ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಪೊಲೀಸರ ವಿರುದ್ಧ ಆರೋಪಗಳ ಸುರಿಮಳೆ

ಗೋಲಿಬಾರ್‌ ಕುರಿತು ಲಿಸೆನಿಂಗ್‌ ಪೋಸ್ಟ್‌ ಆಯೋಜಿಸಿದ್ದ ‘ಜನತಾ ಅದಾಲತ್‌’
Last Updated 7 ಜನವರಿ 2020, 10:12 IST
ಅಕ್ಷರ ಗಾತ್ರ

ಮಂಗಳೂರು: ‘ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಪ್ರತಿಭಟನೆಗೆ ಅನುಮತಿ ನೀಡುವ ವಿಷಯದಲ್ಲಿ ಆರಂಭದಿಂದಲೂ ಕಣ್ಣಾಮುಚ್ಚಾಲೆ ಆಡಿದ ನಗರ ಪೊಲೀಸರು, ಡಿಸೆಂಬರ್‌ 19ರಂದು ದುರುದ್ದೇಶದಿಂದಲೇ ಗುಂಡುಹಾರಿಸಿ ಇಬ್ಬರನ್ನು ಹತ್ಯೆ ಮಾಡಿದ್ದಾರೆ’ ಎಂಬ ಆರೋಪ ಸೋಮವಾರ ನಡೆದ ‘ಜನತಾ ಅದಾಲತ್‌’ನಲ್ಲಿ ವ್ಯಕ್ತವಾಯಿತು.

ಬೆಂಗಳೂರಿನ ಇಂಡಿಯನ್‌ ಸೋಷಿಯಲ್‌ ಇನ್‌ಸ್ಟಿಟ್ಯೂಟ್‌ನ ಲಿಸೆನಿಂಗ್‌ ಪೋಸ್ಟ್‌ ‘ಜನತಾ ಅದಾಲತ್‌’ ಮೂಲಕ ಘಟನೆಯ ಕುರಿತು ಸಾಕ್ಷ್ಯ ಸಂಗ್ರಹಿಸುತ್ತಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ನೇತೃತ್ವದ ‘ಪೀಪಲ್ಸ್‌ ಟ್ರಿಬ್ಯುನಲ್‌’ನಲ್ಲಿ ಹಿರಿಯ ವಕೀಲ ಬಿ.ಟಿ. ವೆಂಕಟೇಶ್‌ ಮತ್ತು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಸದಸ್ಯರಾಗಿದ್ದಾರೆ.

ಸೋಮವಾರ ನಡೆದ ಅದಾಲತ್‌ ಕಲಾಪಕ್ಕೆ ಹಾಜರಾಗಿ ಅಹವಾಲು ಹೇಳಿಕೊಂಡ ಘಟನೆಯ ಪ್ರತ್ಯಕ್ಷದರ್ಶಿಗಳು, ಪೆಟ್ಟು ತಿಂದು ಗಾಯಗೊಂಡವರು, ಮೃತರ ಕುಟುಂಬದ ಸದಸ್ಯರು ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಪೊಲೀಸರ ವಿರುದ್ಧ ನೇರ ಆರೋಪಗಳನ್ನು ಮಾಡಿದರು.

ಆರಂಭದಲ್ಲಿ ಅದಾಲತ್‌ ಎದುರು ಅಹವಾಲು ಹೇಳಿಕೊಂಡ ಪತ್ರಕರ್ತ ಇಸ್ಮಾಯಿಲ್‌, ‘ಡಿ.19ರಂದು ಜನರು ಸಮಾವೇಶಗೊಳ್ಳುತ್ತಿದ್ದಂತೆಯೇ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಖರೀದಿಗೆ ಬಂದವರೂ ಪೆಟ್ಟು ತಿಂದರು. ವರದಿಗಾರಿಕೆಗೆ ತೆರಳಿದ್ದ ನನ್ನ ಮೇಲೂ ಹಲ್ಲೆ ನಡೆಸಿದರು. ಗುರುತಿನ ಚೀಟಿ ಕಿತ್ತುಕೊಂಡು ಥಳಿಸಿದರು’ ಎಂದು ಆರೋಪಿಸಿದರು.

ಅಧಿಕಾರಿಗಳ ವಿರುದ್ಧ ಆರೋಪ

ಗಲಭೆ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಮಾಜಿ ಮೇಯರ್‌ ಕೆ. ಅಶ್ರಫ್‌, ‘ಗಲಭೆ ಮತ್ತು ಗೋಲಿಬಾರ್‌ ನಡೆಯಲು ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ, ಇನ್‌ಸ್ಪೆಕ್ಟರ್‌ಗಳಾದ ಶಾಂತಾರಾಂ ಮತ್ತು ಮೊಹಮ್ಮದ್ ಷರೀಫ್‌ ನೇರವಾಗಿ ಕಾರಣ. ಆರಂಭದಿಂದಲೂ ಸಂಚು ರೂಪಿಸಿ ಗೋಲಿಬಾರ್‌ ನಡೆಸಿದ್ದಾರೆ’ ಎಂದು ನೇರ ಆರೋಪ ಮಾಡಿದರು.

‘ಡಿ.20ಕ್ಕೆ ನಾವು ನೆಹರೂ ಮೈದಾನದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೆವು. ಯಾವಾಗಲೂ ಜಿಲ್ಲಾಧಿಕಾರಿ ಕಚೇರಿ ಬಳಿ ಅವಕಾಶ ಕೇಳಿದರೆ ನೆಹರೂ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಕೊಡುತ್ತಿದ್ದರು. ಈ ಬಾರಿ ನೆಹರೂ ಮೈದಾನದಲ್ಲಿ ಅವಕಾಶ ನಿರಾಕರಿಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವಂತೆ ಸ್ವತಃ ಕಮಿಷನರ್‌ ಸೂಚಿಸಿದರು. ನಾವು ಗೊಂದಲದಿಂದ ಪ್ರತಿಭಟನೆ ಮುಂದೂಡಿದ್ದೆವು’ ಎಂದರು.

‘ಎಸ್‌ಕೆಎಸ್‌ಎಸ್‌ಎಫ್‌ ಸಂಘಟನೆಗೆ ಡಿ.19ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ಅನುಮತಿ ನೀಡಲಾಗಿತ್ತು. ಡಿ.18ರಂದು ಅನುಮತಿ ವಾಪಸ್‌ ಪಡೆದರು. ಇದನ್ನು ತಿಳಿಯದೇ ಕೆಲವರು ಬಂದಿದ್ದರು. ಅವರ ಮೇಲೆ ಲಾಠಿ ಪ್ರಹಾರ ನಡೆಸಿದರು. ನಂತರ ಅಶ್ರುವಾಯು ಪ್ರಯೋಗ, ಗೋಲಿಬಾರ್‌ ನಡೆಸಲಾಯಿತು. ಇದಕ್ಕೆಲ್ಲ ಈ ಮೂವರು ಅಧಿಕಾರಿಗಳೇ ಕಾರಣ’ ಎಂದು ದೂಷಿಸಿದರು.

ಕುಟುಂಬದವರ ಅಳಲು

ಮೃತ ಅಬ್ದುಲ್ ಜಲೀಲ್‌ ಅವರ ಮಕ್ಕಳಾದ ಶಬೀಲ್‌ ಮತ್ತು ಶಿಫಾನಿ ಅದಾಲತ್‌ನಲ್ಲಿ ಪಾಲ್ಗೊಂಡು, ‘ಮಸೀದಿಗೆ ತೆರಳುತ್ತಿದ್ದ ನಮ್ಮ ತಂದೆಯ ಮೇಲೆ ಪೊಲೀಸರು ಗುಂಡು ಹಾರಿಸಿ ಕೊಂದಿದ್ದಾರೆ’ ಎಂದರು. ಮೃತ ನೌಶೀನ್‌ ಕುಟುಂಬದವರು ಕೂಡ ಇದೇ ರೀತಿ ಆರೋಪಿಸಿದರು.

ಪೊಲೀಸರು ಆಸ್ಪತ್ರೆಯ ಬಾಗಿಲಿನ ಬಳಿ ಅಶ್ರುವಾಯು ಸಿಡಿಸಿದ್ದರಿಂದ ರೋಗಿಗಳಿಗೆ ತೊಂದರೆಯಾಯಿತು ಎಂದು ಹೈಲ್ಯಾಂಡ್‌ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೂಸುಫ್‌ ಹೇಳಿದರು. ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಯು.ಎಚ್‌. ಉಮರ್‌ ಕೂಡ ಪೊಲೀಸರ ನಡೆಯನ್ನು ಟೀಕಿಸಿದರು.

ಪೊಲೀಸರು ಕೂಡ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಬಹುದು ಎಂದು ಲಿಸೆನಿಂಗ್‌ ಪೋಸ್ಟ್‌ ಸಂಯೋಜಕ ಅಶೋಕ್‌ ಮರಿದಾಸ್‌ ಅವರು ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಅವರಿಗೆ ಪತ್ರ ಬರೆದಿದ್ದರು. ಆದರೆ, ಪೊಲೀಸ್‌ ಅಧಿಕಾರಿಗಳು ಅಥವಾ ಸಿಬ್ಬಂದಿ ಅದಾಲತ್‌ನಲ್ಲಿ ಭಾಗವಹಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT