಿರುವುದು ನಿಜ. ನಿರೀಕ್ಷಿತ ಪ್ರಗತಿ ಸಾಧಿಸದ ಇಲಾಖೆಗಳ ಅಧಿಕಾರಿಗಳಿಗೆ ನೋಟಿಸ್ ನೀಡಲು ಹಾಗೂ ಅಂತಹ ಇಲಾಖೆಗಳ ಅನು ದಾನವನ್ನು ಹೆಚ್ಚುವರಿ ಅನುದಾನ ಕೋರಿರುವ ಇಲಾಖೆಗಳಿಗೆ ಮರು ಹಂಚಿಕೆಗೆ ಗುರುವಾರ ನಡೆದ ನೋಡಲ್‌ ಏಜೆನ್ಸಿ ಸಭೆಯಲ್ಲಿ ನಿರ್ಧರಿಸಿದ್ದೇವೆ’ ಎಂದರು.

ಮರಕ್ಕೆ ಕಟ್ಟಿ ಹಲ್ಲೆ, ಕ್ರಮಕ್ಕೆ ಸೂಚನೆ

ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದರಿಂದ ಮನನೊಂದು, ಕೋಲಾರ ಜಿಲ್ಲೆಯ ಪರಿಶಿಷ್ಟ ಜಾತಿಯ ಯುವಕ ಉದಯ್‌ ಕಿರಣ್‌  ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಘಟನೆಯನ್ನು ಸಚಿವರು ಖಂಡಿಸಿದರು.

‘ಈ ಪ್ರಕರಣದಲ್ಲಿ ತಪ್ಪಿತಸ್ಥರು ಎಷ್ಟೇ ಬಲಾಢ್ಯರಾಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು ಎಂದು ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ಸೂಚನೆ ನೀಡಿದ್ದೇನೆ. ಸಂತ್ರಸ್ತನ ಕುಟುಂಬದವರನ್ನು ಶೀಘ್ರವೇ ಭೇಟಿ ಮಾಡುತ್ತೇನೆ’ ಎಂದರು. ‘ಹಿಂದುಳಿದ ವರ್ಗಗಳ ಇಲಾಖೆಯ ಎಲ್ಲ ವಿದ್ಯಾರ್ಥಿನಿಲಯಗಳಿಗೆ ಹೊಸ ದಿಂಬು ಹಾಗೂ ಹಾಸಿಗೆ ಖರೀದಿಸಲು ಸರ್ಕಾರ ₹ 100 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು