ಶಿಕ್ಷಣಕ್ಕೆ ಬೆಸೆಂಟ್‌ ಸಂಸ್ಥೆ ಕೊಡುಗೆ ಅಪಾರ

7
ಬೆಸೆಂಟ್ ಶತ ಸಂಭ್ರಮ: ವಿಶೇಷ ಅಂಚೆ ಲಕೋಟೆ ಬಿಡುಗಡೆ

ಶಿಕ್ಷಣಕ್ಕೆ ಬೆಸೆಂಟ್‌ ಸಂಸ್ಥೆ ಕೊಡುಗೆ ಅಪಾರ

Published:
Updated:
Prajavani

ಮಂಗಳೂರು: ಬೆಸೆಂಟ್ ವಿದ್ಯಾ ಸಂಸ್ಥೆಯ ಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ‘ಬೆಸೆಂಟ್ ಶತಮಾನೋತ್ಸವ ವಿಶೇಷ ಅಂಚೆ ಲಕೋಟೆ’ ಬಿಡುಗಡೆ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ನಡೆಯಿತು.

ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಂಗಳೂರು ವಿಭಾಗದ ಅಂಚೆ ಕಚೇರಿಗಳ ಹಿರಿಯ ಅಧೀಕ್ಷಕ ಜಗದೀಶ್ ಪೈ ಅವರು, ಶಿಕ್ಷಣ ವಲಯಕ್ಕೆ ಬೆಸೆಂಟ್ ವಿದ್ಯಾ ಸಂಸ್ಥೆಯ ಕೊಡುಗೆಯನ್ನು ಶ್ಲಾಘನೀಯ. ಸಂಸ್ಥೆಯಿಂದ ನಡೆಸಲಾಗುತ್ತಿರುವ ವಿವಿಧ ಅಂಗಸಂಸ್ಥೆಗಳಿಂದ ತರಬೇತಿ ಪಡೆದು ಹೊರಬರುವ ಯುವ ಪೀಳಿಗೆಗೆ ಸಭ್ಯ ನಾಗರಿಕರಾಗಲು ಸಂಸ್ಥೆ ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ. ಇಂತಹ ಶಿಕ್ಷಣ ಸಂಸ್ಥೆಯ ಶತಮಾನೋತ್ಸವದ ಸಂದರ್ಭದಲ್ಲಿ ವಿಶೇಷ ಅಂಚೆ ಲಕೋಟೆಯು ಸಂಸ್ಥೆಯ ಶೈಕ್ಷಣಿಕ ಕೊಡುಗೆಗೆ ನೀಡಿದ ವಿಶೇಷ ಗೌರವ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ನವಮಂಗಳೂರು ಬಂದರಿನ ಮುಖ್ಯ ಎಂಜಿನಿಯರ್‌ ಸತೀಶ್ ಹೊನ್ನಕಟ್ಟೆ, ಶಿಕ್ಷಣ ಸಂಸ್ಥೆಯ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.

ಬೆಸೆಂಟ್ ಸಂಧ್ಯಾ ಕಾಲೇಜಿನ ಹಳೆ ವಿದ್ಯಾರ್ಥಿ, ಎನ್‌ಎಂಪಿಟಿ ಟ್ರಿಸ್ಟಿ ಸದಾಶಿವ ಶೆಟ್ಟಿಗಾರ್ ಮಾತನಾಡಿ, ಬೆಸೆಂಟ್ ಸಂಸ್ಥೆಯ ಶಿಕ್ಷಣ ನೀತಿ ಅಭಿನಂದನಾರ್ಹ. ಶಿಕ್ಷಣ ವಂಚಿತರಿಗೆ ಆಸರೆಯಾಗಬಲ್ಲ ಈ ಸಂಸ್ಥೆಯ ಮೂಲಕ ಹಲವಾರು ಶಿಕ್ಷಣ ವಂಚಿತರು ಉತ್ತಮ ಶಿಕ್ಷಣ ಪಡೆಯುವುದರ ಜತೆಗೆ ಉತ್ತಮ ನಾಗರಿಕರಾಗಿ ರೂಪಗೊಂಡಿದ್ದಾರೆ. ಆ ಮೂಲಕ ಈ ಸಂಸ್ಥೆಯು ದೇಶದ ಅಭಿವೃದ್ಧಿಗಾಗಿ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದರು.

ರಾಷ್ಟ್ರೀಯ ಮಹಿಳಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕುಡ್ಪಿ ಜಗದೀಶ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಮಣೇಲ್ ಅಣ್ಣಪ್ಪ ನಾಯಕ್, ಕೆ. ದೇವಾನಂದ ಪೈ ವೇದಿಕೆಯಲ್ಲಿದ್ದರು. ಸಂಸ್ಥೆಗೆ ದತ್ತಿ ನಿಧಿ ನೀಡಿದ ದಾನಿಗಳನ್ನು ಹಾಗೂ ಬೆಸೆಂಟ್ ಶಿಕ್ಷಣ ಸಂಸ್ಥೆಗಳ ನಿವೃತ್ತ ಮುಖ್ಯಸ್ಥರನ್ನು ಮತ್ತು ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.

ಇತ್ತೀಚಿಗೆ ಅಗಲಿದ ಆಡಳಿತ ಮಂಡಳಿಯ ಸದಸ್ಯ ಸುರೇಶ್ ಮಲ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮೇಘಾಲಯದ ಪುಟಾಣಿಗಳಿಂದ ಶಾಂತಿ ಮಂತ್ರ ಪಠಣ ನಡೆಯಿತು. ಸಂಸ್ಥೆಯ ಕಾರ್ಯದರ್ಶಿ ಕೆ. ದೇವಾನಂದ ಪೈ ಸ್ವಾಗತಿಸಿದರು. ಆಡಳಿತ ಮಂಡಳಿಯ ಸದಸ್ಯ ಸತೀಶ್ ಕುಮಾರ್ ಭಟ್ ವಂದಿಸಿದರು. ಶೈಕ್ಷಣಿಕ ಸಲಹೆಗಾರ್ತಿ ಲಲಿತಾ ಜಿ. ಮಲ್ಯ ಪರಿಚಯಿಸಿದರು. ಪ್ರಾಧ್ಯಾಪಕಿ ಡಾ. ಮೀನಾಕ್ಷಿ ರಾಮಚಂದ್ರ ಹಾಗೂ ವಿದ್ಯಾರ್ಥಿ ನಾಯಕಿ ವೈಷ್ಣವಿ ನಿರೂಪಿಸಿದರು. ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !