ತುರ್ತು ಕಾರ್ಯಾಚಾರಣೆಗಾಗಿ ಜಿಲ್ಲಾಧಿಕಾರಿಗಳ ಖಾತೆಗೆ ಹೆಚ್ಚುವರಿ ಹಣ

7
ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಹೇಳಿಕೆ

ತುರ್ತು ಕಾರ್ಯಾಚಾರಣೆಗಾಗಿ ಜಿಲ್ಲಾಧಿಕಾರಿಗಳ ಖಾತೆಗೆ ಹೆಚ್ಚುವರಿ ಹಣ

Published:
Updated:

ಮಂಗಳೂರು: ‘ಅತಿವೃಷ್ಟಿಯಿಂದ ಹಾನಿಗೊಳದಾವರಿಗೆ ಪರಿಹಾರ ನೀಡಲು ಮತ್ತು ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸಲು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ತಲಾ ₹ 5 ಕೋಟಿ ಹಣ ಲಭ್ಯವಿದೆ. ಅಗತ್ಯವಿರುವ ಕಡೆಗಳಿಗೆ ಹೆಚ್ಚುವರಿ ಹಣ ಬಿಡುಗಡೆ ಮಾಡಲಾಗುವುದು’ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧಿಕಾರಿಗಳ ಬಳಿ ಮಳೆಹಾನಿ ಕುರಿತು ಮಾಹಿತಿ ಪಡೆದ ಬಳಿಕ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉಡುಪಿ ಜಿಲ್ಲಾಧಿಕಾರಿ ಹೆಚ್ಚುವರಿ ಹಣ ಬಿಡುಗಡೆ ಮಾಡುವಂತೆ ಕೋರಿದ್ದರು. ₹ 4 ಕೋಟಿಯನ್ನು ಸೋಮವಾರ ಬಿಡುಗಡೆ ಮಾಡುವಂತೆ ಆದೇಶಿಸಿದ್ದೇನೆ’ ಎಂದರು.

ದಕ್ಷಿಣ ಕನ್ನಡದಲ್ಲಿ 289 ಪಕ್ಕಾ ಮನೆಗಳು ಸಂಪೂರ್ಣ ನಾಶವಾಗಿವೆ. 1,037 ಪಕ್ಕಾ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಈ ಸಂಬಂಧ ₹ 1.41 ಕೋಟಿ ಪರಿಹಾರ ವಿತರಿಸಲಾಗಿದೆ. 46 ಕಚ್ಚಾ ಮನೆಗಳು ಸಂಪೂರ್ಣ ನಾಶವಾಗಿದ್ದು, 386 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ₹ 13.39 ಲಕ್ಷ ಪರಿಹಾರ ವಿತರಿಸಲಾಗಿದೆ. ಒಟ್ಟು 75 ಮನೆಗಳಿಗೆ ಪರಿಹಾರ ಪಾವತಿ ಬಾಕಿ ಇದೆ ಎಂದು ಹೇಳಿದರು.

12 ಜನರು ಮಳೆಯಿಂದ ಮೃತಪಟ್ಟಿದ್ದಾರೆ. ಈ ಪೈಕಿ 11 ಜನರ ಕುಟುಂಬದವರಿಗೆ ತಲಾ ₹ 5 ಲಕ್ಷ ಪರಿಹಾರ ನೀಡಲಾಗಿದೆ. ಒಬ್ಬರ ಕುಟುಂಬಕ್ಕೆ ಶೀಘ್ರದಲ್ಲಿ ವಿತರಿಸಲಾಗುವುದು. 12 ಜಾನುವಾರುಗಳು ಸತ್ತಿದ್ದು, ಮಾಲೀಕರಿಗೆ ₹ 2.95 ಲಕ್ಷ ಪರಿಹಾರ ನೀಡಲಾಗಿದೆ. ಜಿಲ್ಲೆಯಲ್ಲಿ ಏಳು ಪರಿಹಾರ ಕೇಂದ್ರಗಳಿದ್ದು, ಉತ್ತಮ ವ್ಯವಸ್ಥೆ ಹೊಂದಿವೆ ಎಂದರು.

ಉಡುಪಿ ಜಿಲ್ಲೆಯಲ್ಲಿ ಮಳೆಯಿಂದ 40 ಪಕ್ಕಾ ಮನೆಗಳು ಸಂಪೂರ್ಣ ನಾಶವಾಗಿದ್ದು, 1,117 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಒಂಬತ್ತು ಜನರು ಮೃತಪಟ್ಟಿದ್ದು, ಅವರ ಕುಟುಂಬದವರಿಗೆ ತಲಾ ₹ 5 ಲಕ್ಷ ಪರಿಹಾರ ವಿತರಿಸಲಾಗಿದೆ. 16 ಜಾನುವಾರುಗಳು ಸತ್ತಿವೆ. 29 ಹೆಕ್ಟೇರ್‌ ಭತ್ತದ ಕೃಷಿ ನಾಶವಾಗಿದೆ ಎಂದು ತಿಳಿಸಿದರು.

ಮಳೆ ನಿಂತ ಬಳಿಕ ಕಾಮಗಾರಿ:

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಳೆಯಿಂದ ಹಾನಿಯಾದ ರಸ್ತೆಗಳ ದುರಸ್ತಿಗೆ ಕೊಡಗು ಜಿಲ್ಲೆಗೆ ₹ 100 ಕೋಟಿ ವಿಶೇಷ ಅನುದಾನ ನೀಡಿದ್ದರು. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ತಲಾ ₹ 50 ಕೋಟಿ ನೀಡುವುದಾಗಿ ತಿಳಿಸಿದ್ದಾರೆ. ಮಳೆ ನಿಂತ ಬಳಿಕ ಕೆಲಸ ಆರಂಭಿಸಲಾಗುವುದು ಎಂದರು.

ಶಾಲೆಗಳು, ಆರೋಗ್ಯ ಕೇಂದ್ರಗಳು, ಪಂಚಾಯತ್‌ ಕಟ್ಟಡಗಳು ಸೇರಿದಂತೆ ಸರ್ಕಾರಿ ಆಸ್ತಿಗಳಿಗೆ ಆಗಿರುವ ಹಾನಿ ಕುರಿತು ವರದಿ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಕಟ್ಟಡಗಳ ದುರಸ್ತಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಅನುದಾನ ನೀಡಲಾಗುವುದು ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕ ಕೆ.ವಿಜಯಕುಮಾರ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !