ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಜನೆಯಿಂದ ವಿಭಜನೆ ಆಗಬಾರದು, ಸಮಾಜದ ಸಂಘಟನೆ ಆಗಬೇಕು: ಸಿದ್ಧರಾಮ ದೇವರು

ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ
Last Updated 23 ಸೆಪ್ಟೆಂಬರ್ 2018, 11:48 IST
ಅಕ್ಷರ ಗಾತ್ರ

ಉಜಿರೆ: ‘ಪರಿಶುದ್ಧ ಮನಸ್ಸಿನಿಂದ, ಶ್ರದ್ಧಾ-ಭಕ್ತಿಯಿಂದ ಭಗವಂತನ ಗುಣಗಾನ ಮಾಡಿ ಹಾಡುವುದರಿಂದ ನಮಗೆ ಆನಂದ ಸಿಗುತ್ತದೆ. ಭಜನೆಯಿಂದ ವಿಭಜನೆ ಆಗಬಾರದು ಸಮಾಜದ ಸಂಘಟನೆ ಆಗಬೇಕು’ ಎಂದು ಧಾರವಾಡದ ಮಣಕವಾಡ ಶ್ರೀಗುರು ಅನ್ನದಾನೀಶ್ವರ ದೇವಮಂದಿರ ಸಿದ್ಧರಾಮ ದೇವರು ಹೇಳಿದರು.

ಧರ್ಮಸ್ಥಳದ ಮಹೋತ್ಸವ ಸಭಾ ಭವನದಲ್ಲಿ ಇಪ್ಪತ್ತನೇ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಾಣಿಲದ ಮೋಹನದಾಸ ಸ್ವಾಮೀಜಿ ಮಾತನಾಡಿ, ‘ನಮ್ಮ ಮನಸ್ಸು, ಭಾವನೆ ಮತ್ತು ಕರ್ಮ ಪರಿಶುದ್ಧವಾದಾಗ ಸಾರ್ಥಕ ಜೀವನ ನಡೆಸಲು ಸಾಧ್ಯವಾಗುತ್ತದೆ. ಭಜನಾಪಟುಗಳು ನಾಯಕತ್ವ ಗುಣ ಬೆಳೆಸಿಕೊಂಡು ಸಮಾಜದ ದುಶ್ಚಟಗಳು ಹಾಗೂ ದೌರ್ಬಲ್ಯಗಳನ್ನು ದೂರ ಮಾಡುವ ಸಮಾಜ ಸುಧಾರಕರಾಗಬೇಕು’ ಎಂದು ಹೇಳಿದರು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಶ್ರದ್ಧಾ-ಭಕ್ತಿಯಿಂದ ಭಾಷಾ ಶುದ್ಧಿಯೊಂದಿಗೆ ರಾಗ, ತಾಳ, ಲಯಬದ್ಧವಾಗಿ ಭಜನೆ ಹಾಡಬೇಕು. ಯಾವುದೇ ವಿಚಾರಗಳನ್ನು ಸರಿಯಾಗಿ ತಿಳಿದುಕೊಂಡು ಆಚರಣೆ ಮಾಡಬೇಕು. ಸಂಸ್ಕೃತಿಯ ಪಲ್ಲಟದಿಂದಾಗಿ ಮೂಲ ಸ್ವರೂಪ, ತತ್ವ ಮತ್ತು ಸತ್ವಕ್ಕೆ ಧಕ್ಕೆಯಾಗಬಾರದು. ಭಜನೆ ಮೂಲಕ ಮುಕ್ತ ಹಾಗೂ ಮುಗ್ಧ ಮನಸ್ಸಿನಿಂದ ದೇವರ ಆರಾಧನೆ ಮಾಡಬೇಕು’ ಎಂದು ಹೆಗ್ಗಡೆ ಸಲಹೆ ನೀಡಿದರು.

ಹೇಮಾವತಿ ವಿ. ಹೆಗ್ಗಡೆ ಶಿಬಿರಾರ್ಥಿಗಳಿಗೆ ಭಜನಾ ಪರಿಕರಗಳನ್ನು ನೀಡಿದರು. ಅಕ್ಕಿ ಆಲೂರು ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶಿರಸಿಯ ಮಲ್ಲಿಕಾರ್ಜುನ ಸ್ವಾಮೀಜಿ, ಡಿ. ಹರ್ಷೇಂದ್ರ ಕುಮಾರ್, ಎಸ್.ಡಿ.ಎಂ. ಶಿಕ್ಷ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಮೂಬಿದ್ರೆಯ ದಿನೇಶ್ ಕುಮಾರ್ ಆನಡ್ಕ ಇದ್ದರು. ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಕಾರ್ಯದರ್ಶಿ ಮಮತಾ ರಾವ್ ಧನ್ಯವಾದ ಸಲ್ಲಿಸಿದರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ಭಜನಾ ಕಮ್ಮಟ

* 12 ಜಿಲ್ಲೆ ತಂಡಗಳು

* 178 ಮಂದಿ ಪುರುಷರು

* 94 ಮಂದಿ ಮಹಿಳೆಯರು

* 272 ಮಂದಿ ಕಮ್ಮಟದಲ್ಲಿ ಭಾಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT