ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾದ್ಯ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ: ನಟ ರಾಜ್‌ ಬಿ.ಶೆಟ್ಟಿ

ವಾದ್ಯ ಕಲಾ ಮೇಳ ಉದ್ಘಾಟಿಸಿದ ನಟ ರಾಜ್‌ ಬಿ.ಶೆಟ್ಟಿ
Published 5 ನವೆಂಬರ್ 2023, 13:59 IST
Last Updated 5 ನವೆಂಬರ್ 2023, 13:59 IST
ಅಕ್ಷರ ಗಾತ್ರ

ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದ ಪ್ರತಿ ಮಗುವಿಗೂ ತಾಸೆ, ತೆಂಬರೆ, ಡೋಲು ಸ್ಫೂರ್ತಿ. ತುಳುನಾಡಿನ ಸಂಸ್ಕೃತಿ ಸಂರಕ್ಷಿಸಲು ವಾದ್ಯ ಕಲಾವಿದರನ್ನು ಪ್ರೋತ್ಸಾಹಿಸಬೇಕು’ ಎಂದು ನಟ, ನಿರ್ದೇಶಕ ರಾಜ್‌ ಬಿ.ಶೆಟ್ಟಿ ಹೇಳಿದರು.

ಉರ್ವ ಸ್ಟೋರ್‌ನ ಬಿ.ಆರ್‌. ಅಂಬೇಡ್ಕರ್‌ ಸಭಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ವಾದ್ಯ ಕಲಾವಿದರ ಸಂಘದ ವತಿಯಿಂದ ಆಯೋಜಿಸಲಾದ ವಾದ್ಯ ಕಲಾ ಮೇಳವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ದೈವದ ಚಾಕರಿ ಮಾಡುತ್ತಾ ತುಳುನಾಡಿನ ಸಂಸ್ಕೃತಿ ಉಳಿಸುತ್ತಾ ಬಂದಿರುವ ತಳಸಮುದಾಯಕ್ಕೆ ಇಲ್ಲಿನ ಜನ ಋಣಿಯಾಗಿರಬೇಕು. ಹಿಂದೆ ಮೇಲ್ವರ್ಗದವರು ಅವರನ್ನು ಶೋಷಿಸಿ ಅವರ ಸೌಲಭ್ಯಗಳನ್ನು ಕಿತ್ತುಕೊಂಡಿದ್ದರು. ಆದ್ದರಿಂದ ಪ್ರಸ್ತುತ ತಳಸಮುದಾಯದವರು ಅಭಿವೃದ್ಧಿಯಾಗಲು ಸರ್ಕಾರ ಮತ್ತು ಜನರು ಅವರಿಗೆ ಸವಲತ್ತುಗಳನ್ನು ದೊರಕಿಸಲು ಕೆಲಸ ಮಾಡಬೇಕು’ ಎಂದು ಅವರು ಹೇಳಿದರು.

ಶ್ರೀಕ್ಷೇತ್ರ ಕಚ್ಚೂರು ಧರ್ಮದರ್ಶಿ ಗೋಕುಲ್‌ದಾಸ್‌ ಬಾರ್ಕೂರು ಮಾತನಾಡಿ, ‘ದೈವಾರಾಧನೆ, ನಾಗಾರಾಧನೆ ತುಳುನಾಡಿನ ಮೂಲ ಸಂಸ್ಕೃತಿಯಾಗಿದ್ದು ಹಿಂದೂ ಧರ್ಮಕ್ಕೆ ಭದ್ರ ಬುನಾದಿ ಹಾಕಿವೆ. ಇದರಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವವರು ತಳ ಸಮುದಾಯದವರು. ತುಳುನಾಡಿನ ಸಂಸ್ಕೃತಿಗೆ ಈ ಸಮುದಾಯದ ಕೊಡುಗೆ ಅಪಾರ. ದೇವಸ್ಥಾನ, ದೈವಸ್ಥಾನಗಳಲ್ಲಿ ತಳ ಸಮುದಾಯದ ವಾದ್ಯ ಕಲಾವಿದರಿಗೆ ಅವಕಾಶ ದೊರೆಯಬೇಕು. ಕಲಾವಿದರಿಗೆ ಮಾಶಾಸನ ನೀ‍ಡಲು ಸರ್ಕಾರವನ್ನು ಒತ್ತಾಯಿಸಬೇಕು’ ಎಂದರು.

ಮಂಗಳೂರು ಕಂಬಳ ಅಧ್ಯಕ್ಷ, ಸೇನಾ ನಿವೃತ್ತ ಅಧಿಕಾರಿ ಕ್ಯಾ. ಬ್ರಿಜೇಶ್‌ ಚೌಟ ಮಾತನಾಡಿ, ‘ಸಂಸ್ಕೃತಿ ಉಳಿಸಲು ತಳಸಮುದಾಯದವರು ಪ್ರಾಮಾಣಿಕವಾಗಿ ದುಡಿಯುತ್ತಿರುವುದರಿಂದ ಹಿಂದೂ ಧರ್ಮ ಗಟ್ಟಿಯಾಗಿ ಉಳಿದಿದೆ. ಸಾಮಾಜಿಕ ವ್ಯವಸ್ಥೆ ಬದಲಾಗುತ್ತಿರುವುದು ಸಮಾಧಾನದ ವಿಷಯ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವಾಧ್ಯಕ್ಷ ಗಿರಿಧರ ಶೆಟ್ಟಿ, ನಮ್ಮ ಕುಡ್ಲ ವ್ಯವಸ್ಥಾಪಕ ಲೀಲಾಕ್ಷ ಕರ್ಕೇರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ ಮಾತನಾಡಿದರು. ಹಿರಿಯ ವಾದ್ಯ ಕಲಾವಿದರನ್ನು ಸನ್ಮಾನಿಸಲಾಯಿತು.

ಬಾಂದೊಟ್ಟು ಕೋರ್ದಬ್ಬು ದೈವಸ್ಥಾನ ಅಧ್ಯಕ್ಷ ಬಾಲಕೃಷ್ಣ ರೈ ಬಾಂದೊಟ್ಟುಗುತ್ತು, ಬಬ್ಬುಸ್ವಾಮಿ ಸೇವಾ ಸಮಿತಿಯ ಲೋಕನಾಥ ಮಾರ್ಲ ಗುರುನಗರ, ನಗರ ಪಾಲಿಕೆ ಅಧ್ಯಕ್ಷ ಸುಧೀರ್‌ ಶೆಟ್ಟಿ, ಮಾಜಿ ಅಧ್ಯಕ್ಷ ಭಾಸ್ಕರ ಕೆ., ರಂಗಭೂಮಿ ನಿರ್ದೇಶಕ ವಿಜಯ್‌ ಕುಮಾರ್‌ ಕೊಡಿಯಾಲ್‌ಬೈಲ್‌, ಮಾಜಿ ಸಚಿವ ರಮಾನಾಥ್‌ ರೈ, ಸಂಘದ ಅಧ್ಯಕ್ಷ ಚಂದ್ರಶೇಖರ ವಾಮಂಜೂರು, ಕಾರ್ಯದರ್ಶಿ ಕೃಷ್ಣ ಎಸ್ಕೋಡಿ, ಕೋಶಾಧಿಕಾರಿ ಯಶವಂತ್‌ ನೀರುಮಾರ್ಗ ಇದ್ದರು.

ಸಂಘದ ಗೌರವ ಸಲಹೆಗಾರ ಕೆ.ಕೆ. ಪೇಜಾವರ ಪ್ರಾಸ್ತಾವಿಕವಾಗಿ ಮಾತನಾಡಿದರು. ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ್ ಕತ್ತಲಸಾರ್‌ ಸ್ವಾಗತಿಸಿದರು. ರೋಹಿತ್‌ ಉಳ್ಳಾಲ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT