ಬುಧವಾರ, ಜೂನ್ 29, 2022
23 °C

‘ಆಯುಷ್-64’ ಪುತ್ತೂರಿನಲ್ಲಿ ತಯಾರಿ; ಕೋವಿಡ್ ಸೋಂಕಿಗೆ ಪರಿಣಾಮಕಾರಿ ಗುಳಿಗೆ

ಶಶಿಧರ ರೈ ಕುತ್ಯಾಳ Updated:

ಅಕ್ಷರ ಗಾತ್ರ : | |

Prajavani

ಪುತ್ತೂರು: ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಒಂದೆಡೆ ಲಸಿಕೆ ನೀಡಲಾಗುತ್ತಿದ್ದು, ಇದರ ಜತೆಗೆ ಇನ್ನೂ ಹಲವು ರೀತಿಯ ಔಷಧಿಗಳ ಮೂಲಕ ಸೋಂಕು ನಿಯಂತ್ರಿಸುವ ಕೆಲಸಗಳಾಗುತ್ತಿದೆ.  ಈ ನಡುವೆ ಆಯುಷ್ ಮಂತ್ರಾಲಯ ‘ಆಯುಷ್-64’ ಎನ್ನುವ ಗುಳಿಗೆ (ಮಾತ್ರೆ) ಯನ್ನು ಕೋವಿಡ್ ಸೋಂಕಿತರಿಗೆ ನೀಡಲು ತೀರ್ಮಾನಿಸಿದೆ. ಈಗಾಗಲೇ ಮಾರುಕಟ್ಟೆಗೆ ಪ್ರವೇಶಿಸಿರುವ ಈ ಗುಳಿಗೆಗಳನ್ನು ಪುತ್ತೂರಿನಲ್ಲಿ ತಯಾರಿಸಲಾಗುತ್ತಿದೆ.

ಕೋವಿಡ್ ಸೋಂಕಿತರ ಪಾಲಿಗೆ ಆಶಾಕಿರಣವಾಗಿರುವ ‘ಆಯುಷ್-64’ ಗುಳಿಗೆಗಳು ಪುತ್ತೂರಿನ ‘ಎಸ್‌ಡಿಪಿ ರೆಮಿಡೀಸ್ ಆ್ಯಂಡ್ ರಿಸರ್ಚ್‌ ಸೆಂಟರ್’ ನಲ್ಲಿ ತಯಾರಾಗುತ್ತಿದೆ. ಆಯುರ್ವೇದ ಔಷಧೀಯ ವಸ್ತುಗಳನ್ನು ಬಳಸಿಕೊಂಡು, ಈ ಗುಳಿಗೆಗಳನ್ನು ತಯಾರಿಸಲಾಗುತ್ತಿದೆ.

‘ದೇಶದ 9 ಪ್ರತಿಷ್ಠಿತ ಆಸ್ಪತ್ರೆಗಳು ಕ್ಲಿನಿಕಲ್ ಪ್ರಯೋಗ ನಡೆಸಿ ಕೋವಿಡ್ ಸೋಂಕಿತರ ಮೇಲೆ ‘ಆಯುಷ್-64’ ಗುಳಿಗೆಗಳು ಪರಿಣಾಮಕಾರಿ ಪ್ರಭಾವ ಬೀರಬಲ್ಲದು ಎಂಬ ವರದಿ ನೀಡಿದೆ. ಸೆಂಟ್ರಲ್ ಕೌನ್ಸಿಲ್ ಆಫ್ ರಿಸರ್ಚ್‌ ಇನ್ ಆಯುರ್ವೇದ ಸೈನ್ಸ್ ಮತ್ತು ನ್ಯಾಷನಲ್ ರಿಸರ್ಚ್‌ ಡೆವಲಪ್‌ಮೆಂಟ್ ಕಾರ್ಪೊರೇಷನ್ ಸಂಸ್ಥೆಗಳಿಂದ ಪ್ರಮಾಣೀಕರಿಸಲ್ಪಟ್ಟಿದೆ. ಕೋವಿಡ್ ಲಕ್ಷಣಗಳು ಕಂಡು ಬಂದ ರೋಗಿಯನ್ನು ಬೇಗನೇ ಗುಣಮುಖವಾಗುವಂತೆ ಮಾಡಬಲ್ಲ ಈ ಗುಳಿಗೆಗಳಿಂದ ಯಾವುದೇ ಅಡ್ಡಪರಿಣಾಮವಿಲ್ಲ ಎಂದು ಸಂಶೋಧನಾ ಸಂಸ್ಥೆಗಳು ವರದಿ ನೀಡಿವೆ’ ಎಂದು ಎಸ್ಡಿಪಿ ರೆಮಿಡೀಸ್ ಎಂಡ್ ರಿಸರ್ಚ್ ಸೆಂಟರ್‌ನ ನಿರ್ದೇಶಕ ಡಾ.ಹರಿಕೃಷ್ಣ ಪಾಣಾಜೆ ಮಾಹಿತಿ ನೀಡಿದ್ದಾರೆ.

‘30 ವರ್ಷಗಳಿಂದ ಆಯುರ್ವೇದ ಔಷಧಿಗಳನ್ನು ತಯಾರಿಸಿಕೊಂಡು ಬರುತ್ತಿರುವ ಸಂಸ್ಥೆಯು ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಳಿಗೆಗಳನ್ನು ತಯಾರಿಸುವ ಮೂಲಕ ಹಾಗೂ ಅದನ್ನು ಕೋವಿಡ್ ವಿರುದ್ಧ ಮುಂಚೂಣಿಯಲ್ಲಿ ದುಡಿಯುವವರಿಗೆ ವಿತರಿಸುವ ಮೂಲಕ ಕೋವಿಡ್ ನಿಯಂತ್ರಣದಲ್ಲಿ ತನ್ನ ಪಾತ್ರ ವಹಿಸಿತ್ತು. ‘ಆಯುಷ್-64’ ಗುಳಿಗೆಯ ತಯಾರಿಯು ಈಗ ಇದೇ ಸಂಶೋಧನಾ ಘಟಕದಲ್ಲಿ ನಡೆಯುತ್ತಿದೆ. ಆಯುಷ್ ಮಂತ್ರಾಲಯದ ಸಂಶೋಧಕರು ಸೂಚಿಸಿದ ಪ್ರಮಾಣದಲ್ಲಿ 35 ಬಗೆಯ ಆಯುರ್ವೇದ ಔಷಧೀಯ ವಸ್ತುಗಳನ್ನು ಬಳಸಿಕೊಂಡು ಈ ಗುಳಿಗೆಗಳನ್ನು ತಯಾರಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು