ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರದಲ್ಲಿ ಕುಚಲಕ್ಕಿ: ಸವಾಲು ಹಲವಾರು

ಕೇಂದ್ರಕ್ಕೆ ಸಲ್ಲಿಕೆಯಾಗದ ಪ್ರಸ್ತಾವ; ಈ ವಾರ ತೆಲಂಗಾಣಕ್ಕೆ ನಿಯೋಗ
Last Updated 14 ಜುಲೈ 2022, 19:30 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯ ಪಡಿತರ ವ್ಯವಸ್ಥೆಯಲ್ಲಿ ಕುಚಲಕ್ಕಿ ವಿತರಣೆಯನ್ನು ಈ ವರ್ಷದಿಂದಲೇ ಆರಂಭಿಸಲು ಪ್ರಯತ್ನಗಳು ನಡೆಯುತ್ತಿವೆ. ಆದರೆ, ಜಿಲ್ಲೆಯಲ್ಲಿ ಅಷ್ಟು ಪ್ರಮಾಣದ ಭತ್ತದ ಅಲಭ್ಯತೆ, ಕೇಂದ್ರ ಸರ್ಕಾರದ ಬೆಂಬಲ ಬೆಲೆ ಜತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಪ್ರೋತ್ಸಾಹಧನ ನೀಡಲು ಅನುಮತಿ ಪಡೆಯುವುದು ದೊಡ್ಡ ಸವಾಲಾಗಿದೆ.

ಕಳೆದ ವರ್ಷ ಭತ್ತದ ಕಟಾವು ಮುಗಿದ ಮೇಲೆ ಭತ್ತ ಖರೀದಿ ಕೇಂದ್ರಗಳ ಮೂಲಕ ಕುಚಲಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಅಷ್ಟರಲ್ಲಾಗಲೇ ರೈತರ ಬಳಿ ಭತ್ತ ಸಂಗ್ರಹ ಮುಗಿದಿದ್ದರಿಂದ ಇದು ಸಾಧ್ಯವಾಗಿರಲಿಲ್ಲ.

‘ಕೇಂದ್ರ ಸರ್ಕಾರ, ಕಳೆದ ಒಂದು ವರ್ಷದ ಮಟ್ಟಿಗಷ್ಟೇ ಅನುಮತಿ ನೀಡಿದ್ದರಿಂದ ಈ ವರ್ಷ ಕುಚಲಕ್ಕಿ ವಿತರಣೆ ಪ್ರಸ್ತಾವಕ್ಕೆ ಮತ್ತೆ ಅನುಮತಿ ಪಡೆಯಬೇಕಾಗಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ (ಎಂಎಸ್‌ಪಿ) ಕ್ವಿಂಟಲ್‌ಗೆ ₹ 2,600ರಷ್ಟು ಮೊತ್ತ ನೀಡಿ, ಸ್ಥಳೀಯ ಬೆಳೆಗಾರರಿಂದ ಖರೀದಿಸಬೇಕು. ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಲು ವಿಳಂಬ ಮಾಡಿದರೆ, ಈ ವರ್ಷವೂ ನಮಗೆ ಕುಚಲಕ್ಕಿ ಸಿಗುವುದು ಅನುಮಾನ’ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪೂಣಚ.

‘ನೆರೆಯ ಕೇರಳ ರಾಜ್ಯದಲ್ಲಿ, ಕೇಂದ್ರ ಸರ್ಕಾರದ ಎಂಎಸ್‌ಪಿ ₹ 1,940 ಇದ್ದರೆ, ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಕ್ವಿಂಟಲ್‌ಗೆ ₹ 1,000 ನೀಡಿ, ರೈತರಿಂದ ಖರೀದಿಸುತ್ತಿದೆ. ರಾಜ್ಯ ಸರ್ಕಾರದ ಆಸಕ್ತಿಯಿಂದ ಅಲ್ಲಿ ಈ ಯೋಜನೆ ಯಶಸ್ವಿಯಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಸುಮಾರು 2,500 ಲಕ್ಷ ಕ್ವಿಂಟಲ್ ಭತ್ತ ಉತ್ಪಾದನೆಯಾಗುತ್ತದೆ. ಉತ್ಪಾದನೆ ಕಡಿಮೆ ಇರುವುದರಿಂದ ಪಡಿತರ ವಿತರಣೆಗೆ ಬೆಳಗಾವಿ, ಹಾಸನ, ಚಾಮರಾಜನಗರ ಮೊದಲಾದ ಜಿಲ್ಲೆಗಳಿಂದ ಭತ್ತ ಖರೀದಿಸಬೇಕಾಗುತ್ತದೆ. ಸತತ ಪ್ರಯತ್ನದಿಂದ ಕಳೆದ ವರ್ಷ ಕೇಂದ್ರ ಸರ್ಕಾರದಿಂದ ಅನುಮತಿ ಪಡೆದಿದ್ದೆವು. ಆಗ ಸಮಯ ಮೀರಿದ್ದರಿಂದ ವಿತರಣೆ ಸಾಧ್ಯವಾಗಲಿಲ್ಲ. ಈ ಬಾರಿ ಪೂರ್ವ ತಯಾರಿ ಮಾಡಿಕೊಂಡು, ಹಲವು ಸುತ್ತುಗಳಲ್ಲಿ ಸಭೆ ನಡೆಸಿದ್ದೇವೆ’ ಎಂದು ಈ ಬಗ್ಗೆ ವಿಶೇಷ ಪ್ರಯತ್ನ ನಡೆಸುತ್ತಿರುವ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ ನೇತೃತ್ವದಲ್ಲಿ ನಿಯೋಗವು ಕೇರಳ ರಾಜ್ಯಕ್ಕೆ ಹೋಗಿ, ಅಲ್ಲಿನ ಪಡಿತರ ವಿತರಣೆಯ ಅಧ್ಯಯನ ಮಾಡಿ, ವರದಿ ತಯಾರಿಸಿದೆ. ಕರ್ನಾಟಕದಲ್ಲೂ ರಾಜ್ಯ ಸರ್ಕಾರ ಪ್ರೋತ್ಸಾಹಧನ ನೀಡಿದರೆ, ಕುಚಲಕ್ಕಿ ವಿತರಣೆ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತೆಲಂಗಾಣ ರಾಜ್ಯಕ್ಕೆ ಈ ವಾರ ಮತ್ತೊಂದು ನಿಯೋಗ ಭೇಟಿ ನೀಡಲಿದೆ’ ಎಂದು ತಿಳಿಸಿದರು.

‘ತಿಂಗಳಿಗೆ 1 ಲಕ್ಷ ಕ್ವಿಂಟಲ್ ಅಕ್ಕಿ’

ಬೆಂಗಳೂರು: ಕರಾವಳಿ ಜಿಲ್ಲೆಗಳಿಗೆ ಪಡಿತರ ವಿತರಣೆಗೆ ಪ್ರತಿ ತಿಂಗಳು 1 ಲಕ್ಷ ಕ್ವಿಂಟಾಲ್ ಅಕ್ಕಿ ಅಗತ್ಯವಿದ್ದು, ವರ್ಷಕ್ಕೆ 12 ಲಕ್ಷ ಕ್ವಿಂಟಾಲ್ ಅಗತ್ಯವಿದೆ. ವರ್ಷಕ್ಕೆ ಕನಿಷ್ಠ 18 ಲಕ್ಷ ಕ್ವಿಂಟಾಲ್ ಭತ್ತ ಬೇಕಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಈ ಸಂಬಂಧ ಗುರುವಾರ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಹೊರ ಜಿಲ್ಲೆಗಳಿಂದ ಭತ್ತ ಖರೀದಿಗೆ ಕ್ರಮ ವಹಿಸಲಾಗುವುದು. ಹೆಚ್ಚುವರಿ ಬೇಡಿಕೆಯನ್ನು ಕೇರಳ ಮತ್ತು ತೆಲಂಗಾಣ ರಾಜ್ಯಗಳಿಂದ ಪೂರೈಸಿಕೊಳ್ಳಲು ಯೋಜಿಸಲಾಗಿದೆ. ಅಧ್ಯಯನ ತಂಡಗಳ ವರದಿ ಆಧರಿಸಿ ಕರಾವಳಿ ಜಿಲ್ಲೆಗಳ ಶಾಸಕರು, ಸಂಸದರ ನಿಯೋಗದೊಂದಿಗೆ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT